ಮೂರೂ ಕ್ಷೇತ್ರ ಸೋತು ಮೈತ್ರಿಕೂಟಕ್ಕೆ ಆಘಾತ: ಜೆಡಿಎಸ್‌, ಬಿಜೆಪಿಗೆ ಇದ್ದ ಅತಿಯಾದ ಭರವಸೆ ಹುಸಿ

By Kannadaprabha News  |  First Published Nov 24, 2024, 11:32 AM IST

ಮೂರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಮೈತ್ರಿಕೂಟಕ್ಕೆ ಆಘಾತ ಉಂಟುಮಾಡಿದೆ. ಈ ಪೈಕಿ ಒಂದು ಅಥವಾ ಎರಡು ಕ್ಷೇತ್ರಗಳಲ್ಲಾದರೂ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದ ಉಭಯ ಪಕ್ಷಗಳ ನಾಯಕರಿಗೆ ಫಲಿತಾಂಶವನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. 
 


ಬೆಂಗಳೂರು (ನ.24): ಮೂರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಮೈತ್ರಿಕೂಟಕ್ಕೆ ಆಘಾತ ಉಂಟುಮಾಡಿದೆ. ಈ ಪೈಕಿ ಒಂದು ಅಥವಾ ಎರಡು ಕ್ಷೇತ್ರಗಳಲ್ಲಾದರೂ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದ ಉಭಯ ಪಕ್ಷಗಳ ನಾಯಕರಿಗೆ ಫಲಿತಾಂಶವನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಜತೆಗೆ ಉಪಚುನಾವಣೆ ವೇಳೆ ಪ್ರಮುಖ ಅಸ್ತ್ರವಾಗಿ ಸಿಕ್ಕ ವಕ್ಫ್ ಆಸ್ತಿ ವಿವಾದ ತಮ್ಮ ನೆರವಿಗೆ ಬರಲಿದೆ ಎಂಬ ಲೆಕ್ಕಾಚಾರವನ್ನು ಉಭಯ ಪಕ್ಷಗಳ ನಾಯಕರು ಹಾಕಿದ್ದರು. 

ಅದರಲ್ಲೂ ವಕ್ಫ್‌ ವಿವಾದ ಹಿಂದೂಗಳನ್ನು ಒಗ್ಗೂಡಿಸಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ಮಾಡಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ತಮ್ಮ ಪಕ್ಷಗಳು ತೆರವುಗೊಳಿಸಿದ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಎಷ್ಟೇ ವಾಗ್ದಾಳಿ, ಟೀಕೆ-ಟಿಪ್ಪಣಿ ಮಾಡಿದರೂ ಅದಕ್ಕೆ ಈ ಮೂರು ಕ್ಷೇತ್ರಗಳ ಮತದಾರರು ಸೊಪ್ಪು ಹಾಕಲಿಲ್ಲ ಎಂಬುದು ಈಗ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಮನವರಿಕೆಯಾದಂತಾಗಿದೆ.

Tap to resize

Latest Videos

undefined

ಸಂಡೂರು ಕ್ಷೇತ್ರದ ಬಗ್ಗೆ ತುಸು ಅನುಮಾನವನ್ನೇ ಹೊಂದಿದ್ದ ಬಿಜೆಪಿ ನಾಯಕರು ಶಿಗ್ಗಾಂವಿಯನ್ನು ಗೆಲ್ಲುವ ವಿಶ್ವಾಸ ಹೊಂದಿದ್ದರು. ಆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಉಂಟಾದ ಗೊಂದಲ ಹಾಗೂ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಿದ್ದರಿಂದ ಇನ್ನೇನು ತಮ್ಮ ಅಭ್ಯರ್ಥಿ ಭರತ್ ಬೊಮ್ಮಾಯಿ ಗೆದ್ದೇ ಗೆಲ್ಲುತ್ತಾರೆ ಎಂಬ ಅತಿಯಾದ ವಿಶ್ವಾಸ ಪಕ್ಷದ ನಾಯಕರಲ್ಲಿ ಮೂಡಿತ್ತು. ಇದಕ್ಕೆ ಪೂರಕವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರೇ ಉಸ್ತುವಾರಿ ವಹಿಸಿಕೊಂಡಿದ್ದರಿಂದ ಗೆಲುವು ಸುಲಭವಾಗಬಹುದು ಎಂಬ ಅಲೆಯಲ್ಲಿ ತೇಲಿದರು. ಆದರೆ, ಅಂತಿಮವಾಗಿ ಫಲಿತಾಂಶ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತು.

ಸದ್ಯಕ್ಕೆ ತೆರೆ ಮರೆಗೆ ಸರಿದ ಸಿಎಂ ಬದಲಾವಣೆ ಚರ್ಚೆ: ಮೂರಕ್ಕೆ ಮೂರೂ ಕ್ಷೇತ್ರ ಗೆದ್ದು ಸಿದ್ದು ನಾಯಕತ್ವಕ್ಕೆ ಬಲ

ಇನ್ನು ಜೆಡಿಎಸ್ ನಾಯಕರಿಗೆ ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಅತೀವ ನಿರೀಕ್ಷೆಯಿತ್ತು. ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿ‍ಳಿಸಿದ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಪ್ರಚಾರ ಕೈಗೊಂಡರು. ಸಾಲದ್ದಕ್ಕೆ 93 ವರ್ಷ ವಯಸ್ಸಿನ ಪಕ್ಷದ ವರಿಷ್ಠ ನಾಯಕ ಎಚ್.ಡಿ.ದೇವೇಗೌಡರೂ ಪ್ರಚಾರದ ಅಖಾಡಕ್ಕೆ ಇಳಿದರು. ಇದೊಂದು ರೀತಿಯಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹಕ್ಕೂ ಕಾರಣವಾಯಿತು. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ನಡೆಸಿದ ತಳಮಟ್ಟದ ತಂತ್ರಗಾರಿಕೆಯ ಆಳ ಅರಿತುಕೊಳ್ಳುವಲ್ಲಿ ಜೆಡಿಎಸ್ ನಾಯಕರು ವಿಫಲರಾದರು. ನಿಖಿಲ್‌ ಹ್ಯಾಟ್ರಿಕ್‌ ಸೋಲು ಅನುಭವಿಸಬೇಕಾಯಿತು.

click me!