ಮಾಸ್ ಲೀಡರ್‌ನನ್ನು ಕಾಂಗ್ರೆಸ್ ಹೈಕಮಾಂಡ್ ಸಹಿಸಿಕೊಂಡಿದ್ದೇ ಇಲ್ಲ. ಆದರೆ....?!

By Suvarna NewsFirst Published Aug 4, 2022, 3:03 PM IST
Highlights

ಕಾಂಗ್ರೆಸ್ ಇತಿಹಾಸ ಹಾಗೂ ಕರ್ನಾಟಕ ಮಾಸ್ ಲೀಡರ್ಸ್ ಅನ್ನು ಕಾಂಗ್ರೆಸ್ ನಡೆಯಿಸಿಕೊಂಡ ರೀತಿಯನ್ನು ಮೆಲಕು ಹಾಕಿದರೆ, ಹೈ ಕಮಾಂಡ್ ಯಾವ ನಾಯಕರನ್ನೂ ಬೆಳೆಯಲು ಬಿಟ್ಟಿದ್ದೇ ಇಲ್ಲ. ಆದರೆ, ಸಿದ್ದರಾಮಯ್ಯ ಅವರನ್ನು ಮಾತ್ರ ಐದು ವರ್ಷಗಳ ಕಾಲ ಆಡಳಿತ ನಡೆಸಲು ಬಿಟ್ಟಿದ್ದಲ್ಲದೇ, ಅವರ 75ನೇ ವರ್ಷದ ಹುಟ್ಟು ಹಬ್ಬಕ್ಕೆ ಖುದ್ದು ರಾಹುಲ್ ಗಾಂಧಿ ಬಂದು ವಿಶ್ ಮಾಡಿದ್ದಾರೆ. ಅಷ್ಟಕ್ಕೂ ಕೈ ಹೈ ಕಮಾಂಡ್ ಈ ನಾಯಕನನ್ನು ಹೀಗೆ ಸಹಿಸಿಕೊಳ್ಳುತ್ತಿರುವುದೇಕೆ? 

- ರವಿ ಶಿವರಾಮ್, ಏಷ್ಯಾ ನೆಟ್ ಸುವರ್ಣ ನ್ಯೂಸ್ 

ವಿಧಾನಸೌಧದ ಮೆಟ್ಟಿಲ ಮೇಲೆ ನಿಂತು, ನಾನಿರುವುದೇ ನಿನಗಾಗಿ ಎಂದು ಹಾಡು ಹೇಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಬಂಗಾರಪ್ಪ. ದೇವರಾಜ್ ಅರಸು ಅಧಿಕಾರದಲ್ಲಿ ಇದ್ದಾಗಲೇ ಗುಂಡಾರಾವ್ ಅವರನ್ನು ದೆಹಲಿಯ ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಇಂದಿರಾ ಗಾಂಧಿ ನೀನೆ ಮುಂದಿನ ಸಿಎಂ ಎಂದಿದ್ರು. ಆರೋಗ್ಯ ಸರಿ ಇಲ್ಲ, ಸ್ವಲ್ಪ ಸುಧಾರಿಸಿಕೊಂಡು ಮತ್ತೆ ಬರ್ತೆನೆ ಎಂದು ರಾಜೀವ್ ಗಾಂಧಿಗೆ ಹೇಳಿದ್ದಷ್ಟೇ ವೇಗವಾಗಿ, ವಿರೇಂದ್ರ ಪಾಟೀಲ್ ಅವರನ್ನು ಆ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರು ರಾಜೀವ್ ಗಾಂಧಿ. ಚಿಟಿಕೆ ಹೊಡೆದಷ್ಟೇ ವೇಗವಾಗಿ ಒಬ್ಬನಿಗೆ ಅಧಿಕಾರ ನೀಡುವ, ಅಧಿಕಾರದಿಂದ ಕೆಳಗಿಳಿಸುವ ಲಿಫ್ಟ್ ರೀತಿ ಕೆಲಸ ಮಾಡುತ್ತಿದ್ದ ಕಾಂಗ್ರೆಸ್ ಹೈಕಮಾಂಡ್ ಇಂದು ಸಿದ್ದರಾಮಯ್ಯರ ಅಮೃತ ಮಹೋತ್ಸವಕ್ಕೆ ಬಂದು ಮಂಡಿಯೂರಿ ಕುಳಿತಿತ್ತು. ಹಾಗಾದರೆ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಬಲಿಷ್ಠ ಆದ್ರೊ? ಅಥವಾ ಹೈಕಮಾಂಡ್ ವೀಕ್ ಆಯ್ತೊ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇತಿಹಾಸ ಕೆದಕಿದರೆ, ಇಂದಿರಾ ಕಾಲದಿಂದ ರಾಜೀವ್ ಗಾಂಧಿಯಿಂದ ಹಿಡಿದು 2014ರ ತನಕ ಕಾಂಗ್ರೆಸ್ ಹೈಕಮಾಂಡ್‌ನ ರಣರೋಚಕ ತೀರ್ಮಾನಗಳು ಸಿಗುತ್ತವೆ. 

ಕಾಂಗ್ರೆಸ್ ಹೈಕಮಾಂಡ್ ಎನ್ನೋದಕ್ಕಿಂತ ಅದು ಗಾಂಧಿ ಕುಟುಂಬದ ಕಮಾಂಡ್ ಅಷ್ಟೇ. ನೆಹರು‌, ಇಂದಿರಾ, ರಾಜೀವ್, ಸೋನಿಯಾ ಈಗ ರಾಹುಲ್ ಗಾಂಧಿ ಹೀಗೆ ಒಂದೇ ಕುಟುಂಬದ ಹಿಡಿತದಲ್ಲಿ ಸಾಗಿ ಬಂದ ಕಾಂಗ್ರೆಸ್ ದೇಶದಲ್ಲಿ ಆಳ್ವಿಕೆ ನಡೆಸಿದ್ದು ಮಾತ್ರವಲ್ಲ, ತಮ್ಮ ನಾಮಬಲದಿಂದ ಅನೇಕ ರಾಜ್ಯಗಳಲ್ಲೂ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಇದೇ ಗಾಂಧಿ ನಾಮಾಂಕಿತವೇ ಕಾರಣವೂ ಆಗಿತ್ತು. ಆದರೆ ತನಗೆ ಎದುರಾಗುವ, ತನ್ನ ವಿರುದ್ಧ ಮಾತಾಡುವ ಬಿಡಿ, ಗೊಣಗುವ ಶಬ್ಧ ಕೇಳಿದರೂ ಅವರ ಕತೆ ಮುಗಿಯಿತು ಎಂದೇ ಅರ್ಥ. ಕಾಂಗ್ರೆಸ್ ಹೈಕಮಾಂಡ್ ನ ಪ್ಲಸ್ ಮತ್ತು ಮೈನಸ್ ಕೂಡ ಇದೇ ಆಗಿತ್ತು. 

ತುರ್ತು ಪರಿಸ್ಥಿತಿ ಹೇರಿ, ಅದ್ರಿಂದ ಆದ ರಾಜಕೀಯ ವಿಪ್ಲವಗಳು, ಇಂದಿರಾಗಾಂಧಿಗೆ ಎದುರಾದ ರಾಜಕೀಯ ವೈರತ್ವ, ಜನರ ಆಕ್ರೋಶದಿಂದ ತನ್ನ ಖಾಯಂ ಕ್ಷೇತ್ರವಾಗಿದ್ದ ರಾಯಬರೇಲಿಯಿಂದ ಕ್ಷೇತ್ರ ಹುಡುಕುತ್ತಾ ಅವರು ದಕ್ಷಿಣ ಭಾರತದ ಕಡೆ ಕಣ್ಣು ಹಾಯಿಸಿದ್ದರು. ಆಗ ಅವರಿಗೆ ಸಿಕ್ಕ ಸೇಫೆಸ್ಟ್ ರಾಜ್ಯ ಕರ್ನಾಟಕ. ದೇವರಾಜ ಅರಸು ಮುಖ್ಯಮಂತ್ರಿ ಆಗಿ ಉತ್ತುಂಗದಲ್ಲಿ ಇದ್ದ ಕಾಲವದು. ಹೀಗಾಗಿ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಇಂದಿರಾ ಗಾಂಧಿ ಚುನಾವಣೆಯಲ್ಲಿ ಗೆಲುವನ್ನು ಕೂಡ ಕಂಡರು. 

ಬಿಜೆಪಿ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ಶಿಫ್ಟ್ ಆಗುತ್ತಾರಾ?

ಪಾರ್ಟಿಯೊಳಗಿನ ವಿರೋಧಗಳ ಬಗ್ಗೆ ನನಗೆ ಮಾಹಿತಿ
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಂದಿರಾ ನಾಮಪತ್ರ ಸಲ್ಲಿಸೋಕೆ ಬಂದಿದ್ರು. ನಾಮಪತ್ರ ಸಲ್ಲಿಕೆ ಆಯಿತು. ಬಳಿಕ ಉತ್ತರ ಪ್ರದೇಶ ಮೂಲದ ಐಎಎಸ್ ಅಧಿಕಾರಿ ಪಾಂಡೆ ಇಂದಿರಾಗೆ ಟಿ ಕೊಟ್ಟಿದ್ರಂತೆ. ಇಂದಿರಾ ಜೊತೆಯೇ ಇರುತ್ತಿದ್ದ ನಿರ್ಮಲಾ ದೇಶಪಾಂಡೆ ಇಂದಿರಾಗೆ ಕಿವಿಯಲ್ಲಿ ಏನೋ ಊದಿದಾಗ ಇಂದಿರಾಗಾಂಧಿ ಆ ಅಧಿಕಾರಿ ನೀಡಿದ ಟಿ ಕುಡಿಯದೇ ವಾಪಸ್ ಹೋದ್ರಂತೆ. ಆ ಘಟನಗೆ ಸಾಕ್ಷಿಯಾಗಿದ್ದ ಮತ್ತು ಪಾಂಡೆ ಜೊತೆ ಉತ್ತಮ ಸ್ನೇಹ ಹೊಂದಿದ್ದ ವ್ಯಕ್ತಿಯೊಬ್ಬರು, ದೇಶಪಾಂಡೆ ಬಳಿ ಹೋಗಿ ಕಿವಿಯಲ್ಲಿ ಮೇಡಮ್ ಯಾಕೆ ಟಿ ಕುಡಿದಿಲ್ಲ  ಎಂದಾಗ, ದೇಶಪಾಂಡೆ ಹೇಳಿದ್ರಂತೆ. ಪಾಂಡೆ ಉತ್ತರ ಪ್ರದೇಶದವರು. ನಾನು ಉತ್ತರ ಪ್ರದೇಶದ ರಾಯಬರೇಲಿ. ಇಂದಿರಾ ಮೇಡಂ ಪಾಂಡೆ ನೀಡಿದ್ದ ಟಿ ಕುಡಿದಿದ್ರೆ, ನಾಳೆ ಪತ್ರಿಕೆಯಲ್ಲಿ ಸುದ್ದಿ ಆಗ್ತಾ ಇತ್ತು. ನಾಳೆ ಇಂದಿರಾಗಾಂಧಿ ಗೆದ್ದ ಬಳಿಕವೂ, IAS ಅಧಿಕಾರಿ ಚುನಾವಣೆಯಲ್ಲಿ ಇಂದಿರಾಗೆ ಏನಾದರೂ ಸಹಾಯ ಮಾಡಿರಬಹುದಾ ಎಂದು ಆ ಅಧಿಕಾರಿ ಮೇಲೆ ಜನ ಸಂಶಯ ಪಡ್ತಾ ಇದ್ರು, ಎಂದು ನಿರ್ಮಲಾ ದೇಶಪಾಂಡೆ ಪಾಂಡೆ ಜೊತೆ ಸ್ನೇಹ ಹೊಂದಿದ್ದ ವ್ಯಕ್ತಿಗೆ ಹೇಳಿದ್ರಂತೆ. ಅಷ್ಟೇ ಅಲ್ಲ ಬಾ ನಿನಗೆ ಇಂದಿರಾನ ಪರಿಚಯ ಮಾಡಿಕೊಡ್ತೇನೆ ಎಂದು ಕರೆದುಕೊಂಡು ಹೋಗಿ ಇಂದಿರಾ ಗಾಂಧಿಯನ್ನು ಪರಿಚಿಯಿಸಿದ ಮೇಲೆ , ಪಾಂಡೆ ಸ್ನೇಹಿತನಿಗೆ ಒಂದು ಟಾಸ್ಕ್ ನೀಡಿದ್ರಂತೆ. ಕರ್ನಾಟಕದಲ್ಲಿ ಪಕ್ಷದ ಒಳಗೆ ನನ್ನ ಬಗ್ಗೆ ಯಾರು ನೆಗೆಟಿವ್ ಮಾತಾಡ್ತಾರೆ ಯಾರು ನನ್ನ ವೈರಿಗಳಿದ್ದಾರೆ ಎನ್ನುವ ಮಾಹಿತಿ ನೀಡಬೇಕು ಅಂದ್ರಂತೆ. ಆ ವ್ಯಕ್ತಿ ಸರಿ ಎಂದು ಒಪ್ಪಿಕೊಂಡರಂತೆ. ಅದಾದ ಬಳಿಕ ಒಂದು ದಿನ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಇಂದಿರಾ ರೆಡಿಯಾಗಿ ಕುಳಿತಿದ್ರಂತೆ. ಅಂದಿನ ಸಿಎಂ ಆಗಿದ್ದ ದೇವರಾಜ ಅರಸು ಬಳಿ ಬಂದ ಕೆಲವರು, ಸರ್ ಮೇಡಮ್ ರೆಡಿಯಾಗಿ ಕುಳಿತಿದ್ದಾರೆ ಬೇಗ ಬನ್ನಿ ಎಂದಾಗ ಸಿಟ್ಟಾದ ಅರಸು ಸಾಹೇಬರು, ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಕಳಿಸೋದು ನಮ್ಮ ಕೆಲಸ. ಅವರು ಯಾಕೆ ಬಂದು ಇಲ್ಲಿ ಕೂರಬೇಕು. ನನಗೆ ಇಲ್ಲಿ ಸಾವಿರ ಕೆಲಸ ಇವೆ. ಅವರು ಕುಳಿತಿರ್ಲಿ, ನಾನು ಬರ್ತೆನೆ ಎಂದು ಗೊಣಗಿದ್ರಂತೆ. ಅಷ್ಟೇ ಆಗಿದ್ದು. ಇಂದಿರಾ ಗಾಂಧಿಗೆ ದೂತನ ಕೆಲಸ ಮಾಡುತ್ತಿದ್ದ ವ್ಯಕ್ತಿ ಹೋಗಿ ಈ ವಿಚಾರವನ್ನು ಇಂದಿರಾ ಕಿವಿಗೆ ಮುಟ್ಟಿಸಿದ್ರಂತೆ. ಇಂದಿರಾ ರಿಯಾಕ್ಷನ್ ಹೇಗಿತ್ತಂತೆ ಅಂದರೆ, ಓ... ಐ ...ಸಿ ಅಂದ್ರಂತೆ ಅಷ್ಟೇ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಿದೇಶಾಂಗ ಮಂತ್ರಿ ಉಸ್ತುವಾರಿ: ಏನಿದು ಬಿಜೆಪಿ ಪ್ಲಾನ್?

ಮುಂದೆ ದೇವರಾಜ ಅರಸು ಕೆಳಗಿಳಿದ್ರು. ಗುಂಡುರಾವ್ ಸಿಎಂ ಆದ್ರು.
ಚಿಕ್ಕಮಗಳೂರಿನಿಂದ ಗೆದ್ದಿದ್ದ ಇಂದಿರಾಗೆ ನಾನು ಗೆದ್ದ ಎನ್ನುವ ಖುಷಿ ಆದ್ರೆ, ಇಂದಿರಾರನ್ನು ನಾನು ಗೆಲ್ಲಿಸಿದೆ ಎನ್ನುವ ಒಂದು ಗತ್ತು ಸಹಜವಾಗಿ ಅರಸು ಅವರಲ್ಲೂ ಬಂದಿರುತ್ತದೆ. ಕಾಂಗ್ರೆಸ್ ಒಡೆದು ಹೋದಾಗ ಇಂದಿರಾ ಕ್ರಾಂಗ್ರೆಸ್ ಜೊತೆ ಬಂದಿದ್ದ ಅರಸು ಅವರು ಪ್ರಬಲವಾಗಿ ಬೆಳೆದಿದ್ದರು.  ತುರ್ತುಪರಿಸ್ಥಿತಿಯ ತರುವಾಯ ನಡೆದ ಲೋಕಸಭಾ ಚುನಾವಣೆಯಲ್ಲಿ, ಕರ್ನಾಟಕದಲ್ಲಿ ಮಾತ್ರ ಅರಸು ನೇತೃತ್ವದಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಸಹಜವಾಗಿ ಅರಸು ನಾಯಕತ್ವಕ್ಕೆ ಸಿಕ್ಕ ಗೆಲುವು ಅದಾಗಿತ್ತು. ಕರ್ನಾಟಕದಲ್ಲಿ ಅರಸು ಹವಾ ಹಾಗೆ ಇತ್ತು ಬಿಡಿ. 1979 ರ ಸಮಯದಲ್ಲಿ ಇಂದಿರಾ ಮತ್ತು ಅರಸು ಮಧ್ಯೆ ಭಿನ್ನಮತ ಹೆಚ್ಚಾಯಿತು. ಇಂದಿರಾಗೆ ಅರಸು ಅವರು ಡೋಂಟ್ ಕೇರ್ ಅಂದ್ರು, ಯಾಕೆ ಅಂದ್ರೆ ಅರಸರಿಗೆ ಜನಬಲ ಇತ್ತು. ಅಧಿಕಾರ ಬಲ ಇತ್ತು. ಆ ಸಮಯದಲ್ಲಿ ಇಂದಿರಾ ಜೊತೆ ಸೇರಿದ್ದ ಗುಂಡುರಾವ್, ಧರ್ಮಸಿಂಗ್ ಮುಂತಾದವರು ಇಂದಿರಾಗೆ ಹತ್ತಿರ ಆದ್ರು. 1980 ರಲ್ಲಿ ಜನತಾ ಪಕ್ಷ ಒಡೆದು ಕೇಂದ್ರದಲ್ಲಿ ಅಧಿಕಾರ ಹೋದಾಗ ಮತ್ತೆ ಪಿನಿಕ್ಸ್‌ನಂತೆ  ಗೆದ್ದು ಬಂದವರು ಇಂದಿರಾಗಾಂಧಿ. ಅರಸು ನೇತೃತ್ವದ ಕಾಂಗ್ರೆಸ್‌ಗೆ ಆ ಚುನಾವಣೆಯಲ್ಲಿ ಹಿನ್ನಡೆ ಆಯಿತು. ಇಂದಿರಾ ಕಾಂಗ್ರೆಸ್ ಗೆಲುವು ಪಡೆಯಿತು. ಗಾಯದ ಮೇಲೆ ಉಪ್ಪು ಸೇರಿ 75ಕ್ಕೂ ಹೆಚ್ಚು ನಾಯಕರು ಅರಸುಗೆ ಕೈಕೊಟ್ಟು ಇಂದಿರಾ ಜೊತೆ ಸೇರಿದ್ರು. ಅರಸು ರಾಜಕೀಯ ಬಹುತೇಕ ಅಂತ್ಯವಾಯಿತು. ಗುಂಡುರಾವ್ ಅವರನ್ನ ದೆಹಲಿಯ ತನ್ನ ನಿವಾಸದಲ್ಲಿ ಕೂರಿಸಿಕೊಂಡಿದ್ದ, ಇಂದಿರಾ ನೀನೆ ಮುಂದಿನ ಸಿಎಂ ಎಂದು ಘೋಷಣೆ ಮಾಡಿದ್ರು. ವಿಶೇಷ ಏನ್ ಗೊತ್ತಾ? ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಇಂದಿರಾಗೆ ಇಂಟರ್ನಲ್ ಮಾಹಿತಿ ಶೇರ್ ಮಾಡ್ತಿದ್ದ ವ್ಯಕ್ತಿ ಕೂಡ ಅಂದು ಜೊತೆ ಇದ್ರಂತೆ. ಆಗ ಇಂದಿರಾ ಹೇಳಿದ್ರಂತೆ, ನೀನು ಅಂದು ಅರಸು ಬಗ್ಗೆ ನೀಡಿದ್ದ ಮಾಹಿತಿ ಇಂದು ವರ್ಕೌಟ್ ಆಯಿತು ನೋಡು ಎಂದು. 

ನಾನಿರುವುದೇ ನಿನಗಾಗಿ ಎಂದು ಹಾಡು ಹೇಳಿ ರಾಜೀನಾಮೆ ನೀಡಿದ್ದ ಬಂಗಾರಪ್ಪ
ಹಾಗೆ ನೋಡಿದ್ರೆ ದೇವರಾಜ ಅರಸುಗಿಂತ ಪ್ರಬಲವಾಗಿ ಗಟ್ಟಿಯಾಗಿ ಹಿಂದುಳಿದವರ ಪರ ನಿಂತವರು ದಿವಂಗತ ಬಂಗಾರಪ್ಪ ಎನ್ನುವ ವಾದವನ್ನು ಮಾಡುವವರಿದ್ದಾರೆ. ಬಂಗಾರಪ್ಪರು ಗುಲಾಮ ಎನ್ನುವ ಪದದ ಅರ್ಥವೇ ಗೊತ್ತಿಲ್ಲವೇನೊ ಎನ್ನುವಂತೆ ಇದ್ದವರು. ಅವರು ಸಿಎಂ ಆಗಿದ್ದ ವೇಳೆ ಉಸ್ತುವಾರಿ ಆಗಿದ್ದವರು ಗುಲಾಮ್ ನಬಿ ಆಜಾದ್. ಹೈಕಮಾಂಡ್ ಸೂಚನೆಯನ್ನು ಬಂಗಾರಪ್ಪನವರಿಗೆ ತಲುಪಿಸಿದ್ರೆ ಮತ್ತು ಬಂಗಾರಪ್ಪರನ್ನು ಪ್ರಶ್ನೆ ಮಾಡ್ತಾ ಇದ್ರೆ, ನೀವು ನನಗೆ ಹೆಡ್ ಮಾಸ್ಟರ್ ರೀತಿ ಆದೇಶಿಸಬೇಡಿ. ನನಗೆ ಹೇಗೆ ಕೆಲಸ ಮಾಡಬೇಕು ಎನ್ನೋದು ಗೊತ್ತು ಎಂದು ಹೈಕಮಾಂಡ್ ನಾಯಕರಿಗೇ ಅವಾಜ್ ಹಾಕ್ತಿದ್ದು ಎಂದು ಈ ಪ್ರಸಂಗದ ಬಗ್ಗೆ ಗೊತ್ತಿದ್ದವರು ಹೇಳ್ತಾರೆ. ಎರಡು ವರ್ಷ ಸಿಎಂ ಆಗಿದ್ದ ‌ಬಂಗಾರಪ್ಪನವರು ಬಳಿಕ ಕ್ಲಾಸಿಕ್ ಕಂಪ್ಯೂಟರ್ ಹಗರಣದ ಆರೋಪ ಬಂದ ಕಾರಣ ರಾಜೀನಾಮೆ ನೀಡಬೇಕಾಗಿ ಬಂತು ಅದು ಬೇರೆ. ಆದ್ರೂ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಹೈಕಮಾಂಡ್‌ಗೆ ತಲೆ ಬಾಗಿ ಕೆಲಸ ಮಾಡಿದ್ರಾ ಎಂದು ಕೇಳಿದ್ರೆ, ಬಂಗಾರಪ್ಪನವರು ಹಾಗೆ ಇರಲಿಲ್ಲ ಎಂಬ ಉತ್ತರ ಸಿಗುತ್ತದೆ..

ನಿಜಲಿಂಗಪ್ಪ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಆಗ್ತಾರೆ ಎಂದಿದ್ದೇ ತಪ್ಪಾಯ್ತು
ನಿಜಲಿಂಗಪ್ಪ ಅಳಿಯ ಎಂವಿ ರಾಜಶೇಖರನ್ ಕೆಪಿಸಿಸಿ ಕಚೇರಿಯಲ್ಲಿ, ನಿಜಲಿಂಗಪ್ಪನವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಆಗ್ತಾರೆ ಎಂದು ಸುದ್ದಿ ಲೀಕ್ ಮಾಡಿದ್ರಂತೆ. ಈ ವಿಚಾರವನ್ನು ಇಂದಿರಾಗಾಂಧಿಗೆ ತಲುಪಿಸಿದ್ದು ಆರಂಭದಲ್ಲಿ ಕಾರ್ ಡ್ರೈವರ್ ಆಗಿ, ಬಳಿಕ ರಾಜ್ಯದ ನಾಯಕರಾಗಿ ಗುರುತಿಸಿಕೊಂಡಿದ್ದ ವ್ಯಕ್ತಿ. ಮುಂದೆ ನಿಜಲಿಂಗಪ್ಪ ಕಾಂಗ್ರೆಸ್ ಅಧ್ಯಕ್ಷ ಆದ್ರು. ನಿಜಲಿಂಗಪ್ಪ ಮತ್ತು ಇಂದಿರಾಗಾಂಧಿ ನಡುವೆ ವೈಮನಸ್ಸು ಉಂಟಾಗಿ ಇಂದಿರಾ ಕಾಂಗ್ರೆಸ್ ಮತ್ತು ಸಂಸ್ಥಾ ಕಾಂಗ್ರೆಸ್ ಆಗಿ ಪಕ್ಷ ಇಬ್ಭಾಗ ಆಯಿತು. 

ಅಷ್ಟು ಬಲಿಷ್ಠವಾಗಿದ್ದ ಕಾಂಗ್ರೆಸ್ ಹೈಕಮಾಂಡ್ ಇಂದು ಯಾವ ಹಂತ ತಲುಪಿದೆ ನೋಡಿ! ತನ್ನ ಸರಿಸಮವಾಗಿ ಯಾರನ್ನು ಬೆಳೆಸದ ಆರೋಪ ಹೊತ್ತಿರುವ ಕಾಂಗ್ರೆಸ್, ತಾನು ಕೈ ತೋರಿ ಸೂಚಿಸಿದ್ದನ್ನ ತಲೆ ಮೇಲೆ ಹೊತ್ತು ಕೆಲಸ ಮಾಡುವ ವ್ಯಕ್ತಿಗಳನ್ನು ನಾಯಕನಾಗಿ ನಿರೂಪಿಸಿದ ಅಂದಿನ ಕಾಂಗ್ರೆಸ್, ಒಂದು ಹುಲ್ಲು ಕಡ್ಡಿಯನ್ನು ಅಲ್ಲಾಡಿಸುವಾಗಲೂ ಮೇಲಿನ ಸಂದೇಶಕ್ಕೆ ಕಾಯುತ್ತಿದ್ದರು ರಾಜ್ಯ ನಾಯಕರು. ಗಾಂಧಿ ಕುಟುಂಬಕ್ಕೆ ವಿದೇಯರಾಗಿದ್ದರೆ, ಮಾತ್ರ ಉಳಿವು ಎನ್ನೋದನ್ನ ಬಹಳಷ್ಟು ನಾಯಕರು ಅರಿತಿದ್ದರು. ಅಂತಹ ಸನ್ನಿವೇಶದ ಮಧ್ಯೆ ಗೆಲುವಿನ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದ ಕಾಂಗ್ರೆಸ್ ಮುಂದೆ ಎದರು ನಿಂತು ಜೀರ್ಣಿಸಿಕೊಂಡವರು ಬಹುತೇಕ ಯಾರೂ ಇಲ್ಲ. ದೇವರಾಜ ಅರಸು, ನಿಜಲಿಂಗಪ್ಪ, ಬಂಗಾರಪ್ಪ ಇವರಗಳು ಹೈಕಮಾಂಡ್ ವಿರುದ್ಧ ಗುಟುರಿರಬಹುದು, ಎದೆಯುಬ್ಬಿಸಿ ನಿಂತಿರಬಹುದು. ಸ್ವಾಭಿಮಾನ ಪ್ರದರ್ಶಿಸಿ ತಮ್ಮ ತನ ಕಾಪಾಡಿಕೊಂಡಿರಬಹುದು. ಆದರೆ ಅಧಿಕಾರಯುತ ರಾಜಕೀಯದಲ್ಲಿ ಗೆದ್ದದ್ದು ಕಾಂಗ್ರೆಸ್ ಹೈಕಮಾಂಡೇ ಆಗಿತ್ತು.

ಸಿಪಿ ಯೋಗಿಶ್ವರ್ ಮೌನ : ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಬಿಜೆಪಿಗೆ ತಾತ್ಕಾಲಿಕ ಬ್ರೇಕ್

ಈಗ ಸಿದ್ದರಾಮಯ್ಯ ಸರದಿ!
ದೇವರಾಜ ಅರಸು ಬಳಿಕ, ಸಿಎಂ ಆಗಿ ಪೂರ್ಣ ಐದು ವರ್ಷ ಅಧಿಕಾರ ಪೂರೈಸಿದವರು. ಅಹಿಂದ ಸಮಾವೇಶ ಮಾಡಬೇಡಿ ಎಂದಾಗ ಜೆಡಿಎಸ್‌ನಿಂದ ಉಚ್ಚಾಟಿಸಲ್ಪಟ್ಟು ಕಾಂಗ್ರೆಸ್ ಸೇರಿ ಕಾಂಗ್ರೆಸ್‌ ಹಿರಿತಲೆಗಳನ್ನು ಸೈಡ್ ಲೈನ್ ಮಾಡಿ, ಮುಖ್ಯಮಂತ್ರಿ ಗಾದಿಗೆ ಏರಿದವರು ಸಿದ್ದರಾಮಯ್ಯ. ಈಗ ಅದೇ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‌ಗೆ ನಕ್ಷತ್ರದ ರೀತಿ ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿದ್ದೇ ವೇದ ವಾಕ್ಯ. ಸಿದ್ದರಾಮಯ್ಯ ಸೂಚಿಸಿದವರಿಗೇ ಪಕ್ಷದಲ್ಲಿ ಹೆಚ್ಚಿನ ಜವಬ್ದಾರಿ. ಇದನ್ನೆಲ್ಲಾ ನೋಡಿದಾಗ ಇಂದು ಮತ್ತು ಅಂದಿನ ಕಾಂಗ್ರೆಸ್ ಹೈಕಮಾಂಡ್ ಅನ್ನು ಹೋಲಿಕೆ ಮಾಡಿ ನೋಡಿದರೆ,
ಹೈಕಮಾಂಡ್ ವೀಕ್ ಆಗಿದೆ ಎನ್ನೋದು ಸ್ಪಷ್ಟ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಿನಿಂದ ಪಾರ್ಟಿಯೊಳಗೆ ಯಾರು ಎಷ್ಟೇ ಮಸಲತ್ತು ಮಾಡಿದರೂ, ಹೈಕಮಾಂಡ್‌ಗೆ ದೂರು ನೀಡಿದರು,
ಕೇರ್ ಮಾಡದೇ ಐದು ವರ್ಷ ಅಧಿಕಾರ ಪೂರ್ತಿ ಮಾಡಿದ ಸಿದ್ದರಾಮಯ್ಯ, ಮತ್ತಿಗ ಸಿಎಂ ರೇಸ್‌ನಲ್ಲಿ ಮುಂಚಯಣಿಯಲ್ಲಿದ್ದಾರೆ. ತನ್ನ ಮನದಾಸೆಗೆ ಸಾಕ್ಷಿ ರೂಪವೆಂಬಂತೆ ಸ್ವತಃ ರಾಹುಲ್ ಗಾಂಧಿಯನ್ನೇ ವೇದಿಕೆಯಲ್ಲಿ ಕೂರಿಸಿಕೊಂಡು ಲಕ್ಷಲಕ್ಷ ಜನರನ್ನು ಸೇರಿಸಿ, ತಮ್ಮ ಸಾಮರ್ಥ್ಯ ತೋರಿದ್ದಾರೆ ಸಿದ್ದರಾಮಯ್ಯ. ಡಿಕೆ ಶಿವಕುಮಾರ್ ಏನೇ ಹೇಳಲಿ, ವೈಮನಸ್ಸು, ಶೀತಲ ಸಮರ ಹಾಗಿರಲಿ, ಆದ್ರೆ ಕಾಂಗ್ರೆಸ್ ಪಕ್ಷಕ್ಕೆ ನನ್ನ ಅನಿವಾರ್ಯತೆ ಎಷ್ಟಿದೆ ಎನ್ನೋದನ್ನ ಹೈಕಮಾಂಡ್‌ಗೆ ತೋರಿಸುವ ಪ್ರಯತ್ನ ಮಾಡಿದಂತಿತ್ತು ನಿನ್ನೆಯ ಸಮಾವೇಶ. ನನಗೆ ಸಿದ್ದರಾಮಯ್ಯ ಕಂಡರೆ ಖುಷಿ ಎಂದ ರಾಹುಲ್ ಗಾಂಧಿಗೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಅದು ಸಿದ್ದರಾಮಯ್ಯ ಮೂಲಕ ಎನ್ನುವ ವಾಸನೆ ಸಿಕ್ಕಿರಬೇಕು.

ಅಧಿಕಾರ ಇಲ್ಲದೇ ಚಡಪಡಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಈಗ ಕರ್ನಾಟಕ ಕಾಂಗ್ರೆಸ್ ಪಾಲಿನ ಆಶಾಜ್ಯೋತಿ. ತನ್ನ ಅಜ್ಜಿಯ, ತಂದೆಯ ಕಾಲದ ಹೈಕಮಾಂಡ್ ಪ್ರವೃತ್ತಿ ಆ ಖದರ್ ಬಿಟ್ಟು, ಅಧಿಕಾರ ಎನ್ನುವ ಗಾಳಿಪಟ ಹಿಡಿಯಲು ಸಿದ್ದರಾಮಯ್ಯರನ್ನು ಸೇನಾನಿಯಾಗಿ ಮಾಡಿದಂತಿದೆ. ಈ ಕ್ಷಣದ ತನಕ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಪರ ಇದ್ದಂತೆ ಕಾಣುತ್ತಿರೋದು ಸ್ಪಷ್ಟ. ಆದ್ರೆ ಮುಂದೆ ಸಿದ್ದರಾಮಯ್ಯನವರು ದೇವರಾಜ ಅರಸು ಆಗ್ತಾರಾ, ನಿಜಲಿಂಗಪ್ಪ ಆಗ್ತಾರಾ, ಬಂಗಾರಪ್ಪರ ರೀತಿ ನಾನಿರುವುದೇ ನಿಮಗಾಗಿ ಎಂದು ಪದ್ಯ ಹಾಡುವ ಸಮಯವೂ ಬರಬಹುದಾ ಅದಕ್ಕೆ ಕಾಲವೇ ಉತ್ತರವಾದಿತು.
 

click me!