ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದ ತಕ್ಷಣದ ಪರಿಣಾಮವೆಂದರೆ ಸದ್ಯಕ್ಕಾದರೂ ಮುಖ್ಯಮಂತ್ರಿ ಬದಲಾವಣೆ ಎಂಬ ವಿಚಾರ ತೆರೆಮರೆಗೆ ಸರಿಯಲಿದೆ.
ಬೆಂಗಳೂರು (ನ.24): ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದ ತಕ್ಷಣದ ಪರಿಣಾಮವೆಂದರೆ ಸದ್ಯಕ್ಕಾದರೂ ಮುಖ್ಯಮಂತ್ರಿ ಬದಲಾವಣೆ ಎಂಬ ವಿಚಾರ ತೆರೆಮರೆಗೆ ಸರಿಯಲಿದೆ. ಕಾಂಗ್ರೆಸ್‌ನ ಒಳ ಮನೆಯಲ್ಲಿ ಸದಾ ಸರಿದಾಡುತ್ತಿದ್ದ ನಾಯಕತ್ವ ಬದಲಾವಣೆ ಎಂಬ ಹಾವನ್ನು ಬಡಿದು ಹುತ್ತದೊಳಕ್ಕೆ ಹಾಕಲು ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರದ ಗೆಲುವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಚನ್ನಪಟ್ಟಣ ಕ್ಷೇತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಷ್ಠೆಯ ಕಣ ಮಾಡಿಕೊಂಡಿದ್ದರು.
ಇನ್ನು ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದವರಿಗೆ ಟಿಕೆಟ್ ನೀಡಲಾಗಿತ್ತು. ಸಂಡೂರಿನಲ್ಲಿ ಸಿದ್ದರಾಮಯ್ಯ ಆಪ್ತ ಸಂತೋಷ್ ಲಾಡ್ ಹಾಗೂ ಜಮೀರ್ ಅಹ್ಮದ್ ಅಭ್ಯರ್ಥಿ ಗೆಲುವಿಗೆ ಪ್ರಬಲ ಪ್ರಯತ್ನ ಮಾಡಿದ್ದರೆ, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ದಿನ ಪ್ರಚಾರ ನಡೆಸಿದ್ದರು. ಇನ್ನು ಶಿಗ್ಗಾಂವಿಯ ಗೆಲುವು ಸಿದ್ದರಾಮಯ್ಯ ಅವರಿಗೆ ಆನೆ ಬಲ ತಂದಿದೆ. ಏಕೆಂದರೆ, ಸತತವಾಗಿ ನಾಲ್ಕು ಬಾರಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸೋಲುಂಡಿತ್ತು. ಈ ಬಾರಿ ಮುಸ್ಲಿಂ ಬದಲಾಗಿ ಲಿಂಗಾಯತ (ಪಂಚಮಸಾಲಿ) ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಪ್ರಬಲವಾಗಿ ಕೇಳಿ ಬಂದಿತ್ತು.
ಮುಸ್ಲಿಮ್ ಅಭ್ಯರ್ಥಿಗೆ ಮತ್ತೆ ಟಿಕೆಟ್ ನೀಡಿದರೆ ಚುನಾವಣೆಯೂ ಹಿಂದು ಮುಸ್ಲಿಂ ಎಂದು ಪರಿವರ್ತಿತವಾಗಿ ಕಾಂಗ್ರೆಸ್ ಸೋಲುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಮುಸ್ಲಿಂ ನಾಯಕರ ಆಗ್ರಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟು ಹಿಡಿದು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಿಸಿದ್ದರು. ಅಲ್ಲದೆ, ಪ್ರಚಾರದ ವೇಳೆ ನಾನು ಮುಖ್ಯಮಂತ್ರಿಯಾಗಿರಬೇಕು ಎಂದರೆ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಸಹ ಮಾಡಿದ್ದರು. ಒಂದು ವೇಳೆ ಇಲ್ಲಿ ಸೋಲುಂಡಿದ್ದರೆ ಅದು ಸಿದ್ದರಾಮಯ್ಯ ಅವರಿಗೆ ತುಸು ಹಿನ್ನಡೆ ತರುವ ಸಾಧ್ಯತೆಯಿತ್ತು. ಆದರೆ, ಈ ಪ್ರಚಂಡ ಗೆಲುವು ಅವರಿಗೆ ಆನೆ ಬಂದ ತಂದು ಕೊಟ್ಟಿದೆ.
ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಹೋರಾಟ ಮಾಡುತ್ತೇನೆ: ನಿಖಿಲ್ ಕುಮಾರಸ್ವಾಮಿ
ಇದೇ ವೇಳೆ ಕಾಂಗ್ರೆಸ್ ಪಕ್ಷವು ಮಹಾರಾಷ್ಟ್ರದಲ್ಲಿ ಸೋಲುವ ಮೂಲಕ ಹೈಕಮಾಂಡ್ ತುಸು ದುರ್ಬಲವಾಗಿದೆ. ಹೀಗಾಗಿ ಪ್ರಬಲರಾಗಿರುವ ಸಿದ್ದರಾಮಯ್ಯ ಅವರನ್ನು ಬದಲಾಯಿಸಬೇಕು ಎಂಬ ಕೂಗು ಸಹಜವಾಗಿ ಕ್ಷೀಣವಾಗಲಿದೆ. ಒಂದು ವೇಳೆ ಆ ಕೂಗು ಕೇಳಿಬಂದರೂ ಹೈಕಮಾಂಡ್ ಅದಕ್ಕೆ ತಕ್ಷಣಕ್ಕೆ ಸೊಪ್ಪು ಹಾಕುವ ಸಾಧ್ಯತೆ ಕಡಿಮೆ.