17 ಹೆಂಡ್ತಿರು ಮತ್ತು 90 ಮಕ್ಕಳ ತಂದೆಯಾಗಿರುವ ಯುಎಇಯ ವ್ಯಕ್ತಿಯೊಬ್ಬರು ಒಬ್ಬಳೇ ಹೆಂಡತಿಯಿರುವ ಅಮೆರಿಕನ್ ವ್ಯಕ್ತಿಯನ್ನು ನೋಡಿ ನಗುತ್ತಿರುವ ವಿಡಿಯೋ ವೈರಲ್ ಆಗಿದೆ.
17 ಹೆಂಡಿರು ಹಾಗೂ 90 ಮಕ್ಕಳ ಕಾರಣದಿಂದ ಯುಎಇಯ ಸೂಪರ್ ಡ್ಯಾಡ್ ಎಂದೇ ಫೇಮಸ್ ಆಗಿರುವ ಅಲ್ ಬಲುಶಿ ಕೇವಲ ಒಂದು ಹೆಂಡ್ತಿ ಹೊಂದಿರುವ ಅಮೆರಿಕನ್ ವ್ಯಕ್ತಿಯನ್ನು ಲೇವಡಿ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರ ಗಮನ ಸೆಳೆದಿದೆ. ಹಿಸ್ಟಾರಿಕ್ ವಿಡ್ಸ್ (@historyinmemes)ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. 17 ಹೆಂಡಿರನ್ನು ಹೊಂದಿರುವ ಅರಬ್ ವ್ಯಕ್ತಿ, ಒಂದು ಹೆಂಡ್ತಿ ಹೊಂದಿರುವ ಅಮೆರಿಕನ್ ವ್ಯಕ್ತಿಯನ್ನು ನೋಡಿ ನಗುತ್ತಿದ್ದಾನೆ ಎಂದು ಕ್ಯಾಪ್ಷನ್ ನೀಡಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಪೋಸ್ಟ್ ವೈರಲ್ ಆಗಿದ್ದು, ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ನೀಲಿ ಬಣ್ಣದ ಶರ್ಟ್ ಧರಿಸಿರುವ ಅಮೆರಿಕನ್ ವ್ಯಕ್ತಿಯೊಬ್ಬರು, ತಲೆಗೆ ಬಿಳಿ ಬಣ್ಣದ ಶಿರವಸ್ತ್ರ ಧರಿಸಿರುವ ಅಲ್ ಬಲುಶಿ ಬಳಿ ನಿಮಗೆಷ್ಟು ಮಕ್ಕಳು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆತ 84 ಎಂದು ಉತ್ತರಿಸಿದ್ದಾರೆ. ಇದರಿಂದ ಅಚ್ಚರಿಗೊಳಗಾದ ಅಮೆರಿಕನ್ ವ್ಯಕ್ತಿ ಅವರಿಗೆ ಕಂಗ್ರಾಜ್ಯುಲೇಷನ್ಸ್ ಎಂದಿದ್ದು, ಮುಂದುವರೆದು ನಿಮಗೆಷ್ಟು ಹೆಂಡ್ತಿರು ಎಂದು ಕೇಳಿದ್ದಾನೆ. ಅದಕ್ಕೆ ಅಲ್ ಬಲುಶಿ 17 ಎಂದು ಉತ್ತರಿಸಿದ್ದಾರೆ. ಈ ವೇಳೆ ಹೋ ಇಷ್ಟೊಂದು ಜಾಸ್ತಿ ಜನ ಹೆಂಡಿರ ಎಂದು ಅಮೆರಿಕನ್ ವ್ಯಕ್ತಿ ಹೇಳುತ್ತಾನೆ. ಅಲ್ಲದೇ ನನಗೆ ಬರೀ ಒಂದೇ ಹೆಂಡ್ತಿ ಎಂದು ಆ ನೀಲಿ ಶರ್ಟ್ ಧರಿಸಿದ್ದ ಅಮೆರಿಕನ್ ವ್ಯಕ್ತಿ ಹೇಳಿದ್ದು, ಇದಕ್ಕೆ ಆತ ಜೋರಾಗಿ ನಕ್ಕು ವ್ಯಂಗ್ಯವಾಡಿದ್ದಾನೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಈ 17 ಹೆಂಡಿರ ಪತಿಯಾಗಿರುವ ಅಲ್ ಬಲುಶಿ, ಯುಎಇಯ ಸೂಪರ್ ಡ್ಯಾಡ್ ತಾನು ಎಂದು ಹೇಳಿಕೊಂಡಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರು ದಾದ್ ಮೊಹಮ್ಮದ್ ಅಲ್ ಬಲುಶಿ ಅಮೆರಿಕನ್ ವ್ಯಕ್ತಿಗೆ ಲೇವಡಿ ಮಾಡಿದ್ದನ್ನು ಖಂಡಿಸಿದ್ದಾರೆ. ಅಲ್ಲದೇ ಇದು ಬಹುಪತ್ನಿತ್ವ ಪದ್ಧತಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಮಿರೇಟ್ಸ್ 24/7 ಪ್ರಕಾರ, ಅಲ್ ಬಲುಶಿ, ಇಸ್ಲಾಮಿಕ್ ರಾಷ್ಟ್ರ ಯುಎಇಯ ಸೂಪರ್ ಡ್ಯಾಡ್ ಎಂದು ಗುರುತಿಸಿಕೊಂಡಿದ್ದು, ಪ್ರಸ್ತುತ 90 ಮಕ್ಕಳನ್ನು ಹೊಂದಿದ್ದು, ಈತನಿಗೆ 17 ಹೆಂಡ್ತಿಯರಿದ್ದಾರೆ. ಈತ ತನ್ನನ್ನು ಜಾಗತಿಕ ತಂದೆ ಎಂದು ಕರೆದುಕೊಳ್ಳುತ್ತಿದ್ದು, ಈತನ ಪತ್ನಿಯರು ಬೇರೆ ಬೇರೆ ದೇಶಗಳಿಗೆ ಸೇರಿದ್ದಾರಂತೆ. ಮೊರಾಕ್ಕೊ ಫಿಲಿಫೈನ್ಸ್ ಸೇರಿದಂತೆ ಹಲವು ದೇಶಗಳ ಪತ್ನಿಯರನ್ನು ಆತ ಹೊಂದಿದ್ದಾನೆ. ಪ್ರತಿ ಪತ್ನಿಯೂ ಪ್ರತ್ಯೇಕವಾದ ಮನೆಯನ್ನು ಹೊಂದಿದ್ದು, ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸ ಮಾಡುತ್ತಾಳೆ. ಪ್ರತಿ ಮನೆಯೂ ಐಷಾರಾಮಿ ವ್ಯವಸ್ಥೆ, ಕಾರು ಕೆಲಸದಾಳುಗಳನ್ನು ಹೊಂದಿದೆ. ಪ್ರಸ್ತುತ ನನಗೆ 17 ಮಕ್ಕಳಿದ್ದಾರೆ ಹಾಗೂ 17 ಕುಟುಂಬ ಇದೆ. ಎಲ್ಲರೂ ನನ್ನ ಕಾಳಜಿಯ ಕೆಳಗೆ ವಾಸ ಮಾಡುತ್ತಾರೆ ಪ್ರಸ್ತುತ 90 ಮಕ್ಕಳಿದ್ದು, ಅವರಲ್ಲಿ 60 ಜನ ಗಂಡು ಮಕ್ಕಳು ಹಾಗೂ 30 ಜನ ಹೆಣ್ಣು ಮಕ್ಕಳಾಗಿದ್ದಾರೆ ಎಂದು ಆತ ಹೇಳಿದ್ದಾಗಿ ಎಮಿರೇಟ್ಸ್ 24/7 ವರದಿ ಮಾಡಿದೆ.
Arab man with 17 wives laughing at American man with one wife😂 pic.twitter.com/08jwNO7InQ
— Historic Vids (@historyinmemes)