ಕನ್ನಡ ಕಲಿಕೆಗೆ ರಾಜ್ಯದ 47 ಶಾಲೆಗಳ ಸಡ್ಡು

By Web DeskFirst Published Nov 1, 2018, 8:58 AM IST
Highlights

ರಾಜ್ಯ ಸರ್ಕಾ​ರವು 2018-19ನೇ ಸಾಲಿನಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ 1ರಿಂದ 10ನೇ ತರಗತಿವರೆಗೂ ಬೋಧನೆ ಮಾಡಬೇಕೆಂಬ ಕಟ್ಟುನಿಟ್ಟಿನ ಕಾನೂನು ಮಾಡಿದೆ. ಆದರೆ, ರಾಜ್ಯಾದ್ಯಂತ 47 ಖಾಸಗಿ ಶಾಲೆಗಳು ರಾಜ್ಯ ಸರ್ಕಾ​ರಕ್ಕೆ ಸಡ್ಡು ಹೊಡೆ​ದಿ​ದ್ದು, ಕನ್ನ​ಡಕ್ಕೆ ಕ್ಯಾರೆ ಎನ್ನು​ತ್ತಿ​ಲ್ಲ.

ಬೆಂಗಳೂರು :  ಇಂದು ಕನ್ನಡ ರಾಜ್ಯೋ​ತ್ಸವ. ಕನ್ನಡ ಕಲಿ​ಕೆ​ ರಾಜ್ಯ​ದಲ್ಲಿ ಪ್ರಧಾ​ನ​ವಾ​ಗ​ಬೇಕು ಎಂದು ರಾಜ್ಯ ಸರ್ಕಾ​ರವು 2018-19ನೇ ಸಾಲಿನಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ 1ರಿಂದ 10ನೇ ತರಗತಿವರೆಗೂ ಬೋಧನೆ ಮಾಡಬೇಕೆಂಬ ಕಟ್ಟುನಿಟ್ಟಿನ ಕಾನೂನು ಮಾಡಿದೆ. ಆದರೆ, ರಾಜ್ಯಾದ್ಯಂತ 47 ಖಾಸಗಿ ಶಾಲೆಗಳು ರಾಜ್ಯ ಸರ್ಕಾ​ರಕ್ಕೆ ಸಡ್ಡು ಹೊಡೆ​ದಿ​ದ್ದು, ಕನ್ನ​ಡಕ್ಕೆ ಕ್ಯಾರೆ ಎನ್ನು​ತ್ತಿ​ಲ್ಲ.

ಹೀಗೆಂದು ಖುದ್ದು ಶಿಕ್ಷಣ ಇಲಾ​ಖೆಯೇ ಹೇಳು​ತ್ತಿದೆ. ಸರ್ಕಾ​ರದ ನೀತಿ​ಯನ್ನು ಪಾಲಿ​ಸದ 47 ಶಾಲೆ​ಗಳ ಪಟ್ಟಿ​ಯನ್ನು ಶಿಕ್ಷಣ ಇಲಾಖೆ ಸಿದ್ಧಪ​ಡಿ​ಸಿದೆ. ರಾಜ್ಯ ಪಠ್ಯಕ್ರಮ, ಸಿಬಿ​ಎ​ಸ್‌ಇ ಹಾಗೂ ಐಸಿಎಸ್‌ಇ ಪಠ್ಯ​ಕ್ರ​ಮ​ದಲ್ಲಿ ಬೋಧನೆ ಮಾಡು​ತ್ತಿ​ರುವ ಈ 47 ಖಾಸಗಿ ಶಾಲೆ​ಗಳು ಕನ್ನಡ ಕಲಿ​ಸ​ಬೇಕು ಎಂಬ ನಿಯ​ಮ​ವನ್ನು ಪಾಲಿ​ಸು​ತ್ತಿಲ್ಲ.

ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಈ 47 ಶಾಲೆ​ಗಳ ಪೈಕಿ 31 ಶಾಲೆ​ಗಳು ರಾಜ​ಧಾನಿ ಬೆಂಗ​ಳೂ​ರಿ​ನಲ್ಲೇ ಇವೆ. ಈ ಶಾಲೆ​ಗಳು ಸರ್ಕಾರದ ಹೊಸ ನೀತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂಬ ಮಾಹಿ​ತಿಯು ಶಿಕ್ಷಣ ಇಲಾ​ಖೆ​ಯಿಂದಲೇ ಲಭ್ಯ​ವಾ​ಗಿ​ದೆ. ಆದರೂ, ಈ ಶಾಲೆ​ಗಳ ಮೇಲೆ ಇನ್ನೂ ಯಾವುದೇ ಕ್ರಮ ಜರು​ಗಿ​ಸ​ಲಾ​ಗಿಲ್ಲ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ‘ಕನ್ನಡ ಭಾಷಾ ಕಲಿಕಾ ಅಧಿನಿಯಮ-2015’ರ ಪ್ರಕಾರ ರಾಜ್ಯದ ಪ್ರತಿ ಶಾಲೆಗಳು ಕನ್ನಡ ಕಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದರ ಆಧಾ​ರದ ಮೇಲೆ ರಾಜ್ಯ ಸರ್ಕಾರವು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂಬ ನೀ​ತಿ​ಯನ್ನು ರಾಜ್ಯ​ದಲ್ಲಿ ಕಡ್ಡಾ​ಯ​ವಾಗಿ ಜಾರಿಗೆ ತಂದಿದೆ. ಈ ನೀತಿ​ಯನ್ನು ರಾಜ್ಯದಲ್ಲಿರುವ ಸುಮಾರು 25 ಸಾವಿರ ಖಾಸಗಿ ಕಾಲೇ​ಜು​ಗಳು ಪಾಲಿ​ಸಲು ಮುಂದಾ​ಗಿವೆ. ಆದರೆ, ಈ 47 ಖಾಸಗಿ ಶಾಲೆ​ಗಳು ಮಾತ್ರ ಜಪ್ಪಯ್ಯ ಎನ್ನು​ತ್ತಿಲ್ಲ. ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಸರ್ಕಾ​ರದ ನೀತಿಗೆ ಕ್ಯಾರೆ ಎನ್ನದ ಈ ಶಾಲೆ​ಗಳ ಪೈಕಿ ಹೆಚ್ಚಿನವು ಅಂತಾ​ರಾ​ಷ್ಟ್ರೀಯ ಶಾಲೆ​ಗ​ಳು!

ನಿಯಮ ಪಾಲಿಸದ ಶಾಲೆಗಳು:  ಬೆಂಗಳೂರಿನ ಸಂಜಯನಗರದ ಶಿಕ್ಷಾನಗರ ಸಾಗರ ಶಾಲೆ, ಕಾವಲ್‌ ಬೈರಸಂದ್ರದ ಪೂರ್ಣಸ್ಮೃತಿ ಶಾಲೆ, ಸುಂಕದಕಟ್ಟೆಯ ಗಂಗೋತ್ರಿ ಅಂತಾರಾಷ್ಟ್ರೀಯ ಶಾಲೆ, ಇಂಡಿಯನ್‌ ಪಬ್ಲಿಕ್‌ ಶಾಲೆ, ಪ್ರಗತಿ ದಿ ಸ್ಕೂಲ್‌, ಸಂಹಿತಾ ಅಕಾಡೆಮಿ, ರವೀಂದ್ರ ಭಾರತಿ, ಏರ್‌ ಇನ್ನೋವೇಟಿವ್‌, ಎಸ್‌ಎಸ್‌ಎಂ ಪಬ್ಲಿಕ್‌ ಸ್ಕೂಲ್‌, ಆರ್‌ಎಂಎಸ್‌ ಐಕ್ಯ ಸ್ಕೂಲ್‌, ಈಸ್ಟ್‌ ವೆಸ್ಟ್‌ ಅಕಾಡೆಮಿ ಸೇರಿದಂತೆ ಬೆಂಗಳೂರಿನ 31 ಶಾಲೆಗಳು ಹಾಗೂ ರಾಜ್ಯದ ಇತರೆಡೆಯ 16 ಶಾಲೆಗಳು.

ಏನು ಕ್ರಮ ಕೈಗೊಳ್ಳಬಹುದು?:  ನಿಯಮಗಳ ಪ್ರಕಾರ, ರಾಜ್ಯ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ನೋಟಿಸ್‌ ನೀಡಿ ಕಾರಣ ಕೇಳಬೇಕು. ಸಮರ್ಪಕ ಉತ್ತರ ಬಾರದಿದ್ದಲ್ಲಿ, ಶಾಲೆಗಳ ಮಾನ್ಯತೆ ರದ್ದುಗೊಳಿಸಬೇಕು. ಇನ್ನು ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ನೋಟಿಸ್‌ ನೀಡುವ ಜತೆಗೆ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಮಂಡಳಿಗೆ ಶಾಲೆಗಳು ನಿಯಮ ಉಲ್ಲಂಘಿಸಿರುವ ಕುರಿತು ಸರ್ಕಾರ ಪತ್ರ ಬರೆಯಬೇಕು. ನಂತರ ಮಾನ್ಯತೆ ರದ್ದತಿಗೆ ಸೂಚಿಸಬೇಕು. ಅಲ್ಲದೆ, ಮೊದಲ ಬಾರಿಗೆ ಶಾಲೆಗಳಿಗೆ ನೋಟಿಸ್‌ ನೀಡಿ ಗಡುವು ನೀಡಬೇಕು. ಗಡುವು ಮುಗಿದ ಬಳಿಕವೂ ನಿಯಮ ಪಾಲಿಸದಿದ್ದರೆ ಪ್ರತಿ ದಿನ 100 ರು. ದಂಡ ವಿಧಿಸಬೇಕು.

ನಿಯಮ ಉಲ್ಲಂಘಿಸಿರುವ ಯಾವುದೇ ಶಾಲೆಗಳ ವಿರುದ್ಧ ಇಲಾಖೆಯು ಈವರೆಗೆ ಕ್ರಮ ಜರುಗಿಸಿರುವ ಉದಾಹರಣೆಗಳಿಲ್ಲ. ಇಲಾಖೆ ಕ್ರಮ ಕೈಗೊಳ್ಳದಿರುವುದೇ ಖಾಸಗಿ ಶಾಲೆಗಳಿಗೆ ವರವಾಗಿ ಪರಿಣಮಿಸಿದ್ದು, ಕನ್ನಡ ವಿರೋಧಿತನ ಪ್ರದರ್ಶಿಸುತ್ತಿವೆ.

ನಿಯಮ ಉಲ್ಲಂಘಿಸಿರುವ ಶಾಲೆಗಳಿಗೆ ನೋಟಿಸ್‌ ನೀಡುವಂತೆ ಮತ್ತು ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

- ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ

ರಾಜ್ಯದ ಖಾಸಗಿ ಶಾಲೆಗಳು    ನಿಯಮ ಪಾಲಿಸದ ಶಾಲೆಗಳು

ರಾಜ್ಯ ಪಠ್ಯಕ್ರಮ    24,978    8

ಸಿಬಿಎಸ್‌ಇ    752    29

ಐಸಿಎಸ್‌ಇ    301    10

ಒಟ್ಟು    26,031    47

ಬೆಂಗಳೂರಿನ ಖಾಸಗಿ ಶಾಲೆಗಳು    ನಿಯಮ ಪಾಲಿಸದ ಶಾಲೆಗಳು

ರಾಜ್ಯ ಪಠ್ಯಕ್ರಮ 3,153    8

ಸಿಬಿಎಸ್‌ಇ    273    14

ಐಸಿಎಸ್‌ಇ    213    9

ಒಟ್ಟು    3,639    31

ವರದಿ :  ಎನ್‌.ಎಲ್‌. ಶಿವಮಾದು

click me!