Haveri: ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ ಭಕ್ಷ್ಯ ಭೋಜನ: ಈಗಾಗಲೇ ಸಿಹಿ ತಿಂಡಿ ತಯಾರಿ

By Govindaraj S  |  First Published Jan 4, 2023, 10:40 AM IST

ಹಾವೇರಿ ಸಾಹಿತ್ಯ ಜಾತ್ರೆಗೆ ಇನ್ನೆರೆಡು ದಿನಗಳಷ್ಟೇ ಬಾಕಿಯಿದೆ. ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಸಾಹಿತ್ಯದೌತಣದೊಂದಿಗೆ ಸಿಹಿ ಭೋಜನ ಉಣಬಡಿಸಲಾಗುತ್ತಿದ್ದು, ಸಿಹಿ ಶೇಂಗಾ ಹೋಳಿಗೆ ಸಿದ್ಧಪಡಿಸುವ ಕಾರ್ಯ ಶುರುವಾಗಿದೆ. 


ನಾರಾಯಣ ಹೆಗಡೆ

ಹಾವೇರಿ (ಜ.04): ಹಾವೇರಿ ಸಾಹಿತ್ಯ ಜಾತ್ರೆಗೆ ಇನ್ನೆರೆಡು ದಿನಗಳಷ್ಟೇ ಬಾಕಿಯಿದೆ. ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಸಾಹಿತ್ಯದೌತಣದೊಂದಿಗೆ ಸಿಹಿ ಭೋಜನ ಉಣಬಡಿಸಲಾಗುತ್ತಿದ್ದು, ಸಿಹಿ ಶೇಂಗಾ ಹೋಳಿಗೆ ಸಿದ್ಧಪಡಿಸುವ ಕಾರ್ಯ ಶುರುವಾಗಿದೆ. ಜ.6ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಸಮ್ಮೇಳನಕ್ಕೆ ಬರುವ ಲಕ್ಷಾಂತರ ಜನ ಸಾಹಿತ್ಯಾಸಕ್ತರಿಗೆ ಭಾರಿ ಭೋಜನ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ನಿತ್ಯವೂ ಭೋಜನದೊಂದಿಗೆ ವಿಶೇಷ ಸಿಹಿ ಖಾದ್ಯ ಇರಲಿದೆ.

Latest Videos

undefined

ಬಾಯಲ್ಲಿ ನೀರೂರಿಸುವ ಗೋದಿ ಹುಗ್ಗಿ, ಲಕಡಿ ಪಾಕ್‌, ಹೆಸರು ಬೇಳೆ ಪಾಯಸ, ರವೆ ಉಂಡೆ, ಮೈಸೂರು ಪಾಕ್‌, ಮೋತಿಚೂರು ಲಾಡು... ಹೀಗೆ ತರಹೇವಾರಿ ಸಿಹಿ ತಿಂಡಿ ಸಮ್ಮೇಳನದ ವೇಳೆ ಬಡಿಸಲಾಗುತ್ತಿದೆ. ಸಮ್ಮೇಳನದ ವೇದಿಕೆ ಸಮೀಪದಲ್ಲೇ ಅಡುಗೆ ವಿಭಾಗ ತೆರೆಯಲಾಗಿದ್ದು, ಹುಬ್ಬಳ್ಳಿಯ ಕ್ಯಾಟರಿಂಗ್‌ ಸಂಸ್ಥೆಯೊಂದು ಈಗಲೇ ಆಗಮಿಸಿ ಸಿಹಿ ತಿನಿಸು ಸಿದ್ಧಪಡಿಸುವ ಕಾರ್ಯ ಶುರು ಮಾಡಿದೆ. ಮಂಗಳವಾರದಿಂದಲೇ ಶೇಂಗಾ ಹೋಳಿಗೆ ಮಾಡುವ ಕಾರ್ಯ ಆರಂಭಿಸಲಾಗಿದೆ. ಲಕ್ಷಾಂತರ ಜನರಿಗೆ ಹೋಳಿಗೆ ಸಿದ್ಧಪಡಿಸಬೇಕಿರುವುದರಿಂದ ಮೂರು ದಿನ ಮುಂಚಿತವಾಗಿಯೇ ನೂರಾರು ಜನ ಹೋಳಿಗೆ ಸಿದ್ಧಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಸಾಹಿತ್ಯ ಸಮ್ಮೇಳನದ ವಸತಿ ವ್ಯವಸ್ಥೆ ಮಾಡಿರುವ ಶಾಲಾ-ಕಾಲೇಜುಗಳಿಗೆ ಜ.4ರಿಂದಲೇ ರಜೆ ಘೋಷಣೆ

ದಿನಕ್ಕೊಂದು ವಿಶೇಷ: ಮೂರು ದಿನಗಳ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರಿಗೆ ಏನೇನು ಊಟೋಪಹಾರ ನೀಡಲಾಗುತ್ತದೆ ಎಂಬ ಮೆನು ಸಿದ್ಧಪಡಿಸಲಾಗಿದೆ. ಸಮ್ಮೇಳನದ ಮೊದಲ ದಿನ ಬೆಳಗಿನ ಉಪಾಹಾರಕ್ಕೆ ಶಿರಾ, ಉಪ್ಪಿಟ್ಟು ಮತ್ತು ಬೆಲ್ಲದ ಚಹಾ ನೀಡಲಾಗುತ್ತಿದೆ. ಮಧ್ಯಾಹ್ನ ಭೋಜನಕ್ಕೆ ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯ, ಚಪಾತಿ, ಶೇಂಗಾ ಚಟ್ನಿ, ಮೊಸರು, ಅನ್ನ ಸಾಂಬಾರು ನೀಡಲಾಗುತ್ತಿದೆ. ಅಂದು ರಾತ್ರಿ ಊಟಕ್ಕೆ ಹೆಸರುಬೇಳೆ ಪಾಯಸ, ಪುಳಿಯೋಗರೆ, ಅನ್ನ ಸಾಂಬಾರು ನೀಡಲು ನಿರ್ಧರಿಸಲಾಗಿದೆ.

ಜ.7ರಂದು 2ನೇ ದಿನ ಬೆಳಗಿನ ಉಪಾಹಾರಕ್ಕೆ ರವಾ ಉಂಡೆ, ವೆಜ್‌ ಪಲಾವ್‌ ಮತ್ತು ಬೆಲ್ಲದ ಚಹಾ ನೀಡಲಾಗುತ್ತಿದೆ. ಮಧ್ಯಾಹ್ನ ಭೋಜನಕ್ಕೆ ಲಕಡಿಪಾಕ್‌, ಮಿಕ್ಸ್‌ ವೆಜ್‌ ಪಲ್ಯ, ಚಪಾತಿ, ಬಿರಂಜಿ ರೈಸ್‌, ಮಾದಲಿ, ಶೇಂಗಾ ಚಟ್ನಿ, ಮೊಸರು, ಅನ್ನ ಸಾಂಬಾರ ನೀಡಲಾಗುತ್ತಿದೆ. ಅಂದು ರಾತ್ರಿ ಶಾವಿಗೆ ಪಾಯಸ, ಬಿಸಿಬೇಳೆ ಬಾತ್‌, ಅನ್ನ ಸಾಂಬಾರ ನೀಡಲಾಗುತ್ತಿದೆ.

ಮೂರನೇ ದಿನ ಜ.8ರಂದು ಬೆಳಗ್ಗೆ ಮೈಸೂರು ಪಾಕ್‌, ವಾಂಗಿ ಬಾತ್‌, ಬೆಲ್ಲದ ಚಹಾ, ಮಧ್ಯಾಹ್ನ ಮೋತಿಚೂರು ಲಡ್ಡು, ಕಾಳು ಪಲ್ಯ, ಚಪಾತಿ, ಶೇಂಗಾ ಚಟ್ನಿ, ಮೊಸರು, ಅನ್ನ ಮತ್ತು ಸಾಂಬಾರಿನ ಭೋಜನ ನೀಡಲಾಗುತ್ತಿದೆ. ರಾತ್ರಿ ಊಟಕ್ಕೆ ಗೋದಿ ಹುಗ್ಗಿ, ಚಿತ್ರನ್ನ, ಅನ್ನ, ಸಾಂಬಾರ್‌ ನೀಡಲಾಗುತ್ತಿದೆ. ನಿತ್ಯ 1.5 ಲಕ್ಷ ಜನರಿಗೆ ಊಟ: ಹಾವೇರಿ ನುಡಿ ಜಾತ್ರೆಗೆ ನಾಡಿನ ಎಲ್ಲೆಡೆಯಿಂದ ಬರಲು ಉತ್ಸುಕರಾಗಿದ್ದಾರೆ. ಅದಕ್ಕಾಗಿ ಮೊದಲ ದಿನ ಹೆಚ್ಚಿನ ಸಾಹಿತ್ಯಾಸಕ್ತರು ಬರುವ ನಿರೀಕ್ಷೆಯಿದೆ. ಮೊದಲ ದಿನ 1.5 ಲಕ್ಷ ಜನ, 2ನೇ ದಿನ 1 ಲಕ್ಷ ಹಾಗೂ ಕೊನೇ ದಿನ 1.5 ಲಕ್ಷ ಜನರಿಗೆ ಊಟೋಪಹಾರದ ವ್ಯವಸ್ಥೆ ಮಾಡಲು ಆಹಾರ ಸಮಿತಿ ನಿರ್ಧರಿಸಿದೆ.

ಸಾಮಾನ್ಯರು, ಗಣ್ಯರು, ಅತಿಗಣ್ಯರು ಹೀಗೆ ಮೂರು ಶ್ರೇಣಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. 35 ಎಕರೆ ಪ್ರದೇಶದಲ್ಲಿ ಕಿಚನ್‌, ಡೈನಿಂಗ್‌ ವ್ಯವಸ್ಥೆ ಕೈಗೊಳ್ಳಲಾಗಿದ್ದು, ನೂಕು ನುಗ್ಗಲಾಗುವುದನ್ನು ತಪ್ಪಿಸಲು 200 ಕೌಂಟರ್‌ ತೆರೆಯಲಾಗುತ್ತಿದೆ. ಮಹಿಳೆಯರು, ವೃದ್ಧರು, ವಿಶೇಷಚೇತನರಿಗೆ ಪ್ರತ್ಯೇಕ ಕೌಂಟರ್‌ ವ್ಯವಸ್ಥೆ ಮಾಡಲಾಗಿದೆ ಎಂದು ಆಹಾರ ಸಮಿತಿ ಸದಸ್ಯ ಕಾರ್ಯದರ್ಶಿ, ಜಿಪಂ ಸಿಇಒ ಮಹಮ್ಮದ್‌ ರೋಷನ್‌ ತಿಳಿಸಿದರು.

ಬೆಲ್ಲದ ಚಹಾ, ಕಾಫಿ ಘಮ: ಸಮ್ಮೇಳನ ನಡೆಯುವ ಮೂರು ದಿನಗಳಲ್ಲಿ ನಿತ್ಯವೂ ನಿಗದಿತ ಸಮಯದಲ್ಲಿ ಸಾವಯವ ಬೆಲ್ಲದ ಚಹಾ ಪೂರೈಸಲಾಗುತ್ತಿದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ 4 ಗಂಟೆ ಹೊತ್ತಿಗೆ ಹೀಗೆ ನಿಗದಿತ ಸಮಯದಲ್ಲಿ ಚಹಾ ಮತ್ತು ಕಾಫಿ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 600 ಬಾಣಸಿಗರು ಸಮ್ಮೇಳನಕ್ಕಾಗಿ ಅಡುಗೆ ಸಿದ್ಧಪಡಿಸುವ ಕಾರ್ಯ ಮಾಡಲಿದ್ದಾರೆ. 3 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಊಟ ಬಡಿಸುವ ಕಾರ್ಯ ಮಾಡಲಿದ್ದಾರೆ.

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಶುಚಿ ರುಚಿಯಾದ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ಸಮ್ಮೇಳನಕ್ಕೂ ಮುನ್ನಾದಿನವಾದ ಜ.5ರಂದು ರಾತ್ರಿ ಬರುವ ಪ್ರತಿನಿಧಿಗಳು, ಕಲಾ ತಂಡಗಳಿಗೆ ಸರಳ ಊಟ ನೀಡಲಾಗುತ್ತಿದೆ. ಊಟದ ವ್ಯವಸ್ಥೆ ನಿರ್ವಹಣೆಗಾಗಿ 35 ಅಧಿಕಾರಿಗಳು, 75 ಪಿಡಿಒಗಳು, 200 ಬಿಲ್‌ ಕಲೆಕ್ಟರ್‌ಗಳು, 350 ವಿವಿಧ ಇಲಾಖೆ ಸಿಬ್ಬಂದಿ ತೆಗೆದುಕೊಳ್ಳಲಾಗಿದೆ. ಎನ್‌ಸಿಸಿ, ಎನ್ನೆಸ್ಸೆಸ್‌, ಸಂಘ ಸಂಸ್ಥೆಗಳ ಸ್ವಯಂ ಸೇವಕರು ಸೇರಿ 3 ಸಾವಿರಕ್ಕೂ ಹೆಚ್ಚು ಜನರನ್ನು ಬಳಸಿಕೊಳ್ಳಲಾಗುತ್ತಿದೆ.
-ಮಹಮ್ಮದ್‌ ರೋಷನ್‌, ಜಿಪಂ ಸಿಇಒ

click me!