'ವೇಶ್ಯಾವಾಟಿಕೆಗೆ ಕಾನೂನು ಮಾನ್ಯತೆ ಕೊಡಬೇಕು'

By Suvarna NewsFirst Published Jul 7, 2018, 12:21 PM IST
Highlights

ಇದೀಗ ವೇಶ್ಯಾವಾಟಿಕೆಗೂ ಕಾನೂನಿನಲ್ಲಿ  ಮಾನ್ಯತೆಯನ್ನು ಕೊಡಬೇಕು ಎನ್ನುವ ವಿಚಾರದ ಬಗ್ಗೆ ಚರ್ಚೆ ಮಾಡಲಾಗಿದೆ. ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಾನೂನು ಮಾನ್ಯತೆ ನೀಡುವ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ. 

ಹೈದ್ರಾಬಾದ್: ಕ್ರೀಡಾ ಬೆಟ್ಟಿಂಗ್ ಮತ್ತು ಜೂಜಿಗೆ ಕಾನೂನಿನ ಮಾನ್ಯತೆ ಕೊಡಬೇಕು ಎಂಬ ಕೇಂದ್ರ ಕಾನೂನು ಆಯೋಗದ ಶಿಫಾರಸ್ಸಿನ ಬೆನ್ನಲ್ಲೇ, ವೇಶ್ಯಾವಾಟಿಕೆಗೂ ಕಾನೂನಿನ ಮಾನ್ಯತೆ ಕೊಡಬೇಕು ಎಂದು ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್  ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. 

ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ಯೊಂದಿಗೆ ಮಾತನಾಡಿದ ಅವರು, ಕೆಲವೊಂದು ದುರಾಚಾರಗಳನ್ನು ಯಾವುದೇ ಕಾನೂನಿನಿಂದ ನಿರ್ಮೂ ಲನೆ ಅಸಾಧ್ಯ. ಯಾರಾದರೂ ಇಂಥ ಅಭಿಪ್ರಾಯ ಹೊಂದಿದ್ದರೆ ಅವರು ಮೂರ್ಖರ ಸ್ವರ್ಗದಲ್ಲಿದ್ದಾರೆ ಎಂದರ್ಥ. ಈ ಹಿಂದೆ ಮದ್ಯ ನಿಷೇಧ ಮಾಡಲಾಗಿತ್ತು. ಆದರೂ ಅಕ್ರಮ ಮದ್ಯ ಉತ್ಪಾದನೆ, ಮಾರಾಟ ನಡೆದೇ ಇತ್ತು. ಸರ್ಕಾರಕ್ಕೆ ತೆರಿಗೆ ಆದಾಯ ನಷ್ಟವಾಗಿದ್ದು ಬಿಟ್ಟರೆ ಬೇರೇನೂ ಸಾಧಿಸಲಾಗಲಿಲ್ಲ. ಅದೇ ರೀತಿ ಕ್ರೀಡಾ ಬೆಟ್ಟಿಂಗ್ ಕೂಡಾ. ನಿಷೇಧ ಹೇರುವ ಮೂಲಕ ಅದನ್ನು ತಡೆಯಲಾಗದು. 

ಪತ್ನಿ ತವರಲ್ಲೇ ನೆಲೆಸಿದ್ದರೆ ಡಿವೋರ್ಸ್ ನೀಡಬಹುದು!

ಆದರೆ ಇದನ್ನು ಕಾನೂನುಬದ್ಧಗೊಳಿಸಿದರೆ, ಬೆಟ್ಟಿಂಗ್ ಮತ್ತು ಜೂಜಿನ ಹೆಸರಲ್ಲಿ ನಡೆಯುವ ಶೇ.75 ರಷ್ಟು ಅಕ್ರಮ ತಡೆಯಬಹುದು ಎಂದು ಹೇಳಿದರು. ಇದೇ ವೇಳೆ ವೇಶ್ಯಾವಾಟಿಕೆಯನ್ನೂ ಕಾನೂನುಬದ್ಧಗೊಳಿಸಬೇಕೇ ಎಂಬ ಪ್ರಶ್ನೆಗೆ ‘ಹೌದು. ಇದನ್ನೂ ಕಾನೂನುಬದ್ಧಗೊಳಿಸಬೇಕು. ಈಗ ನಿಷೇಧ ಇದ್ದರೂ ಎಲ್ಲೆಡೆ ವೇಶ್ಯಾವಾಟಿಕೆ ಅವ್ಯಾಹತವಾಗಿ ನಡೆದಿದೆ. 

ವೇಶ್ಯಾವಾಟಿಕೆ ಇದೀಗ ಉದ್ಯಮವಾಗಿದೆ. ಯಾವುದೇ ಊರಿನಲ್ಲಿ ವೇಶ್ಯಾವಾಟಿಕೆ ಇಲ್ಲ ಎಂಬುದನ್ನು ತೋರಿಸಿ. ಹೀಗಾಗಿ ಇದನ್ನು ಕಾನೂನುಬದ್ಧಗೊಳಿಸಿ, ಅದಕ್ಕೆ ಲೈಸೆನ್ಸ್ ನೀಡಬೇಕು. ಆಗ ಮಾತ್ರ ವೇಶ್ಯಾವಾಟಿಕೆ ಮೇಲೆ ನಿಯಂತ್ರಣ ಸಾಧಿಸಬಹುದು.  ನೈತಿಕತೆಯನ್ನು ಕಾನೂನಿನ ಮೂಲಕ ನಿಯಂತ್ರಿಸಲಾಗದು. ಇದನ್ನು ಧರ್ಮ ಮತ್ತು ಧಾರ್ಮಿಕ ನಾಯಕರು ಮಾತ್ರವೇ ಮಾಡಬಹುದು ಎಂದು ನ್ಯಾ. ಹೆಗ್ಡೆ ಹೇಳಿದ್ದಾರೆ.

ಪ್ರೇಮ ಸುದೀರ್ಘ, ದಾಂಪತ್ಯ ಕ್ಷಣಿಕ

ಬೆಟ್ಟಿಂಗ್ ಬಗ್ಗೆ ಕಾನೂನು ಆಯೋಗ ಮಾಡಿರುವ ಶಿಫಾರಸುಗಳು: ಹಾಲಿ ಜಾರಿಯಲ್ಲಿರುವ ಬೆಟ್ಟಿಂಗ್ ಮತ್ತು ಜೂಜು ನಿಷೇಧ ಕಾನೂನು ಯಾವುದೇ ಫಲಕೊಟ್ಟಿಲ್ಲ. ಈ ದಂಧೆ ತೆರೆಮರೆಯಲ್ಲಿ ಅವ್ಯಾಹತ ವಾಗಿ ನಡೆದಿದೆ. ಜತೆಗೆ ಕಪ್ಪು ಹಣದ ಹೆಚ್ಚಳಕ್ಕೆ ಕಾರಣವಾಗಿದೆ. ಇದರ  ಬದಲು ನಿಯಂತ್ರಿತ ಸ್ವರೂಪದಲ್ಲಿ ಕ್ರೀಡೆಯಲ್ಲಿ ಬೆಟ್ಟಿಂಗ್ ಮತ್ತು ಜೂಜಿಗೆ ಅವಕಾಶ ನೀಡಬೇಕು. ಇದಕ್ಕೆ ಆಧಾರ್, ಪಾನ್ ಜೋಡಣೆ  ಕಡ್ಡಾಯ ಮಾಡಬೇಕು. ಇದರಿಂದ ಬರುವ ಆದಾಯಕ್ಕೆ ಸೂಕ್ತ ತೆರಿಗೆ ವಿಧಿಸಬೇಕು. ಇದರಿಂದ ಸರ್ಕಾರಕ್ಕೂ ಹೆಚ್ಚಿನ ಆದಾಯ ಹರಿದುಬರಲಿದೆ. ದಂಧೆಯ ಮೇಲೆ ನಿಯಂತ್ರಣವೂ ಸಾಧ್ಯವಾಗಲಿದೆ ಎಂದು ಆಯೋಗ ಹೇಳಿದೆ.

click me!