ಮರುಮದುವೆಯಾಗಬೇಕೇ, ಬೇಡವೇ ಎನ್ನುವುದು ಅವರವರ ಮನಸ್ಸಿಗೆ ಸಂಬಂಧಿಸಿದ ವಿಚಾರ. ಆದರೆ, ಮದುವೆಗೂ ಮುನ್ನ ಒಂದಿಷ್ಟು ವಿಚಾರಗಳ ಬಗ್ಗೆ ವಿಮರ್ಶಿಸುವುದು ಅತ್ಯಗತ್ಯ. ಇಲ್ಲವಾದರೆ ಎರನೇಯ ವೈವಾಹಿಕ ಜೀವನವೂ ಕಹಿ ಅನುಭಗಳ ಮೂಟೆಯಾದೀತು, ಎಚ್ಚರ.!
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಇದು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ, ಭೂಮಿ ಮೇಲೆ ನಡೆಯುವ ಎಲ್ಲ ಮದುವೆಗಳು ಸುಖ ದಾಂಪತ್ಯಕ್ಕೆ ನಾಂದಿ ಹಾಡುವುದಿಲ್ಲ ಎಂಬುದಂತೂ ನಿಜ. ಈ ಜನ್ಮಕ್ಕೆ ಒಂದೇ ಮದುವೆ ಎಂದು ತಾಳಿ ಕಟ್ಟಿಸಿಕೊಂಡವಳು, ತಾಳಿ ಕಟ್ಟಿದವನು ಇಬ್ಬರೂ ಕೆಲವೇ ದಿನಗಳಲ್ಲಿ ದೂರವಾಗುವ ಸನ್ನಿವೇಶಗಳು ಅಥವಾ ಘಟನೆಗಳು ಸಮಾಜದಲ್ಲಿ ನಿತ್ಯ ನಡೆಯುತ್ತಿರುತ್ತವೆ. ವಿಚ್ಛೇದನೆಯಿಂದ ದೂರವಾದ ಅಥವಾ ಸಂಗಾತಿ ಮರಣ ಹೊಂದಿದ ಕಾರಣಕ್ಕೆ ಒಬ್ಬಂಟಿಯಾಗಿರುವ ಪುರುಷ ಅಥವಾ ಮಹಿಳೆ ಮನಸ್ಸಿನಲ್ಲಿ ಕೆಲವೇ ಸಮಯದಲ್ಲಿ ಮರುಮದುವೆಯ ವಿಚಾರ ಸುಳಿಯಬಹುದು.
undefined
ಆದರೆ, ಇದರೊಂದಿಗೆ ನಾನಾ ಅನುಮಾನಗಳು, ಪ್ರಶ್ನೆಗಳು ಕೂಡ ಕಾಡಲಾರಂಭಿಸುತ್ತವೆ. ಅದರಲ್ಲೂ ಮಕ್ಕಳಿದ್ದರಂತೂ ಮುಗಿಯಿತು. ಮುಂದೆ ಬರುವವರು ಮಕ್ಕಳನ್ನು ತಮ್ಮ ಮಕ್ಕಳಂತೆ ಸ್ವೀಕರಿಸುತ್ತಾರಾ? ತಂದೆ ಅಥವಾ ತಾಯಿ ಪ್ರೀತಿ ನೀಡುತ್ತಾರಾ? ಮಕ್ಕಳು ಈ ಮದುವೆಗೆ ಒಪ್ಪುತ್ತಾರಾ? ಹೊಸ ತಂದೆ ಅಥವಾ ತಾಯಿಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರಾ? ಹೀಗೆ ಅನೇಕ ಪ್ರಶ್ನೆಗಳು ಕಾಡುತ್ತವೆ. ಹೀಗಾಗಿ ಮರುಮದುವೆಗೆ ಓಕೆ ಎನ್ನುವ ಮುನ್ನ ಕೊಂಚ ಯೋಚಿಸಿ ಮುಂದಡಿಯಿಡುವುದು ಉತ್ತಮ. ಇಲ್ಲವಾದರೆ ಎರಡನೇ ವೈವಾಹಿಕ ಬದುಕು ಕೂಡ ನಿಮಗೆ ಕಹಿ ಅನುಭವಗಳನ್ನೇ ನೀಡುವ ಸಾಧ್ಯತೆಯಿದೆ.
ಮನಸ್ಸಿನ ಮಾತು ಕೇಳಿ: ಮರುಮದುವೆಯಾಗಬೇಕೇ ಬೇಡವೆ ಎನ್ನುವುದು ಅವರವರ ವೈಯಕ್ತಿಕ ಆಯ್ಕೆ. ಇದು ಸಂಪೂರ್ಣವಾಗಿ ಮನಸ್ಸಿಗೆ ಸಂಬಂಧಪಟ್ಟ ವಿಷಯ. ಹೀಗಾಗಿ ಸಂಗಾತಿಯ ಅಗತ್ಯವಿದೆ ಎಂದು ಮನಸ್ಸು ಬಯಸಿದಾಗ ಮರುಮದುವೆ ಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಅದರಲ್ಲೂ ಎಳೆಯ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಅಥವಾ ಆತನಿಂದ ದೂರವಾದ ಮಹಿಳೆಯರಿಗೆ ಸಾಮಾಜಿಕವಾಗಿ ಹಾಗೂ ಮಾನಸಿಕವಾಗಿ ಶಕ್ತಿ ತುಂಬಲು ಮರುಮದುವೆ ಅಗತ್ಯ. ಒಂದು ವೇಳೆ ಮಕ್ಕಳ ಭವಿಷ್ಯ ಅಥವಾ ಇನ್ಯಾವುದೋ ಕಾರಣಕ್ಕೆ ಇನ್ನೊಂದು ಮದುವೆಯ ಅಗತ್ಯವಿಲ್ಲ ಎಂದೆನಿಸಿದರೆ ಒಂಟಿಯಾಗಿಯೇ ಇರಲು ನಿರ್ಧರಿಸಿ. ಅದಕ್ಕೆ ಅಗತ್ಯವಾದ ಮಾನಸಿಕ ಸಿದ್ಧತೆಯನ್ನೂ ಮಾಡಿಕೊಳ್ಳಿ.
ಗಂಡ-ಹೆಂಡತಿ ಖುಷಿಯಾಗಿರುವುದು ಪ್ರತ್ಯೇಕ ಬಾತ್‌ರೂಂ ಹೊಂದುವುದರಲ್ಲಿದೆಯಂತೆ!
ಇನ್ನೊಬ್ಬರ ಒತ್ತಾಯಕ್ಕೆ ಕಟ್ಟುಬೀಳಬೇಡಿ: ಅಪ್ಪ-ಅಮ್ಮ ಅಥವಾ ಸಂಬಂಧಿಕರು ಒತ್ತಾಯ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಮರುಮದುವೆಗೆ ಖಂಡಿತಾ ಒಪ್ಪಿಗೆ ನೀಡಬೇಡಿ. ಕೌಟುಂಬಿಕ ದೃಷ್ಟಿಯಿಂದ ಕೂಡ ಇದು ಆರೋಗ್ಯಕರವಲ್ಲ. ನಿಮಗೆ ಹುಡುಗ ಅಥವಾ ಹುಡುಗಿ ಒಪ್ಪಿಗೆಯಾಗಿ ಅವರೊಂದಿಗೆ ನೀವು ಸಹಜೀವನ ನಡೆಸಬಹುದು ಎಂದೆನಿಸಿದರೆ ಮಾತ್ರ ಆ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ನೀಡಿ. ಒಂದು ವೇಳೆ ನಿಮ್ಮ ಮನಸ್ಸು ಮರುಮದುವೆಗೆ ಸಿದ್ಧವಿಲ್ಲವೆಂದೆನಿಸಿದರೆ ಮನೆಯವರಿಗೆ ನಿಮ್ಮ ಅಭಿಪ್ರಾಯ ತಿಳಿಸಿ ಬಿಡಿ.
ಪೂರ್ವಾಪರ ವಿಚಾರಿಸಿ: ಮರುಮದುವೆ ಎಂಬ ಕಾರಣಕ್ಕೆ ಉದಾಸೀನತೆ ಸಲ್ಲ. ನಿಮ್ಮ ಜೊತೆ ಸಹಬಾಳ್ವೆ ಮಾಡಲು ಸಿದ್ಧವಿರುವ ವ್ಯಕ್ತಿಯ ಪೂರ್ವಾಪರ ವಿಚಾರಿಸದೆ ಮದುವೆಗೆ ಒಪ್ಪಿಗೆ ನೀಡಬೇಡಿ. ಭಾವಿ ಪತಿ ಅಥವಾ ಪತ್ನಿಯ ಗುಣನಡತೆ, ಕುಟುಂಬ, ಉದ್ಯೋಗ ಇದೆಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಿ. ಒಂದು ವೇಳೆ ವಿಚ್ಛೇದಿತರಾಗಿದ್ದರೆ ಆ ವೈವಾಹಿಕ ಬದುಕು ಮುರಿದುಬೀಳಲು ಕಾರಣವೇನು? ಅವರು ಡೈವೋರ್ಸ್ ಪಡೆದಿದ್ದರೋ ಇಲ್ಲವೋ? ಎಷ್ಟು ಮಕ್ಕಳಿವೆ? ಎಂಬುದನ್ನು ವಿಚಾರಿಸಿ. ಒಂದು ವೇಳೆ ಮಕ್ಕಳ ಪಾಲನೆಯ ಹೊಣೆ ಅವರ ಮೇಲಿದ್ದರೆ ಆ ಜವಾಬ್ದಾರಿಯ ಪಾಲುದಾರರಾಗಲು ನೀವು ಮಾನಸಿಕವಾಗಿ ಸಿದ್ಧವಿದ್ದೀರಾ? ಎಂಬುದನ್ನು ಯೋಚಿಸಿ.
ಭೇಟಿಯಾಗಿ ಪರಸ್ಪರ ಮಾತಾಡಿ: ಮದುವೆಯಾಗಲಿರುವ ವ್ಯಕ್ತಿಯನ್ನು ಭೇಟಿಯಾಗಿ ಮಾತುಕತೆ ನಡೆಸಿ. ನಿಮ್ಮ ಹಿಂದಿನ ಮದುವೆ, ಮಕ್ಕಳ ಬಗ್ಗೆ ಅವರಿಗೆ ವಿವರಿಸಿ. ನಿಮ್ಮ ನಿರೀಕ್ಷೆಗಳೇನು ಎಂಬುದನ್ನು ಮುಕ್ತವಾಗಿ ತಿಳಿಸಿ. ಹಾಗೆಯೇ ಅವರ ಮೊದಲ ಮದುವೆ, ಮಕ್ಕಳ ಬಗ್ಗೆಯೂ ಕೇಳಿ ತಿಳಿದುಕೊಳ್ಳಿ. ಮರುಮದುವೆಗೆ ಕಾರಣ ಕೇಳಿ. ಇಬ್ಬರ ಮುಂದಿರುವ ಸವಾಲುಗಳು, ಅದನ್ನು ಎದುರಿಸಬೇಕಾದ ವಿಧಾನದ ಬಗ್ಗೆಯೂ ಪರಸ್ಪರ ಅಭಿಪ್ರಾಯ ಹಂಚಿಕೊಳ್ಳಿ. ಮಕ್ಕಳ ಪಾಲನೆ ಕುರಿತ ನಿಮ್ಮ ನಿರೀಕ್ಷೆಗಳನ್ನು ಸ್ಪಷ್ಟವಾಗಿ ತಿಳಿಸಿಬಿಡಿ. ಭೇಟಿಯ ಸಂದರ್ಭದಲ್ಲಿ ಆಕೆ ಅಥವಾ ಆತ ಇಷ್ಟವಾಗದಿದ್ದರೆ ಮನೆಯವರಿಗೆ ನೇರವಾಗಿ ತಿಳಿಸಿಬಿಡಿ.
ಅನುಕಂಪಕ್ಕೆ ಕರಗಬೇಡಿ: ವಿಧವೆ ಅಥವಾ ವಿಚ್ಛೇದಿತ ಮಹಿಳೆಗೆ ಜೀವನ ನೀಡುತ್ತಿದ್ದೇನೆ ಎಂಬ ಮನೋಭಾವದ ವ್ಯಕ್ತಿಯನ್ನು ಮದುವೆಯಾಗುವ ಮುನ್ನ ಯೋಚಿಸಿ. ಇಂಥ ಮನೋಭಾವ ಹೊಂದಿರುವ ವ್ಯಕ್ತಿಯನ್ನು ಮದುವೆಯಾಗುವುದರಿಂದ ಮುಂದೆ ತೊಂದರೆಗಳು ಕಾಡುವ ಸಾಧ್ಯತೆಯಿರುತ್ತದೆ. ಏಕೆಂದರೆ ಮದುವೆ ಬಳಿಕ ಸಂದರ್ಭ ಸಿಕ್ಕಾಗಲೆಲ್ಲ ಅನುಕಂಪದ ಕಾರಣಕ್ಕೆ ನಿಮಗೆ ಬಾಳು ನೀಡಿದೆ ಎಂದು ಹೇಳುವ ಮೂಲಕ ಕಿರಿಕಿರಿ ಉಂಟು ಮಾಡುವ ಸಾಧ್ಯತೆಯಿದೆ.
ಮಕ್ಕಳಿಗೆ ಮನವರಿಕೆ ಮಾಡಿಸಿ: ಮರುಮದುವೆಗೆ ಮುನ್ನ ಮಕ್ಕಳನ್ನು ಒಪ್ಪಿಸಿ ಮುಂದುವರಿಯುವುದು ಸೂಕ್ತ. ಕೆಲವು ಮಕ್ಕಳು ಬಹುಬೇಗ ಒಪ್ಪಿಗೆ ಸೂಚಿಸಬಹುದು. ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಬಹುದು. ಆದರೆ, ಮಕ್ಕಳಿಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ ಮದುವೆಯಾಗಬೇಕೆಂಬ ಬಯಕೆಯನ್ನು ಹತ್ತಿಕ್ಕಬೇಡಿ. ಇದರಿಂದ ಮುಂದೊಂದು ದಿನ ಒಂಟಿತನ ಕಾಡಿದಾಗ ಪಶ್ಚತ್ತಾಪ ಪಡಬೇಕಾಗಬಹುದು. ನನ್ನಿಂದಾಗಿ ತಾಯಿ ಅಥವಾ ತಂದೆ ತಮ್ಮ ಆಸೆಯನ್ನು ಕೈಬಿಡಬೇಕಾಯಿತು ಎಂದು ಮಕ್ಕಳು ಕೂಡ ಪಶ್ಚತ್ತಾಪ ಪಡಬಹುದು. ಆದಕಾರಣ ಮಕ್ಕಳು ಒಪ್ಪದಿದ್ದ ಸಂದರ್ಭದಲ್ಲಿ ಕುಟುಂಬ ಸದಸ್ಯರ ಸಹಾಯದಿಂದ ಅಥವಾ ಕೌನ್ಸೆಲಿಂಗ್ ನೀಡುವ ಮೂಲಕ ಅವರನ್ನು ಒಪ್ಪಿಸಿ.
ಹುಬ್ಬಳ್ಳಿಯಲ್ಲೊಂದು ಲವ್ ಕಹಾನಿ: ಬೇಕೇ ಬೇಕು ಅವಳೇ ಬೇಕು ಎನ್ನುತ್ತಿರುವ ಟೆಕ್ಕಿ!