ಬ್ಯಾಂಕಿಗೆ ಬಂದ ಸಾಲಮನ್ನಾ ಹಣ ಬಳಿಕ ವಾಪಸ್

By Web DeskFirst Published Jun 11, 2019, 7:28 AM IST
Highlights

ಚುನಾವಣೆಗೂ ಕೆಲ ದಿನಗಳ ಮುನ್ನ ರೈತರ ಖಾತೆಗಳಿಗೆ ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಡಿ ರೈತರ ಖಾತೆಗಳಿಗೆ ಜಮೆ ಮಾಡಿದ ಹಣವು ಚುನಾವಣೆ ಮುಗಿಯುತ್ತಿದ್ದಂತೆ ರೈತರ ಖಾತೆಗಳಿಂದ ಮಾಯವಾಗಿದೆ. 

ಯಾದಗಿರಿ :  ಲೋಕಸಭಾ ಚುನಾವಣೆಗೂ ಕೆಲ ದಿನಗಳ ಮುನ್ನ ರೈತರ ಖಾತೆಗಳಿಗೆ ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಡಿ ರೈತರ ಖಾತೆಗಳಿಗೆ ಜಮೆಯಾದ ಹಣ ಚುನಾವಣೆ ಮುಗಿಯುತ್ತಿದ್ದಂತೆ ಸದ್ದಿಲ್ಲದೆ ಮಾಯ!

"

ಹೌದು, ಯಾದಗಿರಿ ಜಿಲ್ಲೆಯಲ್ಲಿ ಸಾವಿರಾರು ರೈತರಿಗೆ ಸರ್ಕಾರ ಇಂಥದ್ದೊಂದು ಆಘಾತ ನೀಡಿದ್ದು, ಸಂಬಂಧಿಸಿದ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದೆ ರೈತರು ಗೊಂದಲಕ್ಕೆ ಗುರಿಯಾಗಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಘೋಷಿಸಿರುವ ಸಾಲಮನ್ನಾ ಯೋಜನೆ ಹೊಸ ವಿವಾದಕ್ಕೆ ಗುರಿಯಾದಂತಾಗಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾವಿರಾರು ರೈತರ ಖಾತೆಗಳಿಗೆ ಸಾಲ ಮನ್ನಾ ಯೋಜನೆಯಡಿ ಸರ್ಕಾರದಿಂದ ಹಣ ಜಮೆಯಾಗಿತ್ತು. ಆದರೆ, ಚುನಾವಣೆ ಫಲಿತಾಂಶ ಘೋಷಣೆಯಾಗಿ ಹತ್ತು, ಹದಿನೈದು ದಿನ ಕಳೆಯುತ್ತಿದ್ದಂತೆ ರೈತರ ಖಾತೆಯಿಂದ ಜಮೆಯಾಗಿದ್ದ ಹಣವನ್ನು ಸದ್ದಿಲ್ಲದೆ ವಾಪಸ್‌ (ರಿಫಂಡ್‌) ಪಡೆಯಲಾಗಿದೆ. ಸಾಲ ಮನ್ನಾ ಆಗಿದೆ, ಬ್ಯಾಂಕ್‌ ಖಾತೆಗೆ ಸರ್ಕಾರ ಹಣ ಜಮೆ ಮಾಡಿದೆ ಎಂಬ ಖುಷಿಯಲ್ಲಿ ಮುಂಗಾರಿಗೂ ಮುನ್ನ ಖಾತೆಗಳ ನವೀಕರಣಕ್ಕಾಗಿ ರೈತರು ಬ್ಯಾಂಕುಗಳಿಗೆ ತೆರಳಿದಾಗಲೇ ಈ ‘ರಿಫಂಡ್‌’ ವ್ಯವಹಾರ ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಒಟ್ಟಾರೆ ಎಷ್ಟುಮಂದಿ ರೈತರ ಖಾತೆಯಿಂದ ಹಣ ವಾಪಸ್‌ ಪಡೆಯಲಾಗಿದೆ ಎನ್ನುವ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ. ಒಂದು ಅಂದಾಜಿನ ಪ್ರಕಾರ, ಯಾದಗಿರಿ ಜಿಲ್ಲೆಯಲ್ಲಿನ ವಿವಿಧ ಬ್ಯಾಂಕುಗಳಲ್ಲಿ ಏನಿಲ್ಲವೆಂದರೂ ಸುಮಾರು 10 ಸಾವಿರದಷ್ಟುರೈತರ ಖಾತೆಗೆ ಹಣಹಾಕಿ ನಂತರ ವಾಪಸ್‌ ಪಡೆಯಲಾಗಿದೆ. ಶಹಾಪುರ, ಸಗರ, ಗೋಗಿ ಮುಂತಾದೆಡೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕುಗಳ ಶಾಖೆಗಳಲ್ಲಿ ಖಾತೆ ಹೊಂದಿರುವ ರೈತರಿಗೆ ಈ ‘ರಿಫಂಡ್‌’ ಆಘಾತಕ್ಕೆ ತುತ್ತಾಗಿದ್ದಾರೆ.

100ರಿಂದ 150 ಮಂದಿಗಷ್ಟೇ ಸಾಲಮನ್ನಾ?: ಲೋಕಸಭೆ ಚುನಾವಣೆಗೆ ಮುನ್ನ ಶಹಾಪುರದ ಸ್ಟೇಟ್‌ ಬ್ಯಾಂಕಿನಲ್ಲಿ ವಿವಿಧ ರೈತರ ಖಾತೆಗಳಲ್ಲಿ ಜಮೆಯಾಗಿದ್ದ ಒಟ್ಟು .18.25 ಕೋಟಿಯಲ್ಲಿ .16 ಕೋಟಿ ವಾಪಸ್‌ ಹೋಗಿದೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಚೆನ್ನಪ್ಪ ಆನೆಗುಂದಿ ಆರೋಪಿಸಿದ್ದಾರೆ. ಈ ಮೂಲಕ ಸರ್ಕಾರ ಜಿಲ್ಲೆಯಲ್ಲಿ ಕೇವಲ ನೂರರಿಂದ ನೂರೈವತ್ತು ರೈತರ ಸಾಲಮನ್ನಾ ಮಾತ್ರ ಮಾಡಿದಂತಾಗಿದೆ ಎಂದು ಅವರು ದೂರಿದ್ದಾರೆ.

ಸಮರ್ಪಕ ಉತ್ತರ ಇಲ್ಲ: ಬ್ಯಾಂಕ್‌ ಖಾತೆಗೆ ಜಮೆಯಾಗಿದ್ದ ಹಣ ಹಾಗೂ ವಾಪಸ್‌ ಹೋಗಿರುವ ಹಣದ ಬಗ್ಗೆ ವಿಚಾರಿಸಿದರೆ, ಬ್ಯಾಂಕುಗಳ ಸಿಬ್ಬಂದಿ ಸಮರ್ಪಕ ಉತ್ತರ ನೀಡುತ್ತಿಲ್ಲ. ಇದು ಗೌಪ್ಯ ಮಾಹಿತಿಯಾಗಿದ್ದರಿಂದ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿ ರೈತರನ್ನು ಸಾಗ ಹಾಕುತ್ತಿದ್ದಾರೆ. ಅಧಿಕಾರಿಗಳನ್ನು ವಿಚಾರಿಸಿದರೆ ಮೇಲಿನಿಂದ ಬಂದ ಆದೇಶದಂತೆ ಹಣ ವಾಪಸ್‌ ಪಡೆದಿದ್ದೇವೆ ಎನ್ನುತ್ತಾರೆ. ಹಾಗಿದ್ದರೆ ಚುನಾವಣೆ ಸಂದರ್ಭದಲ್ಲಿ ರೈತರ ಕಣ್ಣಿಗೆ ಮಣ್ಣೆರೆಚಲು ಸರ್ಕಾರ ಈ ರೀತಿಯ ತಂತ್ರ ಮಾಡಿತ್ತೇ ಎಂಬ ಅನುಮಾನ ಹುಟ್ಟಿಕೊಂಡಿದೆ ಎಂದು ಸಗರ ಗ್ರಾಮದ ರೈತ ಶಿವಪ್ಪ ಕಾವಲಿ ಆರೋಪಿಸುತ್ತಾರೆ.

ಫಲಾನುಭವಿಗಳ ಪಟ್ಟಿಯಲ್ಲಿ ಗೊಂದಲ!: ಈ ಬಗ್ಗೆ ‘ಕನ್ನಡಪ್ರಭ’ ಲೀಡ್‌ ಬ್ಯಾಂಕ್‌ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಸಾಲಮನ್ನಾ ಘೋಷಣೆ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳ ಪಟ್ಟಿಕಳುಹಿಸುವಲ್ಲಿ ಜಿಲ್ಲೆಯ ಕೆಲ ಬ್ಯಾಂಕುಗಳಲ್ಲಿ ಗೊಂದಲವಾಗಿತ್ತು. ಸುಸ್ತಿದಾರರು, ಅರ್ಹ ಫಲಾನುಭವಿಗಳ ಬಗ್ಗೆ ರಾಜ್ಯಮಟ್ಟದ ಬ್ಯಾಂಕ​ರ್‍ಸ್ ಕಮಿಟಿ(ಎಸ್‌.ಎಲ್‌.ಬಿ.ಸಿ.) ನೀಡಿದ ಸೂಚನೆಯಂತೆ ಮತ್ತೊಮ್ಮೆ ನಿಯಮಾವಳಿಗಳನ್ನು ಪರಿಶೀಲಿಸಿ, ಫಲಾನುಭವಿಗಳ ಪಟ್ಟಿಪರಿಷ್ಕರಿಸಲಾಗಿದೆ. ನಂತರ ಫಲಾನುಭವಿಗಳಲ್ಲದ ಖಾತೆಗೆ ಜಮೆಯಾಗಿದ್ದ ಸಾಲದ ಹಣ ವಾಪಸ್‌ ಮಾಡಲಾಗಿದೆ. ಆದರೂ ಒಂದು ವೇಳೆ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದ್ದರೆ ಅವರ ಮನವಿಯನ್ನು ಪರಿಶೀಲಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಜಿಲ್ಲಾಧಿಕಾರಿ ಕೂರ್ಮಾರಾವ್‌ ಪ್ರತಿಕ್ರಿಯಿಸಿ, ಲೀಡ್‌ ಬ್ಯಾಂಕ್‌ ಅಧಿಕಾರಿಗಳ ಜೊತೆ ಮಾತನಾಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಶುಕ್ರವಾರ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ್‌ ಹುಮನಾಬಾದ್‌ ಅವರಿಗೂ ಈ ವಿಚಾರ ಗಮನಕ್ಕೆ ಬಂದಿದ್ದು, ಅವರೂ ಸಹ ಅಚ್ಚರಿ ವ್ಯಕ್ತಪಡಿಸಿದ್ದು, ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ಇಂದು ಪ್ರತಿಭಟನೆ

ರೈತರ ಖಾತೆಗಳಿಗೆ ಸಾಲ ಮನ್ನಾದ ಹಣ ಜಮೆ ಮಾಡಿ ನಂತರ ಸದ್ದಿಲ್ಲದೆ ವಾಪಸ್‌ ಪಡೆದಿರುವ ಸರ್ಕಾರದ ನಿಲುವು ಖಂಡಿಸಿ ಶಹಾಪುರ ಎಸ್‌ಬಿಐ ಶಾಖೆ ಎಂದು ಮಂಗಳವಾರ ಪ್ರತಿಭಟನೆ ನಡೆಸಲು ರೈತ ಸಂಘ ನಿರ್ಧರಿಸಿದೆ.

ಗೋಗಿ ಗ್ರಾಮದಲ್ಲಿರುವ ಎಸ್‌ಬಿಐ ನನ್ನ ಖಾತೆಗೆ ಒಂದು .99 ಸಾವಿರ ಹಣ ಜಮೆ ಮಾಡಲಾಗಿತ್ತು. ಇದೀಗ ಖಾತೆ ನವೀಕರಣಕ್ಕೆಂದು ಬ್ಯಾಂಕಿಗೆ ಹೋಗಿ ನೋಡಿದರೆ ಹಣ ವಾಪಸ್‌ ಹೋದ ಮಾಹಿತಿ ಸಿಕ್ಕಿದೆ. ಯಾಕೆ ಹೀಗಾಗಿದೆ ಎಂದು ಗೊತ್ತಾಗುತ್ತಿಲ್ಲ.

- ಭೀಮನಗೌಡ, ಗೋಗಿ ಗ್ರಾಮದ ರೈತ

ವರದಿ :  ಆನಂದ್‌.ಎಂ.ಸೌದಿ

click me!