ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಹಸ್ತಪ್ರತಿಗಳ ಡಿಜಿಟಲೀಕರಣ, ಭಾಷಾಂತರ, ಮತ್ತು ಪ್ರಕಟಣೆ ಕಾರ್ಯಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ.
ಲಿಂಗರಾಜು ಕೋರಾ
ಬೆಂಗಳೂರು (ಏ.3) : ಸಂಸ್ಕೃತ ಭಾಷೆ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಸ್ಥಾಪನೆಯಾದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಆಂತರಿಕ ಆದಾಯದಲ್ಲೇ ಶಕ್ತಿ ಮೀರಿ ಕಾರ್ಯನಿರ್ವಹಿಸುತ್ತಿದೆ. ಸಾವಿರಾರು ಹಸ್ತಪ್ರತಿಗಳ ಡಿಜಿಟಲೀಕರಣ, ಭಾಷಾಂತರ, ಪ್ರಕಟಣೆ ಸೇರಿ ಮಾಡಬೇಕಾದ ಕಾರ್ಯಗಳು ಇನ್ನೂ ಸಾಕಷ್ಟಿದೆ. ಆದರೆ, ಇದಕ್ಕೆಲ್ಲ ಸಾಕಷ್ಟು ಅನುದಾನವಿಲ್ಲದೆ ಸೊರಗುತ್ತಿದೆ.
ರಾಜ್ಯದ ಈ ವಿಶೇಷ ವಿಶ್ವವಿದ್ಯಾಲಯ ಈ ಬಾರಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಸಂಶೋಧನಾ ಚಟುವಟಿಕೆ, ಬೋಧಕ, ಬೋಧಕೇತರ ಸಿಬ್ಬಂದಿ ವೇತನಕ್ಕಾಗಿ 10 ಕೋಟಿ ರು. ಅನುದಾನ ನೀಡುವಂತೆ ಸರ್ಕಾರಕ್ಕೆ ವಿವಿಯು ಪ್ರಸ್ತಾವನೆ ಸಲ್ಲಿಸಿದೆ.
ನ್ಯಾಕ್‌ನಿಂದ ‘ಎ’ ಗ್ರೇಡ್ ಶ್ರೇಯಾಂಕ, ಯುಜಿಸಿಯಿಂದ 12 ಬಿ ಮಾನ್ಯತೆ ಪಡೆದಿರುವ ಸಂಸ್ಕೃತ ವಿವಿಯಲ್ಲಿ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿವೆ. ಜ್ಯೋತಿಷ್ಯಶಾಸ್ತ್ರ, ಭಾರತ ಜ್ಞಾನ ಪರಂಪರೆ(ಐಕೆಎಸ್) ಸೇರಿ ವಿವಿಧ ವಿಷಯದಲ್ಲಿ ಹೊಸ ಸರ್ಟಿಫಿಕೇಟ್ ಕೋರ್ಸುಗಳ ಆರಂಭವಾಗಿದೆ. ಇದರಿಂದ ಕಳೆದ ಕೆಲ ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚುತ್ತಿದೆ. ಮೊದಲೆಲ್ಲ ವಯಸ್ಸಾದವರೇ ಹೆಚ್ಚು ಪ್ರವೇಶ ಪಡೆಯುತ್ತಿದ್ದರೆ ಈಗ ಯುವಜನರೂ ಸಂಸ್ಕೃತದ ವ್ಯಾಸಂಗಕ್ಕೆ ಆಸಕ್ತಿ ತೋರುತ್ತಿದ್ದಾರೆ.
ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ, ತಮ್ಮ ವಿದ್ಯಾರ್ಥಿಗಳಿಗೆ ನೆಟ್-ಸ್ಲೆಟ್ ಪರೀಕ್ಷಾ ತರಬೇತಿ, ಪೈಥಾನ್ ಮತ್ತು ಸಂಸ್ಕೃತ ಕುರಿತ ಪೈತಾನ್‌ಸ್ಕಿಟ್ ಪ್ರಯೋಗ, 22 ಭಾಷೆಗಳಿಂದ ಸಂಸ್ಕೃತಕ್ಕೆ ಅನುವಾದ ಕುರಿತು ಅನುವಾದ ಕಲಾ ಎಂಬ ವಿಚಾರ ಸಂಕಿರಣ, ವಿದ್ಯಾರ್ಥಿ, ಬೋಧಕರ ವಿನಿಮಯಕ್ಕಾಗಿ ಅಮೆರಿಕ ಸೇರಿ ವಿವಿಧ ದೇಶಗಳ ವಿವಿಗಳೊಂದಿಗೆ ಒಪ್ಪಂದಗಳು ಹಾಗೂ ವಿವಿಯಲ್ಲಿ ಒಟ್ಟು 1.5 ಕೋಟಿ ರು. ಮೊತ್ತದ ಸಂಶೋಧನಾ ಪ್ರಾಜೆಕ್ಟ್‌ಗಳು ನಡೆಯುತ್ತಿವೆ.
ಇದನ್ನೂ ಓದಿ: ದುಡ್ಡಿಲ್ಲದೆ ರಾಜ್ಯದ ವಿವಿಗಳ ಪರದಾಟ, ಒಂಬತ್ತು ಅಷ್ಟೇ ಅಲ್ಲ, ಉಳಿದವಕ್ಕೂ ಆಪತ್ತು! ಉನ್ನತ ಶಿಕ್ಷಣದ ಭವಿಷ್ಯವೇನು?
ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಂಸ್ಕೃತ ವಿಶ್ವವಿದ್ಯಾಲಯ ರಾಜ್ಯದಲ್ಲಿರುವ ಕನ್ನಡದ ಸಾಂಸ್ಕೃತಿಕ ಚರಿತ್ರೆ ನಿರ್ಮಾಣಕ್ಕೆ ಪೂರಕವಾದ ಸಹಸ್ರಾರು ಸಂಸ್ಕೃತ ಹಸ್ತಪ್ರತಿಗಳ ಡಿಜಿಲೀಕರಣ ಕಾರ್ಯದಲ್ಲಿ ತೊಡಗಿದೆ. ಮುಂದುವರೆದು ಇವುಗಳನ್ನು ಕನ್ನಡ, ಇಂಗ್ಲಿಷ್‌ಗೆ ಭಾಷಾಂತರ ಮಾಡಿ, ಸಂಪಾದಿಸಿ ಮುದ್ರಿಸಿ ಪ್ರಕಟಿಸಬೇಕಾದ ಅಗತ್ಯವಿದೆ. ಇದಕ್ಕೆ ವಿವಿಯ ಆಂತರಿಕ ಆದಾಯದಲ್ಲಿ ಈ ಕಾರ್ಯ ಸಾಧ್ಯವಿಲ್ಲ. ಸರ್ಕಾರ ಇದಕ್ಕಾಗಿ ಪ್ರತಿ ವರ್ಷ ಒಂದಷ್ಟು ಅನುದಾನ ನೀಡಬೇಕಾಗುತ್ತದೆ. ಆದರೆ, ಅದು ಆಗುತ್ತಿಲ್ಲ ಎನ್ನುವುದು ವಿವಿಯ ವಲಯದಲ್ಲಿ ಕೇಳಿಬರುತ್ತಿರುವ ಬೇಸರದ ಮಾತುಗಳು.
ಕರ್ನಾಟಕದಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ಬೆಳವಣಿಗೆ ಹೇಗಾಯಿತು ಎಂಬ ವಿಚಾರದಲ್ಲಿ ಈವರೆಗೆ ನಾವು ಒಂದು ಭಾಗವನ್ನು ಮಾತ್ರ ತಿಳಿಸಿದ್ದೇವೆ. ಅದರ ಮತ್ತೊಂದು ಭಾಗ ತಿಳಿಯಲು, ಆಧುನಿಕ ಪೂರ್ವ ಕರ್ನಾಟಕವನ್ನು ಅರ್ಥ ಮಾಡಿಕೊಳ್ಳಲು ಹಸ್ತಪ್ರತಿಗಳಲ್ಲಿನ ಮಾಹಿತಿಯನ್ನು ಭಾಷಾಂತರದ ಮೂಲಕ ಅಧ್ಯಯನಕಾರರು ಸೇರಿ ಎಲ್ಲರಿಗೂ ಸಿಗುವಂತೆ ಮಾಡಬೇಕಾದ ಕೆಲಸ ಸಂಸ್ಕೃತ ವಿವಿಯಿಂದ ಆಗಬೇಕಿದೆ. ಅಂಥ ಗುರಿ ಸಾಧನೆಗೆ ಕಾಲ ಕಾಲಕ್ಕೆ ಸರ್ಕಾರಗಳ ಅನುದಾನ ಅಗತ್ಯ. ಈ ವಿಷಯದಲ್ಲಿ ಸರ್ಕಾರಗಳು ಎಚ್ಚರಗೊಳ್ಳಬೇಕು ಎನ್ನುವುದು ನಾಡಿನ ವಿವಿಧ ವಿದ್ವಾಂಸರು, ಸಾಹಿತಿಗಳು, ಬರಹಗಾರರ ಸಲಹೆ.
3000 ಹಸ್ತಪ್ರತಿಗಳ ಡಿಜಿಟಲೀಕರಣ:
ಸಂಸ್ಕೃತ ವಿವಿ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಮೇಲುಕೋಟೆಯ ಭಗವಾನ್ ರಾಮಾನುಜ ಸಂಶೋಧನಾ ಸಂಸ್ಥೆ (ಬಿಆರ್‌ಎನ್‌ಆರ್‌ಐ)ಯಲ್ಲಿ 5000ಕ್ಕೂ ಹೆಚ್ಚು ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ ಕಾರ್ಯ ನಡೆಯುತ್ತಿದೆ. ಈ ಪೈಕಿ ಈಗಾಗಲೇ 3000 ಪ್ರತಿಗಳ ಡಿಜಿಟಲೀಕರಣ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಅದೇ ರೀತಿ ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲೂ ಅಪಾರ ಸಂಖ್ಯೆಯ ಪ್ರಾಚೀನ ಹಸ್ತಪ್ರತಿಗಳಿವೆ. ಅವುಗಳ ಡಿಜಿಟಲೀಕರಣ, ಭಾಷಾಂತರ, ಸಂಪಾದನೆ, ಮುದ್ರಣ ಮತ್ತು ಪ್ರಸಾರ ಕಾರ್ಯಗಳು ಆಗಬೇಕಿದೆ. ಹಸ್ತಪ್ರತಿಗಳನ್ನು ಓದುವುದು ಅಷ್ಟು ಸುಲಭದ ಅಥವಾ ಎಲ್ಲರಿಂದಲೂ ಸಾಧ್ಯವಾಗುವ ಕಾರ್ಯವಲ್ಲ. ಅದಕ್ಕಾಗಿ ಪರಿಣಿತ ವಿದ್ವಾಂಸರೇ ಆಗಬೇಕು. ಈ ನಿಟ್ಟಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನೂ ನೀಡುತ್ತಿದೆ. ಈ ಎಲ್ಲ ಕಾರ್ಯಗಳಿಗೂ ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ: ಕೊಡಗು ವಿಶ್ವವಿದ್ಯಾಲಯ ಉಳಿಸಿ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಂಸದ ಯದುವೀರ್, ಅಶ್ವತ್ಥ್ ನಾರಾಯಣ
ವಿದ್ಯಾರ್ಥಿಗಳ ಸಂಖ್ಯೆ ಏರಿಕೆ
ಸಂಸ್ಕೃತ ವಿವಿ ಕ್ಯಾಂಪಸ್‌ನಲ್ಲಿರುವ ಐದು ಪದವಿ ಹಾಗೂ 8 ಸ್ನಾತಕೋತ್ತರ ಪದವಿ ಕೋರ್ಸುಗಳು ಹಾಗು ಪಿಎಚ್.ಡಿ ಅಧ್ಯಯನಕ್ಕೆ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು, 25 ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸುಗಳಲ್ಲಿ 2000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಯುಜಿ, ಪಿಜಿ ಕೋರ್ಸುಗಳಿಗಿಂತ ಡಿಪ್ಲೊಮಾ, ಸರ್ಟಿಪಿಕೆಟ್ ಕೋರ್ಸುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನು, ವಿವಿ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ 30 ಸಂಯೋಜಿತ ಸಂಸ್ಕೃತ ಕಾಲೇಜುಗಳಿವೆ. ಇವುಗಳಲ್ಲಿ 3200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕ್ಯಾಂಪಸ್ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ನೂರಾರು ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇವುಗಳ ಜೊತೆಗೆ ವಿವಿ ವ್ಯಾಪ್ತಿಯಲ್ಲಿ 32 ಜ್ಯೋತಿಷ್ಯ ತರಬೇತಿ ಕೇಂದ್ರಗಳು, ಸಂಸ್ಕೃತ ಪಾಠಶಾಲೆಗಳು ಕೂಡ ಬರುತ್ತವೆ.
ವಾರ್ಷಿಕ ₹10 ಕೋಟಿ ಆದಾಯ
ಸಂಸ್ಕೃತ ವಿಶ್ವವಿದ್ಯಾಲಯವು ತನ್ನ ಆಂತರಿಕ ಸಂಪನ್ಮೂಲದಿಂದಲೇ ವಾರ್ಷಿಕ 8 ರಿಂದ 10 ಕೋಟಿ ರು. ಆದಾಯ ಹೊಂದಿದೆ. ಜೊತೆಗೆ ಕಾಯಂ ಬೋಧಕ, ಬೋಧಕೇತರ ಸಿಬ್ಬಂದಿಗೆ ಸರ್ಕಾರವೇ ವೇತನ ನೀಡಲಿದೆ. ಆದರೆ, ಆಂತರಿಕ ಆದಾಯ ನೂರಾರು ಸಂಖ್ಯೆಯಲ್ಲಿರುವ ಅತಿಥಿ ಶಿಕ್ಷಕರು, ಬೋಧಕೇತರ ಸಿಬ್ಬಂದಿಯ ವೇತನ, ಕ್ಯಾಂಪಸ್ ನಿರ್ವಹಣೆ, ವಿಚಾರ ಸಂಕಿರಣ ಸೇರಿ ಶೈಕ್ಷಣಿಕ ಚಟುವಟಿಕೆಗೆ ಪೂರಕ ಕಾರ್ಯಕ್ರಮಗಳಿಗೆ ಖರ್ಚಾಗುತ್ತಿದೆ. ಇದರ ಜೊತೆಗೆ ಕುಲಪತಿ ಡಾ.ಎಸ್.ಅಹಲ್ಯಾ ಅವರು ಒಂದಷ್ಟು ಖಾಸಗಿ ಸಂಸ್ಥೆಗಳಿಂದ ಸಿಎಸ್‌ಆರ್ ಅನುದಾನ ತರುವ ಕೆಲಸ ಮಾಡಿದ್ದಾರೆ. ಆದರೂ, ವಿವಿಯಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರದ ನೆರವು ಅಗತ್ಯವಾಗಿದೆ.
ಕುದೂರಲ್ಲಿ ಸುಸಜ್ಜಿತ ಕ್ಯಾಂಪಸ್
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಹೋಬಳಿ ವ್ಯಾಪ್ತಿಯಲ್ಲಿ ಸರ್ಕಾರ ಮಂಜೂರು ಮಾಡಿರುವ 100 ಎಕರೆ ಜಾಗದಲ್ಲಿ ಕರ್ನಾಟಕ ಸಂಸ್ಕೃತ ವಿವಿಯ ಸುಸಜ್ಜಿತ ಕ್ಯಾಂಪಸ್ ತಲೆ ಎತ್ತುತ್ತಿದೆ. ಕ್ಯಾಂಪಸ್‌ನಲ್ಲಿ ಹೊಸ ಆಡಳಿತ ಬ್ಲಾಕ್ ಸೇರಿ ವಿವಿಧ ಕಟ್ಟಡಗಳ ನಿರ್ಮಾನ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ವಿವಿಗೆ ಹಸ್ತಾಂತರ ಆಗುವ ನಿರೀಕ್ಷೆ ಇದೆ.
ವಿವಿಗೆ ರಾಜಾಶ್ರಯ ಬೇಕು
ಮೊದಲೇ ಸಂಸ್ಕೃತ ವಿದ್ಯಾಭ್ಯಾಸಕ್ಕೆ ಆಸಕ್ತಿ ತೋರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ, ಪ್ರವೇಶ ಶುಲ್ಕವೂ ಕಡಿಮೆ ಇದೆ. ನಾವು ಶುಲ್ಕ ಹೆಚ್ಚಿಸಿ ಆಂತರಿಕ ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಈ ವಿವಿಯ ಅಭಿವೃದ್ಧಿಗೆ ರಾಜಾಶ್ರಯದ ಅಗತ್ಯವಿದೆ. ಹಾಗಾಗಿ ಅಭಿವೃದ್ಧಿ ಕಾರ್ಯಗಳು ಹಾಗೂ ಇತರೆ ಚಟುವಟಿಕೆಗಳಿಗೆ ಸರ್ಕಾರಕ್ಕೆ ಈ ಬಾರಿ ₹10 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೂಕ್ತ ಅನುದಾನ ದೊರೆಯುವ ಭರವಸೆ ಇದೆ.
-ಡಾ। ಎಸ್.ಅಹಲ್ಯಾ, ಸಂಸ್ಕೃತ ವಿವಿ ಕುಲಪತಿ.
ವಿಶೇಷ ಅನುದಾನ ಒದಗಿಸಬೇಕು
ಸಂಸ್ಕೃತ ಗ್ರಂಥಗಳ ಅಧ್ಯಯನ, ವೇದ ಕಾಲದ ಜ್ಞಾನವನ್ನು ಇಂದಿನ ಪೀಳಿಗೆಗೆ ತಲುಪಿಸುವುದು ಸಂಸ್ಕೃತ ವಿವಿಯ ಉದ್ದೇಶ ಎಂದು ಸರ್ಕಾರವೇ ಹೇಳುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿರುವ ಪ್ರಾಚೀನ ಹಸ್ತಪ್ರತಿಗಳ ಅನುವಾದ, ಮುದ್ರಣ, ಪ್ರಸಾರದೊಂದಿಗೆ ಅವುಗಳಲ್ಲಿರುವ ಜ್ಞಾನ, ಪ್ರಾಚೀನ ಸಾಹಿತ್ಯ ಪರಂಪರೆಯನ್ನು ಎಲ್ಲರಿಗೂ ತಲುಪಿಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ಸರ್ಕಾರ ಪ್ರತ್ಯೇಕ ಯೋಜನೆಯನ್ನೇ ರೂಪಿಸಿ ವಿಶೇಷ ಅನುದಾನ ಒದಗಿಸಬೇಕು.
-ಡಾ। ಮಲ್ಲೇಪುರಂ ಜಿ. ವೆಂಕಟೇಶ್, ವಿಶ್ರಾಂತ ಕುಲಪತಿ ಸಂಸ್ಕೃತ ವಿವಿ