ಭಾರೀ ಮಳೆ : 2.2 ಲಕ್ಷ ಸಂತ್ರಸ್ತರ ರಕ್ಷಣೆ, 170 ರಸ್ತೆ ಸಂಪರ್ಕ ಕಡಿತ

By Web DeskFirst Published Aug 10, 2019, 7:20 AM IST
Highlights

ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಈಗಾಗಲೇ ಲಕ್ಷ ಲಕ್ಷ ಜನರು ಅತಂತ್ರರಾಗಿದ್ದಾರೆ. ಲಕ್ಷಾಂತರ ಮಂದಿ ರಕ್ಷಣೆ ಮಾಡಲಾಗಿದೆ. ವರುಣ ಮಾತ್ರ ಕರ್ನಾಟಕದಲ್ಲಿ ತನ್ನ ಅಬ್ಬರ ನಿಲ್ಲಿಸುತ್ತಿಲ್ಲ. 

ಬೆಂಗಳೂರು [ಆ.10]:  ಒಂದು ಕಡೆ ಹೆಚ್ಚುತ್ತಲೇ ಸಾಗಿದ ಪ್ರವಾಹ, ಮತ್ತೊಂದು ಕಡೆ ಮಲೆನಾಡು ಸೇರಿ ಇತರೆಡೆ ನಿಲ್ಲದ ಮಳೆಯಿಂದಾಗಿ ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ರಣಭೀಕರ ಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿಯೊಂದರಲ್ಲೇ 1.45 ಲಕ್ಷ ಸೇರಿ ರಾಜ್ಯಾದ್ಯಂತ ಸುಮಾರು 2.20 ಲಕ್ಷಕ್ಕೂ ಹೆಚ್ಚು ಮಂದಿ ಮನೆ, ಮಠ ತೊರೆದಿದ್ದಾರೆ. ನಿರಾತ್ರಿತರ ಕೇಂದ್ರ, ಸಂಬಂಧಿಕರ ಮನೆ, ಮಠ ಸೇರಿಕೊಂಡಿದ್ದಾರೆ. ಪ್ರವಾಹ, ಮಳೆ ಸಂಬಂಧಿ ಅನಾಹುತಕ್ಕೆ ಶುಕ್ರವಾರ ಮತ್ತೆ 10 ಮಂದಿ ಬಲಿಯಾಗಿದ್ದು, ರಾಜ್ಯಾದ್ಯಂತ ಒಟ್ಟಾರೆ ಕಳೆದ ನಾಲ್ಕು ದಿನಗಳಲ್ಲಿ 31 ಮಂದಿ ಅಸುನೀಗಿದಂತಾಗಿದೆ.

ಏತನ್ಮಧ್ಯೆ, ಕರಾವಳಿಯಲ್ಲಿ ಮಳೆ ಕ್ಷೀಣವಾಗಿದ್ದರೂ ಪ್ರವಾಹದ ಸ್ಥಿತಿ ಹಾಗೆಯೇ ಇದೆ. ಆದರೆ, ಮಲೆನಾಡು ಭಾಗದಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಕೊಡಗಿನಲ್ಲಿ ಕಳೆದ ವರ್ಷದ ಮಹಾದುರಂತವನ್ನು ನೆನಪಿಸುವ ರೀತಿಯಲ್ಲೇ ಭಾರೀ ಭೂಕುಸಿತಗಳು ಆರಂಭವಾಗಿವೆ. ಈಗಾಗಲೇ ಐದು ಮಂದಿ ಭೂಕುಸಿತಕ್ಕೆ ಬಲಿಯಾಗಿದ್ದು, ಮತ್ತೊಮ್ಮೆ ಜಿಲ್ಲೆಯ ಜನ, ಜೀವನವನ್ನು ಮಹಾಮಳೆ ಬಲಿಪಡೆದುಕೊಳ್ಳುವ ಆತಂಕ ಶುರುವಾಗಿದೆ. ಇದೇ ವೇಳೆ, ಉತ್ತರ ಕರ್ನಾಟಕದಲ್ಲಿ ಕೃಷ್ಣೆ ಮತ್ತು ಅದರ ಉಪನದಿಗಳ ಅಬ್ಬರಕ್ಕೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮತ್ತೆ 40ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರವಾಹದ ನೀರು ನುಗ್ಗಿದೆ. ಕೊಡಗು ಹೊರತುಪಡಿಸಿ ರಾಜ್ಯದ ಕಾವೇರಿ ಕೊಳ್ಳದ ಇತರೆ ಭಾಗದಲ್ಲಿ ಕೇಳಿಕೊಳ್ಳುವಂಥ ಮಳೆಯಾಗದಿದ್ದರೂ ಕಬಿನಿ ಜಲಾಶಯ ಭರ್ತಿಯಾಗಿರುವುದರಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಸಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೇನಾ ನೆರವು: ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಮೂರೂ ಪಡೆಗಳು ಸಂತ್ರಸ್ತರ ನೆರವಿಗೆ ಧಾವಿಸಿವೆ. ಉತ್ತರ ಕನ್ನಡದಲ್ಲಿ ಸ್ವತಃ ಐಎನ್‌ಎಸ್‌ ವಿಕ್ರಮಾದಿತ್ಯ ಯುದ್ಧವಿಮಾನ ನೌಕೆಯನ್ನೇ ಕಾರ್ಯಾಚರಣೆಗೆ ಇಳಿಸಲಾಗಿದೆ. ಈವರೆಗೆ ನೌಕಾಪಡೆಯಿಂದ ಉತ್ತರ ಕನ್ನಡ ಜಿಲ್ಲೆ ಮತ್ತು ಆಸುಪಾಸಿನಲ್ಲಿ 1900 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲೂ 10 ಸೇನಾ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಗಿಳಿದಿದ್ದು, ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿವೆ.

ರಸ್ತೆ ಮಾರ್ಗಗಳು ಬಂದ್‌: ಮಳೆ, ಪ್ರವಾಹದಿಂದ ಈಗಾಗಲೇ ರಾಜ್ಯಾದ್ಯಂತ 170 ರಸ್ತೆಗಳು ಸಂಪರ್ಕ ಕಡಿತಗೊಂಡಿದ್ದು, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕಲೇಶಪುರ ಬಳಿ ಗುಡ್ಡಕುಸಿದು ಸಂಪರ್ಕ ಕಡಿತಗೊಂಡಿದೆ. ಶಿರಾಡಿ, ಚಾರ್ಮಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಬೆಂಗಳೂರು-ಮಂಗಳೂರು ನಡುವೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಇನ್ನು ಕೊಡಗು ಮತ್ತು ಮಂಗಳೂರನ್ನು ಸಂಪರ್ಕಿಸುವ ಸಂಪಾಜೆ ಘಾಟ್‌ನಲ್ಲೂ ಅಲ್ಲಲ್ಲಿ ಗುಡ್ಡಕುಸಿತದ ಆತಂಕವಿದ್ದು, ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಮೊರೆಯಿಡುತ್ತಿದ್ದಾರೆ ಸಂತ್ರಸ್ತರು: ಆಲಮಟ್ಟಿಜಲಾಶಯದ ಹಿನ್ನೀರಿನ ಮಟ್ಟಹೆಚ್ಚುತ್ತಲೇ ಸಾಗಿದ್ದು, 4.45 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಇದರಿಂದ ಬಸವಸಾಗರ ಡ್ಯಾಂನಿಂದಲೂ 4 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾನದಿ ಪಾತ್ರದಲ್ಲಿ ಇನ್ನೂ ಸಾವಿರಾರು ಮಂದಿ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಬೆಣ್ಣಿಹಳ್ಳ, ಮಲಪ್ರಭಾ ಸೇರಿದಂತೆ ಉಳಿದ ನದಿಗಳು ಉಕ್ಕಿಹರಿಯುತ್ತಿರುವುದರಿಂದ ಗದಗ, ಧಾರವಾಡ, ಹಾವೇರಿ ಜಿಲ್ಲೆಯಲ್ಲೂ ಪ್ರವಾಹ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರವಾಹದ ಮಧ್ಯೆ ಜೀವಹಿಡಿದುಕೂತಿರುವವರ ರಕ್ಷಣೆಗೆ ಸದ್ಯ ಹವಾಮಾನ ವೈಪರೀತ್ಯ ಹಾಗೂ ರಕ್ಷಣಾ ಸಾಮಗ್ರಿಗಳ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಅನೇಕ ಕಡೆ ಅಬ್ಬರಿಸುತ್ತ ಹರಿಯುತ್ತಿರುವ ನದಿಯನ್ನು ದಾಟಿ ಬೋಟ್‌ಗಳ ಮೂಲಕ ರಕ್ಷಣೆ ಸದ್ಯಕ್ಕೆ ಸಾಧ್ಯವಿಲ್ಲದ ಸ್ಥಿತಿ ಇದೆ. ಜತೆಗೆ, ಕಾಪ್ಟರ್‌ ಮೂಲಕವೂ ಅಷ್ಟೊಂದು ಪ್ರಮಾಣದ ಜನರನ್ನು ರಕ್ಷಿಸುವುದು ಕಷ್ಟಎನ್ನುವಂತಾಗಿದೆ. ಇಂಥ ಸನ್ನಿವೇಶದಲ್ಲೂ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಸೇನೆ ಹಾಗೂ ಸ್ಥಳೀಯ ತಂಡಗಳು ಜೀವದ ಬೆಲೆ ಲೆಕ್ಕಿಸದೆ ಅಪಾಯದಲ್ಲಿ ಸಿಲುಕಿರುವವರ ಜೀವಉಳಿಸುವ ಕಾರ್ಯ ನಡೆಸುತ್ತಿವೆ.

click me!