ಬೆಂಗಳೂರು (ಮೇ.18): ಮನೆಯಲ್ಲಿ ಪ್ರತ್ಯೇಕ ರೂಮ್ ವ್ಯವಸ್ಥೆ ಹೊಂದಿಲ್ಲದವರು ಹೋಮ್ ಐಸೋಲೇಷನ್ ಆಗುವಂತಿಲ್ಲ. ಅಂತಹವರು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಬೇಕು. ಈ ಬಗ್ಗೆ ರೂಪಿಸಿರುವ ನಿಯಮಾವಳಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಯಲ್ಲಿ ಐಸೋಲೇಷನ್‌ನಲ್ಲಿರುವವರಿಂದ ಸೋಂಕು ಹರಡುವಿಕೆ ಹೆಚ್ಚುತ್ತಿರುವುದನ್ನು ಗಮನಿಸಿರುವ ಕೋವಿಡ್ ಕಾರ್ಯಪಡೆ, ಮನೆಯಲ್ಲಿ ಪ್ರತ್ಯೇಕ ಕೊಠಡಿ ಇಲ್ಲದವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಕಳುಹಿಸಬೇಕು ಎಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದರು.
undefined
ಆರೈಕೆ ಕೇಂದ್ರದಲ್ಲಿ ಆರೋಗ್ಯ ಇಲಾಖೆಯೇ ಚಿಕಿತ್ಸೆ ಜವಾಬ್ದಾರಿ ನಿರ್ವಹಿಸುತ್ತದೆ. ಗ್ರಾಮೀಣ ಭಾಗದಲ್ಲಿ ಸೋಂಕು ಪ್ರಸರಣ ಹೆಚ್ಚಾಗಬಾರದು ಎಂದರೆ ಸಾಂಸ್ಥಿಕ ಐಸೋಲೇಷನ್ ಅನಿವಾರ್ಯ ಎಂದು ಆರೋಗ್ಯ ಸಚಿವರು ಅಭಿಪ್ರಾಯಪಟ್ಟರು.
ಐಸೋಲೇಷನ್‌ನಲ್ಲಿದ್ರೆ ನೀವೇ ನಿಮ್ಮ ಕಾಳಜಿ ವಹಿಸೋದು ಹೇಗೆ ? ...
ಕೋವಾಕ್ಸಿನ್ ಲಸಿಕೆ ಉತ್ಪಾದನೆ : ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸುವ ಭಾರತ್ ಬಯೋಟೆಕ್ ಸದ್ಯ 1 ಕೋಟಿ ಲಸಿಕೆ ಉತ್ಪಾದನೆ ಮಾಡುತ್ತಿದೆ. ರಾಜ್ಯಕ್ಕೆ ಆದ್ಯತೆ ಮೇರೆಗೆ ಲಸಿಕೆ ನೀಡುವುದಾಗಿ ಭರವಸೆ ನೀಡಿದೆ. ಕೋಲಾರದ ಮಾಲೂರಿನಲ್ಲಿ ಉತ್ಪಾದನೆ ಆರಂಭ ಮಾಡಿದರೆ ಜೂನ್ ಅಂತ್ಯಕ್ಕೆ 1 ಕೋಟಿ, ಜುಲೈನಲ್ಲಿ 2-3 ಕೋಟಿ, ಆಗಸ್ಟ್‌ನಲ್ಲಿ 4- 5 ಕೋಟಿ ಡೋಸ್ ಉತ್ಪಾದನೆ ಆಗಲಿದೆ ಎಂಬ ಮಾಹಿತಿಯನ್ನು ಸಂಸ್ಥೆಯವರು ನೀಡಿದ್ದಾರೆ. ಆದಷ್ಟುಬೇಗ ರಾಜ್ಯದ ಜನತೆಗೆ ಲಸಿಕೆ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಸುಧಾಕರ್ ಭರವಸೆ ನೀಡಿದರು.
ವಿದೇಶಕ್ಕೆ ಲಸಿಕೆ- ಸಮರ್ಥನೆ : ಕೇಂದ್ರ ಸರ್ಕಾರ ಯಾರಿಗೂ ಲಸಿಕೆ ಮಾರಾಟ ಮಾಡಿಲ್ಲ. ಮಾನವೀಯತೆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಉಚಿತವಾಗಿ ಕೊಟ್ಟಿದ್ದಾರೆ. ಲಸಿಕೆ ನೀಡುವಾಗ ಕೋವಿಡ್ ಎರಡನೇ ಅಲೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ ಎಂದು ತಜ್ಞರು ಹೇಳಿರಲಿಲ್ಲ. ಆದರೆ ಈಗ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‌ಗೆ ಬದ್ಧತೆ ಇದ್ದರೆ ಸರ್ಕಾರದ ಜನಪರ ನಿರ್ಧಾರಗಳಿಗೆ ಬೆಂಬಲ ನೀಡಬೇಕು. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಡಾ. ಸುಧಾಕರ್ ಟೀಕಿಸಿದರು.