ಹಾಸನ ಪೆನ್‌ಡ್ರೈವ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪದೇ ಪದೇ ನಿಲುವು ಬದಲಿಸುತ್ತಿರುವುದು ಯಾಕೆ? ಪೆನ್‌ಡ್ರೈವ್ ಹಿನ್ನೆಲೆ ಏನು ಎಂದು ನಾವು ಬಿಚ್ಚಿಡಬೇಕಾ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರು (ಮೇ.05): ಹಾಸನ ಪೆನ್‌ಡ್ರೈವ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪದೇ ಪದೇ ನಿಲುವು ಬದಲಿಸುತ್ತಿರುವುದು ಯಾಕೆ? ಪೆನ್‌ಡ್ರೈವ್ ಹಿನ್ನೆಲೆ ಏನು ಎಂದು ನಾವು ಬಿಚ್ಚಿಡಬೇಕಾ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಅವರೇ ಮೇ 7 ರವರೆಗೆ ಯಾಕೆ ಕಾಯಬೇಕು? ಇದರ ಮೂಲ ಏನು? ಇದರ ಹಿನ್ನೆಲೆ ಏನು? ಇದರ ಹಿಂದೆ ಯಾರು ಯಾರು ಇದ್ದಾರೆ ಎಂದು ನಾವು ಬಿಚ್ಚಿ ಇಡಬೇಕಾ? ಇದು ಅವರ ಕುಟುಂಬದ ಆಂತರಿಕ ವಿಚಾರ.
ಈ ಬಗ್ಗೆ ಮಾಧ್ಯಮದವರು ವಿಶ್ಲೇಷಣೆ ಮಾಡಿದ್ದಾರೆ. ಇದರ ಹಿಂದೆ ಏನೇನಾಗಿದೆ ಎಂದು ನಾವೂ ಬಿಚ್ಚಿಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 7ರ ನಂತರ ಈ ಪ್ರಕರಣ ಎಲ್ಲಿಗೆ ಹೋಗುತ್ತೆ ಎಂದು ಎಲ್ಲರಿಗೂ ಗೊತ್ತು ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಪೆನ್‌ಡ್ರೈವ್ ಅವರ ಕುಟುಂಬದ ವಿಚಾರ. ಆದರೆ ಕುಮಾರಸ್ವಾಮಿ ಮಾತು ಆಗಾಗ್ಗೆ ಬದಲಾಗುತ್ತಲೇ ಬಂದಿದೆ. ಬೇಕಿದ್ದರೆ ಕಳೆದ ವಿಧಾನಸಭೆ ಚುನಾವಣೆಯಿಂದ ಈಚೆಗೆ ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ನೋಡಿಕೊಂಡು ಬನ್ನಿ.
ಇದು ಸತ್ಯ Vs ಸುಳ್ಳಿನ ನಡುವಿನ ಚುನಾವಣೆ: ಮುಖಾಮುಖಿ ಸಂದರ್ಶನದಲ್ಲಿ ಡಿಕೆಶಿ ಹೇಳಿದಿಷ್ಟು...
ಈಗ ಪೆನ್ ಡ್ರೈವ್ ಪ್ರಕರಣದಲ್ಲೂ ಕುಮಾರಸ್ವಾಮಿ ಅವರು ಗಂಟೆಗೊಂದು, ಗಳಿಗೆಗೊಂದು ಹೇಳಿಕೆ ನೀಡುತ್ತಿದ್ದಾರೆ. ನಿಲುವು ಬದಲಿಸುತ್ತಿದ್ದಾರೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಅವರೇ ‘ಉಪ್ಪು ತಿಂದವರು ನೀರು ಕುಡಿಯಬೇಕು, ನಮ್ಮ ಕುಟುಂಬ ಬೇರೆ, ಅವರ ಕುಟುಂಬ ಬೇರೆ’ ಎಂದು ಹೇಳಿದ್ದಾರೆ. ಹಿಂದೆ ನಮ್ಮ ಕುಟುಂಬದವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದೂ ಅವರೇ. ಪ್ರಜ್ವಲ್‌ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಕ್ಷಮೆ ಕೇಳಿದ್ದು ಅವರೇ. ಆದರೆ ಕುಮಾರಸ್ವಾಮಿ ಈಗ ತಮ್ಮ ನಿಲುವು ಬದಲಿಸುತ್ತಿರುವುದೇಕೆ? ಎಂದು ಕಿಡಿಕಾರಿದ್ದಾರೆ.
ಪ್ರಜ್ವಲ್, ರೇವಣ್ಣ ವಿರುದ್ಧ ಮಹಿಳೆ ಆಯೋಗಕ್ಕೆ 700 ಗಣ್ಯರಿಂದ ಪತ್ರ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೇಶದ ಹಲವು ಮಹಿಳಾ ಸಂಘಟನೆಗಳು, ವಿವಿಧ ವೃತ್ತಿಯ ಮಹಿಳೆಯರು ಸೇರಿದಂತೆ 700 ಗಣ್ಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಬಹುತ್ವ ಕರ್ನಾಟಕದ ನಿಶಾ ಅಬ್ದುಲ್ಲಾ, ಕರ್ನಾಟಕ ಜನ ಶಕ್ತಿಯ ಲಲಿತಾ, ಅಖಿಲ ಭಾರತ ಸ್ತ್ರೀವಾದಿ ಒಕ್ಕೂಟ, ವುಮೆನ್ ಫಾರ್ ಡೆಮಾಕ್ರಸಿ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ವಿವಿಧ ವೃತ್ತಿಯಲ್ಲಿರುವ ಹಲವು ಮಹಿಳೆಯರು, ಗಣ್ಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಪ್ರಜ್ವಲ್ ರೇವಣ್ಣ ವಿರುದ್ಧ ಹಲವು ಆರೋಪಗಳಿವೆ. ಸುಮಾರು 2,976 ವಿಡಿಯೋಗಳಿವೆ ಎನ್ನಲಾಗುತ್ತಿದೆ.
12 ಜೆಡಿಎಸ್ ಶಾಸಕರ ಕಾಂಗ್ರೆಸ್ ಸೇರ್ಪಡೆ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್
ಸಾಕಷ್ಟು ಪೆನ್‌ಡ್ರೈವ್‌ಗಳು ಬಹಿರಂಗವಾಗಿದ್ದರೂ ಆಯೋಗ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೇಗೆ ತೆರಳಿದರು. ಇವರ ವಿರುದ್ಧ 2023 ರಲ್ಲೇ ದೇವರಾಜೇಗೌಡರು ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಿದ್ದರೂ ಲೋಕಸಭಾ ಟಿಕೆಟ್ ಹೇಗೆ ನೀಡಲಾಯಿತು. ಇಂತಹವರ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಪ್ರಚಾರ ಕೈಗೊಂಡು ಯಾವ ಸಂದೇಶ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಹುದ್ದೆ ಮತ್ತು ಪ್ರಭಾವ ಬಳಸಿ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ.ರೇವಣ್ಣ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಆದ್ದರಿಂದ ಇವರಿಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆಯರಿಗೆ ರಕ್ಷಣೆ ನೀಡಿ ಕಾನೂನು ನೆರವು ಒದಗಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.