ಹುತಾತ್ಮರ ದಿನ: ಸರಳ ಬದುಕಿನ ಮಹತ್ವ ತೋರಿಸಿಕೊಟ್ಟ ಮಹಾತ್ಮ

By Kannadaprabha NewsFirst Published Jan 30, 2023, 11:41 AM IST
Highlights

ಗಾಂಧೀಜಿ ಎಂಬ ‘ಜಗದ್ಗುರುವಿನ’ ತತ್ವಾದರ್ಶಗಳ ಅನುಷ್ಠಾನ ನಮ್ಮ ಗುರಿಯಾಗಿರಲಿ. ಸತ್ಯ ಅಹಿಂಸೆಯ ಅಸ್ತ್ರಗಳಿಂದ ಎಂಥ ಬಲಶಾಲಿಗಳನ್ನಾದರೂ ಮಣಿಸಬಹುದೆಂದು ಜಗತ್ತಿಗೆ ತೋರಿಸಿಕೊಟ್ಟವರು ಗಾಂಧೀಜಿ. ಅವರ ಮೌಲ್ಯಗಳು ಇಡೀ ಮನುಕುಲಕ್ಕೆ ಸದಾಕಾಲಕ್ಕೂ ಆದರ್ಶಪ್ರಾಯ. ಸತ್ಯ, ಶಾಂತಿ, ಅಹಿಂಸೆ ಇವು ಗಾಂಧೀಜಿಯವರು ಪಾಲಿಸಿದ ತತ್ವಗಳಷ್ಟೇ ಅಲ್ಲ, ಅವರ ಬದುಕು ಕೂಡ.

ಬಸವರಾಜ ಎಂ. ಯರಗುಪ್ಪಿ,ಲಕ್ಷ್ಮೇಶ್ವರ

ಇಂದು ಗಾಂಧೀಜಿ ಪುಣ್ಯತಿಥಿ ಹುತಾತ್ಮರ ದಿನ

ನಿಜವಾಗಿ ಇತಿಹಾಸ ನಿರ್ಮಿಸಿದವರೇ ಹುತಾತ್ಮರು-ಎಂದು ಅಲಿಸ್ರ್ಟ ಕ್ರೌಲಿ ಅವರ ಮಾತು ಕೆಲವು ಸಂದರ್ಭಗಳಲ್ಲಿ ಸತ್ಯ. ಈ ಮಾತು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾತ್ಮರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ಅಂತೂ ಸತ್ಯ.

ಅನೇಕ ಮಹಾನ್‌ ವ್ಯಕ್ತಿಗಳ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ ಹಾಗೂ ಮಹಾಪುರುಷರಿಗೆ ಜನ್ಮ ನೀಡಿದ ದೇಶ ಭಾರತ. ದೇಶವನ್ನು ಕಟ್ಟುವ ಕೈಂಕರ್ಯದಲ್ಲಿ ಇವರ ಚಿಂತನೆಗಳು ದೊಡ್ಡ ಪಾತ್ರ ವಹಿಸಿವೆ. ಅವರ ಚಿಂತನೆಗಳೇ ಅಷ್ಟುಪರಿಣಾಮಕಾರಿ ಮತ್ತು ಪ್ರಬಲವಾಗಿರುತ್ತಿದ್ದವು. ಇಂತಹ ಮಹಾನ್‌ ವ್ಯಕ್ತಿಗಳ ಮಾರ್ಗದರ್ಶನದ ನುಡಿಗಳು ನಮಗೆ ಸದಾ ದಾರಿದೀಪ. ಅಂತಹ ಮಹಾತ್ಮರಲ್ಲಿ ಗಾಂಧೀಜಿ ಅಗ್ರಗಣ್ಯರು.

ಸರ್ವ ಧರ್ಮ ಸಮಭಾವ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ಸಿದ್ಧಾಂತದ ಬದ್ಧತೆ, ಪ್ರಕೃತಿ ಚಿಕಿತ್ಸೆಯ ಪ್ರಯೋಗಕಾರ, ಸಸ್ಯ ಆಹಾರದ ಪ್ರಯೋಗಕಾರ, ಅಸಾಧಾರಣ ಚಾಣಾಕ್ಷ ಮತ್ತು ಪ್ರಾಮಾಣಿಕ ರಾಜಕಾರಣಿ, ಸತ್ಯ ಮತ್ತು ಅಹಿಂಸೆಯ ಮೇಲೆ ಜೀವನವಿಡೀ ಪ್ರಯೋಗ ಮಾಡಿದ ಆತ್ಮ ಸಾಧಕ, ಅಪ್ಪಟ ಕರ್ಮಯೋಗಿ... ಹೀಗೆ ಮಹಾತ್ಮ ಗಾಂಧೀಜಿಯವರಿಗೆ ಅದೆಷ್ಟುವಿಶೇಷಣಗಳು. ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾಂತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮ ಗಾಂಧಿಯವರ ಮರಣ ದಿನವನ್ನು ಭಾರತದಾದ್ಯಂತ ಪ್ರತಿವರ್ಷ ಜನವರಿ 30ರಂದು ಹುತಾತ್ಮರ ದಿನ ಎಂದು ಆಚರಿಸಲಾಗುತ್ತದೆ.

ಈ ದಿನ ಮಹಾತ್ಮನನ್ನು ನೆನೆದು, ದೇಶದ ಸ್ವಾತಂತ್ರ್ಯಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಸ್ಮರಿಸಲಾಗುತ್ತದೆ. ಅದೆ ರೀತಿ ಮಾಚ್‌ರ್‍ 23ರಂದು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ ಸಿಂಗ್‌, ಶಿವರಾಮ ರಾಜಗುರು ಮತ್ತು ಸುಖದೇವ್‌ ಥಾರ್ಪ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ವೀರ ಪುತ್ರರರಿಗೆ ಜನರು ಗೌರವ ಸಲ್ಲಿಸಲು ಮಾಚ್‌ರ್‍ 23ರಂದು ಕೂಡ ಹುತಾತ್ಮ ದಿನ ಅಥವಾ ಶಹೀದ್‌ ದಿವಸವನ್ನು ಆಚರಿಸಲಾಗುತ್ತಿದೆ.

ಗಾಂಧಿ ಹತ್ಯೆಗೆ ಗನ್‌ ಖರೀದಿಸಲು ಸಾವರ್ಕರ್‌ ಸಹಾಯ : ಗಾಂಧಿ ಮರಿಮೊಮ್ಮಗನ ಆರೋಪ

ಗಾಂಧೀಜಿಯ ಬದುಕೇ ಸಂದೇಶ

ತಮ್ಮ ಬದುಕೇ ತಮ್ಮ ಸಂದೇಶ ಎಂದು ಬದುಕಿನ ಪ್ರತಿ ಗಳಿಗೆಯನ್ನೂ ಮೌಲ್ಯದ ಜೊತೆಯಲ್ಲೇ ಬದುಕಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗಕ್ಕೊಡ್ಡಿಕೊಂಡ ರಾಷ್ಟ್ರಪಿತ, ಮೋಹನದಾಸ ಕರಮಚಂದ ಗಾಂಧಿ ಹುಟ್ಟಿದ್ದು ಗುಜರಾತಿನ ಪೋರಬಂದರಿನಲ್ಲಿ. 1869ರ ಅಕ್ಟೋಬರ್‌ 2ರಂದು ಜನಿಸಿದ ಗಾಂಧಿ, ಭೋಗಿಯಾಗಿ ಕೆಲಕಾಲ ಬದುಕಿ, ನಂತರ ವಿಷಯ ಸುಖಗಳ ಕುರಿತು ಜಿಗುಪ್ಸೆ ಹುಟ್ಟಿಯೋಗಿಯಾಗಿ ಬದಲಾದವರು. ಅವರ ಹಲವು ನಡೆಗಳು ವಿಮರ್ಶೆಗೊಳಪಟ್ಟು, ವಿವಾದ ಸೃಷ್ಟಿಸಿದ್ದರೂ, ತನ್ನ ಬದುಕೇ ತನ್ನ ಸಂದೇಶ ಎಂಬ ಅವರ ಆತ್ಮವಿಶ್ವಾಸ ನುಡಿ ಅವರನ್ನು ರಾಷ್ಟ್ರಪಿತನನ್ನಾಗಿ ಮಾಡಿತು.

1949ರ ಜನವರಿ 30ರಂದು ಪ್ರಾರ್ಥನೆಗೆಂದು ನವದೆಹಲಿಯ ಬಿರ್ಲಾ ಹೌಸ್‌ಗೆ ತೆರಳಿದ್ದ ಅವರ ಮೇಲೆ ನಾಥೂರಾಮ… ಗೋಡ್ಸೆ ಮೂರು ಬಾರಿ ಗುಂಡಿಕ್ಕಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ದಿನ ಇಡೀ ಭಾರತವೂ ಶೋಕ ಸಾಗರದಲ್ಲಿ ಮುಳುಗಿತ್ತು. ಆ ದಿನವನ್ನು ಇಂದಿಗೂ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ.

ಹುತಾತ್ಮರ ದಿನದ ಈ ಸಂದರ್ಭದಲ್ಲಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಕ್ಷಣಾ ಸಚಿವರು, ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಮತ್ತು ಮೂವರು ಸೇನಾ ಮುಖ್ಯಸ್ಥರು ರಾಜ್‌ ಘಾಟ್‌ ಸ್ಮಾರಕದ ಸಮಾಧಿ ಬಳಿ ಸೇರಿ ಪೂಜೆ ಸಲ್ಲಿಸುವ ಮೂಲಕ ಅವರನ್ನು ಸ್ಮರಿಸುವುದು ಪ್ರತೀತಿ.

ಜಗತ್ತಿನ ಅನೇಕ ಚಳವಳಿಗೆ ಪ್ರೇರಕ

ಮಹಾತ್ಮ ಗಾಂಧೀಜಿ ಅವರ ತ್ಯಾಗ ನಮ್ಮಿಂದ ಅಸಾಧ್ಯವಾದರೂ ದೇಶ ಸೇವೆಗೆ ನಮ್ಮಿಂದಾಗುವ ರೀತಿಯ ಕೊಡುಗೆ ನೀಡಲು ಎಲ್ಲರನ್ನೂ ಪ್ರೇರೇಪಿಸುವಂತಿದೆ. ಅದಕ್ಕಾಗಿ ವರ್ತಮಾನ ಮತ್ತು ಭವಿಷ್ಯದ ದಿನಗಳಲ್ಲಿ ಅಹಿಂಸೆಯನ್ನು ಆಚರಿಸಲು ನಮ್ಮ ದೇಹ ಮತ್ತು ಮನಸ್ಸುಗಳನ್ನು ನಾವು ಶುದ್ಧಗೊಳಿಸಿಕೊಳ್ಳಬೇಕಾಗಿದೆ. ಆಗ ಮಾತ್ರ ನಮ್ಮಲ್ಲೂ ಶುದ್ಧವಾದ ಯೋಚನೆಗಳು ಬರಲು ಸಾಧ್ಯ. ಇದನ್ನೇ ವಚನಕಾರ ಬಸವಣ್ಣನವರು ಬಹಿರಂಗ, ಅಂತರಂಗ ಶುದ್ಧಿ ಎಂದು ಹೇಳಿರುವುದು. ಮನಸ್ಸಿನ ಕುರಿತು ಸ್ವಾಮಿ ವಿವೇಕಾನಂದರು ಹೇಳುವಂತೆ, ನಮ್ಮ ಮನಸ್ಸು ಪರಿಶುದ್ಧವಾದಾಗ ಅದೇ ಗುರುವಾಗಿ ನಿಂತು ಎಲ್ಲವನ್ನೂ ಬೋಧಿಸುತ್ತದೆ. ಹೀಗಾಗಿ ಮೊದಲು ಮನಸ್ಸಿನ ಶುದ್ಧಿಗೆ ಮುಂದಾದಾಗ ಮಾತ್ರ ನಾವು ಗುರುವಾಗಲು ಸಾಧ್ಯ. ನಮ್ಮ ನಾಳೆಯ ದಿನಗಳು ಸುಂದರವಾಗಿರಬೇಕಾದರೆ ನಮ್ಮ ಇಂದಿನ ಯೋಚನೆಗಳು ಸುಂದರವಾಗಿರಬೇಕು.

ಗಾಂಧೀಜಿ ವಸಾಹತುಶಾಹಿಯನ್ನು ವಿರೋಧಿಸುತ್ತ ರಾಷ್ಟ್ರೀಯವಾದಿಯಾಗಿ ಬ್ರಿಟಿಷ್‌ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸಲು ಯತ್ನಿಸಿದ್ದರು. ಅದಕ್ಕಾಗಿ ಅಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸಿದರು. ಅಲ್ಲದೇ ಪ್ರಪಂಚದಾದ್ಯಂತ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ವಿವಿಧ ಚಳವಳಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ದೇಶದ ಕುರಿತು ಅವರಿಗಿರುವ ಸಮರ್ಪಣಾ ಭಾವ ಮತ್ತು ಅವರ ಧೈರ್ಯವನ್ನು ನಾವೆಂದಿಗೂ ಮರೆಯಬಾರದು.

ಮಹಾತ್ಮ ಗಾಂಧೀಜಿಗೆ ಕ್ಷಮೆ ಕೇಳಲು 'ಹೇ ರಾಮ್' ಸಿನಿಮಾ ಮಾಡಿದೆ; ಕಮಲ್ ಹಾಸನ್

ಗಾಂಧೀಜಿ ಅವರ ಆದರ್ಶ ಸ್ಮರಿಸೋಣ

ಕೋಮು ಸೌಹಾರ್ದತೆಗಾಗಿ ತಮ್ಮ ಜೀವವನ್ನು ಬಲಿದಾನಗೈದ ಮಹಾತ್ಮ ಗಾಂಧೀಜಿ ಬದುಕಿನಲ್ಲಿ ಮಾತ್ರವಲ್ಲ ಸಾವಿನಲ್ಲಿಯೂ ಹೇಳಿಹೋಗಿರುವ ಪಾಠವನ್ನು ಮರೆಯದಿರೋಣ. ಗಾಂಧೀಜಿ ಎಂಬ ‘ಜಗದ್ಗುರುವಿನ’ ತತ್ವಾದರ್ಶಗಳ ಅನುಷ್ಠಾನ ನಮ್ಮ ಗುರಿಯಾಗಿರಲಿ. ಸತ್ಯ ಅಹಿಂಸೆಯ ಅಸ್ತ್ರಗಳಿಂದ ಎಂಥ ಬಲಶಾಲಿಗಳನ್ನಾದರೂ ಮಣಿಸಬಹುದೆಂದು ಜಗತ್ತಿಗೆ ತೋರಿಸಿಕೊಟ್ಟವರು ಮಹಾತ್ಮಾ ಗಾಂಧಿ. ಅವರ ಮೌಲ್ಯಗಳು ಇಡೀ ಮನುಕುಲಕ್ಕೆ ಸದಾಕಾಲಕ್ಕೂ ಆದರ್ಶಪ್ರಾಯ.

ಸತ್ಯ, ಶಾಂತಿ, ಅಹಿಂಸೆ ಇವು ಗಾಂಧೀಜಿಯವರು ಪಾಲಿಸಿದ ತತ್ವಗಳಷ್ಟೇ ಅಲ್ಲ, ಅವರ ಬದುಕು ಕೂಡ. ಅವರ ಪುಣ್ಯಸ್ಮರಣೆಯ ದಿನ ಬಾಪೂಜಿಯನ್ನು ಗೌರವದಿಂದ ಸ್ಮರಿಸೋಣ.

ಗಾಂಧೀಜಿಯವರ ಕುರಿತು ಕೆಲ ವಿಶೇಷ ಸಂಗತಿಗಳು

1. ಮಹಾತ್ಮಾ ಗಾಂಧಿಯವರ ಮಾತೃಭಾಷೆ ಗುಜರಾತಿ.

2. ಗಾಂಧೀಜಿಯವರು ಅವರ ಕುಟುಂಬದಲ್ಲಿ ಕಿರಿಯ ಮಗು ಆಗಿದ್ದರು. ಅವರಿಗೆ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದರು.

3. ಮಹಾತ್ಮಾ ಗಾಂಧಿಯವರ ಜನ್ಮದಿನವನ್ನು ವಿಶ್ವವ್ಯಾಪಿ ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದು ಸ್ಮರಿಸಲಾಗುತ್ತದೆ.

4. ಮಹಾದೇವ ದೇಸಾಯಿ ಗಾಂಧೀಜಿಯವರ ಪರ್ಸನಲ… ಅಸಿಸ್ಟೆಂಟ್‌ ಆಗಿದ್ದರು.

5. ಗಾಂಧೀಜಿ ಮತ್ತು ಪ್ರಸಿದ್ಧ ಲೇಖಕ ರಷ್ಯಾದ ಕೌಂಟ್‌ ಲಿಯೋ ಟಾಲ್ಸಾ$್ಟಯ… ಪತ್ರಗಳ ಮೂಲಕ ಸಂವಹನ ನಡೆಸುತ್ತಿದ್ದರು.

6. 1930ರ ಟೈಮ… ಮ್ಯಾಗಜೀನ್‌ನಲ್ಲಿ ಗಾಂಧೀಜಿಯವರು ‘ಮ್ಯಾನ್‌ ಆಫ್‌ ದಿ ಇಯರ್‌’ ಆಗಿದ್ದರು.

7. ಗಾಂಧೀಜಿಯವರು ಶಾಂತಿ ನೊಬೆಲ… ಪ್ರಶಸ್ತಿಗೆ ಐದು ಬಾರಿ ನಾಮಿನೇಟ್‌ ಆಗಿದ್ದಾರೆ.

8. ಗಾಂಧೀಜಿಯವರಿಗೆ ‘ಮಹಾತ್ಮ’ ಎಂಬ ಬಿರುದು ನೀಡಿದ್ದು ನೊಬೆಲ… ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರನಾಥ್‌ ಟ್ಯಾಗೋರ್‌.

9. ಮಹಾತ್ಮಾ ಗಾಂಧಿ ಅಂತ್ಯಕ್ರಿಯೆಯ ಮೆರವಣಿಗೆ 8 ಕಿಲೋಮೀಟರ್‌ ಉದ್ದವಿತ್ತು.

10. ಗಾಂಧಿ ಮೆಮೋರಿಯಲ… ಮ್ಯೂಸಿಯಂ ಅನ್ನು ತಮಿಳುನಾಡಿನ ಮದುರೈ ನಗರದಲ್ಲಿ ಸ್ಥಾಪಿಸಲಾಗಿದೆ. ಇದನ್ನು ‘ಗಾಂಧಿ ಮ್ಯೂಸಿಯಂ’ ಎಂದು ಕರೆಯಲಾಗುತ್ತದೆ. ಇಲ್ಲಿ ಗಾಂಧೀಜಿಯವರ ರಕ್ತದ ಉಡುಪು ಇದೆ. ಆ ಉಡುಪನ್ನು ಗಾಂಧೀಜಿಯವರು ಗೋಡ್ಸೆ ಹತ್ಯೆ ಮಾಡಿದ ಸಮಯದಲ್ಲಿ ಧರಿಸಿದ್ದರು.

11. ಗಾಂಧೀಜಿ ಶನಿವಾರ ಜನಿಸಿದರು, ಭಾರತಕ್ಕೆ ಶುಕ್ರವಾರ ಸ್ವಾತಂತ್ರ್ಯ ಸಿಕ್ಕಿತು ಮತ್ತು ಗಾಂಧೀಜಿ ಅವರನ್ನು ಶುಕ್ರವಾರ ಹತ್ಯೆ ಮಾಡಲಾಯಿತು.

click me!