ಗುಜರಾತ್ ಹೈಕೋರ್ಟ್ ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದಲ್ಲ ಎರಡಲ್ಲ ಮೂರು ಮದುವೆಯಾದ ಮಹಿಳೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಆಕೆಯ ಆಸೆಗೆ ಕೋರ್ಟ್ ಮನ್ನಣೆ ನೀಡಿದೆ.
ಮದುವೆ ಸಂಬಂಧ ಬಹಳ ಸೂಕ್ಷ್ಮವಾದದ್ದು. ಅದನ್ನು ಬೇಕಾಬಿಟ್ಟಿ ಜಗ್ಗಾಡಿದ್ರೆ ಒಂದು ಹರಿದು ಹೋಗುತ್ತೆ ಇಲ್ಲ ಸಿಕ್ಕಾಗಿ, ಬಿಡಿಸಿಕೊಳ್ಳೋದು ಕಷ್ಟವಾಗುತ್ತೆ. ದಂಪತಿ ಮಧ್ಯೆ ಪ್ರೀತಿ ಇದ್ದಲ್ಲಿ ಅದನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ. ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದ್ರೂ ಜೋಡಿ ಮತ್ತೆ ಒಂದಾಗ್ತಾರೆ. ಈಗಿನ ದಿನಗಳಲ್ಲೂ ಪ್ರೀತಿಸುವ ಜೋಡಿಗೆ ವಿರೋಧ ವ್ಯಕ್ತಪಡಿಸುವ ಕುಟುಂಬಸ್ಥರಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಮಕ್ಕಳ ಪ್ರೀತಿಗೆ ಕೆಲವರು ಅಡ್ಡಿ ಬಂದ್ರೆ ಮತ್ತೆ ಕೆಲ ಪಾಲಕರು, ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ತಾರೆ. ಇಲ್ಲಿ ಪಾಲಕರು ಅಥವಾ ಪ್ರೇಮಿಗಳಲ್ಲಿ ಯಾರು ಕೆಟ್ಟವರು ಎನ್ನಲು ಸಾಧ್ಯವಿಲ್ಲ. ಅದೇನೇ ಇರಲಿ, ಪ್ರೀತಿಗೆ ವಿರೋಧ ಮಾಡಿದಾಗ ಪಾಲಕರ ಮಾತಿಗೆ ತಲೆದೂಗಿ ಇನ್ನೊಂದು ಮದುವೆ ಆಗುವ ಜನರು ಕೆಲವರಾದ್ರೆ ಮತ್ತೆ ಕೆಲವರು ಓಡಿ ಹೋಗಿ ಮದುವೆ ಆಗ್ತಾರೆ. ಇನ್ನೂ ಕೆಲವರು ಯಾರ ಸಹವಾಸ ಬೇಡ ಎಂದು ತಪ್ಪು ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ತಾರೆ. ಪ್ರೀತಿ, ಮದುವೆಗೆ ಸಂಬಂಧಿಸಿದಂತೆ ಅಹಮದಾಬಾದ್ ನಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ಮೂರು ಮದುವೆಯಾದ ಮಹಿಳೆಯೊಬ್ಬಳು ಕೋರ್ಟ್ ಮುಂದೆ ತನಗೆ ಮೊದಲ ಪತಿಯೇ ಬೇಕೆಂದಿರುವ ಘಟನೆ ನಡೆದಿದೆ.
ಗುಜರಾತಿ (Gujarat) ನ ಹೈಕೋರ್ಟ್ (High Court) ನಲ್ಲಿ ಮದುವೆ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತನಗೆ ವಾಪಸ್ ನೀಡುವಂತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ. ಆತನ ಪ್ರಕಾರ, ಆತ ಹಾಗೂ ಆತನ ಪತ್ನಿ ಮೆಹ್ಸಾನಾ ಜಿಲ್ಲೆಯವರು. ಅವರು ಪರಸ್ಪರ ಪ್ರೀತಿ ಮಾಡ್ತಿದ್ದರು. ಮದುವೆ (Marriage) ಗೆ ಮನೆಯವರ ವಿರೋಧವಿದ್ದ ಕಾರಣ ಅವರು ಮನೆಯಿಂದ ಓಡಿ ಹೋಗಿ ಮದುವೆ ಆಗಿದ್ದರು. ನಂತ್ರ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಶಹಪುರ್ ವಾರ್ಡ್‌ನಲ್ಲಿ ವಿವಾಹದ ನೋಂದಣಿ ಮಾಡಿದ್ದರು. ಆದ್ರೆ ಮಹಿಳೆ ಮನೆಯವರಿಗೆ ವಿಷ್ಯ ತಿಳಿದ ಕಾರಣ ಅವರು ಹುಡುಗಿಯನ್ನು ಮನೆಗೆ ಕರೆದೊಯ್ದಿದ್ದರು.
ಮಗು ಬೇಕು, ಮದ್ವೆ-ಹೆರಿಗೆ ಸಾಕಪ್ಪಾ ಸಾಕು! ಅಂಡಾಣು ಫ್ರೀಜ್ಗೆ ಮುಂದಾದ ಮತ್ತೋರ್ವ ಬಾಲಿವುಡ್ ನಟಿ
ಪ್ರಕರಣದ ವಿಚಾರಣೆ ವೇಳೆ ಮಹಿಳೆಯನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಕೋರ್ಟ್ ಸೂಚನೆ ನೀಡಿತ್ತು. ಪೊಲೀಸರು ಕೊನೆಗೂ ಮಹಿಳೆಯನ್ನು ಪತ್ತೆ ಮಾಡಿ ಕೋರ್ಟ್ ಮುಂದೆ ಹಾಜರುಪಡಿಸಿದ್ರು. ಈ ವೇಳೆ ಮಹಿಳೆ ಆತ ತನ್ನ ಪತಿ ಎಂಬುದನ್ನು ಒಪ್ಪಿಕೊಂಡಿದ್ದಾಳೆ. ಮೊದಲ ಪತಿಯನ್ನು ಗುರುತಿಸುವಲ್ಲಿ ಆಕೆ ಯಶಸ್ವಿಯಾಗಿದ್ದಾಳೆ. ಇಷ್ಟೇ ಅಲ್ಲ, ಈ ಸಂದರ್ಭದಲ್ಲಿ ಆಕೆ ಹೇಳಿದ ವಿಷ್ಯ ಎಲ್ಲರನ್ನು ದಂಗಾಗಿಸಿದೆ.
ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿ ಮಹಿಳೆಯನ್ನು ಮನೆಗೆ ಕರೆದೊಯ್ದಿದ್ದ ಕುಟುಂಬಸ್ಥರು, ಬಲವಂತವಾಗಿ ಎರಡನೇ ಮದುವೆ ಮಾಡಿದ್ದರು. ಕುಟುಂಬಸ್ಥರು ಕೋಪದಿಂದ ಮಾಡಿದ್ದ ಮದುವೆಗೆ ಮಹಿಳೆ ಬಲಿಯಾಗಬೇಕಾಯ್ತು. ಯಾಕೆಂದ್ರೆ ಎರಡನೇ ಪತಿ ತುಂಬಾ ದಿನ ಮಹಿಳೆ ಜೊತೆ ಸಂಸಾರ ನಡೆಸಲಿಲ್ಲ. ಆತ ಬಿಟ್ಟು ಹೋಗಿದ್ದು, ಈ ಘಟನೆ ನಡೆದ ನಂತ್ರವೂ ಕುಟುಂಬಸ್ಥರು ಸುಮ್ಮನಿರಲಿಲ್ಲ ಎನ್ನುತ್ತಾಳೆ ಮಹಿಳೆ.
ಎರಡನೇ ಮದುವೆ ಮುರಿದು ಬಿದ್ದ ಮೇಲೆ ಕುಟುಂಬಸ್ಥರು ಮಹಿಳೆಯನ್ನು ಬನಸ್ಕಾಂತ ಜಿಲ್ಲೆಗೆ ಕರೆದೊಯ್ದು ಮೂರನೇ ಮದುವೆ ಮಾಡಿಸಿದ್ದಾರೆ. ಮೂರನೇ ಪತಿಯ ಮನೆಗೆ ಭೇಟಿ ನೀಡಿದ ಪೊಲೀಸರು ಹೆಚ್ಚುವರಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲಿ ಮಹಿಳೆಗೆ ಮದುವೆ ಆಗಿರೋದು ದೃಢಪಟ್ಟಿದೆ.
ಪತಿ ಬಿಟ್ಟ, ಸಾಲ ಮೈಮೇಲೆ ಬಂತು.. ಧೈರ್ಯ ಕಳೆದ್ಕೊಳ್ಳದೆ 165 ಕೋಟಿ ಆಸ್ತಿ ಮಾಡಿದ ಮಹಿಳೆ!
ಮೊದಲ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಮಹಿಳೆ ಮೊದಲ ಪತಿ ಜೊತೆ ಸಂಸಾರ ನಡೆಸುವುದಾಗಿ ಹೇಳಿದ್ದಾಳೆ. ಕೋರ್ಟ್ ಇದಕ್ಕೆ ಅನುಮತಿ ನೀಡಿದೆ. ಅಲ್ಲದೆ ಮಹಿಳೆ ಸುರಕ್ಷತೆಗೆ ವ್ಯವಸ್ಥೆ ಮಾಡುವಂತೆ ಸರ್ಕಾರಿ ವಕೀಲರಿಗೆ ಸೂಚನೆ ನೀಡಿದೆ. ಒಂದ್ವೇಳೆ ಯಾವುದೇ ತೊಂದರೆಯಾದಲ್ಲಿ ತಕ್ಷಣ ಸ್ಥಳೀಯ ಪೊಲೀಸರನ್ನು ಭೇಟಿಯಾಗಬೇಕೆಂದು ಮಹಿಳೆಗೆ ಸೂಚಿಸಲಾಗಿದೆ.