ಭಾಷೆ ಮತ್ತು ಉಚ್ಛಾರಣೆಯ ಮಹತ್ವ!

By Suvarna NewsFirst Published Dec 16, 2019, 9:31 AM IST
Highlights

ಭಾಷೆ ಅಂದರೇನು? ಅದರ ಉದ್ದೇಶ ಏನು? ಯಾಕೆ ಬೇಕು ಭಾಷೆ? ಮಾತೃಭಾಷೆಗೆ ಮಹತ್ವ ಏನು? ಅದರಲ್ಲೂ ಉಚ್ಚಾರಣೆ ತುಂಬ ಮುಖ್ಯವಾ ಅಂತ ಹಲವು ಪ್ರಶ್ನೆಗಳು ಬಂದಾಗ ನನಗನ್ನಿಸುವುದು ಭಾಷೆ ಒಂದು ಮಾಧ್ಯಮ. ನಮ್ಮ ಮನಸ್ಸಿನಲ್ಲಿರುವುದನ್ನು ಇನ್ನೊಬ್ಬರಿಗೆ ವ್ಯಕ್ತಪಡಿಸುವ ಸಾಧನ.

ಕವಿತಾ ರಾಮಕೃಷ್ಣ, ಮಸ್ಕತ್

ಯಾರನ್ನಾದರೂ ಅಂದರೆ ಅಪರಿಚಿತರನ್ನೂ ಸಹ ಈ ಭಾಷೆಯ ಮೂಲಕ ಮಾತನಾಡಿಸಬಹುದು. ಪರಿಚಯ ಸ್ನೇಹವಾಗಬಹುದು. ಸ್ನೇಹ ಸಂಬಂಧವಾಗಬಹುದು. ಪ್ರಪಂಚದಲ್ಲಿ ಅನೇಕ ಭಾಷೆಗಳಿವೆ. ಆಂಗ್ಲಭಾಷೆಯನ್ನು ಪ್ರಪಂಚದ ಶೆ. 75ರಷ್ಟು ಜನ ತಿಳಿದಿದ್ದಾರೆ. ಆದ್ದರಿಂದ ಅದರ ಪ್ರಭಾವ, ಉಪಯೋಗ, ಬಳಕೆ ಹೆಚ್ಚಿದೆ. ಆದರೆ ಮಾತೃಭಾಷೆ ಅಂದರೆ ತಾಯಿಗೆ ಸಮನಾದ ನಾವು ಹುಟ್ಟಿದ ಭೂಮಿ, ಮಾತೃಭೂಮಿಯಲ್ಲಿ ಆಡುವ ಭಾಷೆ. ಅದಕ್ಕೆ ತಾಯಿಯಷ್ಟೇ ಮಹತ್ವ. ಅದಕ್ಕೆ ಆ ಭಾಷೆಗೆ, ತಾಯಿಗೆ ಸಲ್ಲುವಷ್ಟೇ ಗೌರವ,ಮರ್ಯಾದೆ ಪ್ರೀತಿ ದೊರಕಬೇಕು. ನಮ್ಮ ಮಾತೃಭಾಷೆ ಕನ್ನಡ. ನಾವು ಹಲವು ಭಾಷೆಗಳನ್ನು ತಿಳಿದಿದ್ದರೂ, ಅದರಲ್ಲಿ ಪ್ರಾವೀಣ್ಯತೆ ಇದ್ದರೂ ನಮ್ಮ ಭಾವನೆಗಳನ್ನು ಅಂದರೆ ದುಃ ಖವಾಗಲೀ, ಸುಖವಾಗಲೀ, ಸಂತೋಷವಾಗಲಿ, ವಿಶ್ವಾಸವನ್ನಾಗಲಿ, ಪ್ರೀತಿಯನ್ನಾಗಲಿ, ದುಗುಡವನ್ನಾಗಲಿ ಕೋಪವನ್ನಾಗಲಿ, ಆಸೆಯನ್ನಾಗಲಿ, ನಿರ್ಲಿಪ್ತತೆಯನ್ನಾಗಲಿ ತನ್ನ ತಾಯಿ ಭಾಷೆ ಕನ್ನಡದಲ್ಲಿ ವ್ಯಕ್ತಪಡಿಸುವಷ್ಟು ಸುಖ, ತೃಪ್ತಿ ಬೇರೆ ಭಾಷೆಯಲ್ಲಿ ಸಿಗುವುದಿಲ್ಲ.

ಮಹಿಳೆ ತುಟಿ ಕಚ್ಚಿದ್ರೆ ಏನರ್ಥ ಗೊತ್ತಾ?

ಇತ್ತೀಚೆಗೆ ನಾನು ಅಮೆರಿಕಾ ದೇಶದ ಪೆನ್ಸಿಲೇನಿಯಾದ ಪಿಟ್ಸ್ ಬರ್ಗ್ ನಗರಕ್ಕೆ ಹೋಗಿದ್ದೆ. ಅಲ್ಲಿ ಭೇಟಿಯಾದ ಅಮೆರಿಕನ್ನರು ತಮ್ಮ ಹೆಸರನ್ನು ಹೇಳಿ, ನಂತರ ನಮ್ಮ ಹೆಸರನ್ನು ಕೇಳುತ್ತಿದ್ದರು ಮತ್ತು ಆ ಹೆಸರನ್ನು ಉಚ್ಛರಿಸಿ ನಾವು ಸರಿಯಾಗಿ ನಿಮ್ಮ ಹೆಸರು ಹೇಳುತ್ತಿದ್ದೇವಾ, ತಪ್ಪಿದ್ದರೆ ದಯವಿಟ್ಟು ತಿದ್ದಿ ಎನ್ನುತ್ತಿದ್ದರು. ಕ್ಲಿಷ್ಟಕರವಾದ ಒತ್ತಕ್ಷರಗಳಿಂದ ಹೆಸರು ಕೂಡಿದ್ದರೂ, ನಾವು ಪರವಾಗಿಲ್ಲ, ಚುಟುಕಾಗಿ ಕರೆಯಿರಿ ಎಂದರೂ, ಅವರು ಇಲ್ಲಾ, ಒಬ್ಬ ವ್ಯಕ್ತಿಯನ್ನು ಒಂದು ಹೆಸರಿನಿಂದ ಗುರುತಿಸುತ್ತೇವೆ. ಅದನ್ನು ತಂದೆ, ತಾಯಿ, ಮನೆಯ ಹಿರಿಯರು ಎಲ್ಲಾ ಸೇರಿ ಮಗು ಜನಿಸಿದಾಗ ಅತ್ಯಂತ ಒಲುಮೆಯಿಂದ ಹೆಸರಿಸುತ್ತಾರೆ. ಅಂತಹ ಪಾವಿತ್ರತೆ ಇರುವ ಕುಟುಂಬದ ಹೆಸರನ್ನು ಹೊಂದಿರುವ ಒಬ್ಬ ವ್ಯಕ್ತಿಯ ಹೆಸರನ್ನು ತಪ್ಪಾಗಿ ಉಚ್ಚರಿಸುವುದು ಸರಿಯಲ್ಲ. ಆದ್ದರಿಂದ ಕಲಿತು ಉಚ್ಚರಿಸುತ್ತೇವೆ ಎಂದರು.

ಇಂಗ್ಲಿಷ್ ಭಾಷೆಯಲ್ಲಿ 26 ಅಕ್ಷರಗಳಿವೆ. ನಾನು ಕನ್ನಡತಿ ಆದ್ದರಿಂದ ನನ್ನ ಮಾತೃಭಾಷೆ ಕನ್ನಡದ ಬಗ್ಗೆ ಅತಿ ಹೆಚ್ಚು ಹೆಮ್ಮೆ. 52 ಅಕ್ಷರಗಳು, ಒತ್ತಕ್ಷರಗಳು, ಹ್ರಸ್ವ, ದೀರ್ಘಗಳು, ಕಾಗುಣಿತಗಳನ್ನು ಹೊಂದಿರುವ ನಮ್ಮ ಭಾಷೆಯ ಉಚ್ಚಾರಣೆ ಹಾಗಾದರೆ ಹೇಗಿರಬೇಕು? ಅದರ ಮಹತ್ವ ಎಷ್ಟಿರಬೇಕು? ನಾವು ಕನ್ನಡಿಗರು ಎಂದು ಹೇಳಲು ಎಷ್ಟು ಹೆಮ್ಮೆ ಇರಬೇಕು? ಕರ್ನಾಟಕ ಒಂದೇ ರಾಜ್ಯವಾದರೂ ಉತ್ತರ ಕರ್ನಾಟಕದವರು ಮಾತನಾಡುವ ಶೈಲಿ ಬೇರೆ. ದಕ್ಷಿಣ ಕರ್ನಾಟಕದವರ ಭಾಷೆ ಸೊಗಡು ಬೇರೆ. ಮೈಸೂರು, ಬೆಂಗಳೂರಿನ ಜನ ಮಾತನಾಡುವ ದಾಟಿ ಬೇರೆ. ಸುಮಧರು, ಸುಲಲಿತ, ಸುಮನೋಹರ ಕನ್ನಡ ಭಾಷೆಯ ಶೈಲಿ ಬೇರೆಯಾದರೂ ಉಚ್ಚಾರಣೆ ತಪ್ಪಾಗಬಾರದು. ಆಡು ಹಾಡಾಗಬಾರದು. ಹಾಡು ಆಡಾಗಲು ಸಾಧ್ಯವಿಲ್ಲ. ದುಃಖದ ಸಂಗತಿ ಎಂದರೆ ಇತ್ತೀಚಿನ ಚಲನಚಿತ್ರಗಳಲ್ಲಿ ಈ ಭಾಷಾ ಪ್ರಯೋಗಗಳು ಸಾಮಾನ್ಯವಾಗುತ್ತಿವೆ.

ಮೂಡ್ ಬದಲಿಸುತ್ತೆ ಆಂಗಿಕ ಭಾಷೆ, ನೀವೂ ಮನಃಶಾಸ್ತ್ರಜ್ಞರಾಗಿ

ಓಂಕಾರ, ಹೋಂಕಾರವಾಗಿದೆ. ಆಳು ಹಾಳಾಗಿದೆ. ಅರಸ ಹರಸವಾಗಿದ್ದಾನೆ. ಡಾಕ್ಟರ್ ರಾಜ್ ರವರಿಗೆ ಅವರೇ ಸಾಟಿ ಎಂಬಂತೆ ಅವರ ಬಭ್ರುವಾಹನ, ಶ್ರೀನಿವಾಸ ಕಲ್ಯಾಣ, ಮೇಯರ್ ಮುತ್ತಣ್ಣ, ಭಾಗ್ಯವಂತರು, ಎರಡು ಕನಸು, ಸಾಕ್ಷಾತ್ಕಾರ, ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್ ಯಾವುದೇ ಚಿತ್ರಗಳನ್ನು ನೋಡಿದರೂ ಭಾಷೆ ವೈವಿಧ್ಯಮಯವಾಗಿ ಚಿತ್ರಕ್ಕೆ ಅನುಗುಣವಾಗಿ ಬಳಸಿದರೂ ಉಚ್ಚಾರಣೆ ತಿಳಿ ನೀರಿನಂತೆ ಸ್ಫುಟವಾಗಿದೆ. ನಾನು ಚಲನಚಿತ್ರ, ಧಾರಾವಾಹಿ ಅಥವಾ ವಾರ್ತೆಗಳು,  ದೂರದರ್ಶನದ ಬಗ್ಗೆ ಬರೆಯುತ್ತಿರುವ ಕಾರಣ ಇವು ದೇಶ ವಿದೇಶಗಳಿಗೆ ಮುಟ್ಟುತ್ತವೆ. ಕನ್ನಡ ಕಲಿಕೆಗೆ ಮಕ್ಕಳು ಮಾತನಾಡಲಿಕ್ಕೆ ಸಹಾಯವಾಗುತ್ತವೆ. ದೃಶ್ಯ ಮಾಧ್ಯಮ ಹಾಗೂ ಶ್ರವ್ಯ ಮಾಧ್ಯಮಗಳು ಕಲಿಕೆಗೆ ಸಹಾಯ ಮಾಡುತ್ತವೆ. ಯಾವುದೇ ದೇಶದಲ್ಲಿರಲಿ ಕನ್ನಡಿಗರಾಗಿ ನಾವು ಒಳ್ಳೆಯ ಕನ್ನಡವನ್ನು ಮಾತಾಡೋಣ. ಸೊಗಡನ್ನು ಪಸರಿಸೋಣ. ಕನ್ನಡ ತಾಯಿಯ ಹೆಮ್ಮೆ ಬೆಳಗೋಣ. ಉತ್ಸವಗಳಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವವರು ಉತ್ಸವಕ್ಕೆ ಪ್ರೋತ್ಸಾಹಿಸಿ ಎನ್ನುವುದರ ಬದಲು ಉಸ್ತವಕ್ಕೆ ಪ್ರೋಸ್ತಾಹಿಸಿ ಎಂದಾಗಬಾರದು. ‘ಸಂಕಲ್ಪದಿಂದ ಸಿದ್ಧಿ ಎಂದು ನಮ್ಮ ಪ್ರಧಾನಿಗಳು ಹೇಳಿದ ಹಾಗೆ ಭಾಷೆಯನ್ನು ಶುದ್ಧವಾಗಿ ಮಾತನಾಡಿ, ಭಾಷೆಯನ್ನು ಗೌರವಿಸೋಣ. ನಮ್ಮ ಭಾಷೆಯೇ ತಪ್ಪಾದರೆ ಹಾನರ್ ಶಬ್ದವನ್ನು ಆನರ್ ಎನ್ನದೆ ಹಾನರ್ ಎಂದು ಅಗೌರವಿಸುವ
ಪರಿಸ್ಥಿತಿಯಾಗುತ್ತದೆ. ಮೊದಲು ಮಾತೃದೇವೋ ಭವ, ನಂತರ ಅತಿಥಿ ದೇವೋ ಭವ.

click me!