
ಬೆಂಗಳೂರು (ನ.16): ರಾಜ್ಯದ ವಸತಿ ಹಾಗೂ ವಕ್ಫ್ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರ ಹೇಳಿಕೆಗಳಿಂದ ಪಕ್ಷಕ್ಕೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಅವಹೇಳನ ಉಂಟಾಗುತ್ತಿದ್ದು, ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು. ರಾಜಕೀಯ ಬೌದ್ಧಿಕತೆ ಇಲ್ಲದ ಇಂಥವರನ್ನು ಪಕ್ಷದ ಮುಖ್ಯವಾಹಿನಿಯಿಂದ ದೂರ ಇಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್ ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರವನ್ನು ಬರೆದಿದ್ದಾರೆ.
ಈ ಕುರಿತು ಎ.ಆರ್.ಎಂ. ಹುಸೇನ್ ಅವರು ಬರೆದ ಪತ್ರದಲ್ಲಿ 'ನಿರ್ಣಾಯಕ ರಾಜಕೀಯ ಸಂದರ್ಭಗಳಲ್ಲಿ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ವಸತಿ ಸಚಿವ ಜಮೀರ್ ಅಹಮದ್ ಮೇಲೆ ಪಕ್ಷ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಹಾಗೆಯೇ ಜಮೀರ್ ಅಹಮದ್ ಮುಂದೆಯು ಬೇಜವಾಬ್ದಾರಿ ರಹಿತವಾಗಿ ಹೇಳಿಕೆಗಳನ್ನು ಕೊಡಬಾರದೆಂದು ಎಚ್ಚರಿಕೆಯನ್ನು ನೀಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ. ಸಚಿವ ಸ್ಥಾನದ ಘನತೆ ಮತ್ತು ಹಕ್ಕುಬದ್ಧತೆಯ ಜವಾಬ್ದಾರಿಯನ್ನು ಅರಿತುಕೊಳ್ಳದ ಜಮೀರ್ ಅಹಮದ್ ಅವರಿಂದ ಪಕ್ಷಕ್ಕಾಗಲೀ, ಸರ್ಕಾರಕ್ಕಾಗಲೀ ಯಾವುದೇ ಲಾಭವಾಗದೇ ಕೇವಲ ನಷ್ಟವಾಗುತ್ತಿದೆ ಎಂಬುದನ್ನು ಪಕ್ಷದ ಮುಖಂಡರು ಮನದಟ್ಟು ಮಾಡಿಕೊಳ್ಳಬೇಕು. ಇವರ ನಡುವಳಿಕೆಗೆ ತಕ್ಷಣವೇ ಲಗಾಮು ಕಡಿವಾಣ ಹಾಕಬೇಕು.
ಇದನ್ನೂ ಓದಿ: ನಿನ್ನೆ ಡಿಕೆ ಸುರೇಶ್ ಸಮರ್ಥನೆ, ಇಂದು ಸಚಿವ ಜಮೀರ್ ಅಹ್ಮದ್ 'ಕರಿಯ' ಹೇಳಿಕೆ ಖಂಡಿಸಿದ ಡಿಸಿಎಂ ಡಿಕೆ ಶಿವಕುಮಾರ!
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗ ಡಿ.ಕೆ. ಶಿವಕುಮಾರ್ ಜೋಡೆತ್ತುಗಳಂತೆ ಶ್ರಮಿಸುತ್ತಾ ಸರ್ಕಾರವನ್ನು ಮತ್ತು ಪಕ್ಷವನ್ನು ದಕ್ಷತೆಯಿಂದ ಮುನ್ನಡೆಸುತ್ತಿದ್ದಾರೆ. ಜಾತ್ಯಾತೀತ ಮನೋಭಾವನೆಗಳಿಗೆ ಮತ್ತು ಮಾನವೀಯ ಧರ್ಮ- ಸಂಹಿತೆಗೆ ಧಕ್ಕೆಯಾಗದಂತೆ ಸರ್ವರನ್ನು ಅಪ್ಪಿಕೊಂಡು ಮುನ್ನಡೆಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸಚಿವ ಜಮೀರ್ ಅಹಮದ್ ಅಮಾನವೀಯ ಹೇಳಿಕೆಗಳನ್ನು ನೀಡುತ್ತಾ, ವಿವಾದಗಳನ್ನು ಹುಟ್ಟು ಹಾಕುತ್ತಾ ಮುನ್ನಡೆಯುತ್ತಿರುವುದು ಕೆಟ್ಟ ವಾತಾವರಣವನ್ನು ಸೃಷ್ಟಿಸಿದೆ.
ಇತ್ತೀಚೆಗೆ ಚನ್ನಪಟ್ಟಣದಲ್ಲಿ ನಡೆದ ಉಪ ಚುನಾವಣೆಯ ಸಂದರ್ಭದಲ್ಲಿ ಸಚಿವ ಜಮೀರ್ ಅಹಮದ್ ನೀಡಿದ ಹೇಳಿಕೆಗಳು ಮತ್ತು ಸೃಷ್ಟಿಸಿದ ವಿವಾದಗಳಿಂದ ಪಕ್ಷದ ಮೇಲೆ ದುಷ್ಪರಿಣಾಮ ಬೀರಿರುವುದಂತೂ ಸ್ಪಷ್ಟ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಅದರ ಪರಿಣಾಮವನ್ನು ಜಮೀರ್ ಅಹಮದ್ ಅವರೆ ಎದುರಿಸಬೇಕಾಗುತ್ತದೆ. ರಾಜಕೀಯ ಬೌದ್ಧಿಕತೆ ಕಳೆದುಕೊಂಡಿರುವ ಇಂತಹವರನ್ನು ಪಕ್ಷ ಮತ್ತು ಸರ್ಕಾರ ಮುಖ್ಯ ವಾಹಿನಿಯಲ್ಲಿ ಬಿಂಬಿಸುವುದನ್ನು ಕೈಬಿಟ್ಟರೆ ಕ್ಷೇಮ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಜೊತೆಗೆ, ಇದನ್ನು ಪತ್ರಿಕಾ ಪ್ರಕಟಣೆಗೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.