
ಬೆಂಗಳೂರು(ಏ.23): ರಾಜ್ಯದಲ್ಲಿ ಕೊರೋನಾ ಸೋಂಕಿತರು ಹಾಸಿಗೆ, ರೆಮ್‌ಡಿಸಿವಿರ್ ಔಷಧ ಮತ್ತು ಆಕ್ಸಿಜನ್‌ಗಾಗಿ ಅಲೆಯುವುದನ್ನು ತಪ್ಪಿಸಿ ಅವುಗಳ ಲಭ್ಯತೆ ಹಾಗೂ ಪೂರೈಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿದೆ.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಮಾರು ಒಂದೂವರೆ ಗಂಟೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠ, ಕೋವಿಡ್ ನಿಯಂತ್ರಣ, ಸೋಂಕಿತರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಿತು. ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಮಾಡಲು ಎಲ್ಲ ಆಸ್ಪತ್ರೆಗಳ ಮುಂಭಾಗದಲ್ಲಿ ‘ಹೆಲ್ಪ್ ಡೆಸ್ಕ್’ ಸ್ಥಾಪಿಸಿ ಯಾವ ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಇದೆ ಎಂಬ ಕುರಿತು ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದೆ.
ಆಮ್ಲಜನಕದ ಕೊರತೆ ನಿವಾರಣೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. 24 ಗಂಟೆಗಳಲ್ಲಿ ಆರ್‌ಟಿಪಿಸಿಆರ್ ವರದಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ರೆಮ್‌ಡಿಸಿವರ್ ಔಷಧ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಬೇಕು. ರೆಮ್‌ಡಿಸಿವಿರ್ ಲಭ್ಯತೆ ಬಗ್ಗೆ ವೆಬ್‌ಸೈಟ್‌ನಲ್ಲಿ ಪ್ರತಿ ದಿನ ವಿವರಗಳನ್ನು ಪ್ರಕಟಿಸಿ, ಎಲ್ಲಿ ಔಷಧ ಲಭ್ಯವಿದೆ, ಅದರ ಬೆಲೆ ಎಷ್ಟುಎಂಬುದನ್ನು ತಿಳಿಸಬೇಕು. ಸಾಧ್ಯವಾದರೆ ಸರ್ಕಾರವೇ ರೆಮ್‌ಡಿಸಿವಿರ್ ಖರೀದಿಸಿ, ಆಸ್ಪತ್ರೆಗಳಿಗೆ ನಿಗದಿತ ದರಕ್ಕೆ ನೀಡಬೇಕು ಎಂದು ನಿರ್ದೇಶನ ನೀಡಿತು.
ಸಾರಿಗೆ ಮುಷ್ಕರ ಅಂತ್ಯ: ಹೈಕೋರ್ಟ್ ಸೂಚನೆ ಬೆನ್ನಲ್ಲೇ ಚಳವಳಿ ಸ್ಥಗಿತ!
ಸಾವನ್ನಪ್ಪಿದ ಸೋಂಕಿತರ ಅಂತ್ಯಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಬೇಕು. ಚಿತಾಗಾರಗಳ ಮೇಲಿನ ಒತ್ತಡವನ್ನು ತಗ್ಗಿಸಬೇಕು. ಅಂತ್ಯಕ್ರಿಯೆ ಗೌರವಯುತವಾಗಿ ನಡೆಯುವಂತೆ ಹೆಚ್ಚುವರಿ ಸೌಕರ್ಯಗಳನ್ನು ಸೃಷ್ಟಿಸಬೇಕು. ಸೋಂಕು ಪರೀಕ್ಷಾ ಕೇಂದ್ರಗಳ ಮುಂದೆ ದಟ್ಟಣೆಯನ್ನು ತಗ್ಗಿಸಬೇಕು. ವೃದ್ಧರು ಮತ್ತು ಗರ್ಭಿಣಿಯರಿಗೆ ಪ್ರತ್ಯೇಕ ಸರತಿ ಸಾಲು ರಚಿಸಲು ಸೂಚಿಸಬೇಕು. ಕೊರೋನಾ ಲಕ್ಷಣಗಳಿಲ್ಲದ ಗರ್ಭಿಣಿಯರಿಗೆ ಆಸ್ಪತ್ರೆಗಳಿಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಪೀಠ ಸೂಚಿಸಿತು.
ಹೊಸ ಸಮಿತಿ ಅಗತ್ಯವಿಲ್ಲ: ಎಜಿ
ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ಕೋವಿಡ್ ನಿಯಂತ್ರಣಕ್ಕೆ ವಿವಿಧ ವಲಯಗಳ ತಜ್ಞರ ಸಮಿತಿಯನ್ನು ಈ ಹಂತದಲ್ಲಿ ರಚಿಸಬೇಕಾದ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಸಮರ್ಪಕ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಸಚಿವರುಗಳ ಸಮಿತಿಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರವು ಶೇ.50ರಷ್ಟುಸಿಬ್ಬಂದಿಯನ್ನು ಕೋವಿಡ್ ಕಾರ್ಯಕ್ಕೆ ನಿಯೋಜಿಸಿದೆ. ತಜ್ಞರ ಸಮಿತಿ ಕೋವಿಡ್ ನಿಯಂತ್ರಣಕ್ಕಾಗಿಯೇ ಸಲಹೆ- ಸೂಚನೆಗಳನ್ನು ನೀಡುತ್ತಿದೆ. ಹೀಗಾಗಿ ಈ ಹಂತದಲ್ಲಿ ಮತ್ತೊಂದು ಸಮಿತಿಯನ್ನು ರಚಿಸುವ ಅಗತ್ಯವಿಲ್ಲ. ಹೊಸ ಸಮಿತಿ ರಚನೆ ಅಧಿಕಾರದ ವಿಭಜನೆ ಹಾಗೂ ಗೊಂದಲಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ