ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರ ತಾಯಿಯನ್ನು ಸಾಕಷ್ಟು ನೆನೆದು ಭಾವುಕರಾದರು. ತನ್ನ ಕರ್ತವ್ಯದ ಬಗ್ಗೆ ತಾಯಿ ಹೇಳಿದ ಮಾತುಗಳನ್ನು ಕೂಡಾ ಸ್ಮರಿಸಿಕೊಂಡರು.
ಅಮ್ಮನಿಲ್ಲದೆ ಮೊದಲ ಬಾರಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಇದುವರೆಗೂ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳದೆ ನಾಮಪತ್ರ ಸಲ್ಲಿಸಿದ್ದೇ ಇಲ್ಲ ಎಂದು ಭಾವುಕರಾದರು ಪ್ರಧಾನಿ ಮೋದಿ.
ಟೈಮ್ಸ್ ನೌ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಮೋದಿ, 'ಅಮ್ಮನಿಲ್ಲದೆ ಮೊದಲ ನಾಮಪತ್ರ ಸಲ್ಲಿಕೆ ಎಂದು ನೆನಪಾಗುವಾಗಲೇ ಮತ್ತೊಂದು ವಿಷಯ ನೆನಪಾಗುತ್ತದೆ. ಅದೆಂದರೆ, 140 ಕೋಟಿ ಜನಸಂಖ್ಯೆಯ ನಮ್ಮ ದೇಶದಲ್ಲಿ ಕೋಟ್ಯಂತರ ತಾಯಂದಿರಿದ್ದಾರೆ. ಅವರೆಲ್ಲ ನನಗೆ ಪ್ರೀತಿ, ಆಶೀರ್ವಾದ ಕೊಟ್ಟಿದ್ದಾರೆ' ಎನ್ನುವಾಗ ಮಾತನಾಡಲಾಗದೆ ಗದ್ಗದಿತರಾದರು.
ಆ ಎಲ್ಲ ತಾಯಂದಿರು ಹಾಗೂ ತಾಯಿ ಗಂಗೆಯನ್ನು ಸ್ಮರಿಸಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಪ್ರಧಾನಿ ಹೇಳಿದರು.
undefined
ಅಮ್ಮನ ಕನಸನ್ನು ನನಸಾಗಿಸಿಲ್ಲ
ಎಲ್ಲ ಅಮ್ಮಂದಿರಂತೆ ನನ್ನ ತಾಯಿಯೂ ನನ್ನ ಬೆಳೆಸಿದ್ದಾಳೆ. ಆದರೆ, ಆಕೆಯ ಪ್ರೀತಿಗೆ ನಾನು ನ್ಯಾಯ ಸಲ್ಲಿಸಿಲ್ಲ. ಎಲ್ಲ ತಾಯಂದಿರಂತೆ ಆಕೆಗೂ ಸಾಕಷ್ಟು ಕನಸುಗಳಿದ್ದವು ಮಗನ ಬಗೆಗೆ. ಆದರೆ, ನಾನು ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋದೆ ಮತ್ತು ತಾಯಿಯನ್ನು ನೋಯಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.
ತಾಯಿ ಹೇಳಿದ ಮಾತುಗಳು
ನನ್ನ ತಾಯಿ ನನಗೆ ಎರಡು ಮಾತುಗಳನ್ನು ಹೇಳಿದ್ದರು. ಅದೆಂದರೆ, ಸದಾ ಬಡವರ ಪರವಾಗಿ ಯೋಚಿಸು ಮತ್ತು ಎಂದಿಗೂ ಲಂಚ ಸ್ವೀಕರಿಸಬೇಡ ಎಂದು. ಪ್ರತಿ ಬಾರಿ ನಾಮಪತ್ರ ಸಲ್ಲಿಕೆಗೂ ಮುನ್ನ ಆಶೀರ್ವಾದ ಬೇಡಿ ಹೋದಾಗ ಬೆಲ್ಲ ತಿನ್ನಿಸುತ್ತಿದ್ದರು ಅಮ್ಮ ಎಂದು ನೆನೆಸಿಕೊಂಡಿದ್ದಾರೆ ಮೋದಿ.