ಬೆಂಗಳೂರು (ಡಿ.13): ಕೇಂದ್ರ ಸರ್ಕಾರ (Govt of India) ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ನೀಡುತ್ತಿರುವ ಅನುದಾನದಲ್ಲಿ ಕನ್ನಡ ಭಾಷೆಗೆ (kannada Language) ತಾರತಮ್ಯ ಮಾಡುತ್ತಿದ್ದು ಕನ್ನಡಕ್ಕಾಗುತ್ತಿರುವ ಅನ್ಯಾಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು (Kannada sahithya Parishant) ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ್ (Dr manu baligar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ (Central Govt) ಕಳೆದ ಏಳು ವರ್ಷಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಗಾಗಿ ನೀಡಿದ ಅನುದಾನ ಕೇವಲ 8.39 ಕೋಟಿ. ರೂ. ಮಾತ್ರ. ಶಾಸ್ತ್ರೀಯ ಭಾಷಾ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆಗೆ ವರ್ಷಕ್ಕೆ ಕೇವಲ ಒಂದು ಕೋಟಿ ರು. ಅನುದಾನ ನೀಡಿದಂತಾಗಿದೆ.
ಆದರೆ, ತಮಿಳು (Tamil) ಭಾಷೆಗೆ ಕಳೆದ ಏಳು ವರ್ಷಗಳಲ್ಲಿ 50 ಕೋಟಿ ಅನುದಾನ ಕೊಡಲಾಗಿದೆ. ಸಂಸ್ಕೃತಕ್ಕೆ 1,200 ಕೋಟಿಗೂ ಅಧಿಕ ಅನುದಾನ ನೀಡಲಾಗಿದ್ದು ಏಳು ಕೋಟಿ ಜನರ ಭಾಷೆಯಾಗಿರುವ ಕನ್ನಡದ ಕಡೆಗಣನೆ ಯಾವ ಕನ್ನಡ ಪ್ರೇಮಿಯೂ ಸಹಿಸಿಕೊಳ್ಳಲಾರ ಮತ್ತು ಸಹಿಸಿಕೊಳ್ಳಲೂಬಾರದು ಎಂದು ಹೇಳಿದ್ದಾರೆ.
undefined
ಎರಡು ಸಾವಿರ ವರ್ಷಕ್ಕೂ ಹೆಚ್ಚು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪರಂಪರೆಯಿರುವ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿ, ಕೇಂದ್ರ ಸರ್ಕಾರ ಕೈತೊಳೆದುಕೊಂಡು ಮರೆತೇ ಬಿಟ್ಟಂತೆನಿಸುತ್ತದೆ. ಇದನ್ನು ನಾನು ಕನ್ನಡ ನಾಡಿನ ಜನರ ಪರವಾಗಿ ಉಗ್ರವಾಗಿ ಖಂಡಿಸುತ್ತೇನೆ. ತಕ್ಷಣ ಕೇಂದ್ರ ಸರ್ಕಾರ ಮೈಸೂರಿನ (Mysuru) ಭಾರತೀಯ ಭಾಷಾ ಸಂಸ್ಥಾನಕ್ಕೆ (ಸಿಐಐಎಲ್) ಹೆಚ್ಚು ಹಣ ಬಿಡುಗಡೆ ಮಾಡಬೇಕು. ಜತೆಗೆ, ಸ್ವಾಯತ್ತತೆ ನೀಡಿ ಶೀಘ್ರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಂದ್ರಶೇಖರ್‌ಗೆ ಅಭಿನಂದನೆ: ಕೇಂದ್ರ ಸರ್ಕಾರವು 2014ರಿಂದ 2022ರವರೆಗೆ ಕೇವಲ 8.39 ಕೋಟಿ ರು.ಅನುದಾನ ಕೊಟ್ಟಿರುವುದನ್ನು ರಾಜ್ಯಸಭಾ ಸದಸ್ಯ ಜಿ.ಎನ್.ಚಂದ್ರಶೇಖರ್ ಸಂಸತ್ ಕಲಾಪದ ಶೂನ್ಯ ವೇಳೆಯಲ್ಲಿ ಕನ್ನಡ ಭಾಷೆಯಲ್ಲೇ ಪ್ರಸಾಪಿಸಿ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ಸಂಸತ್‌ನಲ್ಲಿ ಕನ್ನಡಕ್ಕಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಚಂದ್ರಶೇಖರ್ ಅವರನ್ನು ಕನ್ನಡ ಗೆಳೆಯರ ಬಳಗ ಅಭಿನಂದಿಸಿದೆ.
ಕನ್ನಡ ಬೆಳೆಸಲು ಕನ್ನಡಿಗರೇನು ಮಾಡಬೇಕು ? :
ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ. ರಾಜ್ಯೋತ್ಸವ ಹತ್ತಿರ ಬಂದಂತೇ ಪುಟಿದೇಳುವ ಕನ್ನಡಾಭಿಮಾನ ದಿನಗಳೆದಂತೆ ಮಂಕಾಗಿಬಿಡುತ್ತದೆ. ಇಂಗ್ಲಿಷ್ (English), ಹಿಂದಿ (Hindi) ಇನ್ನಿತರ ಭಾಷೆಗಳ ಭರಾಟೆಯಲ್ಲಿ ಕನ್ನಡ ನಾಡಿನಲ್ಲೇ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಕನ್ನಡದ ಉಳಿವು ಹಾಗೂ ಅಭಿವೃದ್ಧಿ ಕೇವಲ ಸರ್ಕಾರದ ಯೋಜನೆಗಳಿಂದ ಸಾಧ್ಯವಾಗುವುದಿಲ್ಲ. ಇದಕ್ಕೆ ಕನ್ನಡಿಗರ ಪ್ರಬಲ ಇಚ್ಛಾಶಕ್ತಿ ಹಾಗೂ ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ಕನ್ನಡ ಭಾಷೆಯ ಅಭಿವೃದ್ಧಿಯಲ್ಲಿ ಜನಸಾಮಾನ್ಯರು ಹೇಗೆ ಕೈಜೋಡಿಸಬಹುದು?
1. ಎಲ್ಲೆಡೆ ಕನ್ನಡವನ್ನೇ ಬಳಸುವುದು
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕನ್ನಡಿಗರಾದ ನಾವು ಕನ್ನಡವನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು. ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನೇ ಬಳಸಬೇಕು. ಕನ್ನಡ ಕಲಿಕೆ ಮತ್ತು ಕನ್ನಡದ ಬಳಕೆಯಿಂದಲೂ ಜೀವನದಲ್ಲಿ ಯಶಸ್ಸನ್ನು ಕಾಣಬಹುದು, ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ಅರಿವು ನಮ್ಮಲ್ಲಿ ಮೂಡಬೇಕು. ಇಂಗ್ಲಿಷ್ ಶ್ರೇಷ್ಠ ಎಂಬ ಭ್ರಮೆಯಿಂದ ಹೊರಬಂದು ಕನ್ನಡವನ್ನು ವಿಶ್ವಾಸದಿಂದ ಮಾತನಾಡಬೇಕು. ಬ್ಯಾಂಕ್‌ಗಳಲ್ಲಿ, ಎಟಿಎಮ್‌ಗಳಲ್ಲಿ, ಪತ್ರ ವ್ಯವಹಾರದಲ್ಲಿ ಕೂಡಾ ಕನ್ನಡ ಬಳಸಬೇಕು.
2. ಪರಭಾಷಿಕರೊಂದಿಗೆ ಕನ್ನಡ ಬಳಕೆ
ಹೊರಭಾಷಿಗರೊಂದಿಗೆ ವ್ಯವಹರಿಸುವಾಗ ಕನ್ನಡಿಗರು ಹೊರಗಿನವರ ಭಾಷೆಯಲ್ಲೇ ಮಾತನಾಡುವುದು ಸಾಮಾನ್ಯ. ಯಾರೇ ಆಗಿರಲಿ, ಕರ್ನಾಟಕಕ್ಕೆ ಬಂದವರ ಜೊತೆ ಕನ್ನಡಿಗರಾದ ನಾವು ಕನ್ನಡದಲ್ಲೇ ವ್ಯವಹರಿಸಬೇಕು. ಹೊರಭಾಷಿಗರನ್ನು ಕನ್ನಡ ಕಲಿಯಲು ಪ್ರೋತ್ಸಾಹಿಸಬೇಕು. ನಾವೆಲ್ಲರೂ ಕನ್ನಡವನ್ನೇ ದೈನಂದಿನ ಜೀವನದಲ್ಲಿ ಕಡ್ಡಾಯವಾಗಿ ಬಳಸಿದರೆ ಅವರಿಗೂ ಕನ್ನಡದ ಕಲಿಕೆ ಅನಿವಾರ್ಯವಾಗುತ್ತದೆ.
3. ಮಕ್ಕಳಿಗೆ ಕಡ್ಡಾಯ ಕನ್ನಡ ಶಿಕ್ಷಣ
ಸಾಧ್ಯವಾದಷ್ಟುಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಲು ಮುಂದಾಗಬೇಕು. ಅದಾಗದಿದ್ದಲ್ಲಿ ಮಕ್ಕಳಿಗೆ ಕನಿಷ್ಠ ಪಕ್ಷ ಕನ್ನಡ ವಿಷಯದ ಕಲಿಕೆ ಕಡ್ಡಾಯವಾಗಿರುವಂತಹ ಶಾಲೆಗಳಿಗೇ ಕಳುಹಿಸಬೇಕು. ಶಾಲೆಗಳಲ್ಲೇ ಕನ್ನಡ ಕಲಿಕೆಯನ್ನು ಕಡೆಗಣಿಸಿದಾಗ ಮಕ್ಕಳಲ್ಲಿ ನಾಡಭಾಷೆಯ ಬಗ್ಗೆ ಉದಾಸೀನ ಮೂಡುವುದು ಸಹಜ. ಆದ್ದರಿಂದ ಕನ್ನಡ ವಿಷಯ ಕಡ್ಡಾಯವಾಗಿರುವ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು, ಬೋಧನಾ ಸಿಬ್ಬಂದಿ ಕೂಡಾ ಕನ್ನಡದಲ್ಲೇ ಮಕ್ಕಳೊಂದಿಗೆ ವ್ಯವಹರಿಸಬೇಕು.
4. ಕನ್ನಡ ಪುಸ್ತಕವನ್ನು ಓದುವ ಹವ್ಯಾಸ
ದಿನ ಕಳೆದಂತೆ ಕನ್ನಡ ಸಾಹಿತ್ಯವನ್ನು ಓದುವ ಹವ್ಯಾಸ ಯುವಜನತೆಯಲ್ಲಿ ಕಡಿಮೆಯಾಗುತ್ತಿದೆ. ಇದು ಬದಲಾಗಬೇಕು. ಕನ್ನಡ ದಿನಪತ್ರಿಕೆಗಳು, ಮಾಸಿಕಗಳು, ಕಾದಂಬರಿ ಹಾಗೂ ಸಾಹಿತ್ಯಕ ಕೃತಿಗಳನ್ನು ಕೊಂಡು ಓದುವುದರಿಂದ ಕನ್ನಡ ಸಾಹಿತಿಗಳಿಗೆ ಪ್ರೋತ್ಸಾಹವೂ ಸಿಗುವುದರೊಂದಿಗೆ ನಮ್ಮ ಶಬ್ದಭಂಡಾರ, ಭಾಷೆ ಸುಧಾರಿಸುತ್ತದೆ. ಆನ್ಲೈನ್‌ನಲ್ಲಿ ಓದುವಾಗಲೂ ಕನ್ನಡ ಆವೃತ್ತಿಗೆ ಹೆಚ್ಚಿನ ಆದ್ಯತೆ ಕೊಡಬೇಕು.
5. ಕನ್ನಡದಲ್ಲೇ ಹೊಸ ಪದಗಳ ಸೃಷ್ಟಿ
ಕನ್ನಡ ಭಾಷೆಯ ಮೇಲೆ ಇನ್ನಿತರ ಭಾಷೆಗಳ ಪ್ರಭಾವ ಕೊಂಚ ಹೆಚ್ಚಾಗಿಯೇ ಇದೆ ಎನ್ನಬಹುದು. ಮೊಬೈಲ್, ಚಾರ್ಜರ್, ಬ್ಲೂಟೂತ್, ವೈ-ಫೈ ಹೀಗೆ ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಪದಗಳಿಗೆ ಕನ್ನಡ ಪದಗಳನ್ನು ರಚಿಸಿ ಬಳಸಿದಾಗ ಭಾಷೆಯು ಇನ್ನಷ್ಟುಶ್ರೀಮಂತವಾಗುತ್ತದೆ. ದಿನನಿತ್ಯದ ಸಂವಹನದಲ್ಲಿ ಕನ್ನಡೀಕರಣ ಹೊಂದಿದ ಪದಗಳಿಗಿಂತ ಹೆಚ್ಚೆಚ್ಚು ಕನ್ನಡ ಪದಗಳನ್ನೇ ಬಳಸುವಂತಾಗಬೇಕು.