ಬೇಕಿಂಗ್ ಮಾಡ್ಬೇಕಾ? ಹಾಗಾದ್ರೆ ನಿಮ್ಮಅಡುಗೆ ಮನೆಯಲ್ಲಿರಲಿ ಈ ಪರಿಕರ

By Suvarna NewsFirst Published Jun 5, 2021, 3:14 PM IST
Highlights

ಕೊರೋನಾ ಕಾರಣಕ್ಕೆ ಬೇಕೆನಿಸಿದ್ದನ್ನು ಮನೆಯಲ್ಲೇ ಸಿದ್ಧಪಡಿಸಿ ತಿನ್ನಬೇಕಾದ ಅನಿವಾರ್ಯತೆ. ಹೀಗಾಗಿ ಮನೆಯಲ್ಲೇ ಕೇಕ್, ಕುಕ್ಕೀಸ್ ಸಿದ್ಧಪಡಿಸೋರ ಸಂಖ್ಯೆ ಕೂಡ ಹೆಚ್ಚಿದೆ. ಆದ್ರೆ ಬೇಕಿಂಗ್ ಮಾಡಬೇಕೆಂದ್ರೆ ನಿಮ್ಮ ಬಳಿ ಕೆಲವು  ಪರಿಕರಗಳು ಅಗತ್ಯವಾಗಿ ಇರಲೇಬೇಕು.

ಲಾಕ್ಡೌನ್ ಸಮಯದಲ್ಲಿ ಬಹುತೇಕರು ಬೇಸರ ಕಳೆಯಲು ಕಂಡುಕೊಂಡ ಮಾರ್ಗ ಅಡುಗೆ. ಹೌದು,ಯೂ ಟ್ಯೂಬ್ ನೋಡಿ ಹೊಸ ರೆಸಿಪಿ ಟ್ರೈ ಮಾಡಿ ಬಾಯಿ ಚಪ್ಪರಿಸಿಕೊಂಡು ತಿಂದು ಹಿರಿ ಹಿರಿ ಹಿಗ್ಗಿದವರು ಅದೆಷ್ಟೋ ಮಂದಿ. ಇನ್ನು ಕೇಕ್, ಬ್ರೌನಿ, ಕುಕ್ಕೀಸ್ ಎಂದು ಸದಾ ಬೇಕರಿ ತಿನಿಸಿಗೆ ಮುಗಿಬೀಳುತ್ತಿದ್ದವರು ಕೊರೋನಾ ಕಾರಣಕ್ಕೆ ಇವುಗಳನ್ನು ಮನೆಯಲ್ಲೇ ತಯಾರಿಸಲು ಪ್ರಾರಂಭಿಸಿದ್ದಾರೆ.ಕೇಕ್ ಆರ್ಡರ್ ಮಾಡೋ ಬದಲು ಮನೆಯಲ್ಲೇ ಸಿದ್ಧಪಡಿಸಿ ಪ್ರೀತಿಪಾತ್ರರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.ಆದ್ರೆ ಬೇಕಿಂಗ್ ಮಾಡೋದು,ಅಡುಗೆ ಮಾಡಿದಷ್ಟು ಸುಲಭದ ಕೆಲಸವಲ್ಲ. ಬೇಕಿಂಗ್ ಅಂದ್ರೆ ಮನೆಯಲ್ಲಿ ಲಭ್ಯವಿರೋ ತರಕಾರಿ ಅಥವಾ ಸಾಮಗ್ರಿಗಳನ್ನು ನೋಡಿಕೊಂಡು ಅಡುಗೆ ತಯಾರಿಸಿದಂತಲ್ಲ.ಅದಕ್ಕೆಂದೇ ಒಂದಿಷ್ಟು ಸಾಮಗ್ರಿಗಳು,ಸಾಧನಗಳು ಅಗತ್ಯ. ಬೇಕಿಂಗ್ ಸಾಧನಗಳನ್ನುಹೊಂದಿದ್ದರಷ್ಟೇ ನೀವು ಬೇಕ್ ಮಾಡಲು ಸಾಧ್ಯ.ಹಾಗಾದ್ರೆ ಬೇಕಿಂಗ್ಗೆ ಅಗತ್ಯವಿರೋ ಪರಿಕರಗಳು ಯಾವುವು?

ಮನೆಯಲ್ಲಿಯೇ ತಯಾರಿಸಿ ರೆಸ್ಟೋರೆಂಟ್ ಸ್ಟೈಲ್ ಸಾಫ್ಟ್, ಯಮ್ಮೀ ಆಮ್ಲೆಟ್

ಬೇಕಿಂಗ್ ಪ್ಯಾನ್
ಕೇಕ್, ಬ್ರೌನಿ, ಬ್ರೆಡ್ ಇತ್ಯಾದಿ ಬೇಕ್ ಮಾಡಲು ಬೇಕಿಂಗ್ ಪ್ಯಾನ್ ಅಗತ್ಯ. ಇದು ವಿವಿಧ ಆಕಾರ ಹಾಗೂ ಗಾತ್ರಗಳಲ್ಲಿ ಲಭಿಸುತ್ತದೆ. ಗಾಜಿಗಿಂತ ನಾನ್ಸ್ಟಿಕ್ ಅಲುಮೀನಿಯಂ ಬೇಕಿಂಗ್ ಪ್ಯಾನ್ ಖರೀದಿಸೋದು ಉತ್ತಮ. ಏಕೆಂದ್ರೆ ಗಾಜಿಗೆ ಹೋಲಿಸಿದ್ರೆ ಅಲುಮೀನಿಯಂ ಬಳಕೆ ಹಾಗೂ ನಿರ್ವಹಣೆ ಸುಲಭ. ಗಾಜಿನ ಪ್ಯಾನ್ ನೋಡಲು ಆಕರ್ಷಕವಾಗಿದ್ದರೂ ಭಾರವಾಗಿರೋ ಜೊತೆ ಬಳಸೋವಾಗ ಹೆಚ್ಚಿನ ಎಚ್ಚರ ಅಗತ್ಯ. ಸ್ವಲ್ಪ ಯಾಮಾರಿದ್ರೂ ಒಡೆದು ಹೋಗೋ ಸಾಧ್ಯತೆಯಿದೆ. 

ಪೇಸ್ಟ್ರಿಬ್ರಷ್ ಹಾಗೂ ಸ್ಪಾಚುಲ
ಕೇಕ್, ಕಪ್ ಕೇಕ್ ಅಥವಾ ಬ್ರೌನಿ ಮಾಡೋವಾಗ ಈ ಎರಡೂ ಸಾಧನಗಳು ಬೇಕೇಬೇಕು. ಬೇಕಿಂಗ್ ಪ್ಯಾನ್ ಎಣ್ಣೆ ಸವರಲು ಬ್ರಷ್ ಅಗತ್ಯ. ಇನ್ನು ಬೇಕಿಂಗ್ ಮಾಡಿದ ಬಳಿಕ ಕೂಡ ಕೆಲವು ಖಾದ್ಯಗಳಿಗೆ ಕ್ರೀಮ್ ಅಥವಾ ಸಾಸ್ ಸವರಲು ಕೂಡ ಇದು ಬೇಕಾಗುತ್ತದೆ. ಮಿಕ್ಸಿಂಗ್ ಬೌಲ್ನಲ್ಲಿ ಹಿಟ್ಟು ಮಿಕ್ಸ್ ಮಾಡಲು ಹಾಗೂ ಬೇಕಿಂಗ್ ಪ್ಯಾನ್ಗೆ ವರ್ಗಾಯಿಸಲು ಸ್ಪಾಚುಲ ನೆರವು ನೀಡುತ್ತದೆ.

ವಿಸ್ಕ್
ಇದು ನೋಡಲು ತುಂಬಾ ಸಿಂಪಲ್ ಸಾಧನವಾದ್ರೂ ಬೇಕಿಂಗ್ ಮಾಡೋವಾಗ ಇದರ ಪಾತ್ರ ಮಹತ್ವದು. ವಿಸ್ಕ್ ಇಲ್ಲವೆಂದ್ರೆ ಮೊಟ್ಟೆಯನ್ನು ಬೀಟ್ ಮಾಡೋದು ಅಥವಾ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡೋದು ಖಂಡಿತಾ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಹಗುರ, ಸುಲಭವಾಗಿ ಸ್ವಚ್ಛಗೊಳಿಸಲು ಸಾಧ್ಯವಿರೋ ವಿಸ್ಕ್ ರಚನೆ, ಗಾಳಿ ಇದರಲ್ಲಿನ ನಿರ್ವಾತವನ್ನು ತುಂಬಲು ನೆರವು ನೀಡುತ್ತದೆ. ಈ ಮೂಲಕ ಬೀಟ್ ಮಾಡೋ ಕೆಲಸವನ್ನು ಸುಲಭವಾಗಿಸುತ್ತದೆ. ಬಲೂನ್ ಆಕಾರದಲ್ಲಿರೋ ಸ್ಟೈನ್ಲೆಸ್ ಸ್ಟೀಲ್ ವಿಸ್ಕ್ ಬಳಸೋದು ಉತ್ತಮ. ಇದು ಹಗರುವಾಗಿರೋ ಕಾರಣ ಜಾಸ್ತಿ ಹೊತ್ತು ನೀವು ಹಿಟ್ಟನ್ನು ಕಲಸಿದ್ರೂ ಕೈಗಳಿಗೆ ಬೇಗ ದಣಿವಾಗೋದಿಲ್ಲ. ಅಲ್ಲದೆ, ಹಿಟ್ಟು ಕೂಡ ಚೆನ್ನಾಗಿ ಮಿಶ್ರಣಗೊಂಡು ಮೃದು ಹಾಗೂ ಸ್ಪಾಂಜ್ನಂತಹ ಕೇಕ್ ಸಿದ್ಧಪಡಿಸಬಹುದು. ಎಲೆಕ್ಟ್ರಿಕ್ ಬೀಟರ್ ಕೂಡ ಲಭ್ಯವಿದ್ದು, ಇವು ಬೀಟಿಂಗ್ ಕೆಲಸವನ್ನು ಇನ್ನಷ್ಟು ಸರಳವಾಗಿಸುತ್ತವೆ. 

ರೋಗ ನಿರೋಧಕ ಶಕ್ತಿಗಾಗಿ ಬ್ರೇಕ್‌ಫಾಸ್ಟ್ ಹಿಂಗಿರಬೇಕು!

ಬೇಕಿಂಗ್ ಮ್ಯಾಟ್
ಬೇಕ್ ಮಾಡೋವಾಗ ಕೇಕ್ ಅಥವಾ ಇನ್ಯಾವುದೇ ಪದಾರ್ಥ ಪಾತ್ರೆಗೆ ಅಂಟಿಕೊಂಡು, ತೆಗೆಯೋವಾಗ ಅದರ ಆಕಾರ ಹಾಳಾದ್ರೆ ಬೇಸರವಾಗೋದು ಗ್ಯಾರಂಟಿ. ಇದನ್ನು ತಪ್ಪಿಸಲು ಬೇಕಿಂಗ್ ಮ್ಯಾಟ್ ಬಳಸಿ. ಸಿಲಿಕಾನ್ ಬೇಕಿಂಗ್ ಮ್ಯಾಟ್ ಎಂದೇ ಜನಪ್ರಿಯತೆ ಗಳಿಸಿರೋ ಇದನ್ನು ಕುಕ್ಕೀಸ್, ಪ್ಯಾಟೀಸ್ ಇತ್ಯಾದಿ ಬೇಕ್ ಮಾಡಲು ಬಳಸಬಹುದು. ಕೆಲವರು ಪ್ಯಾರಚ್ಮೆಂಟ್ ಪೇಪರ್ಸ್ ಬಳಸುತ್ತಾರಾದ್ರೂ ಅದಕ್ಕಿಂತ ಸಿಲಿಕಾನ್ ಬೇಕಿಂಗ್ ಮ್ಯಾಟ್ ಉತ್ತಮ ಆಯ್ಕೆಯಾಗಿದ್ದು, ಇದನ್ನು ವಾಷ್ ಮಾಡಿ ಮರುಬಳಕೆ ಮಾಡಬಹುದಾಗಿದೆ. 

ವೇಯಿಂಗ್ ಮಷಿನ್
ಬೇಕಿಂಗ್ ಮಾಡಲು ಸಾಮಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸೋದು ಮುಖ್ಯ. ಸರಿಯಾದ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಬಳಸಿದಾಗ ಮಾತ್ರ ನೀವು ಸಿದ್ಧಪಡಿಸೋ ಉತ್ಪನ್ನ ಪರಿಪೂರ್ಣವಾಗಿರುತ್ತದೆ. ಹೀಗಾಗಿ ಬೇಕಿಂಗ್ ಮಾಡೋರು ಅದ್ರಲ್ಲೂ ಮೊದಲ ಬಾರಿಗೆ ಟ್ರೈ ಮಾಡೋರು ತೂಕ ಅಳೆಯೋ ಮಾಪಕ ಹೊಂದಿರೋದು ಉತ್ತಮ.

ಅಳತೆ ಚಮಚಗಳು
ಬೇಕಿಂಗ್ ಮಾಡೋವಾಗ ಬೇಕಿಂಗ್ ಸೋಡ, ಪೌಡರ್, ಉಪ್ಪು ಇತ್ಯಾದಿಗಳನ್ನು ಟೀ, ಟೇಬಲ್ ಚಮಚಗಳ ಅಳತೆಯಲ್ಲಿ ಬಳಸಲಾಗುತ್ತದೆ. ಆದಕಾರಣ ನಿಖರವಾದ ಅಳತೆಗೆ ಚಮಚಗಳನ್ನು ಹೊಂದಿರೋದು ಅಗತ್ಯ.

ಮಿಕ್ಸಿಂಗ್ ಬೌಲ್ಸ್
ಬೇಕಿಂಗ್ಗೆ ಬೇಕಾಗೋ ಸಾಮಗ್ರಿಗಳನ್ನು ಮಿಕ್ಸ್ ಮಾಡಲು 2-3 ಮಿಕ್ಸಿಂಗ್ ಬಾಲ್ಸ್ ಅಗತ್ಯ. 

ಶೀಟ್ ಪ್ಯಾನ್ಸ್
ಕುಕ್ಕೀಸ್ ಬೇಕ್ ಮಾಡಲು, ತರಕಾರಿ ರೋಸ್ಟ್ ಮಾಡಲು ರಿಮ್ ಇರುವ ಬೇಕಿಂಗ್ ಶೀಟ್ ಪ್ಯಾನ್ಸ್ ಬಳಸೋದು ಸೂಕ್ತ.ರೋಲ್ಸ್, ಜೆಲ್ಲಿ, ಫಿಜ್ಜಾ ತಯಾರಿಸಲು ಕೂಡ ಇದನ್ನು ಬಳಸಬಹುದು. 

ಕೊರೊನಾ ಸಮಯದಲ್ಲಿ ವೇಗನ್ ಡಯಟ್‌ ಅಪಾಯಕಾರಿ !

ಓವನ್
ಕೇಕ್ ಅಥವಾ ಬ್ರೌನಿ ಮಾಡಲು ಓವನ್ ಅಥವಾ ಮೈಕ್ರೋವೇವ್ ಓವನ್ ಅಗತ್ಯ. ಓವನ್ ಇದ್ರೆ ಬೇಕರಿಯಲ್ಲಿ ಸಿಗುವಂತಹ ರುಚಿಯಾದ, ವಿವಿಧ ವಿನ್ಯಾಸದ  ಕೇಕ್ಗಳನ್ನು ನೀವು ಮನೆಯಲ್ಲೇ ಸಿದ್ಧಪಡಿಸಬಹುದು. 
 

click me!