ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಹೊಸಕೋಟೆಯ ಅವಿಮುಕ್ತೇಶ್ವರ ದೇವಸ್ಥಾನಕ್ಕೆ ಮುಸ್ಲಿಂ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿದ ಆದೇಶವನ್ನು ಕಾಂಗ್ರೆಸ್ ಸರ್ಕಾರದ್ದು ಎಂದು ಬಿಜೆಪಿ ಬಿಂಬಿಸಿದೆ. ಇದಕ್ಕೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ.
ಬೆಂಗಳೂರು (ಮೇ 08): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಹೊಸಕೋಟೆಯ ಅವಿಮುಕ್ತೇಶ್ವರ ದೇವಸ್ಥಾನಕ್ಕೆ ಮುಸ್ಲಿಂ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿದ ಆದೇಶವನ್ನು ಕಾಂಗ್ರೆಸ್ ಸರ್ಕಾರದ್ದು ಎಂದು ಬಿಜೆಪಿ ಬಿಂಬಿಸಿದೆ. ಪದೇ ಪದೇ ಬಿಜೆಪಿ ನಾಯಕರು ನಮ್ಮ ಕೈಗೆ ಬಡಿಗೆ ಕೊಟ್ಟು ಹೊಡಿಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿ ನಾಯಕರೇ, ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಮತ್ತೆ ಯಾಕೆ ಬಡಿಸಿಕೊಳ್ಳೀರಿ? ನಿಮ್ಮ ಸುಳ್ಳುಗಳನ್ನು ಬಯಲು ಮಾಡಲು ಅವಕಾಶ ಕೊಟ್ಟು ಸಮಾಜದ ಎದುರು ಯಾಕೆ ಬೆತ್ತಲಾಗುತ್ತೀರಿ? ಕಾಂಗ್ರೆಸ್ ಸರ್ಕಾರ ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಮ್ ಸಮುದಾಯದ ನವಾಜ್ ಅವರನ್ನು ಸದಸ್ಯರನ್ನಾಗಿ ಮಾಡಿದೆ ಎಂದು ಎದೆಬಡಿದುಕೊಳ್ಳೀರಲ್ಲಾ? ನಿಮ್ಮದೇ ಪಕ್ಷದ ಸರ್ಕಾರ 2020 ಮತ್ತು 2022ರ ಸಾಲಿನಲ್ಲಿ ಇದೇ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಮ್ ಸಮುದಾಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿದಾಗ ನಿಮ್ಮಲ್ಲಿ ಈಗ ಉಕ್ಕಿ ಹರಿಯುತ್ತಿರುವ ಹಿಂದುತ್ವದ ಅಭಿಮಾನ ಆಗ ಎಲ್ಲಿ ಅಡಗಿ ಕೂತಿತ್ತು? ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನ ಸರ್ವಧರ್ಮಗಳನ್ನು ಸಮಭಾವದಿಂದ ಕಾಣುವ ಹಿಂದು ಧರ್ಮದ ಪರಂಪರೆಗೆ ಸಾಕ್ಷಿಯಾಗಿದೆ ಎಂದು ಮರು ಟೀಕೆ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್!
ಹೊಸಕೋಟೆಯ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಎಲ್ಲ ಧರ್ಮಗಳ ಜನತೆ ಭಕ್ತಿ-ಗೌರವದಿಂದ ಭಾಗವಹಿಸುತ್ತಾರೆ. 2020ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಈ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಗೆ ಇಮ್ತಿಯಾಜ್ ಪಾಷಾ ಅವರನ್ನು ಸದಸ್ಯರನ್ನಾಗಿ ನೇಮಿಸಿತ್ತು. ಬಿಜೆಪಿ ಸರ್ಕಾರ 2022ರಲ್ಲಿ ಮತ್ತೆ ಈ ಸಮಿತಿಗೆ ಅಪ್ಸರ್ ಅವರನ್ನು ಸದಸ್ಯರನ್ನಾಗಿ ಮಾಡಿತ್ತು. ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಸಂಪತ್ತು ಲೂಟಿ ಮಾಡುವ ದುರುದ್ದೇಶದಿಂದಲೇ ಬಿಜೆಪಿ ಸರ್ಕಾರ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಮರನ್ನು ಸದಸ್ಯರನ್ನಾಗಿ ಮಾಡಿದೆ ಎಂದು ಆರೋಪಿಸುವಷ್ಟು ಕೀಳು ಮಟ್ಟಕ್ಕೆ ನಾನಿಳಿಯಲಾರೆ ಎಂದು ಮತ್ತಷ್ಟು ಟೀಕೆ ಮಾಡಿದೆ.
ದೇಶದ ಎಲ್ಲ ಘಟನೆಗಳನ್ನೂ ಕೇಸರಿ ಕಣ್ಣುಗಳಿಂದ ನೋಡುವ ರೋಗದಿಂದ ಶೀಘ್ರ ಗುಣಮುಖರಾಗಿ ಎಂದು ನಿಮಗೂ ನಿಮ್ಮ ಸರ್ವೋಚ್ಚ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾರೈಸುತ್ತೇನೆ. ರಾಜ್ಯದ ಬಿಜೆಪಿ ನಾಯಕರೇ, ನಿಮಗೆ ಮಾನ-ಮರ್ಯಾದೆ ಎನ್ನುವುದೇನಾದರೂ ಇದ್ದರೆ ಮೊದಲು ಜನರನ್ನು ತಪ್ಪುದಾರಿಗೆಳೆಯುವ ಈ ಹೇಳಿಕೆಯನ್ನು ವಾಪಸು ಪಡೆದು ರಾಜ್ಯದ ಜಾತ್ಯತೀತ ಕನ್ನಡಿಗರ ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತೇನೆ ಎಂದು ಕರ್ನಾಟಕ ಕಾಂಗ್ರೆಸ್ ವತಿಯಿಂದ ಟ್ವಿಟ್ ಮಾಡಲಾಗಿದೆ.
ಹೆಚ್.ಡಿ. ರೇವಣ್ಣಗೆ ಒಂದು ವಾರ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರಕ್ಕೆ ಶಿಫ್ಟ್
ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಹೊಸಕೋಟೆಯ ಅವಿಮುಕ್ತೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಯ ಸದಸ್ಯರಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಸೇರ್ಪಡೆ ಮಾಡಲಾಗಿದೆ. ಇದು ಮುಸ್ಲಿಮರ ತುಷ್ಟೀಕರಣ ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಲಾಗಿತ್ತು. ಆದರೆ, ಇದು ತಮ್ಮದೇ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮಾಡಲಾಗಿರುವ ಆದೇಶ ಎಂದು ತಿಳದ ಕೂಡಲೇ ಟ್ವೀಟ್ ಡಿಲೀಟ್ ಮಾಡಲಾಗಿದೆ. ಈ ಟ್ವೀಟ್ ಸೇವ್ ಮಾಡಿಟ್ಟುಕೊಂಡಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣದಿಂದ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಲಾಗಿದೆ.