18 ತುಂಬುವವರೆಗಷ್ಟೇ ಪುತ್ರಿಗೆ ಜೀವನಾಂಶ, ಮದುವೆ ಆಗುವ ತನಕ ಅಲ್ಲ: ಹೈಕೋರ್ಟ್‌

By Kannadaprabha NewsFirst Published Sep 4, 2023, 4:23 AM IST
Highlights

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಪುತ್ರಿಯರು ವಯಸ್ಕರಾಗುವವರೆಗೆ (18 ವರ್ಷ) ಮಾತ್ರ ತಂದೆ ಜೀವನಾಂಶ ಪಾವತಿಸಲು ಅವಕಾಶವಿದೆಯೇ ಹೊರತು ಮದುವೆ ಆಗುವ ತನಕ ಅಲ್ಲ ಮತ್ತು ಉದ್ಯೋಗ ನಿರತ ತಾಯಿ ಸಹ ಮಕ್ಕಳ ಜೀವನ ನಿರ್ವಹಣೆಗೆ ಸಮಾನ ಜವಾಬ್ದಾರಿ ಹೊಂದಿರುತ್ತಾರೆ ಎಂದು ಹೈಕೋರ್ಟ್‌ ಆದೇಶಿಸಿದೆ. 

ಬೆಂಗಳೂರು (ಸೆ.04): ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಪುತ್ರಿಯರು ವಯಸ್ಕರಾಗುವವರೆಗೆ (18 ವರ್ಷ) ಮಾತ್ರ ತಂದೆ ಜೀವನಾಂಶ ಪಾವತಿಸಲು ಅವಕಾಶವಿದೆಯೇ ಹೊರತು ಮದುವೆ ಆಗುವ ತನಕ ಅಲ್ಲ ಮತ್ತು ಉದ್ಯೋಗ ನಿರತ ತಾಯಿ ಸಹ ಮಕ್ಕಳ ಜೀವನ ನಿರ್ವಹಣೆಗೆ ಸಮಾನ ಜವಾಬ್ದಾರಿ ಹೊಂದಿರುತ್ತಾರೆ ಎಂದು ಹೈಕೋರ್ಟ್‌ ಆದೇಶಿಸಿದೆ. ತನಗೆ ಹಾಗೂ ಇಬ್ಬರು ಪುತ್ರಿಯರಿಗೆ ಕಡಿಮೆ ಮೊತ್ತದ ಜೀವನಾಂಶ ಪಾವತಿಸಲು ಪತಿಗೆ ಸೂಚಿಸಿದ್ದ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್‌ ಅವರ ಪೀಠ ಈ ಆದೇಶ ಮಾಡಿದೆ.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಅವಿವಾಹಿತ ಹೆಣ್ಣು ಮಕ್ಕಳು ಜೀವನಾಂಶ ಪಡೆಯಲು ಅರ್ಹರಾಗಿರುವುದಿಲ್ಲ. ಕೇವಲ ನೊಂದ ವ್ಯಕ್ತಿಗಳು ಅಥವಾ 18 ವರ್ಷದೊಳಗಿನ ಮಕ್ಕಳು ಜೀವನಾಂಶ ಕೋರಬಹುದಾಗಿದೆ. ಮಕ್ಕಳು ವಯಸ್ಕರಾಗುವವರೆಗೆ ಮಾತ್ರ ಜೀವನಾಂಶ ಕೋರಬಹುದು. ಹಾಗೆಯೇ, ಹಿಂದೂ ದತ್ತು ಹಾಗೂ ನಿರ್ವಹಣೆ ಕಾಯ್ದೆ ಸೆಕ್ಷನ್‌ 20(3)ರ ಪ್ರಕಾರ ವಯಸ್ಕರಾದ ನಂತರವೂ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಲು ಅಸಮರ್ಥರಾಗಿರುವ ಸಂದರ್ಭದಲ್ಲಿ ಪುತ್ರಿಯರು ತಂದೆಯಿಂದ ಜೀವನಾಂಶ ಕೋರಲು ಸ್ವತಂತ್ರರಾಗಿರುತ್ತಾರೆ ಎಂದು ಆದೇಶದಲ್ಲಿ ಹೈಕೋರ್ಟ್‌ ತಿಳಿಸಿದೆ.

ಸಿದ್ದರಾಮಯ್ಯಗೆ ಬಡವರ ಮಕ್ಕಳು ಉದ್ಧಾರವಾಗಬಾರದು: ಪ್ರತಾಪ್‌ ಸಿಂಹ ವಾಗ್ದಾಳಿ

ಪ್ರಕರಣದಲ್ಲಿ ತಂದೆ-ತಾಯಿ ಶಿಕ್ಷಕರಾಗಿ ಉದ್ಯೋಗ ಮಾಡುತ್ತಿದ್ದಾರೆ. ಇದರಿಂದ ತಂದೆ ಮೇಲೆ ಮಾತ್ರ ಮಕ್ಕಳ ಜೀವನ ನಿರ್ವಹಣೆ ಜವಾಬ್ದಾರಿ ಇರುವುದಿಲ್ಲ. ತಾಯಿಯ ಮೇಲೂ ಜವಾಬ್ದಾರಿ ಇರುತ್ತದೆ. ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಪುತ್ರಿಯರಿಬ್ಬರಿಗೆ ಮಾಸಿಕ ಐದು ಸಾವಿರ ರು. ಜೀವನಾಂಶ ನಿಗದಿಪಡಿಸಿದೆ. ಅದು ಸ್ವಲ್ಪ ಹೆಚ್ಚಿದ್ದರಿಂದ ಸೆಷನ್ಸ್‌ ನ್ಯಾಯಾಲಯ ನಾಲ್ಕು ಸಾವಿರ ರು.ಗೆ ಇಳಿಸಿದೆ. ಸಾಕ್ಷ್ಯಾಧಾರಗಳಿಂದ ಪುತ್ರಿಯರ ಜೀವನ ನಿರ್ವಹಣೆಗೆ ಮಾಸಿಕ ತಲಾ ಐದರಿಂದ ಆರು ಸಾವಿರ ರು.ವರೆಗೆ ಅಗತ್ಯವಿದೆ ಎನ್ನುವುದು ತಿಳಿದು ಬರುತ್ತದೆ. 

ಸೆಷನ್ಸ್‌ ನ್ಯಾಯಾಲಯದ ಆದೇಶದಂತೆ ತಂದೆ ನಾಲ್ಕು ಸಾವಿರ ನೀಡಿದರೆ, ಉಳಿದ ಮೊತ್ತವನ್ನು ತಾಯಿ ಭರಿಸಬೇಕಾಗುತ್ತದೆ. ಅದರಂತೆ ತಂದೆಯು ಅರ್ಜಿ ದಾಖಲಾದ ದಿನದಿಂದ ತೀರ್ಪು ಹೊರಬಿದ್ದ ದಿನದವರೆಗೆ ಪುತ್ರಿಯರಿಗೆ ಮಾಸಿಕ ನಾಲ್ಕು ಸಾವಿರ ರು. ಜೀವನಾಂಶ ಪಾವತಿಸಬೇಕು. ಒಂದೊಮ್ಮೆ ಹೆಚ್ಚಿನ ಜೀವನಾಂಶ ಬೇಕಾಗಿದ್ದರೆ, ಪುತ್ರಿಯರು ಹಿಂದು ದತ್ತು ಹಾಗೂ ನಿರ್ವಹಣೆ ಕಾಯ್ದೆಯಡಿ ಕೋರಬಹುದು ಎಂದು ಆದೇಶಿಸಿದೆ.

ಪ್ರಕರಣದ ವಿವರ: ಬೆಂಗಳೂರಿನ ರವಿಗೌಡ (53) ಮತ್ತು ಉಮಾ (48) 1998ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಪುತ್ರಿಯರು ಜನಿಸಿದ್ದರು. ನಂತರದ ದಿನಗಳಲ್ಲಿ ರವಿ ವರದಕ್ಷಿಣೆಗೆ ಬೇಡಿಕೆಯಿಟ್ಟು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಉಮಾ, ಕ್ರೌರ್ಯ/ಕೌಟುಂಬಿಕ ದೌರ್ಜನ್ಯ ಆರೋಪದಡಿ (ಐಪಿಸಿ ಸೆಕ್ಷನ್‌ 498ಎ) ದೂರು ನೀಡಿದ್ದರು. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ಮಧ್ಯೆ ತನಗೆ ಮತ್ತು ಮಕ್ಕಳಿಗೆ ಜೀವನಾಂಶ ನೀಡಬೇಕು. ಯಾವುದೇ ರೀತಿ ದೌರ್ಜನ್ಯ ಎಸಗಬಾರದು. 

ಪ್ರತ್ಯೇಕ ಮನೆ ಮಾಡಿಕೊಡಬೇಕು ಮತ್ತು ಜೀವನ ನಿರ್ವಹಣೆಗೆ 10 ಲಕ್ಷ ರು. ಜೀವನಾಂಶ ನೀಡಲು ರವಿಗೆ ಆದೇಶಿಸಬೇಕು ಎಂದು ಕೋರಿ ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳಾ ರಕ್ಷಣಾ ಕಾಯ್ದೆ-2005ರ’ ಸೆಕ್ಷನ್‌ 12ರ ಅಡಿಯಲ್ಲಿ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಉಮಾ ಅರ್ಜಿ ಸಲ್ಲಿಸಿದ್ದರು. ಆದರೆ ಪತ್ನಿಯ ಎಲ್ಲ ಆರೋಪಗಳನ್ನು ಪತಿ ನಿರಾಕರಿಸಿದ್ದರು. ವಿಚಾರಣೆ ನಡೆಸಿದ್ದ ನಗರದ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ, ಹೆಣ್ಣು ಮಕ್ಕಳಿಬ್ಬರಿಗೂ ಮದುವೆಯಾಗುವ ತನಕ ಮಾಸಿಕ ತಲಾ ಐದು ಸಾವಿರ ರು. ಜೀವನಾಂಶ ನೀಡಬೇಕು. ದೌರ್ಜನ್ಯದಿಂದ ಪತ್ನಿಗೆ ಆಗಿರುವ ಹಾನಿಗೆ 5 ಲಕ್ಷ ರು. ಜೀವನಾಂಶ ನೀಡಬೇಕು ಎಂದು ರವಿಗೆ ಆದೇಶಿಸಿತ್ತು. 

ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ

ಈ ಆದೇಶ ರದ್ದು ಕೋರಿ ರವಿ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ಪುತ್ರಿಯರಿಗೆ ಮಾಸಿಕ ನಾಲ್ಕು ಸಾವಿರ ರು. ಮತ್ತು ಪತ್ನಿಗೆ ಒಂದು ಲಕ್ಷ ರು. ಜೀವನಾಂಶ ನೀಡುವಂತೆ ರವಿಗೆ ಆದೇಶಿಸಿತ್ತು. ಜೀವನಾಂಶ ಮೊತ್ತ ಕಡಿಮೆಯಾದ್ದರಿಂದ ಉಮಾ ಹೈಕೋರ್ಟ್‌ಗೆ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಪತ್ನಿಗೆ ಒಂದು ಲಕ್ಷ ರು. ಜೀವನಾಂಶ ನಿಗದಿಪಡಿಸಿದ ಸೆಷನ್ಸ್‌ ನ್ಯಾಯಾಲಯದ ಆದೇಶವನ್ನು ಕಾಯಂಗೊಳಿಸಿದ ಹೈಕೋರ್ಟ್‌ ಉಮಾ ಅರ್ಜಿಯನ್ನು ವಜಾಗೊಳಿಸಿದೆ.

click me!