ಧಾರವಾಡ ಸಮ್ಮೇಳನ: ಸಿಎಂಗೆ ಮೂರೂವರೆ ಗಂಟೆ ಕಾದ ಕಂಬಾರ!

By Web DeskFirst Published Jan 5, 2019, 10:05 AM IST
Highlights

ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಡವಾಗಿ ಬಂದ ಸಿಎಂ ಕುಮಾರಸ್ವಾಮಿ | ಸಿಎಂಗಾಗಿ ಮುಕ್ಕಾಲು ಗಂಟೆ ಕಾದ ಕಂಬಾರರು | ಬೆಳಗ್ಗೆ 11 ಗಂಟೆಗೆ ಸಮ್ಮೇಳನ ಉದ್ಘಾಟಿಸಬೇಕಿದ್ದ ಮುಖ್ಯಮಂತ್ರಿಗಳು ವೇದಿಕೆಗೆ ಬಂದದ್ದು ಮಧ್ಯಾಹ್ನ 2.29 ಕ್ಕೆ 

ಧಾರವಾಡ (ಜ. 04): ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗಾಗಿ ೮೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮೂರೂವರೆ ಗಂಟೆಗಳ ಕಾಲ ಕಾದು ನಿಂತ ಪ್ರಸಂಗ ಶುಕ್ರವಾರ ಇಲ್ಲಿ
ನಡೆಯಿತು.

ಬೆಳಗ್ಗೆ 11 ಗಂಟೆಗೆ ಸಮ್ಮೇಳನ ಉದ್ಘಾಟಿಸಬೇಕಿದ್ದ ಮುಖ್ಯಮಂತ್ರಿಗಳು ವೇದಿಕೆಗೆ ಬಂದದ್ದು ಮಧ್ಯಾಹ್ನ 2.29 ಕ್ಕೆ. ಹಾಗಾಗಿ ಈ ಅದ್ವಾನ ನಡೆಯಿತು. ಸಮ್ಮೇಳನಾಧ್ಯಕ್ಷರ ಬರುವಿಕೆಗಾಗಿ ಮುಖ್ಯಮಂತ್ರಿಗಳು, ಮಂತ್ರಿಗಳು ಕಾದು ನಿಲ್ಲುವುದು
ವಾಡಿಕೆ ಮತ್ತು ಸಾಂಸ್ಕೃತಿಕ ಲೋಕಕ್ಕೆ ನೀಡುವ ಗೌರವ ಅದು. ಆದರೆ, ಇಲ್ಲಿ ಅದು ತಿರುವು-ಮುರುವಾಯಿತು.

ಕಳೆದ 83 ಸಾಹಿತ್ಯ ಸಮ್ಮೇಳನಗಳಲ್ಲಿ ಮೆರವಣಿಗಯಲ್ಲಿ ಆಗಮಿಸುವ ಸಮ್ಮೇಳನಾಧ್ಯಕ್ಷರು ನೇರವಾಗಿ ಪ್ರಧಾನ ವೇದಿಕೆ ಏರುವುದು ವಾಡಿಕೆ. ಇದೇ ಮೊದಲ ಬಾರಿಗೆ ಈ ಪರಂಪರೆಯನ್ನೂ ಮುರಿದ 84 ನೇ ಸಮ್ಮೇಳನಾಧ್ಯಕ್ಷ  ಡಾ.ಚಂದ್ರಶೇಖರ ಕಂಬಾರ ವೇದಿಕೆಯ ಬದಲು ಇಲ್ಲಿನ ಕೃಷಿ ವಿವಿ ಗೆಸ್ಟ್ ಹೌಸ್‌ನಲ್ಲಿ ಇದ್ದರು. ಮುಖ್ಯಮಂತ್ರಿಗಳಿಗಾಗಿ ಎದುರು ನೋಡುತ್ತ ಸುಮಾರು ಒಂದೂವರೆ ಗಂಟೆಗಳ ಕಾಲ ಕಾದು ಕುಳಿತಿದ್ದು, ಸಾಹಿತಿಗಳಲ್ಲಿ ಬೇಸರ ಮೂಡಿಸಿತು.

ಇದೇ ಕಾರಣಕ್ಕೆ ಸಮ್ಮೇಳನ ಉದ್ಘಾಟಿಸಿದ ಮುಖ್ಯಮಮಂತ್ರಿಗಳು ಕೊನೆಯಲ್ಲಿ ಮಾತನಾಡಬೇಕಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಸ್ವಾಗತಿಸಿದರೆ, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಪ್ರಾಸ್ತಾವಿಕವಾಗಿ
ಮಾತನಾಡಿದರು. ಬಳಿಕ ನಿಕಟಪೂರ್ವ ಅಧ್ಯಕ್ಷ ಡಾ.ಚಂಪಾ, ಸಮ್ಮೇಳನಾಧ್ಯಕ್ಷ ಡಾ.ಕಂಬಾರ ಮಾತನಾಡಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಹತ್ತು ಹಲವು ಸಲಹೆಗಳನ್ನು ನೀಡಿದರು.

ಬಳಿಕ ಮಾತನಾಡಿದ ಸಿಎಂ ತಮ್ಮ ಸರ್ಕಾರದ ನಿಲುವುಗಳ ಬಗ್ಗೆ ಸಮರ್ಥನೆ, ಸ್ಪಷ್ಟನೆಗಳನ್ನು ನೀಡಿದರು.

ಎರಡನೇ ಬಾರಿ ವೇದಿಕೆ ಬಂದ ಜೋಶಿ:

ನಿಗದಿತ ಸಮಯಕ್ಕೆ ಸಮ್ಮೇಳನ ಆರಂಭವಾಗಲಿದೆ ಎನ್ನುವ ನಂಬಿಕೆಯಿಂದ ದೆಹಲಿಯಿಂದ ಗುರುವಾರ ರಾತ್ರಿಯೇ ಹುಬ್ಬಳ್ಳಿಗೆ ಬಂದಿದ್ದ ಧಾರವಾಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವಸರಿಸಿ ವೇದಿಕೆಗೆ ಆಗಮಿಸಿದಾಗ
ನಿರಾಸೆ ಕಾದಿತ್ತು. ವೇದಿಕೆ ಖಾಲಿ ಇತ್ತು, ಉದ್ಘಾಟನೆ ಸಮಯ ಮುಂದೂಡಿತ್ತು.

ಸುಮಾರು 11.30 ರ ಹೊತ್ತಿಗೆ ಸಮ್ಮೇಳನ ಸಭಾಂಗಕ್ಕೆ ಬಂದಿದ್ದ ಅವರು ಸುಮಾರು ಹೊತ್ತು ಅತ್ತಿತ್ತ ಸಂಚರಿಸಿದರು. ಬಳಿಕ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿ ಪತ್ರಕರ್ತ ಗೆಳೆಯರ ಜತೆ ಸುಮಾರು ಹೊತ್ತು ಚಹಾ ಕುಡಿಯುತ್ತ ಹರಟಿದರು. ಮುಖ್ಯಮಂತ್ರಿಗಳ ಆಗಮನ ಇನ್ನೂ ವಿಳಂಬ ಎಂದಾಗ ಶಾಸಕ ಅರವಿಂದ ಬೆಲ್ಲದ ಅವರ ಜತೆ ಊಟಕ್ಕೆ ಹೋದರು.

ಸುಮಾರು 2.10 ರ  ವೇಳೆಗೆ ನೇರವಾಗಿ ವೇದಿಕೆಗೆ ಬಂದರೂ ವೇದಿಕೆಯಲ್ಲಿ ಯಾರೂ ಇರಲಿಲ್ಲ. ಜೋಶಿಯವರು ಬಂದ ಸುಮಾರು ಹೊತ್ತಿನ ಬಳಿಕ ಕವಿ ಚೆನ್ನವೀರ ಕಣವಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ್, ಮೇಲ್ಮನೆಯ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಡಾ.ಪಾಟೀಲ್ ಪುಟ್ಟಪ್ಪ, ವೀರಣ್ಣ ಮತ್ತಿಕಟ್ಟಿ, ಚಂದ್ರಕಾಂತ ಬೆಲ್ಲದ ಅವರು ಆಗಮಿಸಿದಾಗ ವೇದಿಕೆಗೆ ತುಸು ಕಳೆ ಬಂತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು
ಸಮ್ಮೇಳನ ಉದ್ಘಾಟಿಸಿದಾಗ ಸಮಯ 3.33  ಆಗಿತ್ತು.

click me!