ನನ್ನ ಸಿನಿಮಾಗಳು ಸೋತು ನಾನು ಆತ್ಮಹತ್ಯೆಗೆ ಯತ್ನಿಸಿದಾಗ ಅಣ್ಣಾವ್ರು (ಡಾ. ರಾಜ್ ಕುಮಾರ್) ಧೈರ್ಯ ಹೇಳಿ ಬದುಕಿಸಿದ್ದರು ಎಂದು ನವರಸನಾಯಕ ಜಗ್ಗೇಶ್ ಕಹಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.
ಬೆಂಗಳೂರು (ಏ.24): ರಾಜ್ಯಾದ್ಯಂತ ಇಂದು ವರನಟ ಡಾ.ರಾಜ್ ಕುಮಾರ್ ಅವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್‌ಕುಮಾರ್ ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದ ನವರಸನಾಯಕ ಜಗ್ಗೇಶ್ ಅವರು ತಾವು ಆತ್ಮಹತ್ಯೆಗೆ ಯತ್ನಿಸಿದಾಗ ಧೈರ್ಯ ತುಂಬಿದ್ದೇ ಅಣ್ಣಾವ್ರು ಎಂದು ಹಳೆಯ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ರಾಜ್ ಕುಮಾರ್ ಅವರ ಸಮಾಧಿಗೆ ನಮಸ್ಕರಿಸಿ ಹೊರ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ.ರಾಜ್ ಕುಮಾರ್ (Dr Raj kumar) ಹಾಗೂ ನಮ್ಮ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯ ಇದೆ. 1994ರ ಸಮಯದಲ್ಲಿ ನನ್ನ ಸಿನಿಮಾಗಳು ಸೋತಿದ್ದವು. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಪ್ರಯತ್ನವನ್ನೂ ಮಾಡಿದ್ದೆನು. ಈ ವೇಳೆ ಅಣ್ಣಾವ್ರು ತಮಗೆ ಆತ್ಮಸ್ಥೈರ್ಯ ತುಂಬಿದ್ದರು ಎಂದು ಹೇಳಿಕೊಂಡರು.
ನಮ್ಮಪ್ಪನ ಮೊದಲ ವೃತ್ತಿಯೇ ರಸಿಕತೆ; ಹೋಟೆಲ್-ಗದ್ದೆ ಕೆಲಸದ ನಡುವೆಯೂ 9 ಮಕ್ಕಳು ಮಾಡಿದ್ದಾರೆ: ಯೋಗರಾಜ್ ಭಟ್
ಮುಂದುವರೆದು 'ನಮ್ಮ ತಂದೆ ಹಾಗೂ ರಾಜ್ ಕುಮಾರ್ ಅವರ ಮೂಗು ಸೇಮ್ ಟು ಸೇಮ್ ಇದೆ. ನನಗೆ ರಾಜಣ್ಣ ಅಂದ್ರೆ ಪಂಚ ಪ್ರಾಣ. ನಾನು ಅವರಲ್ಲಿ ತಂದೆಯ ವಾತ್ಸಲ್ಯ ಕಂಡಿದ್ದೇನೆ. ನಾನು ಹೊಸದಾಗಿ ಮನೆ ಕಟ್ಟಿ ಗೃಹ ಪ್ರವೇಶಕ್ಕೆ ಕರೆದಾಗ 11 ಗಂಟೆಗೆ ಬಂದು ಆಶೀರ್ವದಿಸಿದ್ದರು. ಆಗ ಬಂದು ಮಧ್ಯಾಹ್ನ 3 ಗಂಟೆವರೆಗೂ ಕೂತು ಮಾತನಾಡಿದ್ದರು. ರಾಜಣ್ಣ ಅವರೊಂದಿಗೆ ಅನೇಕ ನೆನಪುಗಳು, ಒಡನಾಟಗಳು ಉಳಿದುಕೊಂಡಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ 1994ನೇ ಇಸವಿಯಲ್ಲಿ ನನ್ನ ಸಿನಿಮಾಗಳು ಫ್ಲಾಪ್ ಆದಾಗ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೆ. ಆಗ ನನ್ನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಗೆ ಅಣ್ಣಾವ್ರು ಬಂದು ತಲೆ ಮೇಲೆ ಕೈ ಇಟ್ಟು ಒಳ್ಳೇದು ಆಗ್ಲಿ ಎಂದು ಆಶೀರ್ವಾದ ಮಾಡಿದ್ದರು. ಯಾವುದೇ ಕಾರಣಕ್ಕೂ ಅತಿಯಾಸೆ ಬೇಡ, ಜಗತ್ತನ್ನು ಮೆಚ್ಚಿಸಿ ಬದುಕೋಕೆ ಹೋಗ್ಬಾರ್ದು ಎಂದು ಮಾನಸಿಕ ಧೈರ್ಯ ಕೊಟ್ಟಿದ್ದರು. ಇದಾದ ನಂತರ ಅವರ ಒಂದೇ ಒಂದು ಆಶೀರ್ವಾದದಿಂದ ನಂತರ ತೆಗೆದ ನನ್ನ ಸಿನಿಮಾಗಳು ಹಿಟ್ ಆದವು. ಇನ್ನು ಅವರು ಕಾಲವಾದಾಗ ಅಂತ್ಯಕ್ರಿಯೆಯಲ್ಲೂ ಭಾಗಿಯಾಗಿದ್ದೆನು. ಅವರ ಮೃತದೇಹದ ಜತೆಗೆ ನಾನು ಇಡೀ ದಿನ ಇದ್ದೆನು ಎಂದು ನೆನಪನ್ನು ಹಂಚಿಕೊಂಡರು.
ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಬಗ್ಗೆ ಗೊತ್ತಿರದ ವಿಷಯಗಳಿವು!
ಇನ್ನು ನಟ ಜಗ್ಗೇಶ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಡಾ.ರಾಜ್ ಕುಮಾರ್ ಅವರ ಜನ್ಮದಿನದ ಅಂಗವಾಗಿ ಅವರೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ 'ನನ್ನ ಕಲಾಬದುಕಿನ ಮೇಲಿನ ಅಣ್ಣನ ಕೃಪಾದೃಷ್ಟಿ ನನ್ನ ಜನ್ಮಾಂತರ ಪುಣ್ಯ.. ಇಂದು ನನ್ನ ಕಲಾದೇವರು ಹುಟ್ಟಿದ ದಿನ.. ನೀವು ನನ್ನ ಮಾನಸದಲ್ಲಿ ನೆನಪಿನ ಸಾಗರ' ಎಂದು ಬರೆದುಕೊಂಡಿದ್ದಾರೆ.