ಪ್ರತಿ ಗಂಡಸಿನ ಪಾಲಿಗೆ ತಂದೆಯಾಗುವುದು ಸಂಭ್ರಮದ ಕ್ಷಣ. ಆದರೆ ತಂದೆಯಾಗಿ ಮಕ್ಕಳನ್ನು ಬೆಳೆಸುವುದು ಸವಾಲಿನದು. ಮಗ ಹುಟ್ಟಿದ ಸಮಯಕ್ಕೆ ‘ತಂದೆ’ ಪದವಿ ಹುಟ್ಟುತ್ತದೆ. ಆದರೆ ಉತ್ತಮ ತಂದೆ ಹುಟ್ಟುತ್ತಾನಾ? ಅದು ಮುಖ್ಯ. ಒಬ್ಬ ಉತ್ತಮ ತಂದೆಯಾಗುವುದು ಹೇಗೆ? ಅನ್ನುವ ಲೇಖನಗಳನ್ನು ಓದಿಕೊಂಡು ಆಗುವ ಕ್ರಿಯೆಯಲ್ಲ ಅದು.
‘ಅದೆಂತದ್ದೋ ದಪ್ಪನಾಗಿ ನೀಲಿ ನೀಲಿ ಬಣ್ಣದಲ್ಲಿ ಬರುತ್ತಲ್ಲ ಅಂಥಾ ಪ್ಯಾಂಟು ನೀನೇಕೆ ಹಾಕಲ್ಲ? ನೀನು ಒಂದು ತಗೊಂಡು ಬಿಡು’ ಅಂತ ಅಪ್ಪ ಅಂದಿದ್ದರು. ನಾನಾಗ ಪದವಿ ತರಗತಿಯ ಮೂರನೇ ಬೆಂಚಿನಲ್ಲಿ ಕೂತು ಮೊದಲ ಡೆಸ್ಕಿನಲ್ಲಿ ಕೂತ ಆಶಾಳನ್ನು ಕಿರುಗಣ್ಣಿನಲ್ಲಿ ನೋಡುತ್ತಾ ಪಾಠ ಕೇಳಿಸಿಕೊಳ್ಳುತ್ತಿದ್ದೆ.
ಆಮೇಲೆ ನನ್ನ ಪಾಲಿಗೊಂದು ಜೀನ್ಸ್ ಕೂಡ ಬಂತು. ಅವತ್ತೊಂದಿನ ಸುಮ್ಮನೆ ಪುಸ್ತಕ ಹಿಡಿದು ಪೇಜುಗಳನ್ನು ತಿರುಗಿಸುತ್ತಾ ಕೂತಿದ್ದೆ. ‘ನನಗೂ ಹರೆಯ ಬಂದು ಹೋಗಿದೆ ಮಗಾ’ ಅಂದು ಎದ್ದು ಹೋಗಿದ್ದರು. ಅಪ್ಪನ ಆ ಮಾತು ಮನಸ್ಸಿನೊಳಗೆ ಇಳಿದ ಆ ಹೊತ್ತಿಗೆ ನಾನು ಓದನ್ನು ಸೀರಿಯಸ್ಸಾಗಿ ತೆಗೆದುಕೊಂಡಿದ್ದೆ.
undefined
ಜಗತ್ತು ನನ್ನನ್ನು ತೆಕ್ಕೆಗೆ ತೆಗೆದುಕೊಳ್ಳುವ ಹೊತ್ತಿಗೆ ಅಪ್ಪ ನಾನು ದಾಟಿ ಹೋಗಬಾರದ ಎಲ್ಲೆಗಳನ್ನು ತೋರಿಸಿಕೊಟ್ಟಿದ್ದರು. ಹಿಂದೆ ತಿರುಗಿ ನೋಡಿ ಅಪ್ಪ ಇಲ್ಲದೆ ಇರುವ ಹೊತ್ತಿನಲ್ಲಿ ದಾಟಿ ಬಿಡುವಂತಹ ವಿಚಿತ್ರ ಮನಸ್ಥಿತಿ ನನಗೆ ಬರಲೇ ಇಲ್ಲ. ಬರಲೇ ಇಲ್ಲ ಅನ್ನೋದಕ್ಕಿಂತ ಹಾಗೆ ಬರದಂತೆ ಅವರು ನೋಡಿಕೊಂಡಿದ್ದರು. ನಾನು ಚಿಕ್ಕವನಾಗಿದ್ದಾಗ ಅವರು ಹೇಳಿದ ಒಂದು ಸಣ್ಣ ಕಥೆ ಹಣದ ವಿಷಯದಲ್ಲಿ ಒಂದು ಅದ್ಭುತ ಶಿಸ್ತು ಕಲಿಸಿ ಬಿಟ್ಟಿದೆ.
ಅಲ್ಲೆಲ್ಲೋ ದೂರದ ಊರಿನಲ್ಲಿ ಅಪ್ಪನಂತಹ ಒಬ್ಬ ಬಡವ ಇದ್ದನಂತೆ. ಅವನು ತನ್ನ ಮಗನಿಗೆ ಪ್ರತಿ ಬಾರಿ ಹಣ ಮುಟ್ಟಿದಾಗಲು ಕೈ ತೊಳೆದುಕೊಳ್ಳಬೇಕು ಅಂತ ಹೇಳಿ ಕೊಟ್ಟಿದ್ದನಂತೆ. ಅದರಲ್ಲಿ ಸೂಕ್ಷ್ಮಾಣುಜೀವಿಗಳ ಇರುತ್ತವಲ್ಲ ಅದಕ್ಕಿರಬಹುದೇನೋ ಅಂತ ನಮ್ಮ ಮನಸ್ಸು ಲೆಕ್ಕ ಹಾಕಿರುತ್ತದೆ. ಹಣ ಎಂಬುದು ತುಂಬಾ ಗಲೀಜು ಅದು ಎಂತದ್ದನ್ನು ಕೂಡ ಹಾಳು ಮಾಡಿಬಿಡುತ್ತದೆ. ಅದರಿಂದ ಅದನ್ನು ಮುಟ್ಟಿದಾಗ ಕೈತೊಳೆದುಕೊಂಡು ಬಿಡಬೇಕು ಅಂತ ಆ ಬಡವ ಮಗನಿಗೆ ಹೇಳಿಕೊಟ್ಟಿದ್ದ.
ಅವನ ಮಗ ಮುಂದೆ ಬದುಕಿನಲ್ಲಿ ಅದ್ಭುತವಾಗಿ ಬೆಳೆಯುತ್ತಾನೆ. ಪ್ರತಿ ಬಾರಿ ಕೈಯಲ್ಲಿ ದುಡ್ಡು ಹಿಡಿದಾಗ ಅಪ್ಪ ಹೇಳಿದ ಆ ಕಥೆ ನೆನಪಾಗುತ್ತದೆ. ದುಡ್ಡಿನ ವ್ಯಾಮೋಹವೇ ಬೆಳೆಯಲಿಲ್ಲ. ವ್ಯಾಮೋಹ ಬರದೆ ಇದ್ದಿದ್ದರಿಂದೇನೊ ನಾನು ಲೈಫಿನಲ್ಲಿ ತುಂಬಾ ಖುಷಿಯಾಗಿದ್ದೇನೆ.. ಥ್ಯಾಂಕ್ಸ್ ಟು ಅಪ್ಪ.
‘ಒಂದು ಕಾಲದಲ್ಲಿ ನಿಮ್ಮಪ್ಪ ಅದೆಷ್ಟುಬೀಡಿ ಸೇದುತ್ತಿದ್ದರು ಗೊತ್ತಾ? ಊರೆಲ್ಲಾ ಹೇಳಿದರೂ ಬಿಡಲಿಲ್ಲ. ಈಗ ಬೀಡಿ ಕಂಡರೆ ಮೂರು ಮಾರು ದೂರ ಹೋಗ್ತಾನೆ’ ಅಂತಾರೆ ಜನ. ಅವ್ವನ ಕೇಳಿದ ಮೇಲೆ ಮೇಲೆ ಸತ್ಯ ಗೊತ್ತಾಗಿದ್ದು. ‘ಬೀಡಿ ಚಟ ವಿಪರೀತ ಆದರೆ ಮಗನ ಮುಂದೆ ಬೀಡಿ ಸೇದುವ ಸ್ಥಿತಿಯಲ್ಲಿ ಕಾಣಿಸಿಕೊಳ್ಳುವುದು ಅವರಿಗೆ ಇಷ್ಟವಿರಲಿಲ್ಲ.
ಕದ್ದುಮುಚ್ಚಿ ಸೇದುತ್ತಿದ್ದರು. ಒಂದಿನ ಹೀಗೆ ಕದ್ದು ಸೇದಿ ಮಗನಿಗೆ ಮೋಸ ಮಾಡುವುದಾ ಅಂತ ಯೋಚಿಸಿ ನಿಲ್ಲಿಸಿಬಿಟ್ಟರು’ ಅಂದಿದ್ದರು ಅವ್ವ. ಅಪ್ಪ ತೀರಾ ಬಡವ. ನನಗೆ ಬಡತನ ತಿಳಿಯಬಾರದೆಂದು ತೀರ ನಾಜೂಕು ಮಾಡಲಿಲ್ಲ. ಮನೆಯಲ್ಲಿನ ಬಡತನ ನನ್ನ ಅರಿವಿಗೂ ಬರುತ್ತಿತ್ತು. ನಾನು, ಅಪ್ಪ, ಅವ್ವ ಅದೊಂದಿನ ಕೇವಲ ಬೊಗಸೆಯಷ್ಟುಪುರಿ ತಿಂದು ನೀರು ಕುಡಿದು ಮಲಗಿದ್ದೆವು.
ಅವತ್ತು ಇದ್ದ ಪುರಿಯನ್ನು ಮೂವರು ಸಮನಾಗಿಯೇ ಹಂಚಿ ತಿಂದಿದ್ದೇವೆ. ತನ್ನ ಪಾಲಿನ ಪುರಿಯನ್ನು ಮಗನಿಗೆ ಇಟ್ಟು ತಾನು ಉಪವಾಸ ಮಲಗಲಿಲ್ಲ ಅಪ್ಪ. ಮಗನ ಪಾಲಿಗೆ ಸುಳ್ಳೇ ಹೀರೋ ಅನ್ನಿಸಿಕೊಳ್ಳುವುದು ಅಪ್ಪನಿಗೆ ಬೇಕಿರಲಿಲ್ಲ. ನಾಳೆ ದುಡಿಮೆಗೆ ಒಂದು ಪಾವು ತಾಕತ್ತಿಗೆ ಹೊಟ್ಟೆಗೆ ಬೇಕಿತ್ತಲ್ಲ!
ಪ್ರತಿ ಗಂಡಸಿನ ಪಾಲಿಗೆ ತಂದೆಯಾಗುವುದು ಸಂಭ್ರಮದ ಕ್ಷಣ. ಆದರೆ ತಂದೆಯಾಗಿ ಮಕ್ಕಳನ್ನು ಬೆಳೆಸುವುದು ಸವಾಲಿನದು. ಮಗ ಹುಟ್ಟಿದ ಸಮಯಕ್ಕೆ ‘ತಂದೆ’ ಪದವಿ ಹುಟ್ಟುತ್ತದೆ. ಆದರೆ ಉತ್ತಮ ತಂದೆ ಹುಟ್ಟುತ್ತಾನಾ? ಅದು ಮುಖ್ಯ. ಒಬ್ಬ ಉತ್ತಮ ತಂದೆಯಾಗುವುದು ಹೇಗೆ? ಅನ್ನುವ ಲೇಖನಗಳನ್ನು ಓದಿಕೊಂಡು ಆಗುವ ಕ್ರಿಯೆಯಲ್ಲ ಅದು.
ಇದೇ ವಿಚಾರವನ್ನು ಗೂಗಲಿಸಿ ನೋಡಿ. ಉತ್ತಮ ತಂದೆಯಾಗುವುದರ ಬಗ್ಗೆ ರಾಶಿಗಟ್ಟಲೆ ವಿಷಯಗಳು ಬಂದುಬೀಳುತ್ತವೆ. ಅಲ್ಲೆಲ್ಲಾ ನೀವು ಒಳ್ಳೆ ಗೆಳೆಯರಾಗಿ, ಟೀಚರ್ ಆಗಿ, ಮಾರ್ಗದರ್ಶಕರಾಗಿ ಅಂತ ಹೇಳಿರುತ್ತವೆ. ಆದರೆ ನೀವು ಬರೀ ತಂದೆಯಾಗಿ ಅಂತ ಹೇಳುವ ವಿಚಾರಗಳು ಸಿಗುವುದಿಲ್ಲ.
ಮೊದಲು ತಂದೆಯಾಗದ ಹೊರತು ಮಕ್ಕಳನ್ನು ಬೆಳೆಸುವುದು ಅಸಾಧ್ಯವೇ ಸರಿ. ಶಾಲೆಯ ಮೆಟ್ಟಿಲನ್ನೇ ಹತ್ತದ ನನ್ನಪ್ಪ ನನಗೆಂದು ಗೆಳೆಯನಾಗಲಿಲ್ಲ. ಅದೇ ಅವರು ನನಗೆ ಮಾಡಿದ ಉಪಕಾರ. ನನ್ನ ಪಾಲಿಗೆ ಅದ್ಭುತ ತಂದೆಯಾಗಿ ಬಿಟ್ಟರು.
ಮೊದಲೇ ಹೇಳಿದಂತೆ ಜಗತ್ತಿನ ತೆಕ್ಕೆಗೆ ಒಪ್ಪಿಸುವ ಹತ್ತು-ಹದಿನೈದು ವರ್ಷಗಳಲ್ಲಿ ಅಪ್ಪ ನನಗೆ ಅಪ್ಪನಾಗಿ ನನ್ನ ಎದೆಯೊಳಗೆ ಒಂದಷ್ಟುಬೀಜಗಳನ್ನು ಹಾಕಿದ್ದರು. ಬೆಳಗ್ಗೆ ಎದ್ದ ತಕ್ಷಣ ನೆಲಕ್ಕೆ ನಮಸ್ಕಾರ ಮಾಡಬೇಕಿತ್ತು. ಇವತ್ತಿಗೂ ಮಣ್ಣಿನ ಬಗ್ಗೆ ನನಗೆ ಪೂಜ್ಯ ಭಾವನೆ ಇದೆ. ಸೊಂಟಕ್ಕೆ ಹಗ್ಗ ಬಿಗಿದು ತೀರ ಆಳವಿಲ್ಲದ ನೀರಿಗೆ ತಳ್ಳುತ್ತಿದ್ದರು. ಈಜು ಬಂತು; ಬದುಕಿಗೊಂದು ಧೈರ್ಯವೂ ಬಂತು.
ಶಾಲೆಯಿಂದ ಕಲ್ಲಿನ ಪಾಟಿ ಒಡೆದುಕೊಂಡು ಬಂದಾಗ ಹೊಸ ಪಾಟಿ ಕೊಳ್ಳಲು ಹಣವಿಲ್ಲ ಅಂತ ಒಂದು ವಾರ ಪಾಟಿ ಇಲ್ಲದೆ ಶಾಲೆಗೆ ಕಳುಹಿಸಿದ್ದರು. ಅಂದಿನಿಂದ ಇಂದಿನವರೆಗೂ ನನ್ನ ವಸ್ತುಗಳನ್ನು ಹೇಗೆ ಜೋಪಾನ ಮಾಡಿಕೊಳ್ಳಬೇಕೆಂದು ಕಲಿತೆ. ಮುದ್ದು ಮಾಡಬೇಕು, ಕೋಪ ಮಾಡಿಕೊಳ್ಳಬೇಕು, ಶಿಸ್ತು ಹೇರಬೇಕು, ವಿಚಿತ್ರ ಹಿಂಸೆ ಕೊಟ್ಟು ಕಲಿಸಬೇಕು ಅದೇನು ಇರಲಿಲ್ಲ. ತಾನು ನಡೆದಂತೆ ಅವರು ನನಗೆ ಹಿಂಬಾಲಿಸುವಂತೆ ಹೇಳಿದ ಹಾಗಿತ್ತು.
ಇವತ್ತಿಗೂ ಕೂಡ ನಾನು ಅಪ್ಪನ ಪಕ್ಕ ಕೂತು ಮಾತನಾಡಿದ್ದು ಕಡಿಮೆ. ಎಲ್ಲವನ್ನು ಅಪ್ಪನ ಮುಂದಿಟ್ಟು ಇದೇನು ಮಾಡ್ಲಿ ಅನ್ನುವುದಿಲ್ಲ. ಅಂದು ಅಪ್ಪ ಎದೆಯಲ್ಲಿ ಹಾಕಿದ ಬೀಜಗಳು ಫಲ ಕೊಟ್ಟು ಕೈಹಿಡಿದಿವೆ. ಪೋಷಕರು ಗೆಳೆಯರಂತೆ ಇಲ್ಲದಿದ್ದರೆ ಮಕ್ಕಳು ಕೆಟ್ಟು ಹೋಗ್ತಾರೆ ಅನ್ನುವುದು ಸುಳ್ಳು ಆದರೆ ಆದರೆ ಅವರು ಅಪ್ಪ ಅಪ್ಪನಂತಿಲ್ಲ ಅಂದರೆ ಮಾತ್ರ ಮಕ್ಕಳು ಯಾವ-ಯಾವುದೋ ದಾರಿಯಲ್ಲಿ ನಡೆದು ಬಿಡಬಹುದು.
ನಾನು ನನ್ನ ಮಗನಿಗೆ ‘ಅಪ್ಪ’ ಅನ್ನುವ ಫೀಲ್ ಇದೆಯಲ್ಲ, ಅವನಲ್ಲಿ ಒಂದು ಜವಾಬ್ದಾರಿ ತರುತ್ತದೆ. ಅಪ್ಪ ಬೀಡಿಯನ್ನು ತೆಗೆದು ಎಸೆದಿದ್ದು ಇದೇ ಕಾರಣಕ್ಕೆ. ಮಕ್ಕಳು ನನ್ನ ಗೆಳೆಯರಂತೆ ಅಂದುಕೊಂಡರೆ ನೀವು ಮಾಡಿಕೊಳ್ಳುವ ಎಡವಟ್ಟುಗಳನ್ನು ಅದೇ ನಿಮ್ಮ ಗೆಳೆಯ ಮನಸ್ಸು ಸಮರ್ಥಿಸಿಕೊಳ್ಳುತ್ತದೆ. ಮಕ್ಕಳೊಂದಿಗೆ ಒಂದು ಸಲುಗೆ ಇರಲಿ ಆದರೆ ಗೊತ್ತುಗುರಿಯಿಲ್ಲದ ಸಲುಗೆ (ಬಿಡು ನಾವು ಫ್ರೆಂಡ್ಸ್ ಅನ್ನುವ ಭಾವವೇ ವಿಚಿತ್ರ ಸಲುಗೆ ಸೃಷ್ಟಿಸುತ್ತದೆ) ನೀವು ಹಾಕಿಕೊಟ್ಟಎಲ್ಲೆಯನ್ನು ದಾಟಲು ಕುಮ್ಮಕ್ಕು ನೀಡಬಹುದು.
ಬದುಕಿನಲ್ಲಿ ಗೆಳೆತನ ನಿರ್ವಹಿಸುವ ಜವಾಬ್ದಾರಿಗಳು ಬೇರೆ ಇವೆ. ಆದರೆ ಅದನ್ನು ತಂದೆಯಲ್ಲಿ ಹುಡುಕಬಾರದು. ತಂದೆಯಲ್ಲಿ ತಂದೆ ಮಾತ್ರ ಇರಲಿ. ನಾವು ಅವರನ್ನು ಕಂಡುಕೊಳ್ಳಬೇಕು. ಗಲ್ಲಿಗೊಬ್ಬ ಗೆಳೆಯರು ಸಿಗುತ್ತಾರೆ ಆದರೆ ಇಡೀ ಲೈಫಿಗೆ ಒಬ್ಬರೇ ಅಪ್ಪ, ಅದೊಂದೇ ಬಂಧ. ನಮಗೂ ಅಪ್ಪನಲ್ಲಿ ಅಪ್ಪ ಬೇಕು ಗೆಳೆಯನಲ್ಲ. ಅಪ್ಪ ಪೂರ್ಣ ಗೆಳೆಯನೇ ಆಗಿಬಿಟ್ಟರೆ ಅಪ್ಪನನ್ನು ಎಲ್ಲಿ ಹುಡುಕುವುದು?
ಇತ್ತೀಚಿನ ಸಿನಿಮಾಗಳಲ್ಲಿ ಅಪ್ಪ ಮಕ್ಕಳು ಒಟ್ಟಿಗೆ ಕೂತು ಗುಂಡು ಹಾಕುವುದು, ಇಟ್ಟುಕೊಂಡು ಪ್ರೀತಿಗಳ ಬಗ್ಗೆ ಮಾತನಾಡಿಕೊಳ್ಳುವುದು, ಹೋಗೋ ಬಾರೋ ಅನ್ನುವುದರಿಂದ ಆ ಸಂಬಂಧದಲ್ಲಿ ತಂದೆ ಮಗ ಇದ್ದಾರೆಯೆ? ಅನಿಸುತ್ತದೆ. ನೋಡು ಅವರಿಬ್ಬರು ಅಪ್ಪಮಗ ಅನ್ನುವ ಹಾಗಿಯೇ ಇಲ್ಲ, ಕ್ಲೋಸ್ ಫ್ರೆಂಡ್ಸ್ ತರಹ ಇದ್ದಾರೆ ಅಂತಾರೆ.
ಬೇಡ ಅಲ್ಲಿ ಅಪ್ಪ-ಮಗನೆ ಇರಬೇಕು. ಆ ಮಟ್ಟಿಗೆ ಕ್ಲೋಸ್ ಆಗಿರಲಿಕ್ಕೆ ಜಗತ್ತಿನಲ್ಲಿ ಗೆಳೆಯರೆನಿಸಿಕೊಂಡವರು ತುಂಬಾ ಜನ ಇದ್ದಾರೆ. ತಂದೆ ತೀರ ಹಟಕ್ಕೆ ಬಿದ್ದು ಮಕ್ಕಳೊಂದಿಗೆ ಗೆಳೆಯರಾಗಬೇಕು ಅಂದುಕೊಳ್ಳುವುದು ಬೇಡ. ಅವರ ಪಾಲಿಗೆ ನಾನೆಷ್ಟುಅಪ್ಪ ಅಂತ ಕೇಳಿಕೊಂಡರೆ ಸಾಕು.
ತೀರ ಹರೆಯ ಬಂದಾಗ ಮಕ್ಕಳೊಂದಿಗೆ ಅಪ್ಪ ಅಮ್ಮ ಗೆಳೆಯರಾಗ ಬೇಕು ಅನ್ನುತ್ತವೆ ಪೇರೆಂಟಿಂಗ್ ಸಲಹೆಗಳು. ನೋ ಹಾಗೆ ಅಂದುಕೊಳ್ಳಬಾರದು. ಪೋಷಕರ ಜೇಬಿನಲ್ಲಿ ಗೆಳೆತನದ ಸೋಂಕಿಲ್ಲದೆ ಅವರನ್ನು ಸಂಭಾಳಿಸುವ ಅನೇಕ ವರ್ಷನ್ ಗಳಿವೆ. ಅದನ್ನು ಬಳಸಿದರೆ ಸಾಕು. ಗೆಳೆಯರಾಗಿ ಬಿಡ್ತೀವಿ ಅಂತ ಕೂತಾಗ ಮಕ್ಕಳು ಕೂಡ ಅದನ್ನು ಮತ್ಹೇಗೊ ತೆಗೆದುಕೊಂಡು ಬಿಡಬಹುದು.
ಪಕ್ಕದಲ್ಲಿ ಕೂತು ಬೈಟು ಕಾಫಿ ಕುಡಿಯುತ್ತ ಗೆಳೆತನದ ಸಲಿಗೆ ತಂದುಕೊಡುವ ಕೇರ್‌ಲೆಸ್ ಇಲ್ಲದಕ್ಕೊ ಏನೋ ಅಪ್ಪ ಅಪ್ಪನಾಗಿ ನನ್ನೊಳಗೆ ಇಳಿದರು ಮತ್ತು ನನ್ನನ್ನು ಬೆಳೆಸಿದರು. ಸಂಬಂಧವೊಂದು ಮಲ್ಟಿಕ್ಯಾರೆಕ್ಟರ್ ಆಗಿ ವರ್ತಿಸಿದಾಗ ಮೂಲ ಪಾತ್ರ ಮಸುಕಾಗಿ ಬಿಡುವ ಅಪಾಯವಿದೆ.
ಅಪ್ಪ,
ನನ್ನ ಪಾಲಿಗೆ ಅದ್ಭುತ ಗೆಳೆಯರಿದ್ದಾರೆ, ಅಲ್ಲಿ ಎಲ್ಲೂ ನೀವು ಕಾಣಿಸುವುದಿಲ್ಲ. ಹಾಗೆಯೇ ನನ್ನ ಪಾಲಿಗೆ ನೀವಿದ್ದೀರಿ, ನೀವೊಬ್ಬ ಬೆಸ್ಟ್ ಅಪ್ಪ. ಅಲ್ಲದೆ ಅಲ್ಲಿ ಗೆಳೆಯ ಕಾಣಿಸಿಕೊಳ್ಳುವುದನ್ನು ನಾನು ಬಯಸುವುದಿಲ್ಲ. ನನಗೆ ಏನೇನು ಬೇಕು ಅನ್ನುವುದನ್ನು ನೀವು ಅರಿತು ಕೊಡುತ್ತಾ ಹೋದ್ರಿ, ನಾನು ಪಡೆಯುತ್ತಾ ಹೋದೆ. ಒಳ್ಳೆಯ ಅಪ್ಪನಿಗೆ ನಾನು ಒಳ್ಳೆಯ ಮಗನಾದೇನಾ? ಅದನ್ನು ನೀವು ಹೇಳಬೇಕು. ಅಂದಹಾಗೆ ಎರಡನೇ ಕ್ಲಾಸಿನಲ್ಲಿ ಮುರಿದು ಹಾಕಿದ ಕಲ್ಲಿನ ಪಾಟಿಯನ್ನು ಅದರ ತುಣುಕಿನ ಸಮೇತ ಇಟ್ಟುಕೊಂಡಿದ್ದೀರಿ ತಾನೆ? ಥ್ಯಾಂಕ್ಸ್ ಅಪ್ಪ, ನೀವು ನನಗೆ ಗೆಳೆಯನಾಗಲಿಲ್ಲ. ಅದ್ಭುತ ಅಪ್ಪನಾದಿರಿ.
- ಸದಾಶಿವ ಸೊರಟೂರು