
ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ನಿಗಮಕ್ಕೆ (ಬಿಎಂಟಿಸಿ) ಇಟಿಎಂ ಮಿಷನ್ (ಟಿಕೆಟ್ ಯಂತ್ರ) ಮಾರಾಟ ಮಾಡಿ ನಿರ್ವಹಣೆ ಮಾಡುತ್ತಿದ್ದ ‘ಟ್ರೈಮ್ಯಾಕ್ಸ್’ ಕಂಪನಿ ದಿವಾಳಿಯಾಗಿದ್ದರಿಂದ ಇಂತಹುದೇ ಯಂತ್ರ ಪೂರೈಸುವ ಕಂಪನಿ ಹುಡುಕಾಟಕ್ಕೆ ಬಿಎಂಟಿಸಿ ಮುಂದಾಗಿದ್ದರೆ, ಇತ್ತ ನಿರ್ವಾಹಕರು ಮುದ್ರಿತ ಟಿಕೆಟ್ ವಿತರಿಸುವ ಹಳೆ ಪದ್ಧತಿಗೆ ಹೊಂದಿಕೊಳ್ಳಲು ಪರದಾಡುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಬಿಎಂಟಿಸಿಯ ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್) ನಿರ್ವಹಣೆ ಮಾಡುತ್ತಿದ್ದ ‘ಟ್ರೈಮ್ಯಾಕ್ಸ್’ ಕಂಪನಿ ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ನಿಗಮದ ಐಟಿಎಸ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಸುಮಾರು ಮೂರು ಸಾವಿರ ಇಟಿಎಂ ಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ದುರಸ್ತಿ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಟ್ರೈಮ್ಯಾಕ್ಸ್ ಕಂಪನಿಯಿಂದ ಇಟಿಎಂ ಯಂತ್ರ ನಿರ್ವಹಣೆಯ ಉಪ ಗುತ್ತಿಗೆ ಪಡೆದಿರುವ ‘ವೆರಿಪೋನ್’ ಕಂಪನಿಯನ್ನು ನೇರವಾಗಿ ಸಂಪರ್ಕಿಸಿದ್ದು, ನಿರ್ವಹಣೆ ಮುಂದುವರಿಸುವ ಸಂಬಂಧ ಮಾತುಕತೆಯಲ್ಲಿ ತೊಡಗಿದೆ. ಇಟಿಎಂ ಯಂತ್ರಗಳು ದುರಸ್ತಿಯಾಗುವವರೆಗೂ ಪೂರ್ವ ಮುದ್ರಿತ ಟಿಕೆಟ್ ವಿತರಿಸುವಂತೆ ಸೂಚಿಸಲಾಗಿದೆ.
ಇಷ್ಟುದಿನ ಪ್ರಯಾಣಿಕರಿಗೆ ಇಟಿಎಂ ಯಂತ್ರಗಳಲ್ಲಿ ಟಿಕೆಟ್ ನೀಡುತ್ತಿದ್ದ ನಿರ್ವಾಹಕರಿಗೆ ಅನಿರೀಕ್ಷಿತ ಬೆಳವಣಿಗೆಯಿಂದ ಹಳೆಯ ವ್ಯವಸ್ಥೆ ಅಂದರೆ ಪೂರ್ವ ಮುದ್ರಿತ ಟಿಕೆಟ್ ವಿತರಿಸುವ ಅನಿರ್ವಾರ್ಯತೆ ಎದುರಾಗಿದೆ. ಏಕೆಂದರೆ, ಇಟಿಎಂ ಯಂತ್ರಗಳು ನಿರ್ವಾಹಕರ ಸ್ನೇಹಿಯಾಗಿದ್ದು, ವೇಗವಾಗಿ ಟಿಕೆಟ್ ನೀಡಲು ಸಹಕಾರಿಯಾಗಿವೆ. ಪೂರ್ವ ಮುದ್ರಿತ ಟಿಕೆಟ್ ವಿತರಣೆ ಕಷ್ಟದ ಕೆಲಸ. ಕೈ ತುಂಬ ಟಿಕೆಟ್‌ಗಳ ಕಟ್ಟು ಹಿಡಿದುಕೊಂಡು ಪ್ರಯಾಣಿಕರು ಹೇಳುವ ನಿಲ್ದಾಣಕ್ಕೆ ನಿಗದಿತ ದರದ ಟಿಕೆಟ್ ನೀಡಬೇಕು. ಈ ಪ್ರಕ್ರಿಯೆಗೆ ಬಹಳಷ್ಟುಸಮಯ ಹಿಡಿಯುತ್ತದೆ. ಬಸ್‌ನಲ್ಲಿ ಪ್ರಯಾಣಿಕರ ದಟ್ಟಣೆ ಇತ್ತೆಂದರೆ ಪೂರ್ವಮುದ್ರಿತ ಟಿಕೆಟ್ ನೀಡುವುದು ಸಾಹಸದ ಕೆಲಸವಾಗುತ್ತದೆ. ಚಾಲಕ ಕಂ ನಿರ್ವಾಹಕನ ಕರ್ತವ್ಯ ನಿರ್ವಹಿಸುವವರಿಗೆ ಇದು ಸವಾಲಾಗುತ್ತದೆ ಎಂದು ಕೆಂಗೇರಿಯ ಬಿಎಂಟಿಸಿ ಘಟಕ 37ರ ಚಾಲಕ ಕಂ ನಿರ್ವಾಹಕರೊಬ್ಬರು ಆತಂಕ ವ್ಯಕ್ತಪಡಿಸಿದರು.
ನಿಯಮದ ಪ್ರಕಾರ ನಿಗದಿತ ಮಾರ್ಗದ ಪ್ರತಿ ಸ್ಟೇಜ್(ಹಂತ) ಮುಕ್ತಾಯದ ಬಳಿಕ ಯಾವ ದರ ಟಿಕೆಟ್‌ಗಳು ಎಷ್ಟುಮಾರಾಟವಾಗಿವೆ ಎಂಬ ಮಾಹಿತಿಯನ್ನು ಟ್ರಿಪ್ ಶೀಟ್‌ನಲ್ಲಿ ನಮೂದಿಸಬೇಕು. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದಾಗ ಟಿಕೆಟ್ ನೀಡುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ. ಬಸ್ ಸ್ಟೇಜ್ ಹಾದುಹೋಗುವುದೇ ಗೊತ್ತಾಗುವುದಿಲ್ಲ. ಈ ನಡುವೆ ನಿಗಮದ ತನಿಖಾಧಿಕಾರಿಗಳು ಮಾರ್ಗ ಮಧ್ಯೆ ಬಸ್ ತಪಾಸಣೆ ಮಾಡಿದರೆ, ಟಿಕೆಟ್ ಜತೆಗೆ ಟ್ರಿಪ್ ಶೀಟ್ ಪರಿಶೀಲಿಸುತ್ತಾರೆ. ಒಂದು ವೇಳೆ ಟಿಕೆಟ್‌ಗಳ ಮಾಹಿತಿ ನಮೂದಿಸದಿದ್ದರೆ ದಂಡ ವಿಧಿಸಿ ವಿಚಾರಣೆಗೆ ನೋಟಿಸ್ ನೀಡುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ.
ಹೀಗಾಗಿ, ಇಷ್ಟುದಿನ ಇಟಿಎಂ ಯಂತ್ರಗಳಿಗೆ ಹೊಂದಿಕೊಂಡಿದ್ದ ನಿರ್ವಾಹಕರು ಒಲ್ಲದ ಮನಸ್ಸಿನಿಂದ ಪೂರ್ವ ಮುದ್ರಿತ ಟಿಕೆಟ್ ವಿತರಿಸುತ್ತಿದ್ದಾರೆ. ಇಟಿಎಂ ಯಂತ್ರಗಳ ದುರಸ್ತಿಯನ್ನೇ ಎದುರು ನೋಡುತ್ತಿದ್ದಾರೆ.
ಆಗ ಪರ್ಯಾಯ ಇರಲಿಲ್ಲ
ಇಟಿಎಂ ಯಂತ್ರಗಳು ಪರಿಚಯಿಸುವುದಕ್ಕೂ ಮುನ್ನ ಪೂರ್ವಮುದ್ರಿತ ಟಿಕೆಟ್‌ಗಳನ್ನೇ ನೀಡಲಾಗುತ್ತಿತ್ತು. ಆಗ ಪರ್ಯಾಯ ಆಯ್ಕೆಗಳು ಇರಲಿಲ್ಲ. ಹಾಗಾಗಿ ಕಷ್ಟವೂ ಸುಖವೋ ಕರ್ತವ್ಯ ಮಾಡಲಾಗುತ್ತಿತ್ತು. ಈಗ ತಂತ್ರಜ್ಞಾನ ಬಹಳ ಮುಂದುವರಿದಿದ್ದು, ಆಯ್ಕೆಗಳು ಬಹಳಷ್ಟಿವೆ. ಹಾಗಾಗಿ ಲಭ್ಯವಿರುವ ಸೇವೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ನಿಗಮ ಆದಷ್ಟುಬೇಗ ಇಟಿಎಂ ಸಮಸ್ಯೆ ಬಗೆಹರಿಸಬೇಕೆಂದು ಪೂರ್ಣಪ್ರಜ್ಞಾ ಬಡಾವಣೆಯ ಬಿಎಂಟಿಸಿ ಘಟಕ 33ರ ನಿರ್ವಾಹಕರೊಬ್ಬರು ಹೇಳಿದರು.
ಚತುರ ಸಾರಿಗೆ ವ್ಯವಸ್ಥೆ(ಐಟಿಎಸ್) ಸೇವೆಯಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಶೀಘ್ರದಲ್ಲೇ ಇಟಿಎಂ ಯಂತ್ರಗಳ ದುರಸ್ತಿ ಮಾಡಿಸಲಾಗುವುದು. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಚುನಾವಣೆ ಬಳಿಕ ನಿಗಮದ ಮಂಡಳಿ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
-ಡಾ.ಎನ್.ವಿ.ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ
ವರದಿ : ಮೋಹನ ಹಂಡ್ರಂಗಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.