ಕೊರೋನಾ 2ನೇ ಅಲೆ ಅಬ್ಬರಕ್ಕೆ ಡೆಲ್ಟಾ ವೈರಸ್‌ ಕಾರಣ..!

By Kannadaprabha News  |  First Published Jul 4, 2021, 7:09 AM IST

* ದೇಶದಲ್ಲಿ 2ನೇ ಅಲೆ ಭೀಕರವಾಗಲು ರೂಪಾಂತರಿ ವೈರಸ್‌ ಕಾರಣ
* ರಾಜ್ಯದಲ್ಲೂ ರೂಪಾಂತರಿಯಿಂದ ಅವಾಂತರ
* ಜಿನೋಮಿಕ್‌ ಸೀಕ್ವೆನ್ಸ್‌ ಮುಂದುವರಿಸಲು ತಜ್ಞರ ಸಲಹೆ
 


ಬೆಂಗಳೂರು(ಜು.04): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಭೀಕರತೆಗೆ ಡೆಲ್ಟಾ ರೂಪಾಂತರಿ ಕೊರೋನಾ ವೈರಾಣುವೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ರೂಪಾಂತರಿ ವೈರಾಣುಗಳು ಸೃಷ್ಟಿಸಬಹುದಾದ ಅವಾಂತರದ ಬಗ್ಗೆ ನಿಗಾವಹಿಸಲು ಸತತವಾಗಿ ಜಿನೋಮಿಕ್‌ ಸೀಕ್ವೆನ್ಸ್‌ ಪರೀಕ್ಷೆ ಮುಂದುವರೆಸುವಂತೆ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಈವರೆಗೆ 725 , ಎರಡು ಡೆಲ್ಟಾಪ್ಲಸ್‌ ಮಾದರಿಗಳು ಪತ್ತೆಯಾಗಿವೆ. ಉಳಿದಂತೆ ಅಲ್ಫಾ 14, ಬೀಟಾ 06, ಕಪ್ಪಾ 145 ಪ್ರಕರಣ ಪತ್ತೆಯಾಗಿವೆ. ಇವೆಲ್ಲವುಗಳ ಪೈಕಿ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.3ಕ್ಕಿಂತ ಕಡಿಮೆಯಾಗಿದ್ದರೂ ಶುಕ್ರವಾರ ಒಂದೇ ದಿನ 407 ಡೆಲ್ಟಾ ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಬುಧವಾರದವರೆಗೆ 318ರಷ್ಟಿದ್ದ ಡೆಲ್ಟಾ ಪ್ರಕರಣಗಳು ಶುಕ್ರವಾರ 725ಕ್ಕೆ ಏರಿಕೆಯಾಗಿದೆ.

Latest Videos

undefined

ದೇಶಾದ್ಯಂತ ಎರಡನೇ ಅಲೆ ವ್ಯಾಪಕವಾಗಿ ಹರಡಲು ಇದೇ ಡೆಲ್ಟಾ ರೂಪಾಂತರಿ ಕಾರಣ ಎಂದು ಈಗಾಗಲೇ ಡಬ್ಲ್ಯೂಎಚ್‌ಒ ಸ್ಪಷ್ಟಪಡಿಸಿದೆ. ರಾಜ್ಯದಲ್ಲೂ ಮೇ ಹಾಗೂ ಜೂನ್‌ ತಿಂಗಳು ಜಿನೋಮಿಕ್‌ ಸೀಕ್ವೆನ್ಸ್‌ಗಾಗಿ ಸಂಗ್ರಹಿಸಿದ್ದ ಮಾದರಿಗಳಲ್ಲಿ ಡೆಲ್ಟಾ ರೂಪಾಂತರಿಯೇ ಹೆಚ್ಚಾಗಿ ವರದಿಯಾಗಿದೆ. ಹೀಗಾಗಿ ಎರಡನೇ ಅಲೆ ತೀವ್ರತೆಯಲ್ಲಿ ಡೆಲ್ಟಾಪಾಲೇ ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಬೆಂಗಳೂರು: ಜೀನೋಮ್ ಸೀಕ್ವೆನ್ಸಿಂಗ್‌ನಲ್ಲಿ ಅತಿ ಹೆಚ್ಚು ಡೆಲ್ಟಾ ವೈರಸ್ ಪತ್ತೆ

ರಾಜ್ಯದ ಜಿನೋಮಿಕ್‌ ಕಣ್ಗಾವಲು ಸಮಿತಿ ಮುಖ್ಯಸ್ಥ ಡಾ.ವಿ.ರವಿ, 4 ವಾರಗಳ ಹಿಂದೆ ಈ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈವರೆಗೆ ನಿಮ್ಹಾನ್ಸ್‌ 994 ಸೀಕ್ವೆನ್ಸ್‌ ವರದಿ ನೀಡಿದ್ದು 600 ಬಾಕಿ ಇದೆ. ಸೀಕ್ವೆನ್ಸಿಂಗ್‌ ಮಾಡಲು ಕನಿಷ್ಠ 15 ದಿನಗಳ ಕಾಲಾವಕಾಶ ಬೇಕು. ಇದು ಕಳೆದ ತಿಂಗಳ ಮಾದರಿಗಳಾಗಿರುವುದು ಹಾಗೂ ದೇಶಾದ್ಯಂತ ಎರಡನೇ ಅಲೆ ವ್ಯಾಪಕವಾಗಿ ಹರಡಲು ಡೆಲ್ಟಾ ರೂಪಾಂತರಿಯೇ ಕಾರಣ ಎಂದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಇದೇ ಕಾರಣ ಎಂದು ಹೇಳಬಹುದು. ಒಳ್ಳೆಯ ಸುದ್ದಿ ಎಂದರೆ ಯಾವುದೇ ಹೊಸ ರೂಪಾಂತರಿ ವೈರಸ್‌ ಪತ್ತೆಯಾಗಿಲ್ಲ. ಅಲ್ಲದೆ ಪಾಸಿಟಿವಿಟಿ ದರ ನಿಯಂತ್ರಿಸಲು ರಾಜ್ಯ ಯಶಸ್ವಿಯಾಗಿದೆ. ಹೀಗಾಗಿ ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

ಜಿನೋಮಿಕ್‌ ಸೀಕ್ವೆನ್ಸ್‌ ಮುಂದುವರಿಸಲು ತಜ್ಞರ ಸಲಹೆ

ಡೆಲ್ಟಾ ವೈರಸ್‌ನಿಂದ ಅಪಾಯ ಹೆಚ್ಚಾಗುತ್ತಿದ್ದು, ಜಿನೋಮಿಕ್‌ ಸೀಕ್ವೆನ್ಸ್‌ ತಕ್ಷಣದ ಅಗತ್ಯ. ಕಳೆದ ತಿಂಗಳ ಮಾದರಿಗಳಲ್ಲಿ ಡೆಲ್ಟಾ ರೂಪಾಂತರಿ ಹೆಚ್ಚಾಗಿ ಪತ್ತೆಯಾಗಿದೆ. ರೂಪಾಂತರಿ ವೈರಾಣು ಮೇಲೆ ಕಣ್ಣಿಡಲು ಜಿನೋಮಿಕ್‌ ಸೀಕ್ವೆನ್ಸ್‌ ಒಂದೇ ಪರಿಹಾರ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಆರ್‌. ಗಿರಿಧರ್‌ ಬಾಬು ಹೇಳಿದ್ದಾರೆ. ‘ಪ್ರಸ್ತುತ ಯಾವ ಅಪಾಯದಲ್ಲಿದ್ದೇವೆ ಎಂದು ಅರಿಯಲು ನಿರಂತರವಾಗಿ ಪರೀಕ್ಷೆ ಮಾಡಬೇಕು. ಹೊಸ ಕ್ಲಸ್ಟರ್‌ಗಳ ಬಗ್ಗೆ ಗಮನ ಹರಿಸಬೇಕು. ಒಂದೇ ಕಡೆ 5 ಮತ್ತು ಅದಕ್ಕಿಂತ ಪ್ರಕರಣ ಪತ್ತೆಯಾದರೆ ಹೆಚ್ಚು ನಿಗಾ ವಹಿಸಬೇಕು’ ಎಂದು ಗಿರಿಧರ್‌ ಬಾಬು ಸಲಹೆ ನೀಡಿದ್ದಾರೆ.
 

click me!