ಜಮೀನಿಗೆ ಜಿಪ್ಸಂ ಯಾಕೆ ಹಾಕ್ಬೇಕು, ಏನದರ ಉಪಯೋಗ?

By Suvarna NewsFirst Published Mar 10, 2020, 11:50 AM IST
Highlights

ಮಾಮೂಲಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಖರ್ಚಾಗದೇ ಬೀಳುವ ವಸ್ತು ಜಿಪ್ಸಂ. ಬೇರೆ ವಸ್ತುವಿನ ಜೊತೆ ಅದನ್ನೂ ಒಯ್ಯಲೇಬೇಕು ಎಂದಾಗ ರೈತರು ಅದನ್ನು ತರುತ್ತಾರಾದರೂ ತಂದು ಅದನ್ನು ಹೊಲದ ಬದುವಿನಲ್ಲಿ ಒಗೆಯುತ್ತಾರೆ. ಹೀಗೆ ಉಪಯೋಗಿಸದೇ ಬದುವಿನಲ್ಲಿ ಎಸೆದ ಸಾಕಷ್ಟುಜಿಪ್ಸಂ ಪ್ಯಾಕೆಟ್‌ಗಳನ್ನು ನಾನೇ ನೋಡಿದ್ದೀನಿ.

ರೈತಸಂಪರ್ಕ ಕೇಂದ್ರದವರು ಶೇಂಗಾ ಬೀಜದ ಜೊತೆ ಅದನ್ನೂ ಕೊಟ್ಟು ‘ಹಾಕ್‌ ಇದನ್ನ ಶೇಂಗಾ ಚೆನ್ನಾಗಿ ಬರುತ್ತೆ’ ಅನ್ನುತ್ತಾರಾದರೂ, ಯಾಕ್‌ ಚೆನ್ನಾಗಿ ಬರುತ್ತೆ ಅಂತ ವಿವರಿಸಲ್ಲ.

ಹಾಗೆ ನೋಡಿದರೆ ಜಿಪ್ಸಂ ಶೇಂಗಾ ಮಾತ್ರವಲ್ಲದೇ ಎಲ್ಲ ಬೆಳೆಗಳಿಗೂ ಬೇಕು. ಇದರಲ್ಲಿ ಸುಣ್ಣ ಮತ್ತು ಗಂಧಕ ಇದ್ದು ಬೆಳೆಗಳಿಗೆ ಅವಶ್ಯಕ. ಅದರಲ್ಲೂ ಎಣ್ಣೆ ಕಾಳಿನ ಬೆಳೆಗಳಿಗೆ ಬೇಕೇಬೇಕು. ರಾಸಾಯನಿಕ ಕೃಷಿ ಮಾಡುವವರಾಗಿರಲಿ ಅಥವಾ ಸಾವಯವ ಕೃಷಿ ಮಾಡುವವರಾಗಿರಲಿ, ಜಿಪ್ಸಂ ಅನ್ನು ಧಾರಾಳವಾಗಿ ಬಳಸಬಹುದು. ಇದೊಂದು ರಾಸಾಯನಿಕ ವಸ್ತುವಾದರೂ ಪರಿಸರಕ್ಕೆ ಹಾನಿ ಮಾಡುವ ಯಾವುದೇ ವಿಷಕಾರಿ ಅಂಶ ಇಲ್ಲದ್ದರಿಂದ ಅದನ್ನು ಸಾವಯವ ಕೃಷಿಯಲ್ಲಿ ಬಳಸಬಹುದು ಅಂತ ವಿಜ್ಞಾನಿಗಳೇ ಹೇಳಿದ್ದಾರೆ. ಆದ್ದರಿಂದ ಸರ್ಟಿಫೈಡ್‌ ಸಾವಯವ ಕೃಷಿಕರು ಕೂಡ ಇದನ್ನು ನಿರಾತಂಕವಾಗಿ ಬಳಸಬಹುದು.

ಹೈನುಗಾರಿಕೆಗೆ ಅಡ್ಡಿಯಾಗಲಿಲ್ಲ ಅಂಗವೈಕಲ್ಯ; ದಿನಕ್ಕೆ 100 ಲೀ ಹಾಲು ಮಾರ್ತಾರೆ ಈ ರೈತ!

ಬಳಸುವಾಗ ಯಾವುದಾದರೂ ಸಾವಯವ ಗೊಬ್ಬರದ ಜೊತೆ ಬೆರೆಸಿ ಭೂಮಿಗೆ ಸೇರಿಸಬಹುದು. ಶೇಂಗಾ ಬೆಳೆಗೆ ಬಿತ್ತುವ ಮುಂಚೆ ಒಮ್ಮೆ ಹಾಗೂ ಶೇಂಗಾ ಕಾಯಿಯಾಗಲು ನೆಲಕ್ಕಿಳಿಯುವ ಮೊದಲು ಸಾಲಿನ ಎರಡೂ ಬದಿಗೆ ಹಾಕಿ ಮಣ್ಣೇರಿಸಬೇಕು. ಇದರಿಂದ ಮೆತ್ತಗಾಗುವ ಮಣ್ಣಲ್ಲಿ ಶೇಂಗಾ ಸುಲಭವಾಗಿ ಇಳಿದು ಕಾಯಿ ತುಂಬ ಕಾಳು ತುಂಬಿಕೊಳ್ಳುತ್ತವೆ. ಹಾಗೆಯೇ ಕಾಳಿನ ತೂಕ ಹೆಚ್ಚುತ್ತದೆ, ಅಂದರೆ ಅದರಲ್ಲಿನ ಎಣ್ಣೆ ಅಂಶ ಹೆಚ್ಚಾಗುತ್ತದೆ. ಆದ್ದರಿಂದ ಎಣ್ಣೆ ಕಾಳು ಬೆಳೆಯುವವರು ಅವಶ್ಯವಾಗಿ ಜಿಪ್ಸಂ ಬಳಸಬೇಕು.

ಈ ಜಿಪ್ಸಮ್ಮಿನ ಇನ್ನೊಂದು ವಿಶೇಷತೆ ಏನೆಂದರೆ, ಮಾಮೂಲಾಗಿ ಸಾವಯವ ಗೊಬ್ಬರವನ್ನು ಒಂದೇ ಕಡೆ ಬಟಾ ಬಯಲಿನಲ್ಲಿ ಹಾಕಿದಾಗ ಅದರಲ್ಲಿರುವ ಸಾರಜನಕ ಅಂಶವು ಬಿಸಿಲು ಮಳೆ ಗಾಳಿಗಳಿಂದ ನೈಟ್ರೇಟ್‌ ಆಗಿ ಪರಿವರ್ತನೆಗೊಂಡು ಅಮೊನಿಯಾ ಗ್ಯಾಸ್‌ ಆಗಿ ವಾತಾವರಣ ಸೇರಿಕೊಳ್ಳುತ್ತದೆ. ಅಂದರೆ ಬಹುತೇಕ ಆ ಗೊಬ್ಬರ ಹಾಳಾದಂತೆಯೇ ಲೆಕ್ಕ. ಆದರೆ ಆ ಸಾವಯವ ಗೊಬ್ಬರದಲ್ಲಿ ಜಿಪ್ಸಂ ಬೆರೆಸಿದಾಗ ಸಾವಯವ ಗೊಬ್ಬರದ ಮುಖ್ಯ ಪೋಷಕಾಂಶವಾದ ಸಾರಜನಕವು ನೈಟ್ರೇಟ್‌ ಮತ್ತು ಅಮೋನಿಯಾ ಆಗಿ ಹಾಳಾಗಿ ಹೋಗುವುದಿಲ್ಲ. ಆದ್ದರಿಂದ ಪ್ರತಿಸಲ ಜಮೀನಿಗೆ ಕೊಟ್ಟಿಗೆ ಗೊಬ್ಬರ ಹಾಕುವಾಗ ತಪ್ಪದೇ ಅದರಲ್ಲಿ ಜಿಪ್ಸಂ ಬೆರೆಸಿ. ಇದನ್ನು ಸಾವಯವ ಗೊಬ್ಬರದ ಜೊತೆ ಬೆರೆಸಿ ಬಳಸಿದಾಗ ಎಲ್ಲ ಪೋಷಕಾಂಶಗಳೂ ಬೆಳೆಗೆ ಸುಲಭವಾಗಿ ಸಿಕ್ಕಂತಾಗುತ್ತದೆ. ಜಿಪ್ಸಂ ಬಗ್ಗೆ ಇನ್ನೊಂದು ಅಂಶವೇನೆಂದರೆ, ಅತಿ ಕಡಿಮೆ ದರದಲ್ಲಿ ಇವೆರಡೂ ಪೋಷಕಾಂಶಗಳು ದೊರೆತಂತಾಗುತ್ತದೆ. ಸರ್ಕಾರ ಸಬ್ಸಿಡಿ ಕೊಡುತ್ತದಾದ್ದರಿಂದ ಜಿಪ್ಸಮ್‌ ರೈತರಿಗೆ ಅತಿ ಕಡಿಮೆ ದರದಲ್ಲಿ ಸಿಗುತ್ತದೆ.

6 ಎಕರೆ ಜಮೀನಿನಲ್ಲಿ ಕಲ್ಲಂಗಡಿ- ಕರಬೂಜ ಬೆಳೆದು ಶ್ರೀಮಂತನಾದ ಕೋಟೆ ನಾಡಿನ ರೈತ!

ಇನ್ನು ಕ್ಷಾರಯುಕ್ತ ಮಣ್ಣಿನ ಜಮೀನು ಹೊಂದಿರುವವರು (ಕರ್ಲು ಅಥವಾ ಸವಳು) ಕಡ್ಡಾಯವೆಂಬಂತೆ ಜಿಪ್ಸಂ ಬಳಸಲೇಬೇಕು. ಮಣ್ಣಿನ ರಸಸಾರ 8.5 ಗಿಂತ ಹೆಚ್ಚಿದ್ದರೆ ಅಂಥ ಜಮೀನಿಗೆ ಜಿಪ್ಸಂ ಬಳಸಿ ರಸಸಾರ 7 ರವರೆಗೆ ತರುತ್ತಾರೆ. ಉಳಿದಂತೆ ಎಲ್ಲ ರೈತರೂ ಎಕರೆಗೆ ಒಂದರಿಂದ ಎರಡು ಕ್ವಿಂಟಲ್‌ ನಷ್ಟುಜಿಪ್ಸಂ ಅನ್ನು ಕೊಟ್ಟಿಗೆ ಗೊಬ್ಬರದಲ್ಲಿ ಬೆರೆಸಿ ಬಳಸುವುದು ಮರೆಯಬೇಡಿ.

click me!