ತರಬೇತಿ, ಪರಿಕರ ಇಲ್ಲದೆ ಅರಣ್ಯ ಸಿಬ್ಬಂದಿ ಪರದಾಟ

By Kannadaprabha NewsFirst Published Jan 12, 2024, 6:47 AM IST
Highlights

ಬಹುತೇಕ ಅರಣ್ಯ ವೀಕ್ಷಕರು ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿದ್ದು, ವನ್ಯ ಜೀವಿಗಳ ಸಂಚಾರ, ಕಾಡುಗಳ್ಳತನ ತಡೆಯುವ ಬಗೆ, ಬೆಂಕಿ ಅವಘಡ ಮುಂತಾದವುಗಳನ್ನು ನಿಯಂತ್ರಿಸುವ ಕುರಿತು ಅವರಿಗೆ ಹೆಚ್ಚಿನ ಅರಿವಿನ ಕೊರತೆ ಇದೆ. ಆಧುನಿಕ ಉಪಕರಣಗಳನ್ನು ಬಳಸುವ ಕುರಿತು ತರಬೇತಿ ಸಹ ಸಾಕಷ್ಟು ಇಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಅಕ್ರಮ ತಡೆ ನಡೆಯುತ್ತಿಲ್ಲ. 

ಮಯೂರ ಹೆಗಡೆ

ಬೆಂಗಳೂರು(ಜ.12):  ಕಾಡುಗಳ್ಳರಿಂದ ಎದುರಾಗುವ ಅಪಾಯ, ವನ್ಯ ಜೀವಿಗಳ ದಾಳಿ, ಬೆಂಕಿ ಇತ್ಯಾದಿಗಳನ್ನು ಎದುರಿಸಿ ಅರಣ್ಯ ರಕ್ಷಣೆಗೆ ಸದಾ ಸಿದ್ಧರಾಗಿರುವ, ಅಪಾಯ ಲೆಕ್ಕಿಸದೆ ಮುನ್ನುಗ್ಗುವ ಮುಂಚೂಣಿ ಸಿಬ್ಬಂದಿ ಎನಿಸಿಕೊಂಡ ದಿನಗೂಲಿ ಅರಣ್ಯ ವೀಕ್ಷಕರಿಗೆ ಬದಲಾದ ಪರಿಸ್ಥಿತಿಗೆ ತಕ್ಕಂತೆ ಸೂಕ್ತ ತರಬೇತಿ, ಅಗತ್ಯ ಪರಿಕರಗಳನ್ನು ಇಲಾಖೆ ಸಮರ್ಪಕವಾಗಿ ಒದಗಿಸದ ಪರಿಣಾಮ ಅನೇಕ ಸಂದರ್ಭದಲ್ಲಿ ಅವರ ಪ್ರಾಣಕ್ಕೆ ಕುತ್ತು ತರುತ್ತಿರುವುದು ನಿರಂತರವಾಗಿ ನಡೆದುಕೊಂಡು ಬಂದಿದೆ.

Latest Videos

ಬಹುತೇಕ ಅರಣ್ಯ ವೀಕ್ಷಕರು ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿದ್ದು, ವನ್ಯ ಜೀವಿಗಳ ಸಂಚಾರ, ಕಾಡುಗಳ್ಳತನ ತಡೆಯುವ ಬಗೆ, ಬೆಂಕಿ ಅವಘಡ ಮುಂತಾದವುಗಳನ್ನು ನಿಯಂತ್ರಿಸುವ ಕುರಿತು ಅವರಿಗೆ ಹೆಚ್ಚಿನ ಅರಿವಿನ ಕೊರತೆ ಇದೆ. ಆಧುನಿಕ ಉಪಕರಣಗಳನ್ನು ಬಳಸುವ ಕುರಿತು ತರಬೇತಿ ಸಹ ಸಾಕಷ್ಟು ಇಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಅಕ್ರಮ ತಡೆ ನಡೆಯುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ತಪ್ಪಿಸಲು ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ!

ಇದೇ ವರ್ಷ ಸಕಲೇಶಪುರ, ಯಲ್ಲಾಪುರದಲ್ಲಿ ಕಾಡ್ಗಿಚ್ಚು ನಂದಿಸುವಾಗ ಇಬ್ಬರು ಸಿಬ್ಬಂದಿ ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿದ್ದರು. ಆನೆ ಸೆರೆ ಕಾರ್ಯಾಚರಣೆ ವೇಳೆ ಚಾಮರಾಜನಗರ, ಮಡಿಕೇರಿ, ಬಂಡಿಪುರದಲ್ಲಿ ಮೂವರು ಸಿಬ್ಬಂದಿ ಪ್ರಾಣ ತೆತ್ತಿದ್ದರು. ಇತ್ತೀಚೆಗೆ ಬೆಂಗಳೂರಲ್ಲಿ ಪ್ರತ್ಯಕ್ಷವಾದ ಚಿರತೆಯ ಪ್ರಾಣ ಉಳಿಸಬಹುದಾದ ಅವಕಾಶವಿದ್ದರೂ ಶೂಟ್‌ ಮಾಡಿ ಕೊಲ್ಲುವಂತಹ ಸ್ಥಿತಿ ಬಂದಿತ್ತು. ಹುಲಿ ಹಿಡಿಯುವ ವೇಳೆ ಸಿಬ್ಬಂದಿ ಗಾಯಗೊಂಡ ಘಟನೆ ನಡೆದಿತ್ತು.
ಹೀಗೆ ಹೇಳುತ್ತಾ ಹೋದರೆ ಸಿಬ್ಬಂದಿ ಪ್ರಾಣತೆತ್ತ, ಗಂಭೀರ ಗಾಯಗೊಂಡ ಪಟ್ಟಿ ದೊಡ್ಡದಾಗುತ್ತದೆ. ಇದಕ್ಕೆಲ್ಲ ಸಮರ್ಪಕ ತರಬೇತಿ ಇಲ್ಲದಿರುವುದು, ಸಮರ್ಪಕ ಕಾರ್ಯಾಚರಣಾ ವಿಧಾನದ ಅರಿವಿನ ಕೊರತೆ, ಸಾಂದರ್ಭಿಕ ಯೋಜನೆಯ ಸಂವಹನ ಸಮಸ್ಯೆಗಳು ಕಾರಣ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಅಪಾಯಕಾರಿ ಅರಣ್ಯ ಕೂಂಬಿಂಗ್‌, ವಿಶೇಷ ಹುಲಿ ಸಂರಕ್ಷಣಾ ದಳ, ಚಿರತೆ ಕಾರ್ಯಪಡೆ, ಆನೆ ಕಾರ್ಯಪಡೆ, ಕಾಡ್ಗಿಚ್ಚು ತಡೆ ಕೆಲಸದಲ್ಲಿ ದಿನಗೂಲಿ ನೌಕರರೇ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈಚೆಗೆ ಹೆಡಿಯಾಲದಲ್ಲಿ ಮಹಿಳೆಯನ್ನು ಕೊಂದಿದ್ದ ನರಭಕ್ಷಕ ಹುಲಿ ಸೆರೆಗೆ ಸ್ವತಃ ಸಿಬ್ಬಂದಿಯೇ ಬೋನಲ್ಲಿ ಕಾದು ಕುಳಿತು ಅದು ಸೆರೆಯಾಗುವಂತೆ ಮಾಡಿದ್ದಾರೆ. ಆದರೆ, ಇವರ ಪ್ರಾಣರಕ್ಷಣೆಗೆ ಅರಣ್ಯ ಇಲಾಖೆ ಎಷ್ಟರ ಮಟ್ಟಿಗೆ ಅಗತ್ಯ ಸೌಕರ್ಯ, ತರಬೇತಿ ಒದಗಿಸುತ್ತಿದೆ ಎಂಬ ಪ್ರಶ್ನೆಗೆ ಸಿಬ್ಬಂದಿ ಬೇಸರದಿಂದ ಉತ್ತರಿಸುತ್ತಾರೆ.

ತರಬೇತಿಯಿಲ್ಲ:

ರಾಜ್ಯದಲ್ಲಿ 500ಕ್ಕೂ ಹೆಚ್ಚಿನ ಕಳ್ಳಬೇಟೆ ತಡೆ ಶಿಬಿರಗಳಿದ್ದು, ಇಲ್ಲಿ ನಾಲ್ವರು ಅರಣ್ಯ ವೀಕ್ಷಕರು, ಒಬ್ಬರು ಅರಣ್ಯ ರಕ್ಷಕರು ಇದ್ದಾರೆ. ಎಲ್ಲರೂ ಹೊರಗುತ್ತಿಗೆ ಸಿಬ್ಬಂದಿಗಳಾಗಿದ್ದಾರೆ. ಆದರೆ, ಇವರಿಗೆ ಸಮರ್ಪಕ ತರಬೇತಿ ಇಲ್ಲ. ಅರಣ್ಯ ರಕ್ಷಕರಿಗೆ ಒಂದು ಬಂದೂಕು ನೀಡಲಾಗಿದೆ. ಆದರೆ, ಉಳಿದವರಿಗೆ ಇದರ ತರಬೇತಿ ಇಲ್ಲ. ಪ್ರಾಣಿಗಳು ಮಾರ್ಗ ಬದಲಿಸುವುದು, ಕಾರ್ಯಾಚರಣೆ ತಿಳಿವಳಿಕೆ ನೀಡಲಾಗಿಲ್ಲ.

ಕನಿಷ್ಠ ವೈರ್‌ಲೆಸ್‌ ಬ್ಯಾಂಡ್‌ ಬದಲಾವಣೆ ಮಾಡಿಕೊಳ್ಳುವ ಅರಿವಿನ ಕೊರತೆ ಇದೆ. ಆದರೆ, ಹಿಂದೆ ಹೀಗಿರಲಿಲ್ಲ. 1984ರಲ್ಲಿ ಎನ್‌ಎಂಆರ್‌ (ನಾಮಿನಲ್‌ ಮಸ್ಟರೋಲ್) ಅಡಿ ಆಯ್ಕೆಯಾದವರಿಗೆ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಆದರೆ, ಇತ್ತಿಚೆಗೆ ಈ ಪದ್ಧತಿಯೇ ಇಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ.

ಸೌಕರ್ಯವಿಲ್ಲ:

ಹಾಗೆ ನೋಡಿದರೆ ಅರಣ್ಯ ರಕ್ಷಣೆ ಆಗುತ್ತಿರುವುದೇ ಇವರಿಂದಾಗಿ. ಆದರೆ, ತುರ್ತು ಕಾರ್ಯಾಚರಣೆ ವೇಳೆ ಬಳಸುವ ಪರಿಕರಗಳೇ ಇವರ ಬಳಿಯಿಲ್ಲ. ಕಾಡ್ಗಿಚ್ಚು ಹಬ್ಬಿದ ವೇಳೆ ಬ್ಲೋಯರ್‌, ಫೈರ್‌ ಪ್ರೂಫ್‌ ಜಾಕೆಟ್‌, ಫೈರ್‌ ಬೀಟರ್ಸ್, ಹೆಲ್ಮೆಟ್‌, ಕನ್ನಡಕ, ಬ್ಯಾಕ್‌ಪಾಕ್‌, ಸ್ಪ್ರೇಯರ್ಸ್, ಐ ವಾಷರ್‌, ಬೂಟು, ಫಿಲ್ಟರ್‌ ಮಾಸ್ಕ್‌, ಗ್ಲೌಸ್‌, ನೀರಿನ ಕ್ಯಾನ್‌ ಇತರೆ ಉಪಕರಣಗಳು ಬೇಕು. ಆದರೆ ಇವು ಸಿಬ್ಬಂದಿಯ ಕೈ ಸೇರುತ್ತಿಲ್ಲ. ಹಲವು ವೇಳೆ ಕಾಡ್ಗಿಚ್ಚು ನಂದಿಸಲು ಸಾದಾ ಸಮವಸ್ತ್ರ ತೊಟ್ಟ ಸಿಬ್ಬಂದಿ ಕೈನಲ್ಲಿ ಸೊಪ್ಪು ಹಿಡಿದು ಬೆಂಕಿ ನಂದಿಸಬೇಕಾಗಿದೆ.

ಜೊತೆಗೆ ಕಾಡುಪ್ರಾಣಿಗಳ ಉಪಟಳ ಎದುರಾದಾಗ, ದಾಳಿ ನಡೆಸಿದಾಗ ಅವನ್ನು ಓಡಿಸಲೂ ಪರಿಕರಗಳಿಲ್ಲದೆ ಸಿಬ್ಬಂದಿ ಅಪಾಯಕ್ಕೆ ಸಿಲುಕುತ್ತಾರೆ . ಅರಣ್ಯ ಇಲಾಖೆ, ಎನ್‌ಜಿಒ ಸಹಕಾರದಲ್ಲಿ ಒಂದಿಷ್ಟು ಉಪಕರಣ ಒದಗಿಸುವ ಕೆಲಸ ಆಗುತ್ತಿದೆ. ಆದರೆ, ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಎಂದು ಸಿಬ್ಬಂದಿ ಬೇಸರಿಸುತ್ತಾರೆ. ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆಯಿಂದ ಹೆಲಿಕ್ಯಾಪ್ಟರ್‌ ಖರೀದಿಸುವ, ಡ್ರೋನ್‌ ಮೂಲಕ ನಿಗಾ ಇಡುವ ಪ್ರಸ್ತಾಪಗಳು ಇನ್ನೂ ಕಡತದಲ್ಲೇ ಉಳಿದುಕೊಂಡಿವೆ.

ಅರಣ್ಯ ಸಿಬ್ಬಂದಿಗೆ ಇನ್ನೂ ಇಲ್ಲ ಪೊಲೀಸ್‌ ರೀತಿ ಕ್ಯಾಂಟೀನ್‌..!

ಪ್ರಾಣಾಪಾಯಕ್ಕೆ ಹಾದಿ

ನೇರ ನೇಮಕಾತಿ ಅಡಿ ನೇಮಕರಾದವರಿಗೆ 8-9 ತಿಂಗಳ ತರಬೇತಿ ನೀಡಲಾಗುತ್ತಿದೆ. ಆದರೆ ಇವರ ಜೊತೆ ಅರಣ್ಯ ಕೂಂಬಿಂಗ್‌, ವಿಶೇಷ ಕಾರ್ಯಪಡೆಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ಸಿಬ್ಬಂದಿಗೆ ತರಬೇತಿ ಇಲ್ಲ. ಇದು ಪ್ರಾಣಾಪಾಯಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಚಾಮರಾಜನಗರ ಅರಣ್ಯ ಇಲಾಖೆ ದಿನಗೂಲಿ ಸಿಬ್ಬಂದಿ ಪರ ಹೋರಾಟಗಾರ ರಾಜಣ್ಣ ಸಿ ಹೇಳಿದ್ದಾರೆ.  

ಅಗತ್ಯತೆ ತಿಳಿದು ಪೂರೈಕೆ

ಅರಣ್ಯ ವೀಕ್ಷಕರಿಗೆ ತರಬೇತಿ ನೀಡುವ ವ್ಯವಸ್ಥೆ ಇದೆ. ನಾಲ್ಕು ವರ್ಷದ ಹಿಂದೆ ಒಂದಿಷ್ಟು ಪರಿಕರವನ್ನೂ ನೀಡಿದ್ದೆವು. ಫೆಬ್ರವರಿ ಮಧ್ಯಂತರದ ಬಳಿಕ ಕಾಡ್ಗಿಚ್ಚು ಸಮಸ್ಯೆ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಿಬ್ಬಂದಿ ಜೊತೆ ಚರ್ಚಿಸಿ ಅವರ ಅಗತ್ಯ ತಿಳಿದುಕೊಂಡು ಪೂರೈಸುವ ಕ್ರಮ ವಹಿಸುತ್ತೇವೆ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‌ ಕುಮಾರ್‌ ತಿಳಿಸಿದ್ದಾರೆ. 

click me!