ಮಕ್ಕಳ ಸುಪರ್ದಿ ವೇಳೆ ಕೌನ್ಸೆಲಿಂಗ್‌ ನಡೆಸಿ: ಹೈಕೋರ್ಟ್‌

By Kannadaprabha NewsFirst Published Aug 23, 2021, 7:17 AM IST
Highlights

* ಪೋಷಕರು ಮಕ್ಕಳನ್ನು ತ್ಯಜಿಸಲು ನಿಯಮ ಏನಿರಬೇಕು?
* ಸೂಚನೆ- ಬಾಲನ್ಯಾಯ ಕಾಯ್ದೆಯಡಿ ನಿಯಮ ರೂಪಿಸಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ
* ಮೈಸೂರಿನ ಲಿವಿಂಗ್‌ ಟುಗೆದರ್‌ ಜೋಡಿ 12 ದಿನದ ಮಗು ತ್ಯಜಿಸಿದ ಪ್ರಕರಣ ಗಂಭೀರ ಪರಿಗಣನೆ
 

ಬೆಂಗಳೂರು(ಆ.23): ಪೋಷಕರು ಹಾಗೂ ಪಾಲಕರು ತ್ಯಜಿಸುವ ಮಕ್ಕಳನ್ನು ಸುಪರ್ದಿಗೆ ಪಡೆಯುವ ಪ್ರಕರಣಗಳಲ್ಲಿ ಆಳವಾದ ವಿಚಾರಣೆ ಹಾಗೂ ಕೌನ್ಸೆಲಿಂಗ್‌ ನಡೆಸುವುದು ಸೇರಿದಂತೆ ಮಕ್ಕಳ ಕಲ್ಯಾಣ ಸಮಿತಿಯು ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಬಾಲನ್ಯಾಯ ಕಾಯ್ದೆಯಡಿ ಅಗತ್ಯ ನಿಯಮ ರೂಪಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಮೈಸೂರಿನಲ್ಲಿ ಸಹಜೀವನ (ಲಿವಿಂಗ್‌ ಟುಗೆದರ್‌) ನಡೆಸುತ್ತಿದ್ದ ದಂಪತಿ, ತಮಗೆ ಜನಿಸಿದ್ದ ಹೆಣ್ಣು ಶಿಶುವನ್ನು 12ನೇ ದಿನಕ್ಕೇ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಿ ಹೋದ ಬಗ್ಗೆ ಮಾಧ್ಯಮದಲ್ಲಿ ಪ್ರಕಟವಾಗಿದ್ದ ವರದಿ ಆಧರಿಸಿ ಲೆಟ್‌್ಜ ಕಿಟ್‌ ಫೌಂಡೇಷನ್‌ ಎಂಬ ಸರ್ಕಾರೇತರ ಸಂಸ್ಥೆ ದಾಖಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಬಾಲ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯ್ದೆ-2015ರ ಸೆಕ್ಷನ್‌ 35ರ ಪ್ರಕಾರ ಪೋಷಕರು/ಪಾಲಕರು ತಮ್ಮ ಭೌತಿಕ, ಭಾವನಾತ್ಮಕ ಮತ್ತು ಸಾಮಾಜಿಕ ಕಾರಣಗಳಿಗೆ ಮೀರಿದ ಅಂಶಗಳಿಂದ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ನೀಡಬಹುದಾಗಿದೆ. ಆ ವೇಳೆ ಸಮಿತಿಯು ನಿಗದಿತ ವಿಚಾರಣೆ ಹಾಗೂ ಕೌನ್ಸೆಲಿಂಗ್‌ ನಡೆಸಿದ ನಂತರ ತೃಪ್ತಿಯಾದಲ್ಲಿ ಮಗುವನ್ನು ಪಡೆಯಬಹುದು. ಹೀಗೆ ಮಗುವನ್ನು ಸಮಿತಿಯ ವಶಕ್ಕೆ ನೀಡಿದ ನಂತರದ ಎರಡು ತಿಂಗಳ ಅವಧಿಯಲ್ಲಿ ತಮ್ಮ ನಿರ್ಧಾರ ಮರುಪರಿಶೀಲಿಸಲು ಅವಕಾಶವಿದೆ. ಈ ಅವಧಿಯಲ್ಲಿ ಸಮಿತಿಯು ತನ್ನ ಸುಪರ್ದಿಗೆ ಪಡೆದ ಆರು ವರ್ಷದೊಳಗಿನ ಮಗುವನ್ನು ಪೋಷಕರು/ಪಾಲಕರು, ಪರಿಣತ ದತ್ತು ಸಂಸ್ಥೆಗೆ ವಶಕ್ಕೆ ನೀಡಬಹುದು. ಆರಕ್ಕಿಂತ ಹೆಚ್ಚಿನ ವಯಸ್ಸಿನ ಮಗುವನ್ನು ಬಾಲ ಮಂದಿರದಲ್ಲಿ ಇರಿಸಬಹುದಾಗಿದೆ.

ಸಮ್ಮತಿಯ ಮದುವೆಗೆ ಲವ್‌ ಜಿಹಾದ್‌ ಕಾಯ್ದೆ ಅನ್ವಯ ಆಗಲ್ಲ

ಆದರೆ, ಮಕ್ಕಳ ಕಲ್ಯಾಣ ಸಮಿತಿಗಳು ಮಗುವನ್ನು ವಶಕ್ಕೆ ಪಡೆಯುವ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಯಾವುದೇ ನಿಯಮಗಳು ಇಲ್ಲದಿರುವುದನ್ನು ಗಮನಿಸಿದ ನ್ಯಾಯಪೀಠ, ಬಾಲ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯ್ದೆ-2015ರ ಸೆಕ್ಷನ್‌ 110(2) ಅಡಿ ಅಧಿಕಾರ ಬಳಸಿ ಈ ಕುರಿತು ಮೂರು ತಿಂಗಳಲ್ಲಿ ನಿಯಮ ರೂಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪೋಷಕರು ಮಕ್ಕಳನ್ನು ತ್ಯಜಿಸುವ ಕ್ರಮ ನಿಜಕ್ಕೂ ಗಂಭೀರ ವಿಚಾರ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ. ಹಾಗಾಗಿ ಇಂತಹ ಪ್ರಕರಣಗಳನ್ನು ಆಳವಾದ ವಿಚಾರಣೆ ನಡೆಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟನ್ಯಾಯಪೀಠ, ಮಗುವನ್ನು ವಶಕ್ಕೆ ಪಡೆಯುವಾಗ ಸಮಿತಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಕೆಲ ಮಾರ್ಗಸೂಚಿಗಳನ್ನೂ ಸಲಹೆ ಮಾಡಿದೆ. ಹಾಗೆಯೇ, ಮೈಸೂರಿನಲ್ಲಿ ಯುವ ದಂಪತಿ 12 ದಿನದ ಹೆಣ್ಣು ಮಗುವನ್ನು ಸಮಿತಿಗೆ ಒಪ್ಪಿಸಿದ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಇದೇ ವೇಳೆ ಸರ್ಕಾರಕ್ಕೆ ಸೂಚಿಸಿದೆ.

ಹೈಕೋರ್ಟ್‌ ಸಲಹೆ ನೀಡಿದ ಮಾರ್ಗಸೂಚಿಗಳು

- ಮಗುವನ್ನು ಸುಪರ್ದಿಗೆ ಪಡೆಯುವಾಗ ಸಮಿತಿಯು ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
- ಪೋಷಕರು/ಪಾಲಕರ ಆಳವಾದ ವಿಚಾರಣೆ ಮತ್ತು ಕೌನ್ಸೆಲಿಂಗ್‌ ನಡೆಸಬೇಕು.
- ಪೋಷಕರಿಬ್ಬರ ಬಳಿಯೂ ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ಸಮಾಲೋಚನೆ ನಡೆಸಬೇಕು.
- ಮಗುವನ್ನು ತ್ಯಜಿಸುತ್ತಿರುವುದಕ್ಕೆ ಇರುವ ಭೌತಿಕ, ಭಾವನಾತ್ಮಕ ಮತ್ತು ಸಾಮಾಜಿಕ ಕಾರಣಗಳ ವಿವರ ಪಡೆಯಬೇಕು.
- ಒಂದೊಮ್ಮೆ ಪ್ರಕರಣದಲ್ಲಿ ಮತ್ತೊಬ್ಬರ ವಿಚಾರಣೆ ನಡೆಸಬೇಕೆಂಬ ಅಭಿಪ್ರಾಯಕ್ಕೆ ಬಂದಲ್ಲಿ, ಆ ಕೆಲಸವನ್ನೂ ಮಾಡಬೇಕು.
- ಈ ವೇಳೆ ಸರ್ಕಾರದ ಆರೋಗ್ಯ ಸಂಸ್ಥೆ-ವೈದ್ಯಕೀಯ ಕಾಲೇಜಿನ ಮನಃಶಾಸ್ತ್ರಜ್ಞರ/ ಪರಿಣತ ಸಮಾಲೋಚಕರ ನೆರವು ಪಡೆಯಬೇಕು.
- ಎರಡು ತಿಂಗಳ ನಂತರವೂ ನಿರ್ಧಾರ ಮರು ಪರಿಶೀಲಿಸದಿದ್ದಾಗ ಪೋಷಕರು/ಪಾಲಕರನ್ನು ಸಮಿತಿ ಮತ್ತೆ ವಿಚಾರಿಸಬೇಕು.
- ಮರು ವಿಚಾರಣೆಯ ನಂತರವೇ ಸಮಿತಿಯು ಮಗುವನ್ನು ಪರಿಣತ ಸಂಸ್ಥೆಗೆ ದತ್ತು ನೀಡಬೇಕು.
- ದತ್ತು ನೀಡಬಹುದಾದ ಸಂಸ್ಥೆಯ ಹಿನ್ನೆಲೆ ಬಗ್ಗೆ ಸಮಿತಿಯ ಸದಸ್ಯರಿಗೆ ಸಂಪೂರ್ಣ ಅರಿವಿರಬೇಕು.
- ದತ್ತು ಪಡೆಯಲು ಅರ್ಜಿ ಸಲ್ಲಿಸಿದ ಸಂಸ್ಥೆಗಳು ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಂಡಿವೆಯೇ ಎಂಬ ಬಗ್ಗೆ ಪರಿಶೀಲಿಸಬೇಕು.
- ಅರ್ಜಿಯ ನೈಜತೆ, ಸಂಸ್ಥೆಯ ನೋಂದಣಿಪತ್ರ ಹಾಗೂ ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು
- ಅರ್ಜಿ ಸಲ್ಲಿಕೆಯ ಹಿಂದೆ ಸಂಸ್ಥೆ ಯಾವುದಾದರೂ ಲಾಭ ಗಳಿಸುವ ಉದ್ದೇಶ ಹೊಂದಿದೆಯೇ ಎಂಬ ಬಗ್ಗೆ ಸಮಿತಿ ತನ್ನ ವಿವೇಚನೆ ಬಳಸಬೇಕು.
 

click me!