ಆಡು ಭಾಷೆಯಲ್ಲಿ ಮಾತಾಡಿದ್ದೇನೆ, ಯಾರ ಸಾವು ಬಯಸಿಲ್ಲ: ಶಾಸಕ ರಾಜು ಕಾಗೆ ಸ್ಪಷ್ಟನೆ

By Girish Goudar  |  First Published May 3, 2024, 10:44 PM IST

ನಾನೇಕೆ ಪ್ರಧಾನಿ ಮೋದಿ ಅವರ ಸಾವನ್ನು ಬಯಸಲಿ. ಅವರು ಇನ್ನೂ ನೂರ್ಕಾಲ ಬಾಳಲಿ. ನಾನು ಯಾರನ್ನಾದರೂ ಸಾಯಲಿ ಎಂದರೆ ಸಾಯುತ್ತಾರೆಯೇ ಎಂದು ಪ್ರಶ್ನಿಸಿದ ಶಾಸಕ ರಾಜು ಕಾಗೆ 


ಕಾಗವಾಡ(ಮೇ.03):  ಮೊನ್ನೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಡು ಭಾಷೆಯಲ್ಲಿ ಮಾತನಾಡಿದ್ದೇನೆ ಹೊರತು ಯಾರಿಗೂ ಅವಮಾನ ಮಾಡುವ ಮತ್ತು ಯಾರ ಸಾವು ಬಯಸಿ ಮಾತನಾಡಿಲ್ಲ ಎಂದು ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದ್ದಾರೆ. ಗುಂಡೇವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದ ‌ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿನಾಕಾರಣ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಾತನಾಡಿದ ಉದ್ದೇಶ ಬರೀ ಇಷ್ಟೇ, ದೇಶದ ೧೪೦ ಕೋಟಿ ಜನರಲ್ಲಿ ಯಾರಿಗೂ ಪ್ರಧಾನಿ ಆಗುವ ಯೋಗ್ಯತೆ ಇಲ್ಲವೇ ಎಂದು ಪ್ರಶ್ನಿಸಿದ್ದೆ‌. ಆದರೆ ನಾನು ಸಾವು ಬಯಸಿದ್ದಾಗಿ ಬಿಂಬಿಸುತ್ತಿರುವುದು ನೋವಿನ ಸಂಗತಿ ಎಂದು ಹೇಳಿದರು. ಪ್ರಧಾನಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿಯವರು ದೂರುತ್ತಿದ್ದಾರೆ‌. ನಾನೂ ಕೂಡ ಒಬ್ಬ ಹಿಂದು, ನಾನೇನು ಹಿಂದೂ ವಿರೋಧಿ ಅಲ್ಲ ಎಂದರು.

Tap to resize

Latest Videos

ಜಗತ್ತಿನಲ್ಲಿ ಲೂಟಿಕೋರರು, ದರೋಡೆಕೋರರು ಅಂತಾ ಇದ್ರೆ ಅದು ರಾಜಕಾರಣಿಗಳು: ಶಾಸಕ ರಾಜು ಕಾಗೆ ಸ್ಫೋಟಕ ಹೇಳಿಕೆ!

ನಾನೇಕೆ ಪ್ರಧಾನಿ ಮೋದಿ ಅವರ ಸಾವನ್ನು ಬಯಸಲಿ. ಅವರು ಇನ್ನೂ ನೂರ್ಕಾಲ ಬಾಳಲಿ. ನಾನು ಯಾರನ್ನಾದರೂ ಸಾಯಲಿ ಎಂದರೆ ಸಾಯುತ್ತಾರೆಯೇ ಎಂದು ಶಾಸಕ ರಾಜು ಕಾಗೆ ಪ್ರಶ್ನಿಸಿದರು. ನನ್ನದು ಇಪ್ಪತ್ತೈದು ವರ್ಷಗಳ ರಾಜಕೀಯ ಜೀವನ, ನಾನು ಯಾರಿಗೂ ನೋವನ್ನುಂಟು ಮಾಡುವ ಯಾರಿಗೂ ಕಪ್ಪು ಚುಕ್ಕೆ ತರುವ ಕೆಲಸ ಮಾಡಿಲ್ಲ‌‌. ಮಾಡುವುದೂ ಇಲ್ಲ ಎಂದು ಹೇಳಿದರು.

ನಾನು ಸಿದ್ದರಾಮಯ್ಯ ಬಗ್ಗೆಯೂ ಮಾತನಾಡುತ್ತೇನೆ. ಸಹಜವಾಗಿಯೇ ಆಡು ಭಾಷೆಯಲ್ಲಿ ಮಾತನಾಡುವುದು ರೂಢಿ‌. ಅದನ್ನೇ ತಿರುಚಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವುದು ಖಂಡನೀಯ ಎಂದರು. ಇನ್ನು ಜುಗೂಳ ಗ್ರಾಮದಲ್ಲಿಯೂ ಇದೇ ಆಗಿದೆ‌. ನಾನು ಕಾರಿನಲ್ಲಿ ಹೋಗಬೇಕಾದರೆ ಕೆಲವರು ಮುಂದೆ ಬಂದರು. ನನ್ನನ್ನು ನೋಡಿ ಧಿಕ್ಕಾರದ ಘೋಷಣೆ ಕೂಗಿದರು. ನನ್ನ ಕಾರಿನ ಮೇಲೆ ಗುದ್ದಿದರು. ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದೆ ನಾನು ಪ್ರಚಾರ ಕಾರ್ಯಕ್ರಮದಲ್ಲಿ ಹಾಸ್ಯಭರಿತವಾಗಿ ಮಾತನಾಡುತ್ತಾ ವಿದ್ಯುತ್ ಸಂಪರ್ಕ ಕಡಿತದ ಬಗ್ಗೆ ಹೇಳಿದೆ. ಆದರೆ ಅದನ್ನೂ ಕೂಡ ತಿರುಚಿ ಜನತೆಗೆ ಬೆದರಿಕೆ ಹಾಕಿ ಮತ ಕೇಳಿದ್ದಾರೆ ಎಂದು ಆರೋಪಿಸಿದರು. ಇದಕ್ಕೆಲ್ಲಾ ಏನು ಉತ್ತರ ಕೊಡುವುದು ಎಂದು ರಾಜು ಕಾಗೆ ಅಸಮಾಧಾನ ಹೊರಹಾಕಿದರು‌.

ನಾವು ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಕೊಟ್ಟು ನುಡಿದಂತೆ ನಡೆದಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ 22ಕ್ಕೂ ಅಧಿಕ ಸ್ಥಾನ ಗೆದ್ದು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ರಾಜು ಕಾಗೆ ವಿಶ್ವಾಸ ವ್ಯಕ್ತ ಪಡಿಸಿದರು.

ನೀರು ಸಮಸ್ಯೆ ನಿವಾರಣೆಗೆ ಮಹಾರಾಷ್ಟ್ರ ಜೊತೆ ಒಡಂಬಡಿಕೆ: ಕಾಗವಾಡ ಶಾಸಕ ರಾಜು ಕಾಗೆ

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ರಾಜ್ಯದಿಂದ ಆಯ್ಕೆಯಾಗಿ ಹೋದ ಬಿಜೆಪಿಯ 25 ಸಂಸದರು ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಬರ, ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪಗಳು ಜರುಗಿದರೂ ಕೂಡ ಕೇಂದ್ರದಿಂದ ಒಂದು ಬಿಡಿಗಾಸು ಅನುದಾನ ತರದೆ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅದಕ್ಕಾಗಿ ಅಂಥವರಿಗೆ ತಕ್ಕ ಪಾಠ ಕಲಿಸಬೇಕು. ಅದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಕೇಶವಮೂರ್ತಿ, ಜಿಪಂ ಮಾಜಿ ಅಧ್ಯಕ್ಷೆ ಆಶಾ ಐಹೊಳಿ, ಪ್ರಶಾಂತರಾವ್ ಐಹೊಳಿ, ದಿಗ್ವಿಜಯ ಪವಾರ ದೇಸಾಯಿ, ವಿಜಯ ಅಕಿವಾಟೆ. ರೇಖಾ ಪುಂಜಪ್ಪಗೊಳ, ಗುಳಪ್ಪ ಜತ್ತಿ, ಶಿವಾನಂದ ಗೊಲಬಾಂವಿ, ರಫಿಕ ಪಟೇಲ, ಸಂತೋಷ ಸಿಂದಗಿ, ಪ್ರಕೃತಿ ಸಿಂದಗಿ, ಸಿದರಾಯ ತೇಲಿ, ರವಿ ಕಾಂಬಳೆ, ಪೂರ್ಣಿಮಾ ಕಾಂಬಳೆ, ಸುರೇಶ ಮೆಂಡಿಗೇರಿ. ಶಂಕರ ಅವಗಡೆ ,ಬಸವರಾಜ ನಾವಿ, ಶರೀಫ ಮುಲ್ಕಾ, ಕಾಡಪ್ಪ ಸಿಂಗಾಡಿ, ಮಹಾಂತಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು. ಈ ವೇಳೆ ಬಿಜೆಪಿ ತೊರೆದು ಶಾಸಕ ರಾಜು ಕಾಗೆ ಸಮ್ಮುಖದಲ್ಲಿ ಕೆಲವರು ಕಾಂಗ್ರೆಸ್ ಸೇರ್ಪಡೆಗೊಂಡರು.

click me!