ಸಣ್ಣಪುಟ್ಟ ಚಿಕಿತ್ಸೆ, ಆರೈಕೆ ದೋಷಗಳಿಂದಾಗಿ ಸಾವಿಗೀಡಾಗುವ ನವಜಾತ ಶಿಶುಗಳ ತಾಯಂದಿರ ಮರಣ ಪ್ರಮಾಣ ಇಳಿಸಲು ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ಈ ದಿಸೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಇಂಥ ಸಾವಿನ ಪ್ರಮಾಣ ಶೂನ್ಯಕ್ಕಿಳಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರು (ಏ.05): ಸಣ್ಣಪುಟ್ಟ ಚಿಕಿತ್ಸೆ, ಆರೈಕೆ ದೋಷಗಳಿಂದಾಗಿ ಸಾವಿಗೀಡಾಗುವ ನವಜಾತ ಶಿಶುಗಳ ತಾಯಂದಿರ ಮರಣ ಪ್ರಮಾಣ ಇಳಿಸಲು ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ಈ ದಿಸೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಇಂಥ ಸಾವಿನ ಪ್ರಮಾಣ ಶೂನ್ಯಕ್ಕಿಳಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವ್ಯವಸ್ಥೆಯಲ್ಲಿನ ಲೋಪದಿಂದಾಗಿ ತಾಯಂದಿರ ಸಾವಿನ ಪ್ರಮಾಣ ಹೆಚ್ಚಿರುವ ಬಗ್ಗೆ ಒಪ್ಪಿಕೊಂಡರು. ಹೀಗಾಗಿ ಈ ಸಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗರ್ಭಿಣಿಯರ ಆರೋಗ್ಯದ ಮೇಲೆ ಗಮನಹರಿಸುವಂಥ ಹಲವು ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ತಾಯಂದಿರ ಸಾವಿನ ಪ್ರಕರಣ ಹೆಚ್ಚಾದ ಬಳಿಕ ರಾಜ್ಯಮಟ್ಟದ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿಯು ಮಧ್ಯಂತರ ವಿಶ್ಲೇಷಣಾ ವರದಿ ನೀಡಿದೆ. ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಿದ್ದು, ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ವ್ಯವಸ್ಥೆಯಲ್ಲಿನ ಲೋಪಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಿ, ಅವುಗಳನ್ನು ಸರಿಪಡಿಸುವ ಕೆಲಸ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಪ್ರತಿ ಗರ್ಭಿಣಿಯರನ್ನು 2ನೇ ತಿಂಗಳಿನಿಂದ 7ನೇ ತಿಂಗಳವರೆಗೆ ತಿಂಗಳಿಗೊಮ್ಮೆ ಆರೈಕೆಗಾಗಿ ವೈದ್ಯರ ಸಮಾಲೋಚನೆ ಮಾಡಲಾಗುವುದು. 8ನೇ ತಿಂಗಳಲ್ಲಿ ಎರಡು ಬಾರಿ ಮತ್ತು 9ನೇ ತಿಂಗಳಲ್ಲಿ ವಾರಕ್ಕೊಮ್ಮೆ ಗರ್ಭಿಯರ ಆರೋಗ್ಯ ಸ್ಥಿತಿ ಗಮನಿಸಬೇಕು. ಅಲ್ಲದೆ, ಗರ್ಭಿಣಿಯರನ್ನು 8ನೇ ಮತ್ತು 9ನೇ ತಿಂಗಳಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಪ್ರತಿನಿತ್ಯ ಸಮಾಲೋಚನೆ ನಡೆಸಬೇಕು. ರಕ್ತ ಹೀನತೆ, ರಕ್ತದೊತ್ತಡ ಮತ್ತು ರಕ್ತದಲ್ಲಿನ ಗ್ಲೂಕೋಸ್‌ನ ಪತ್ತೆ ಹಚ್ಚುವಿಕೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಹೆರಿಗೆ ಬಳಿಕ ಮೂರು ದಿನ ಆಸ್ಪತ್ರೆಯಲ್ಲೇ ತಾಯಂದಿರನ್ನು ಇಟ್ಟುಕೊಂಡು ಆರೋಗ್ಯದ ಬಗ್ಗೆ ಗಮನಹರಿಸಬೇಕು. ಅಲ್ಲದೆ, ಸಿಸೇರಿಯನ್ ಆಗಿರುವ ಬಾಣಂತಿಯರನ್ನು ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಬೇಕು. ಸಂಶಯಾಸ್ಪದವಾಗಿ ಮೃತಪಟ್ಟರೆ ಪೋಸ್ಟ್‌ಮಾರ್ಟಂ ಮಾಡಬೇಕು. ಶೀಘ್ರ ಈ ಕುರಿತ ವರದಿ ನೀಡಬೇಕು. ಇವೆಲ್ಲವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿ ತಾಲೂಕಿನಲ್ಲಿ ಮಕ್ಕಳ ತಜ್ಞರು, ಪ್ರಸೂತಿ ತಜ್ಞರು ಮತ್ತು ಅರಿವಳಿಕೆ ತಜ್ಞರು ಇರಬೇಕು. ಪೌಷ್ಟಿಕಾಂಶ ಕಿಟ್‌ಗಳು ಹಿಂದುಳಿದ ಜಿಲ್ಲೆಗಳಿಗೆ ನೀಡಲಾಗುತ್ತಿದೆ. ಅವುಗಳನ್ನು ಅಗತ್ಯ ಇರುವವರಿಗೆ ಪೂರೈಸಬೇಕು.
ಉಚ್ಚಾಟಿತ ಶಾಸಕರ ಪರ ವಹಿಸುವ ಬದಲು ಬುದ್ಧಿ ಹೇಳಲಿ: ಸಚಿವ ದಿನೇಶ್ ಗುಂಡೂರಾವ್
ತಾಲೂಕುಮಟ್ಟದ ರಕ್ತ ಸಂಗ್ರಹಣಾ ಘಟಕಗಳು ರಕ್ತ ಮತ್ತು ರಕ್ತ ಉತ್ಪನ್ನಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಲು ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿರಬೇಕು. ಸ್ಥೂಲಕಾಯ ಗರ್ಭಿಣಿ/ಬಾಣಂತಿಯರಿಗೆ ಹೆಪಾರಿನ್ ರೋಗನಿರೋಧಕ ಚುಚ್ಚು ಮದ್ದು ನೀಡಬೇಕು ಎಂದರು. ತಾಯಂದಿರ ಮರಣ ಪ್ರಮಾಣ ಗಮನಿಸುವುದಾದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.65ರಷ್ಟು ಇದ್ದು, ಖಾಸಗಿ ಆಸ್ಪತ್ರೆಯಲ್ಲಿ ಶೇ.22 ರಷ್ಟು ಇದೆ. ಶೇ.10ರಷ್ಟು ರಸ್ತೆ ಮಧ್ಯೆ ಮತ್ತು ಶೇ.2ರಷ್ಟು ಮನೆಯಲ್ಲಿ ಸಂಭವಿಸಿವೆ. ರಾಜ್ಯದಲ್ಲಿ ವಾರ್ಷಿಕ 530 ತಾಯಂದಿರ ಸಾವಿನ ಸಂಖ್ಯೆ ಇದ್ದು, ಇದನ್ನು 400ರ ಕೆಳಗೆ ಇಳಿಸುವ ಗುರಿ ಹೊಂದಲಾಗಿದೆ. ಕೇರಳದಲ್ಲಿ ಸಾವಿನ ಪ್ರಮಾಣ ಶೇ.18ರಷ್ಟು ಇದ್ದು, ಅಲ್ಲಿನ ಪ್ರಮಾಣಕ್ಕೆ ಇಳಿಕೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.