ಏಷ್ಯಾ ಖಂಡದ ಒಲಿಂಪಿಕ್ಸ್ ಏಷ್ಯಾಡ್

By Web DeskFirst Published Aug 16, 2018, 4:22 PM IST
Highlights

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೆಚ್ಚು ರಾಷ್ಟ್ರಗಳು ಪಾಲ್ಗೊಂಡರೂ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ಏರ್ಪಡುವ ಪೈಪೋಟಿ ಅತ್ಯಂತ ಕಠಿಣವಾದದ್ದು. ಒಲಿಂಪಿಕ್ಸ್‌ನಲ್ಲಿ ಪ್ರಾಬಲ್ಯ ಮೆರೆಯುವ ಚೀನಾ, ಜಪಾನ್, ಕೊರಿಯಾದಂತಹ ರಾಷ್ಟ್ರಗಳು ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲಿವೆ. ಏಷ್ಯನ್ ಗೇಮ್ಸ್ ಆರಂಭಗೊಂಡಿದ್ದು ಹೇಗೆ, ಯಾವಾಗ? ಎಷ್ಟು ಕ್ರೀಡೆಗಳು ನಡೆಯುತ್ತವೆ. ಯಾವ ರಾಷ್ಟ್ರಗಳು ಅತಿ ಹೆಚ್ಚು ಪ್ರಾಬಲ್ಯ ಮೆರೆದಿವೆ ಎನ್ನುವ ವಿವರ ನಿಮ್ಮ ಮುಂದೆ..

ಬೆಂಗಳೂರು[ಆ.16]: 18ನೇ ಏಷ್ಯನ್ ಗೇಮ್ಸ್‌ಗೆ ಕೇವಲ 2 ದಿನ ಮಾತ್ರ ಬಾಕಿ ಉಳಿದಿದೆ. ಒಲಿಂಪಿಕ್ಸ್ ಕ್ರೀಡಾಕೂಟದ ಬಳಿಕ ಅತಿಹೆಚ್ಚು ಜನಪ್ರಿಯತೆ ಹೊಂದಿರುವ ಕ್ರೀಡಾಕೂಟ ಎಂದರೆ ಅದು ಏಷ್ಯನ್ ಗೇಮ್ಸ್. ಹೀಗಾಗಿ ಈ ಕ್ರೀಡಾಕೂಟವನ್ನು ‘ಏಷ್ಯನ್ ಒಲಿಂಪಿಕ್ಸ್’ ಎಂದೇ ಕರೆಯಲಾಗುತ್ತದೆ.

ಇದನ್ನು ಓದಿ: ಏಷ್ಯನ್ ಗೇಮ್ಸ್ ಮೆಲುಕು: ಚೊಚ್ಚಲ ಕ್ರೀಡಾಕೂಟಕ್ಕೆ ದೆಹಲಿ ಆತಿಥ್ಯ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೆಚ್ಚು ರಾಷ್ಟ್ರಗಳು ಪಾಲ್ಗೊಂಡರೂ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ಏರ್ಪಡುವ ಪೈಪೋಟಿ ಅತ್ಯಂತ ಕಠಿಣವಾದದ್ದು. ಒಲಿಂಪಿಕ್ಸ್‌ನಲ್ಲಿ ಪ್ರಾಬಲ್ಯ ಮೆರೆಯುವ ಚೀನಾ, ಜಪಾನ್, ಕೊರಿಯಾದಂತಹ ರಾಷ್ಟ್ರಗಳು ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲಿವೆ. ಏಷ್ಯನ್ ಗೇಮ್ಸ್ ಆರಂಭಗೊಂಡಿದ್ದು ಹೇಗೆ, ಯಾವಾಗ? ಎಷ್ಟು ಕ್ರೀಡೆಗಳು ನಡೆಯುತ್ತವೆ. ಯಾವ ರಾಷ್ಟ್ರಗಳು ಅತಿ ಹೆಚ್ಚು ಪ್ರಾಬಲ್ಯ ಮೆರೆದಿವೆ ಎನ್ನುವ ವಿವರ ನಿಮ್ಮ ಮುಂದೆ..

4 ವರ್ಷಕ್ಕೊಮ್ಮೆ ಏಷ್ಯನ್ ರಾಷ್ಟ್ರಗಳ ಸೆಣಸಾಟ

ಏಷ್ಯನ್ ಗೇಮ್ಸ್ ಇಲ್ಲವೇ ಏಷ್ಯಾಡ್ ಪ್ರತಿ 4 ವರ್ಷಗಳಿಗೊಮ್ಮೆ ನಡೆಯಲಿರುವ ಕ್ರೀಡಾಕೂಟ. 1971ರಲ್ಲಿ ಏಷ್ಯನ್ ಗೇಮ್ಸ್ ಫೆಡರೇಷನ್ ಕ್ರೀಡಾಕೂಟವನ್ನು ಆರಂಭಿಸಿತು. ಚೊಚ್ಚಲ ಆವೃತ್ತಿಗೆ
ನವದೆಹಲಿ ಆತಿಥ್ಯ ವಹಿಸಿತ್ತು. ಏಷ್ಯನ್ ಗೇಮ್ಸ್ ಫೆಡರೇಷನ್ ಸ್ಥಗಿತಗೊಂಡ ಬಳಿಕ 1982ರಿಂದ ಮುಂದಕ್ಕೆ ಏಷ್ಯಾ ಒಲಿಂಪಿಕ್ ಸಮಿತಿ (ಒಸಿಎ) ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಈ
ಕ್ರೀಡಾಕೂಟ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಮಾನ್ಯತೆ ಪಡೆದಿದ್ದು, ಒಲಿಂಪಿಕ್ಸ್ ಬಳಿಕ 2ನೇ ಅತಿದೊಡ್ಡ ಕ್ರೀಡಾಕೂಟ ಎನಿಸಿಕೊಂಡಿದೆ.

ಇದನ್ನು ಓದಿ: ಏಷ್ಯನ್ ಗೇಮ್ಸ್ ಮೆಲುಕು: ದಶಕಗಳ ಕಾಲ ಏಷ್ಯಾ ಸಾಮ್ರಾಟನಾಗಿ ಮೆರೆದ ಜಪಾನ್

ಸಮಸ್ಯೆಗಳ ಆಗರ!

1962ರಿಂದ ಏಷ್ಯನ್ ಗೇಮ್ಸ್‌ಗೆ ಒಂದಿಲ್ಲೊಂದು ಸಮಸ್ಯೆ, ವಿವಾದಗಳು ಬೆನ್ನೇರುತ್ತಲೇ ಇವೆ. ಏಷ್ಯನ್ ರಾಷ್ಟ್ರಗಳ ನಡುವಿನ ರಾಜಕೀಯ ಬಿಕ್ಕಟ್ಟು, ಆರ್ಥಿಕ ಹಾಗೂ ಭದ್ರತಾ ಸಮಸ್ಯೆ ಹೀಗೆ
ಅನೇಕ ತೊಂದರೆಗಳು ಕ್ರೀಡಾಕೂಟಕ್ಕೆ ಅಡ್ಡಿಯಾಗಿವೆ. ಹಲವು ಬಾರಿ ಮೊದಲು ಆಯ್ಕೆಯಾಗಿದ್ದ ರಾಷ್ಟ್ರಗಳು ಆತಿಥ್ಯದಿಂದ ಹಿಂದೆ ಸರಿದಿವೆ. ಸತತ 2 ಬಾರಿ ಬ್ಯಾಂಕಾಕ್ ವೇದಿಕೆ ಒದಗಿಸಿತ್ತು.
2018ರಲ್ಲಿ ಗೇಮ್ಸ್ ವಿಯೆಟ್ನಾಂನಲ್ಲಿ ನಡೆಯಬೇಕಿತ್ತು. ಆದರೆ ಆತಿಥ್ಯದಿಂದ ಹಿಂದೆ ಸರಿದ ಕಾರಣ, ಇಂಡೋನೇಷ್ಯಾಗೆ ಅವಕಾಶ ಸಿಕ್ಕಿತು.

ಗೇಮ್ಸ್ ಆರಂಭದ ಹಿಂದಿದೆ ಭಾರತೀಯನ ಪಾತ್ರ!

ಏಷ್ಯನ್ ಗೇಮ್ಸ್‌ಗೂ ಮೊದಲು ಪಶ್ಚಿಮ ಏಷ್ಯಾ ರಾಷ್ಟ್ರಗಳ ಚಾಂಪಿಯನ್‌ಶಿಪ್ ಎನ್ನುವ ಕ್ರೀಡಾಕೂಟವಿತ್ತು. 1913ರಲ್ಲಿ ಮೊದಲ ಬಾರಿಗೆ ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ಪಶ್ಚಿಮ ರಾಷ್ಟ್ರಗಳ ಗೇಮ್ಸ್
ನಡೆಯಿತು. 6 ರಾಷ್ಟ್ರಗಳು ಪಾಲ್ಗೊಂಡಿದ್ದವು. 1934ರ ವರೆಗೂ ಇನ್ನೂ 10 ಆವೃತ್ತಿಗಳು ನಡೆದವು. 1934ರಲ್ಲಿ ಸಿನೋ-ಜಪಾನೀಸ್ ಯುದ್ಧದ ಬಳಿಕ ಕ್ರೀಡಾಕೂಟವನ್ನು ಸ್ಥಗಿತಗೊಳಿಸಲಾಯಿತು.
2ನೇ ವಿಶ್ವ ಮಹಾಯುದ್ಧದ ಬಳಿಕ ಏಷ್ಯಾದ ಹಲವು ರಾಷ್ಟ್ರಗಳು ಸ್ವಾತಂತ್ರ್ಯ ಪಡೆದವು. 1948ರ ಲಂಡನ್ ಒಲಿಂಪಿಕ್ಸ್ ವೇಳೆ ಚೀನಾ ಹಾಗೂ ಫಿಲಿಪ್ಪೀನ್ಸ್‌ನ ಕ್ರೀಡಾಪಟುಗಳು ಪಶ್ಚಿಮ ಏಷ್ಯಾ
ರಾಷ್ಟ್ರಗಳ ಚಾಂಪಿಯನ್‌ಶಿಪ್ ಪುನಾರಂಭಿಸುವ ಬಗ್ಗೆ ಚರ್ಚೆ ನಡೆಸಿದರು. ಆದರೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಭಾರತ ಪ್ರತಿನಿಧಿಯಾಗಿದ್ದ ಗುರುದತ್ ಸೋಂಧಿ, ಪಶ್ಚಿಮ ರಾಷ್ಟ್ರಗಳ
ಕ್ರೀಡಾಕೂಟದ ಬದಲು ಏಷ್ಯಾ ರಾಷ್ಟ್ರಗಳನ್ನೆಲ್ಲಾ ಒಗ್ಗೂಡಿಸಿ ಏಷ್ಯನ್ ಗೇಮ್ಸ್ ಆರಂಭಿಸುವಂತೆ ಸಲಹೆ ನೀಡಿದರು. 1949ರಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಫೆಡರೇಷನ್ ನವದೆಹಲಿಯಲ್ಲಿ ಉದ್ಘಾಟನೆಗೊಂಡಿತು. ಜತೆಗೆ ಏಷ್ಯನ್ ಗೇಮ್ಸ್ ಫೆಡರೇಷನ್ ಸಹ ಸ್ಥಾಪನೆ ಗೊಂಡಿತು. 1951ರಲ್ಲಿ ನವದೆಹಲಿಯಲ್ಲೇ ಚೊಚ್ಚಲ ಆವೃತ್ತಿಯ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಯಿತು. 

ಇದನ್ನು ಓದಿ: ಏಷ್ಯನ್ ಗೇಮ್ಸ್ ಮೆಲುಕು: ಜಪಾನ್ ಪ್ರಾಬಲ್ಯ ಹಿಂದಿಕ್ಕಿದ ಚೀನಾ

ಜಪಾನ್, ಚೀನಾದ್ದೇ ಪ್ರಾಬಲ್ಯ

ಏಷ್ಯನ್ ಗೇಮ್ಸ್‌ನಲ್ಲಿ ಕೇವಲ 2 ರಾಷ್ಟ್ರಗಳು ಮಾತ್ರ ಈ ವರೆಗೂ ಪದಕ ಗಳಿಕೆಯಲ್ಲಿ ಪ್ರಾಬಲ್ಯ ಮೆರೆದಿವೆ. ಮೊದಲ 8 ಆವೃತ್ತಿಗಳಲ್ಲಿ ಜಪಾನ್ ಅತಿಹೆಚ್ಚು ಪದಕಗಳನ್ನು ಗೆದ್ದರೆ, ಕೊನೆ 9 ಆವೃತ್ತಿಗಳಲ್ಲಿ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಕೊಂಡಿದೆ. ಚೀನಾ ಈ ವರೆಗೂ 1355 ಚಿನ್ನ, 928 ಬೆಳ್ಳಿ, 693 ಕಂಚಿನ ಪದಕಗಳೊಂದಿಗೆ 2976 ಪದಕಗಳನ್ನು ಗೆದ್ದುಕೊಂಡಿದ್ದು, ಈ ಆವೃತ್ತಿಯಲ್ಲಿ ಸಹಜವಾಗಿಯೇ 3000 ಪದಕಗಳನ್ನು ದಾಟಲಿದೆ. 1000ಕ್ಕೂ ಹೆಚ್ಚು ಚಿನ್ನದ ಪದಕ ಗೆದ್ದಿರುವ ಏಕೈಕ ತಂಡ ಚೀನಾ.

ಇದನ್ನು ಓದಿ: ಏಷ್ಯನ್ ಗೇಮ್ಸ್: ನೀರಜ್ ಚೋಪ್ರಾ ಭಾರತದ ಧ್ವಜಧಾರಿ

957 ಚಿನ್ನ, 990 ಬೆಳ್ಳಿ ಹಾಗೂ 911 ಕಂಚಿನ ಪದಕಗಳೊಂದಿಗೆ 2858 ಪದಕಗಳನ್ನು ಗೆದ್ದಿರುವ ಜಪಾನ್ 2ನೇ ಸ್ಥಾನದಲ್ಲಿದೆ. ಜಪಾನ್ ಸಹ ಈ ಬಾರಿ 3 ಸಾವಿರ ಪದಕ ಮೈಲಿಗಲ್ಲು ತಲುಪುವ ನಿರೀಕ್ಷೆ ಇದೆ. ಈ ಎರಡು ರಾಷ್ಟ್ರಗಳ ಜತೆ 2000ಕ್ಕೂ ಹೆಚ್ಚು ಪದಕ ಗೆದ್ದಿರುವ ಮತ್ತೊಂದು ರಾಷ್ಟ್ರ ದ.ಕೊರಿಯಾ(2048 ಪದಕ, 3ನೇ ಸ್ಥಾನ)ಭಾರತ 617 ಪದಕಗಳೊಂದಿಗೆ 5ನೇ ಸ್ಥಾನದಲ್ಲಿದೆ.
9 ರಾಷ್ಟ್ರಗಳ ಆತಿಥ್ಯ

ಈ ವರೆಗೂ 17 ಬಾರಿ ಏಷ್ಯನ್ ಗೇಮ್ಸ್ ನಡೆದಿದ್ದು ಒಟ್ಟು 9 ರಾಷ್ಟ್ರಗಳು ಆತಿಥ್ಯ ವಹಿಸಿವೆ. ಇಸ್ರೇಲ್ ಸೇರಿ ಒಟ್ಟಾರೆ 46 ರಾಷ್ಟ್ರಗಳ ಕ್ರೀಡಾಕೂಟದಲ್ಲಿ ಪಾಲ್ಗೊಂಡಿವೆ. 1974ರ ಬಳಿಕ ಇಸ್ರೇಲ್‌ಗೆ ಏಷ್ಯಾಡ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿಲ್ಲ. ಸದ್ಯ ಏಷ್ಯಾ ಒಲಿಂಪಿಕ್ ಸಮಿತಿಯಿಂದ ಮಾನ್ಯತೆ ಪಡೆದಿರುವ ಎಲ್ಲಾ 45 ಸದಸ್ಯ ರಾಷ್ಟ್ರಗಳಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅರ್ಹತೆ ಇದೆ. ಏಷ್ಯಾ ಹಾಗೂ ಯುರೋಪ್ ಎರಡಕ್ಕೂ ಸೇರಿರುವ ಕಜಕಸ್ತಾನ, ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದೆ. ಆದರೆ ಟರ್ಕಿ, ರಷ್ಯಾ, ಅಜೆರ್ಬೈಜಾನ್, ಜಾರ್ಜಿಯಾ ಯುರೋಪಿಯನ್ ಗೇಮ್ಸ್‌ನಲ್ಲಿ ಆಡಲಿವೆ. ಇನ್ನು ಸಂಪೂರ್ಣವಾಗಿ ಏಷ್ಯಾದಲ್ಲೇ ಇದ್ದರೂ ಸೈಪ್ರಸ್, ಅರ್ಮೇನಿಯಾ ಹಾಗೂ ಇಸ್ರೇಲ್, ಯುರೋಪಿಯನ್ ಗೇಮ್ಸ್‌ನಲ್ಲಿ ಕಣಕ್ಕಿಳಿಯಲಿವೆ.

ಭಾರತ, ಜಪಾನ್, ಇಂಡೋನೇಷ್ಯಾ, ಫಿಲಿಪೈನ್ಸ್, ಶ್ರೀಲಂಕಾ, ಸಿಂಗಾಪುರ ಹಾಗೂ ಥಾಯ್ಲೆಂಡ್ ಮಾತ್ರ ಈ ವರೆಗೂ ಎಲ್ಲಾ 17 ಆವೃತ್ತಿಗಳಲ್ಲಿ ಕಾಣಿಸಿಕೊಂಡಿವೆ. ಕಳೆದ ಆವೃತ್ತಿಯ ಏಷ್ಯನ್ ಗೇಮ್ಸ್ 2014ರಲ್ಲಿ ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆದಿತ್ತು. 2018ರ ಏಷ್ಯನ್ ಗೇಮ್ಸ್ ಆ.18ರಿಂದ ಸೆ.2ರ ವರೆಗೂ ಇಂಡೋನೇಷ್ಯಾದ ಜಕಾರ್ತ ಹಾಗೂ ಪಾಲೆಂಬಾಂಗ್‌ನಲ್ಲಿ ನಡೆಯಲಿದೆ. 2022ರಲ್ಲಿ ಆಸ್ಟ್ರೇಲಿಯಾ ಸಹ ತನ್ನ ತಂಡವನ್ನು ಕಳುಹಿಸುವ ಸಾಧ್ಯತೆ ಇದೆ. ಸದ್ಯ ಒಲಿಂಪಿಕ್ಸ್ ಬಾಸ್ಕೆಟ್‌ಬಾಲ್ ಹಾಗೂ ವಾಲಿಬಾಲ್ ಸ್ಪರ್ಧೆಗಳಿಗೆ ಆಸ್ಟ್ರೇಲಿಯಾ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಆಡುವ ಮೂಲಕವೇ ಅರ್ಹತೆ ಪಡೆಯುತ್ತಿದೆ. ಅದೇ ರೀತಿ ಮತ್ತಷ್ಟು ಕ್ರೀಡೆಗಳಲ್ಲಿ ಪಾಲ್ಗೊಂಡು, ಏಷ್ಯಾಡ್ ಮೂಲಕ ಆಸ್ಟ್ರೇಲಿಯಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ.

ವರದಿ: ಸ್ಪಂದನ್ ಕಣಿಯಾರ್, ಕನ್ನಡಪ್ರಭ

click me!