ಪ್ರವೀಣ್ ನೆಟ್ಟಾರು ಹತ್ಯೆಯಿಂದ ಭುಗಿಲೆದ್ದ ಆಕ್ರೋಶ; ಬಿಜೆಪಿ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ಶಿಫ್ಟ್ ಆಗ್ತಾರಾ?
Praveen Nettar murder update: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿದಂತೆ ಬಿಜೆಪಿ ಮತ್ತು ಹಿಂದುತ್ವ ಪರ ಸಂಘಟನೆಗಳು ಸಿಟ್ಟಿಗೆದ್ದಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಕೆಲವೆಡೆ ಪಕ್ಷಕ್ಕೆ ರಾಜೀನಾಮೆ ನೀಡಲಾಗುತ್ತಿದೆ. ಮೂಲಗಳ ಪ್ರಕಾರ, ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂಬ ಸಿಟ್ಟಿನಿಂದ ಪಕ್ಷವನ್ನು ತೊರೆಯಲು ಹಲವರು ಸಜ್ಜಾಗಿದ್ದಾರೆ.
ವರದಿ - ರವಿ ಶಿವರಾಮ್, ಏಷ್ಯಾ ನೆಟ್ ಸುವರ್ಣ ನ್ಯೂಸ್
ಸಂಘಟನೆಯ ಬಹಳ ಹಿರಿಯೊಬ್ಬರು ಖಾಸಗಿಯಾಗಿ ಮಾತಾಡ್ತಾ ಇದ್ದಾಗ ಒಂದು ಮಾತು ಹೇಳಿದ್ದು ನೆನಪಾಯ್ತು. 'ನಾನು ಇವತ್ತು ...... ಜೀ ಜೊತೆ ಕುಳಿತಿದ್ದೆ. ಹೀಗೆ ಮಾತಾಡುವಾಗ ಅವರು ಒಂದು ಮಾತು ಹೇಳಿದ್ರು. ಕೆಲವರು ಬಂದು ನಮಗೆ ಜೀ... ಜೀ ಅಂತ ಹೇಳ್ತಾರೆ. ಆದ್ರೆ ಹಿಂದೆ ಅವರು ಬೇರೆ ರೀತಿ ಮಾತಾಡಿಕೊಳ್ತಾರೆ. ನಮ್ಮ ಪಾರ್ಟಿ ಹುಟ್ಟಿದ ಉದ್ದೇಶ ತತ್ವ ಕೆಲವೊಮ್ಮೆ ಅಧಿಕಾರ ಎನ್ನುವ ಅಸ್ತ್ರದಡಿ ಸಿಕ್ಕಾಗ ಪಾಲನೇ ಮಾಡೋರು, ಅಥವಾ ಪಾಲಿಸೋರು ಕಡಿಮೆ ಆಗುತ್ತಾರೆ. ಈಗ ರಾಜ್ಯದಲ್ಲಿ ಹಾಗೆ ಆಗಿದೆ,' ಎನ್ನುವ ಅರ್ಥದಲ್ಲಿ ಮಾತಾಡ್ತಾ ಇದ್ರು.
ಈಗ ಅದು ಯಾಕೆ ನೆನಪಾಯ್ತು ಅಂದ್ರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಲ್ಲಿ ಇದೆ. ಮೇಲಿಂದ ಮೇಲೆ ಬಿಜೆಪಿ ಕಾರ್ಯಕರ್ತರ ಮತ್ತು ಹಿಂದುಗಳ ಕೊಲೆ ಆಗ್ತಿದೆ. ನೀವು ಕಠಿಣ ಕ್ರಮ ಅಂತಿರಲ್ಲ ಸ್ವಾಮಿ ಆ ಪದದ ಅರ್ಥ ಗೊತ್ತೆನ್ರಿ ಎಂದು ಆಕ್ರೋಶದಿಂದ ಬಿಜೆಪಿ ಕಾರ್ಯಕರ್ತರೇ ಕೇಳ್ತಾ ಇದ್ದಾರೆ. ಹಾಗೆಂದ ಮಾತ್ರಕ್ಕೆ ಇವರಿಗೆ ಬಿಜೆಪಿ ಮೇಲೆ ಕೋಪ ಎನ್ನೋದಕ್ಕಿಂತ, ಬಿಜೆಪಿ ಸರ್ಕಾರದಲ್ಲಿ ಪ್ರಮುಖ ಸ್ಥಾನದಲ್ಲಿ ಇರೋರ ಮೇಲೆ ಕೋಪ ವಿಪರೀತವಾಗಿದೆ. ಆಗಾಗ ರಾಜ್ಯ ಬಿಜೆಪಿಯಲ್ಲಿ ಕೇಳಿ ಬರುವ ಮಾತು ನಮ್ಮ ಪಕ್ಷದ ನೇಟಿವಿಟಿಗೆ ಒಪ್ಪುವ ನಮ್ಮ ಪಕ್ಷದ ಸಿದ್ಧಾಂತವನ್ನು ಮನಸ್ಸಿನಿಂದ ಅಪ್ಪುವ ನಾಯಕರು ಪಕ್ಷದಲ್ಲಿ ಇದ್ದರು ಸಹ, ಜಾತಿ ಸಮುದಾಯ ಎನ್ನುವ ವೋಟ್ ಬ್ಯಾಂಕ್ ಪಾಲಿಟಿಕ್ಸ್ ನಿಂದಾಗಿ ಇಂದು ಹೊರಗಿನಿಂದ ಬಂದವರೇ ಪ್ರಮುಖ ಸ್ಥಾನದಲ್ಲಿ ಕುಳಿತು ಮಾಡ್ತಾ ಇದ್ದಾರೆ. ಪಕ್ಷಕ್ಕಾಗಿ ದುಡಿದವರು, ಪಕ್ಷದ ಬಾವುಟ ಬ್ಯಾನರ್ ಕಟ್ಟಿದವರು ಕೇವಲ ಮಾಧ್ಯಮ ಹೇಳಿಕೆ ನೀಡೊಕೆ ಮಾತ್ರ ಬಳಕೆ ಆಗ್ತಾ ಇದ್ದಾರೆ ಎನ್ನುವ ಬೇಸರದ ಮಾತುಗಳನ್ನು ಪಕ್ಷದ ಆಂತರಿಕ ವಲಯದಲ್ಲಿ ಆಗಾಗ ಖಾಸಗಿ ಆಗಿ ಮಾತಾಡ್ತಾರೆ.
ಬಿಜೆಪಿ ಕಾರ್ಯಕರ್ತರು ಈಗ ಪ್ರವೀಣ್ ನೆಟ್ಟಾರ್ ಕೊಲೆ ಬಳಿಕ ವ್ಯಾಘ್ರರಾಗಿದ್ದಾರೆ. ಮುಖ್ಯಮಂತ್ರಿಗಳ ಆದಿಯಾಗಿ, ಗೃಹ ಸಚಿವರು ಸೇರಿದಂತೆ ಸ್ವತಃ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮೇಲೆ ತಮ್ಮ ಸಿಟ್ಟನ್ನು ತೋರುತ್ತಿದ್ದಾರೆ. ಕೆಲವು ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. ಈಗಾಗಲೇ ಕೆಲವರು ರಾಜೀನಾಮೆ ಕೂಡ ನೀಡಿ ಪಕ್ಷದ ನಾಯಕರಿಗೆ ಸಂದೇಶ ಕಳುಹಿದ್ದಾರೆ. ಅಲ್ಲಿಗೆ ಆ ಕಾರ್ಯಕರ್ತರು ಬಿಜೆಪಿಯನ್ನು ಸಂಪೂರ್ಣವಾಗಿ ತ್ಯಜಿಸಿದ್ರು ಎಂದರ್ಥವೇ? ಖಂಡಿತ ಅಲ್ಲ. ಅವರ ಆಕ್ರೋಶ, ಅವರ ಅಸಹಾಯಕತೆ ಬೇರೆ ಪಕ್ಷಗಳಿಗೆ ಲಾಭ ಆಯಿತೆ, ಅಥವಾ ಆ ಯುವ ಸಮುಹ ಬೇರೆ ಪಕ್ಷಗಳಿಗೆ ಶಿಪ್ಟ್ ಆಗ್ತಾರೆ ಎಂದು ಕೇಳಿದ್ರೆ, ಖಂಡಿತ ಆ ಚಾನ್ಸ್ ಕಡಿಮೆ. ಅವರ ಕೋಪ ಏನೆ ಇದ್ದರು ಪಕ್ಷದ ಮೇಲೆ ಅಲ್ಲ. ಆಡಳಿತ ನಡೆಸುತ್ತಿರುವ ಕೆಲ ನಾಯಕರ ಮೇಲೆ ಮಾತ್ರ.
ಇದನ್ನೂ ಓದಿ: Praveen Nettaru Murder Case: ಅಂತಿಮ ಯಾತ್ರೆ ವೇಳೆ ಭುಗಿಲೆದ್ದ ಬಿಜೆಪಿ ಕಾರ್ಯಕರ್ತರ ಆಕ್ರೋಶ
ಬಿಜೆಪಿ ಕೇವಲ ಒಂದು ಚುನಾವಣೆಗೆ ಹಿಂದುತ್ವದ ಹೆಸರನ್ನು ಹೇಳಿ ಅಧಿಕಾರಕ್ಕೆ ಬಂದಿಲ್ಲ. ಹಿಂದುತ್ವದ ಭಾವನೆಗೆ ಹಿಂದುಗಳ ರಕ್ಷಣೆಗೆ ನಾವು ಉದಯವಾಗುತ್ತಿದ್ದೇವೆ ಎನ್ನುವ ಘೋಷ ವಾಕ್ಯದೊಂದಿಗೆ ಬಿಜೆಪಿಯ ಕಮಲ ಅರಳಿದ್ದು. ಕೇಂದ್ರದಲ್ಲಿ ಇರಲಿ, ದೇಶದ ಬೇರೆ ಬೇರೆ ರಾಜ್ಯದಲ್ಲಿರಲಿ ಬಿಜೆಪಿ ಸರ್ಕಾರ ಬರೋದಕ್ಕೆ ಅಭಿವೃದ್ಧಿ ಜಪ ಮಾತ್ರದಿ ಜನ ಮತ ಹಾಕಿಲ್ಲ. ಈ ದೇಶದ ಅಸ್ಮಿತೆಯಲ್ಲಿ ಹಿಂದುತ್ವ ಕೂಡ ಒಂದು ಅದನ್ನು ನಾವು ಕಾಪಾಡುತ್ತೇವೆ ಎನ್ನುವ ಬಿಜೆಪಿ ವಾಗ್ದಾನಕ್ಕೆ ಜನತ ಹಾಕಿದ್ದಾರೆ.
ಮೊದಲು ರಾಮಮಂದಿರ ಕಟ್ಟುತ್ತೇವೆ ಎನ್ನುವ ಭರವಸೆ, ಬಳಿಕ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎನ್ನುವ ಘೋಷಣೆ, ಕಾಶ್ಮೀರದಲ್ಲಿ ಎರಡೆರಡು ಧ್ವಜ ಹಾರಲು ಬಿಡೋದಿಲ್ಲ ಎನ್ನುವ ಬದ್ಧತೆಯ ಮಾತು, ಈ ನೆಲದ ಸಂಸ್ಕ್ರತಿ ಘತ ಇತಿಹಾಸವನ್ನು ಮರಳಿ ತರುತ್ತವೆ ಎನ್ನುವ ಬಿಜೆಪಿಯ ಏರು ದನಿಗೆ ಜೊತೆಗೂಡಿ ಅನೇಕರು ಮತ ಹಾಕಿದ್ದಾರೆ. ಹಾಗಂತ ಬಿಜೆಪಿ ನೀಡಿದ ಅನೇಕ ಈ ರೀತಿಯ ಭಾವನಾತ್ಮಕ ಘೋಷಣೆಗಳನ್ನು ಜಾರಿಗೆ ತಂದಿದೆ ಬಿಡಿ. ರಾಮಮಂದಿರ ನಿರ್ಮಾಣ ಆಗುತ್ತಿದೆ. ಕಾಶ್ಮೀರ ಲಾಲ್ ಚೌಕಬಲ್ಲಿ ಇಂದು ನಿರ್ಭಿಡೆಯಿಂದ ಭಾರತದ ಧ್ಜಜ ಹಾರುತ್ತಿದೆ. ಕಾಶ್ಮೀರದಲ್ಲಿ ಕಲ್ಲು ಹೊಡೆಯೊದನ್ನೇ ಉದ್ಯೋಗ ಮಾಡಿಕೊಂಡಿದ್ದವರ ಕೈವೆ ಕೋಳ ಬಿದ್ದಿದೆ. ಅಲ್ಲಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದೆ ಇದೇ ಬಿಜೆಪಿ ಸರ್ಕಾರ.
ಇದನ್ನೂ ಓದಿ: ಪ್ರವೀಣ್ ಹತ್ಯೆಯಲ್ಲಿ ಕೇರಳ ಮತಾಂಧ ಸಂಘಟನೆಗಳ ನಂಟು ಶಂಕೆ
ಬಿಜೆಪಿ ಕಾರ್ಯಕರ್ತರು ಮೋದಿಯನ್ನು ನಂಬುತ್ತಾರೆ. ಯೋಗಿ ಆದಿತ್ಯನಾಥ್ ರನ್ನು ಬೆಂಬಲಿಸುತ್ತಾರೆ. ಅಮಿತ್ ಶಾಗೆ ಜೈ ಎನ್ನುತ್ತಾರೆ. ಆದ್ರೆ ನಮ್ಮ ರಾಜ್ಯಕ್ಕೆ ಬಂದಾಗ ಮಾತ್ರ ಬಿಜೆಪಿ ಕಾರ್ಯಕರ್ತರ ಕೂಗು, ನಮಗೆ ಯೋಗಿ ಬೇಕು, ಮೋದಿ ಆಡಳಿತ ಶೈಲಿ ಬೇಕು, ಕೇವಲ ಘೋಷಣೆ ಮಾಡುವ ಅಥವಾ ಬುದ್ದಿವಂತಿಕೆಯಿಂದ ಮಾತನಾಡುವ ನಾಯಕರು ಬೇಡ. ಪಾರ್ಟಿಯಲ್ಲಿ ಅಂತವರು ಇದ್ದಾರೆ, ಆದ್ರೆ ಜಾತಿ ಸಮುದಾಯ ಮತ ಬ್ಯಾಂಕ್ ಎನ್ನುವ ಕಾರಣಕ್ಕೆ ಅವರೆಲ್ಲಾ ಮೂಲೆ ಗುಂಪಾಗಿದ್ದಾರೆ ಎನ್ನೋದು ಕಾರ್ಯಕರ್ತ ಅಳಲು. ಬಿಜೆಪಿಯ ಮೂಲ ಸಿದ್ಧಾಂತವನ್ನು ಪ್ರತಿಪಾದಿಸುವ, ಪಕ್ಷ ಬಯಸುವ ಅಥವಾ ಪಕ್ಷದ ರೀತಿ ನೀತಿಗಳನ್ನು ಅಳವಡಿಸಿಕೊಂಡು ಪಾಲಿಸುವ ವ್ಯಕ್ತಿಯ ಕೈಗೆ ಅಧಿಕಾರ ಕೊಡಿ ಎನ್ನುತ್ತಾ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸಿಟಿ ರವಿ, ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಸುನೀಲ್ ಕುಮಾರ್ ಅಂತಹ ಪಕ್ಷದ ಪ್ರಬಲ ಸಿದ್ಧಾಂತ ಪ್ರತಿಪಾದಕರ ಫೋಟೊಗಳು ಶೇರ್ ಮಾಡುತ್ತಾ ತಮಗೆ ಇಂತಹ ನಾಯಕರು ಬೇಕು ಎನ್ನುತ್ತಿರುತ್ತಾರೆ ಬಿಜೆಪಿ ಕಾರ್ಯಕರ್ತರು. ಈಗ ಪ್ರವೀಣ್ ಹತ್ಯೆ ಬಳಿಕ ನೆನ್ನೆಯಿಂದ ಅದು ಹೆಚ್ಚಾಗಿದೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರಗ ‘ಹಿಜಾಬ್ ಶಕ್ತಿ’ ಹೇಳಿಕೆಗೆ ಡಿಕೆಶಿ ಕಿಡಿ
ಇತ್ತಿಚಿನ ದಿನಮಾನಗಳಲ್ಲಿ ರಾಜ್ಯ ಬಿಜೆಪಿ ನಾಯಕರು ಇಷ್ಟು ಕಂಗಾಲಾಗಿದ್ರೊ ಇಲ್ವೊ? ಟಿವಿ ಚಾನಲ್ ಒಂದಕ್ಕೆ ಕರೆ ಮಾಡಿದ್ದ ವ್ಯಕ್ತಿ ಒಬ್ಬರು ಅಭಿವೃದ್ಧಿ ಮಾಡೋಕೆ, ರಸ್ತೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರವೇ ಬೇಕು ಅಂತ ಇಲ್ಲ. ಜನರ ಟ್ಯಾಕ್ಸ್ ಮನಿ ಇರ್ತದೆ, ಅದನ್ನು ಯಾವ ಸರ್ಕಾರ ಬಂದ್ರು ಮಾಡುತ್ತದೆ. ಆದ್ರೆ ನಾವು ಬಿಜೆಪಿಗೆ ಓಟ್ ಹಾಕಿದ್ದು ಕೇವಲ ಈ ಕಾರಣಕ್ಕೆ ಅಲ್ಲ. ನಮ್ಮ ನೆಲದ, ಹಿಂದುತ್ವದ ಅಸ್ಮಿತೆ ಕಾಪಾಡುವ, ಹಿಂದುಗಳ ರಕ್ಷಣೆ ಮಾಡುವ ಕಾರ್ಯಕ್ಕೆ ಬಿಜೆಪಿ ಕೈ ಜೋಡಿಸುತ್ತದೆ ಎಂದು ನಾವು ಮತ ಹಾಕಿದ್ದೇವೆ ಎನ್ನುವ ಮಾತನ್ನು ಜೋರಾಗಿ ಹೇಳ್ತಿದ್ರು. ಹೌದು ಬಿಜೆಪಿ ಪಕ್ಷ ಅದರ ನಾಯಕರು ಕೇವಲ ಅಭಿವೃದ್ಧಿ ಮಾಡ್ತೇವೆ ಮತ ಕೊಡಿ ಎಂದು ಕೇಳಿಲ್ಲ ನೋಡಿ. 2018 ರ ವಿಧಾನಸಭೆ ಚುನಾವಣೆಯಲ್ಲಿ ಹೊನ್ನಾವರದಲ್ಲಿ ಪರೇಶ್ ಮೇಸ್ತಾ ಸಾವಾಗಿತ್ತು. ಅಂದು ಸಂಸದ ಅನಂತ್ ಕುಮಾರ್ ಹೆಗಡೆ ಭಾಷಣ ಮಾಡುತ್ತಾ, ಈ ರಕ್ತದ ಹನಿ ವ್ಯರ್ಥ ಆಗಲು ಬಿಡೋದಿಲ್ಲ ಎಂದಿದ್ರು. ಅಕ್ಕ ಪಕ್ಕ ಸೇರಿದ್ದ ಕಾರ್ಯಕರ್ತರು ಹೋ ಎಂದು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ರು. ಅದಾದ ಮೇಲೆ ಅದೆಷ್ಟು ಕೊಲೆ ಆಯ್ತು ಅದು ಬೇರೆ ಬಿಡಿ.
ಅಷ್ಟೇ ಅಲ್ಲ ಆಗ ಸ್ವತಃ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಪರೇಶ್ ಮೇಸ್ತಾ ನಿವಾಸಕ್ಕೆ ಹೋಗಿ ಬಂದಿದ್ರು. 2018 ರ ಚುನಾವಣೆ ಫಲಿತಾಂಶದ ಮೇಲೆ ಅದು ಪರಿಣಾಮ ಬೀರತ್ತೆಂದರೆ ಕರಾವಳಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. ಚುನಾವಣೆ ಫಲಿತಾಂಶದ ತರುವಾಯ, ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ ಪರಮೇಶ್ವರ್ ನಿವಾಸಕ್ಕೆ ಕರಾವಳಿ ಭಾಗದ ಕೆಲ ಕಾಂಗ್ರೆಸ್ ನಾಯಕರು ಬಂದು, ನಮಗೆ ಪಕ್ಷದಲ್ಲಿ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದಾಗ, ಪರಮೇಶ್ವರ್ ಸಿಟ್ಟಾಗಿ, ಚುನಾವಣೆಯಲ್ಲಿ ಬುಡ ಸಹಿತ ಮರ ಕಡಿದು ಈಗ ಪಕ್ಷದ ಜವಬ್ದಾರಿ ಕೇಳೊಕೆ ಬಂದಿದ್ದಿರಾ ಎಂದು ಕಾರ್ಯಕರ್ತರ ಮೇಲೆ ಗರಂ ಆಗಿದ್ದನ್ನು ನಾವು ನೋಡಿದ್ದೇವೆ. ಅಂದರೆ ಒಂದು ಸಾವಿನಿಂದ ಆ ಭಾಗದ ಜನ ಬಿಜೆಪಿ ನಂಬಿ ಮತ ಹಾಕಿದ್ರು.
ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿ, ಹಿಂದೂ ಪರ ಸಂಘಟನೆಗಳ ಪ್ರತಿಭಟನೆ
ಈಗ ಬಿಜೆಪಿ ಅಧಿಕಾರದಲ್ಲಿದೆ. ಈಗಲೂ ಆ ಕೊಲೆ ಸರಣಿ ಮುಂದುವರಿದರೆ ಮತ ಹಾಕಿದ್ದ ಅದೇ ಜನರು ಸುಮ್ಮನಿರ್ತಾರಾ? ಬಿಜೆಪಿಗೆ ಕಾರ್ಯಕರ್ತರ ಬಲ ಇದೆ. ಹಾಗೆ ಬಿಜೆಪಿ ನಾಯಕರಿಗೆ ಅದೇ ಕಾರ್ಯಕರ್ತರ ಭಯವೂ ಇರಲಿ ಇರಬೇಕು ಎನ್ನೋದ ನೆನ್ನೆ ತೋರಿಸಿದ್ದಾರೆ.