ಮನೆಯೇ ಮಂತ್ರಾಲಯ ಅಂತ ಪ್ರೂವ್‌ ಮಾಡಿದ ಕೊರೋನಾ

By Suvarna NewsFirst Published Mar 19, 2020, 3:58 PM IST
Highlights

ಒಂದು ತಿಂಗಳ ಹಿಂದೆ ರಸ್ತೆಯಲ್ಲಿ ಗಿಜಿಗುಡುತ್ತಿದ್ದ ಜನರೆಲ್ಲ ಈಗ ಮನೆ ಸೇರಿಕೊಂಡು ಮನೆಯೇ ಮಂತ್ರಾಲಯ ಎಂಬ ಪಾಠವನ್ನು ಹೊಸದಾಗಿ ಕಲಿಯುತ್ತಿದ್ದಾರೆ.

ಒಂದು ವರ್ಷದ ಹಿಂದೆ ಕಾಣಬಹುದಾಗಿದ್ದ ದೃಶ್ಯ: ಸೋವಾರ ಬೆಳಗ್ಗಾದರೆ ಸಾಕು ಗಿಜಿಗುಡುವ ಬೆಂಗಳೂರು. ಯಾವ ರಸ್ತೆಯಲ್ಲೂ ಕಾಲು ಹಾಕಲು ಸಾಧ್ಯವಿಲ್ಲ. ವೃದ್ಧರು, ಮಹಿಳೆಯರು, ಮಕ್ಕಳು ರೋಡು ದಾಟೋದಕ್ಕೇ ಸಾಧ್ಯವಿಲ್ಲದಷ್ಟು ಟ್ರಾಫಿಕ್ಕು, ಬಸ್ಸು ಕಾರು ಲಾರಿ ಹೀಗೆ ಎಲ್ಲದರಲ್ಲಿ ಹತ್ತಿಕೊಂಡು ತುಂಬಿಕೊಂಡು ಎಲ್ಲೆಲ್ಲಿಗೋ ಹೋಗುತ್ತಿರುವ, ಕೆಲಸದಲ್ಲಿ ನಿರತರಾಗಿರುವ ಜನ. ಅಂಗಡಿಗಳಲ್ಲಿ, ಮಾಲುಗಳಲ್ಲಿ ಶಾಪಿಂಗ್‌ನಲ್ಲಿ ನಿರತರು. ಸಿನಿಮಾ ಥಿಯೇಟರುಗಳಲ್ಲಿ ನೂಕು ನುಗ್ಗಲು. ಆನ್‌ಲೈನ್‌ನಲ್ಲಿ ಖರೀದಿ ಹಾವಳಿ. ವೈಟ್‌ಫೀಲ್ಡ್‌, ಕೋರಮಂಗಲ ಹೀಗೆ ಐಟಿ ಹಬ್‌ಗಳಲ್ಲಿ ಟೆಕಿಗಳ ಕಾರುಬಾರು. ಅಲ್ಲಲ್ಲಿ ಮೀಟಿಂಗ್‌, ಸಭೆ, ಕಾರ್ಯಕ್ರಮ, ಪೂಜೆ, ಪ್ರಸಾದ ವಿತರಣೆ. 

ಈಗಿನ ದೃಶ್ಯ: ರಸ್ತೆಯಲ್ಲಿ ಜನವೇ ಇಲ್ಲ. ಎಲ್ಲೋ ಕೆಲವರು ಪೌರಕಾರ್ಮಿಕರು ರಸ್ತೆ ಗುಡಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಎದ್ದು ಪಾರ್ಕುಗಳಿಗೆ ವಾಕಿಂಗ್‌ ಹೋಗುತ್ತಿದ್ದವರು ಕೂಡ ಮನೆಯ ಹಜಾರದಲ್ಲೇ ಅತ್ತಿತ್ತ ಓಡುತ್ತ ವ್ಯಾಯಾಮ ಮಾಡುತ್ತಿದ್ದಾರೆ. ಅನಿವಾರ್ಯವಾಗಿ ಹೊರಗೆ ಬಂದರೆ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುತ್ತಾರೆ. ಬ್ಯುಸಿನೆಸ್‌ ಮೀಟಿಂಗ್‌ಗಳಲ್ಲಿ ಕೈ ಕುಲುಕುವವರು ಯಾರೂ ಇಲ್ಲ. ಎಲ್ಲ ದೂರದಿಂದಲೇ ಕೈ ಮುಗಿಯುತ್ತಾರೆ. ಸಭೆಯೂ ಇಲ್ಲ, ಕಾರ್ಯಕ್ರಮಗಳೂ ಇಲ್ಲ. ಪೂಜೆಯೂ ಇಲ್ಲ ಪ್ರಸಾದ ವಿತರಣೆಯೂ ಮಾಯ. ದೇವರ ಮುಂದೆ ಕ್ಯೂ ನಿಂತು ಆಶೀರ್ವಾದ ಪಡೆಯೋಣ ಅಂದರೆ ದೇವಾಲಯಗಳೂ ಕೂಡ ಭಕ್ತಾದಿಗಳು ನಮ್ಮಲ್ಲಿಗೆ ಬರಬೇಡಿ ಎಂದು ಬಾಗಿಲು ಹಾಕಿಕೊಂಡಿವೆ. ನಾಲ್ಕಕ್ಕಿಂತ ಹೆಚ್ಚು ಜನ ಎಲ್ಲಾದರೂ ಸೇರಬೇಕಾದಲ್ಲಿ ಅಂಜುತ್ತಂಜುತ್ತ ಸೇರುತ್ತಾರೆ. ತರಾತುರಿಯಲ್ಲಿ ಮಾತು ಮುಗಿಸಿ ಎಸ್ಕೇಪ್‌ ಆಗುತ್ತಾರೆ. ಅಂಗಡಿಗಳಿಗೆ ಅನಿವಾರ್ಯವಾದರೆ ಮಾತ್ರ ಭೇಟಿ. ಸಿನಿಮಾ ಹಾಲ್‌ಗಳು ಭಣಭಣ. ಮಾಲ್‌ಗಳು ಬಂದ್‌, ಮೆಟ್ರೋ, ರೈಲು, ಬಸ್‌ ನಿಲ್ದಾಣಗಳಲ್ಲಿ ಎಲ್ಲಿ ಥರ್ಮಲ್‌ ಸ್ಕ್ಯಾನರ್‌ ಕುಂಯ್ಕ್‌ ಅನ್ನುವುದೋ, ಅಲ್ಲಿ ತಮ್ಮನ್ನು ಒಯ್ದು ಕ್ವಾರಂಟೈನ್ಗೆ ಹಾಕುತ್ತಾರೋ ಎಂದು ಅಂಜುತ್ತಂಜುತ್ತ ಓಡಾಡುವ ಜನ. ಹತ್ತಿರದಲ್ಲಿ ಯಾರಾದರೂ ಒಂದು ಸೀನಿದರೂ ಸಾಕು, ಬಾಂಬ್‌ ಸ್ಫೋಟಕ್ಕಿಂತ ಹೆಚ್ಚಿನ ಎಫೆಕ್ಟ್‌.



ಇದು ಕೊರೊನಾ ಪೀಡಿತ ಜಗತ್ತು. ಹಾಗಿದ್ದರೆ ಆಗ ತುಂಬಿ ತುಳುಕುತ್ತಿದ್ದರಲ್ಲ, ಆ ಜನರೆಲ್ಲ ಎಲ್ಲಿಗೆ ಹೋದರು?

ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಬಗ್ಗೆ ಸುಳ್ಸುದ್ದಿ ಹರಿಬಿಟ್ರೆ ಹೀಗೇ ಆಗೋದು!? ...

ಎಲ್ಲಿಗೂ ಹೋಗಿಲ್ಲ. ಅವರವರ ಮನೆಗಳಲ್ಲೇ ಇದ್ದಾರೆ. ಮನೆಗೆ ಬೇಕಾದ್ದನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡಿ ತರಿಸಿಕೊಳ್ಳುತ್ತಾರೆ. ಅಥವಾ ಬೇರ್ಯಾರೂ ಜನರಿಲ್ಲದ ಸಂದರ್ಭದಲ್ಲಿ ಹೋಗಿ ತರುತ್ತಾರೆ. ಆಫೀಸ್‌ಗೆ ಹೋಗುವುದನ್ನು ಹೆಚ್ಚಿನವರು ಅವಾಯ್ಡ್‌ ಮಾಡುತ್ತಿದ್ದಾರೆ. ವರ್ಕ್‌ ಫ್ರಮ್‌ ಹೋಮ್‌ ಸೌಲಭ್ಯ ಪಡೆಯಲು ಯತ್ನಿಸುತ್ತಿದ್ದಾರೆ. ಮನೆಯಿಂದಲೇ ಕೆಲಸ ಮಾಡುತ್ತ, ಮನೆಯಲ್ಲೇ ಆರೋಗ್ಯಕರವಾದ ಅಡುಗೆ ಮಾಡಿಕೊಳ್ಳುತ್ತ, ಊಟ ಮಾಡುತ್ತ, ಸಂಜೆ ಬೀದಿ ಬದಿಯಲ್ಲಿ ಪಾನಿಪುರಿ ತಿನ್ನುವ ಚಪಲ ಹತ್ತಿಕ್ಕಿ ಇರುತ್ತಾರೆ, ಮಕ್ಕಳಿಗೂ ರಜೆ ಗಲಾಟೆ ಮಾಡುವ ಮಕ್ಕಳನ್ನು ಎಂಗೇಜ್‌ ಮಾಡಲೇಬೇಕು ಈಗ. ಹೀಗಾಗಿ ಅಪ್ಪ- ಅಮ್ಮನ ಕ್ರಿಯೇಟಿವಿಟಿ ಈಗ ಜೋರಾಗಿದೆ. ಅಮ್ಮ ಎಂದೋ ಕಲಿತ ಸಂಗೀತವನ್ನು ನೆನಪು ಮಾಡಿಕೊಂಡು ಮನೆಮಂದಿಯನ್ನು ಮುಂದೆ ಕೂರಿಸಿಕೊಂಡು ಹಾಡಲು ಶುರು ಮಾಡುತ್ತಾಳೆ. ಇಷ್ಟೊಂದು ದಿನ ಯಾಕೆ ಹಾಡಿಲ್ಲವಮ್ಮಾ ಅನ್ನುತ್ತಾಳೆ ಮಗಳು, ಅಪ್ಪ ತಾನು ಎಂದೋ ಕಲಿತ ಪೇಂಟಿಂಗ್‌ ಅನ್ನು ಶುರು ಮಾಡಿಕೊಂಡಿದ್ದಾನೆ. ಅದನ್ನು ನೋಡಿ ಮಗ ಬೆರಗಿನಿಂದ ಕೂತಿದ್ದಾನೆ. ನಿಧಾನವಾಗಿ ಮಕ್ಕಳ ಆಟಗಳಲ್ಲಿ ಅಪ್ಪ ಅಮ್ಮ, ಅಜ್ಜ ಅಜ್ಜಿ ಸೇರಿಕೊಳ್ಳುತ್ತಾರೆ. ಇಡೀ ಮನೆಯೇ ಆಟದ ಅಂಗಣವಾಗಿ ಪರಿವರ್ತನೆ ಆಗುತ್ತಿದೆ.

ಕೊರೋನಾ ಭೀತಿ: 100ಕ್ಕೂ ಹೆಚ್ಚು ಹಂದಿಗಳ ಸಾವು, ಕಾರಣ? ...

ಅಷ್ಟರಲ್ಲಿ ಅಜ್ಜ ಯಾವುದೋ ಒಂದು ಹಳೆಯ ಕತೆ ಶುರು ಮಾಡುತ್ತಾರೆ. ತಾನು ಬಾಲ್ಯದಲ್ಲಿ ನೋಡಿದ, ಆಡಿದ ಕತೆ. ಮನೆಯ ಸದಸ್ಯರೆಲ್ಲರೂ ಅದನ್ನು ಕಿವಿ ತೆರೆದು ಕೇಳಿಸಿಕೊಳ್ಳುತ್ತಾರೆ. ಮಕ್ಕಳಿಗಾಗಲಿ ಮೊಮ್ಮಕ್ಕಳಿಗಾಗಲಿ ಶಾಲೆ ಅಥವಾ ಕಚೇರಿ ಎಂಬ ಯಾವ ಗಡಿಬಿಡಿಯೂ ಇಂದು ಇಲ್ಲ. ಹೀಗಾಗಿ ಅಜ್ಜನಿಗೂ ಕತೆ ಹೇಳುವ ಹಂಬಲ. ಅಜ್ಜಿ ಬಾಯಲ್ಲಿ ತಾಂಬೂಲ ಹಾಕಿಕೊಂಡು ಅಜ್ಜನ ಕತೆ ಕೇಳುತ್ತಾ ನಂಗೊತ್ತಿಲ್ವಾ ಅನ್ನುವ ಧಾಟಿಯಲ್ಲಿ ಕೇಳುತ್ತಿದ್ದಾರೆ. ಮನೆಗಿಂದು ಕೆಲಸದವಳು ಬಂದಿಲ್ಲ. ಅವಳು ಬಂದಿಲ್ಲ ಅಂತ ಮನೆಯಾಕೆಯೇನೂ ಚಡಪಡಿಸುತ್ತಿಲ್ಲ. ಗಂಡ ಹೆಂಡತಿ ಜೊತೆಯಾಗಿ ಪಾತ್ರೆಗಳನ್ನು ತೊಳೆದು, ಒರೆಸಿ ಒಪ್ಪವಾಗಿಟ್ಟಿದ್ದಾರೆ. ಮನೆ ಗುಡಿಸಿ ಒರೆಸಿದ್ದಾರೆ. 
ಅಂತೂ ಮನೆಯೆಂಬುದು ಮನೆಯಂತೆ ಭಾಸವಾಗುತ್ತಿದೆ. ಸಂಬಂಧಗಳು ಮೊಬೈಲ್‌ನ ಪರದೆಯಿಂದ ಆಚೆ ಬಂದು ಪರಸ್ಪರ ಮುಖ ನೋಡಿಕೊಳ್ಳಲಾರಂಭಿಸಿವೆ.
ಎಲ್ಲ ಕೊರೊನಾ ಕೃಪೆ!

click me!