ಶೇರೆಂಟಿಂಗ್: ಮಕ್ಕಳ ವಿಷಯದಲ್ಲಿ ಈ ತಪ್ಪು ಮಾಡಲೇಬೇಡಿ!

By Suvarna NewsFirst Published Dec 20, 2019, 3:06 PM IST
Highlights

ಮಕ್ಕಳ ಕುರಿತ ಎಲ್ಲವನ್ನೂ ಸೋಷ್ಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದರಿಂದ ಯಾವ ಸಮಯದಲ್ಲಿ ಮಕ್ಕಳು ಎಲ್ಲಿರುತ್ತಾರೆ, ಅವರ ಶಾಲೆ ಯಾವುದು, ಹುಟ್ಟಿದ ದಿನ ಯಾವುದು, ಅವರ ಇಷ್ಟಕಷ್ಟಗಳೇನು ಎಲ್ಲವನ್ನೂ ಪರಿಚಿತರ ಜೊತೆ ಅಪರಿಚಿತರೂ ತಿಳಿದುಕೊಳ್ಳಬಹುದು. ಈ ಖಾಸಗಿ ವಿಷಯಗಳನ್ನು ಅವರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು.

ಹೆಲಿಕಾಪ್ಟರ್ ಪೇರೆಂಟಿಂಗ್,  ಟೈಗರ್ ಪೇರೆಂಟಿಂಗ್, ಅಥಾರಿಟೇರಿಯನ್ ಪೇರೆಂಟಿಂಗ್ ಎಂದು ಹಲವಾರು ರೀತಿಯ ಪೇರೆಂಟಿಂಗ್ ಶೈಲಿಗಳಿವೆ. ಪ್ರತಿಯೊಂದಕ್ಕೂ ಅದರದೇ ಆದ ಪ್ಲಸ್ಸು ಮೈನಸ್ಸುಗಳಿವೆ. ಈಗ ಇನ್ನೊಂದು ಹೊಸ ಪೇರೆಂಟಿಂಗ್ ಬಗ್ಗೆ ಹೇಳುತ್ತೇವೆ ನೋಡಿ, ಅದೇ ಶೇರೆಂಟಿಂಗ್. 

ಏನಿದು ಶೇರೆಂಟಿಂಗ್?

ಪ್ರತಿ ಪೋಷಕರಿಗೂ ತಮ್ಮ ಮಕ್ಕಳು ಉಳಿದೆಲ್ಲರಿಗಿಂಥ ಸ್ಪೆಶಲ್ ಎಂಬ ಫೀಲಿಂಗ್ ಇದ್ದೇ ಇರುತ್ತದೆ. ಅದರಲ್ಲೂ ಈಗಿನ ಪೋಷಕರು ಮಕ್ಕಳಿಗೆ ಕೇಳಿದ್ದೆಲ್ಲ ಕೊಡಿಸುತ್ತಾರೆ, ಹಾಡು, ನೃತ್ಯ, ಈಜು ಎಂದು ಎಲ್ಲ ತರಗತಿಗಳಿಗೂ ಕಳಿಸಿ ಕಲಿಸುತ್ತಾರೆ, ಮಕ್ಕಳನ್ನು ವಿಶೇಷವಾಗಿಸಬೇಕು ಎಂದು ಸಾಕಷ್ಟು ಪ್ರಯತ್ನಿಸುತ್ತಾರೆ. ತಾವು ಬಾಲ್ಯದಲ್ಲಿದ್ದಾಗ ಎಲ್ಲೋ ಮಣ್ಣಾಡುತ್ತಾ ಕಳೆದಿದ್ದೆವು. ಈಗ ಅದೇ ವಯಸ್ಸಿನ ತಮ್ಮ ಮಕ್ಕಳು ದೊಡ್ಡದೇನೋ ಮಾತನಾಡಿದಾಗ, ಹಾಡಿದಾಗ, ಅಥವಾ ಮತ್ತೇನೋ ಮಾಡಿದಾಗ ಅವರು ತಮ್ಮ ವಯಸ್ಸಿಗಿಂತ ಬಹಳ ಮುಂದಿದ್ದಾರೆ ಎನಿಸದಿರದು. ಈಗ ತಮ್ಮ ಈ ಖುಷಿಯನ್ನು ಎಲ್ಲರಿಗೂ ಹಂಚಿಕೊಳ್ಳಬೇಕಲ್ಲ...

ಮಕ್ಕಳಿಗೆ ಕತೆ ಹೇಳೋದ್ರಿಂದ ಏನೆಲ್ಲ ಲಾಭ ಗೊತ್ತಾ?

ಅದಕ್ಕಾಗಿ ಇಂದು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ಸೇರಿದಂತೆ ಸಾಕಷ್ಟು ಮಾಧ್ಯಮಗಳಿವೆ. ಇಲ್ಲೆಲ್ಲ ಅವರು ತಮ್ಮ ಮಕ್ಕಳ ಫೋಟೋಗಳು, ವಿಡಿಯೋಗಳು, ಸಾಧನೆಗಳನ್ನು ಬೇಕಾಬಿಟ್ಟಿ ಹಂಚಿಕೊಂಡು ಬಂದ ಲೈಕ್‌ಗಳಿಂದ ತೃಪ್ತರಾಗುತ್ತಾರೆ. ಆದರೆ, ಈ ಖುಷಿಯಲ್ಲಿ ತಾವು ತಮ್ಮ ಮಕ್ಕಳ ಆನ್‌ಲೈನ್ ಪ್ರೈವೆಸಿಯೊಂದಿಗೆ ಸುರಕ್ಷತೆಯನ್ನು ಕೂಡಾ ಹರಾಜಿಗಿಡುತ್ತಿದ್ದೇವೆ ಎಂಬುದನ್ನು ಮರೆಯುತ್ತಿದ್ದಾರೆ. 

ಹೀಗೆ ಮಕ್ಕಳ ಫೋಟೋಗಳಿಂದ ಹಿಡಿದು ಅವರಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ಶೇರ್ ಮಾಡಿಕೊಳ್ಳುವುದೇ ಶೇರೆಂಟಿಂಗ್. 

ಆನ್‌ಲೈನ್ ಜೀವನ

ಇಂದಿನ ತಲೆಮಾರಿನಷ್ಟು ತಮ್ಮ ಹಾಗೂ ತಮ್ಮ ಮಕ್ಕಳ ವಿಷಯಗಳನ್ನು ಆನ್‌ಲೈನ್ ದುನಿಯಾಗೆ ಬಿಟ್ಟ ಬೇರೆ ಉದಾಹರಣೆಗಳಿಲ್ಲ. ಇಂದಿನವರಿಗೆ ಆನ್‌ಲೈನೇ ಜೀವನವಾಗಿದೆ. ಚಾಟಿಂಗ್, ಮೀಟಿಂಗ್, ಶಾಪಿಂಗ್, ಎಂಟರ್ಟೇನ್‌ಮೆಂಟ್, ಬ್ಯಾಂಕಿಂಗ್, ಹೋಟೆಲ್ ಇತ್ಯಾದಿಗಳೆಲ್ಲವೂ ಆನ್‌ಲೈನ್‌ನಲ್ಲೇ ಆಗಿವೆ. ಹೊಸ ಹೊಸ ತಂತ್ರಜ್ಞಾನಗಳು ಬಂದಂತೆಲ್ಲ ಅದರೊಂದಿಗೆ ನಮ್ಮ ಬದುಕೂ ಬದಲಾಗುತ್ತದೆ. ಆದರೆ, ಹೇಗೆ ಬದಲಾಗುತ್ತದೆ, ಅದರ ಪಾಸಿಟಿವ್ ವಿಷಯಗಳೇನು, ನೆಗೆಟಿವ್ ಮುಖ ಯಾವುದು ಎಂಬುದರ ಅರಿವು ನಮಗಿರಬೇಕು. 

ಮಗುವಿನ ಅಳುವಿಗೇನು ಕಾರಣ?

ಶೇರೆಂಟಿಂಗ್ ಸುರಕ್ಷತೆಗೆ ಧಕ್ಕೆ ತರುತ್ತದೆ?

ಹೀಗೆ ಮಕ್ಕಳ ಕುರಿತ ಎಲ್ಲವನ್ನೂ ಹಂಚಿಕೊಳ್ಳುವುದರಿಂದ ಯಾವ ಸಮಯದಲ್ಲಿ ಮಕ್ಕಳು ಎಲ್ಲಿರುತ್ತಾರೆ, ಅವರ ಶಾಲೆ ಯಾವುದು, ಹುಟ್ಟಿದ ದಿನ ಯಾವುದು, ಅವರ ಇಷ್ಟಕಷ್ಟಗಳೇನು ಎಲ್ಲವನ್ನೂ ಪರಿಚಿತರ ಜೊತೆ ಅಪರಿಚಿತರೂ ತಿಳಿದುಕೊಳ್ಳಬಹುದು. ಈ ಖಾಸಗಿ ವಿಷಯಗಳನ್ನು ಅವರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಉದಾಹರಣೆಗೆ ಮಕ್ಕಳನ್ನು ಕಿಡ್ನಾಪ್ ಮಾಡುವವರು ಈ ವಿಷಯ ಸಂಗ್ರಹಿಸಿ  ಮಗುವಿನ ಶಾಲೆಯ ಬಳಿ ಹೋಗಿ ಅದರ ತಂದೆತಾಯಿಯ ಹೆಸರು ಹೇಳಿ, ಮಕ್ಕಳ ಆಸಕ್ತಿಗಳ ಬಗ್ಗೆ ಮಾತನಾಡಿ ತಾನು ಅವರಿಗೆ ಬಹಳ ಹತ್ತಿರದವನೆಂದು ತೋರಿಸಿಕೊಂಡು ಅನಾಯಾಸವಾಗಿ ಮಗುವನ್ನು ಕರೆದುಕೊಂಡು ಹೋಗಬಹುದು. 

ನೀವು ಮುಗ್ಧ ಮಕ್ಕಳ ಸಾಮಾನ್ಯ ಫೋಟೋವನ್ನೇ ಶೇರ್ ಮಾಡಿದರೂ ಸೈಬರ್ ವಂಚಕರು ಆ ಫೋಟೋಗಳನ್ನು ಫೋಟೋಶಾಪ್ ಮಾಡಿ ಲೈಂಗಿಕ ವೆಬ್‌ಸೈಟ್‌ಗಳಲ್ಲಿ ಬಳಸಿಕೊಳ್ಳಬಹುದು. 
ನೀವು ಮಕ್ಕಳ ಬಗ್ಗೆ ಶೇರ್ ಮಾಡಿದ ವಿಷಯಗಳೆಲ್ಲ ಡಿಜಿಟಲ್ ದುನಿಯಾದಲ್ಲಿ ಅಚ್ಚಾಗಿ ಕುಳಿತುಬಿಡುತ್ತವೆ. ಮುಂದೆ ನಿಮ್ಮ ಮಕ್ಕಳು ಇನ್ನು 20 ವರ್ಷ ಬಿಟ್ಟು ಉದ್ಯೋಗಕ್ಕೆ ಸೇರಿಕೊಳ್ಳುವಾಗ ಸಂದರ್ಶಕರು ಅವರ ಸೋಷ್ಯಲ್ ಮೀಡಿಯಾ ವ್ಯಕ್ತಿತ್ವವನ್ನು ಬಾಲ್ಯದಿಂದಲೇ ಅಳೆಯಬಹುದು. 

ಇನ್ನು ನಿಮ್ಮ ಮಕ್ಕಳಿಗೆ ಈ ರೀತಿ ತಮ್ಮ ಬಗ್ಗೆ ಸೋಷ್ಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದು ಇಷ್ಟವಾಗುತ್ತದೋ ಇಲ್ಲವೋ ಬಲ್ಲವರಾರು? ಒಂದು ವೇಳೆ ಈ ಬಗ್ಗೆ ಅವರ ತಕರಾರಿಲ್ಲದಿದ್ದರೂ ಕಡಿಮೆ ಲೈಕ್ಸ್ ಬಂದವೆಂದು ಕೀಳರಿಮೆ ಬೆಳೆಸಿಕೊಳ್ಳುವ, ಹೆಚ್ಚು ಲೈಕ್ಸ್ ಬಂದವೆಂದು ಮೇಲರಿಮೆ ಬೆಳೆಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇದರೊಂದಿಗೆ ಅವಕ್ಕೆ ಬರುವ ಕಾಮೆಂಟ್‌ಗಳು ಪೋಷಕರದಷ್ಟೇ ಅಲ್ಲ, ಮಕ್ಕಳ ಮನಸ್ಸಿನ ಮೇಲೂ ಪರಿಣಾಮ ಬೀರುತ್ತವೆ. ಈ ಶೇರೆಂಟಿಂಗ್ ಎಂಬುದು ಮಕ್ಕಳ ಭಾವನೆಗಳ ಜೊತೆ ಹೇಗೆ ಬೇಕಾದರೂ ಆಡಬಹುದು. 
ಇವೆಲ್ಲದರೊಂದಿಗೆ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲವನ್ನೂ ಹಂಚಿಕೊಳ್ಳುವುದು ನಿಮಗೆ ಅಡಿಕ್ಷನ್ ಆಗಿ ಅಂಟುತ್ತದೆ. 

click me!