Latest Videos

ನೋವ ಮರೆಯಲು ರಾಗಾಲಾಪ, ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂ.ರಾಜೀವ ತಾರಾನಾಥ

By Nirupama K SFirst Published Jun 2, 2024, 11:53 AM IST
Highlights

‘ಸಂಗೀತವೇ ಉಸಿರು’ ಎಂದು ಬದುಕುತ್ತಿರುವ ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕರಾದ ಪಂ.ರಾಜೀವ ತಾರಾನಾಥರು ತಮ್ಮ ಮನೆಯಲ್ಲಿಯೇ ಬಿದ್ದು ತೊಡೆ ಮೂಳೆ ಮುರಿದುಕೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ತಿಂಗಳ ಮೇಲಾಯಿತು.

- ಗಣೇಶ ಅಮೀನಗಡ

‘ಸಂಗೀತವೇ ಉಸಿರು’ ಎಂದು ಬದುಕುತ್ತಿರುವ ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕರಾದ ಪಂ.ರಾಜೀವ ತಾರಾನಾಥರು ತಮ್ಮ ಮನೆಯಲ್ಲಿಯೇ ಬಿದ್ದು ತೊಡೆ ಮೂಳೆ ಮುರಿದುಕೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ತಿಂಗಳ ಮೇಲಾಯಿತು.ಅವರನ್ನು ಯಾರೇ ಕಾಣಲು ಬಂದರೂ ಸಂಗೀತ, ಸಾಹಿತ್ಯ ಕುರಿತೇ ಚರ್ಚೆ ಸಾಮಾನ್ಯ. ಲೇಖಕರು ಬಂದರೆ ’ಯಾವ ಪುಸ್ತಕ ಓದಿದ್ರಿ? ಏನು ಬರದ್ರಿ?’ ಎಂದೇ ಮಾತಿಗಾರಂಭಿಸುತ್ತಾರೆ. ಅದರಲ್ಲೂ ಸಂಗೀತಗಾರರು ಬಂದರೆ ‘ಹಾಡ್ರಿ’ ಎಂದು ಒತ್ತಾಯಿಸುತ್ತಾರೆ ಇಲ್ಲವೆ ತಾವೇ ಹಾಡುತ್ತಾರೆ. ಹಾಗೆ ಹಾಡಿದವರ ಹಾಡು ಮೆಚ್ಚುಗೆಯಾದರೆ ಶಹಾಭಾಷ್ ಎನ್ನುತ್ತಾರೆ ಇಲ್ಲದಿದ್ದರೆ ‘ಇನ್ನಷ್ಟು ಸುಧಾರಿಸಬೇಕ್ರಿ’ ಎಂದು ಮುಲಾಜಿಲ್ಲದೇ ಹೇಳುತ್ತಾರೆ. 

ಈಚೆಗೆ ಮೈಸೂರಿಗೆ ಸಂಗೀತ ಕಛೇರಿ ನೀಡಲು ಬಂದಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕರಾದ ಧಾರವಾಡದ ಪಂ.ವೆಂಕಟೇಶಕುಮಾರ ಅವರು ರಾಜೀವ ತಾರಾನಾಥ ಅವರನ್ನು ಭೇಟಿಯಾದರು. ‘ಆರಾಮ ಅದೀರಿ? ಆರಾಮ ಆಕ್ತೀರಿ’ ಎಂದು ಪಂ.ವೆಂಕಟೇಶಕುಮಾರ ಅವರು ಜವಾರಿ ಭಾಷೆಯಲ್ಲಿಯೇ ಮಾತುಕತೆ ಶುರು ಮಾಡಿದಾಗ ಪ್ರತಿಯಾಗಿ ‘ಆರಾಮ ಆಕ್ತೀನ್ರಿ’ ಎಂದು ಜವಾರಿ ಭಾಷೆಯಲ್ಲಿಯೇ ಉತ್ತರ ನೀಡಿದರು. 

ಔತ್ತಮ್ಯದ ಗೀಳಿನಲ್ಲಿ

ನಂತರ ದರ್ಬಾರಿ ಕಾನಡ ರಾಗದ ಝಲಕನ್ನು ರಾಜೀವ ತಾರಾನಾಥರು ಹಾಡಿದಾಗ ತಲೆದೂಗಿದರು ಪಂ.ವೆಂಕಟೇಶಕುಮಾರ. ಬಳಿಕ ಮುಲ್ತಾನಿ ರಾಗವನ್ನು ಸ್ವಲ್ಪ ಹೊತ್ತು ರಾಜೀವ ತಾರಾನಾಥರು ಹಾಡಿದಾಗ ಎದ್ದು ನಿಂತ ವೆಂಕಟೇಶಕುಮಾರ ಅವರು ‘ನೀವು ೧೦೧ ವರ್ಷ ಇರಬೇಕ್ರಿ. ನಮ್ಮಂಥವರ ಸಲುವಾಗಿ, ಸಂಗೀತದ ಸಲುವಾಗಿ’ ಎಂದು ಕೈ ಮುಗಿದರು.

ಮುಗಳ್ನಕ್ಕರು ರಾಜೀವ ತಾರಾನಾಥರು ಮುಲ್ತಾನಿ ರಾಗ ಹಾಡಲು ಕಾರಣವಿದೆ; ಪಂ.ವೆಂಕಟೇಶಕುಮಾರ ಅವರು ಗದಗದ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳ ಬಳಿ ಸಂಗೀತ ಕಲಿತವರು. ಪುಟ್ಟರಾಜ ಗವಾಯಿಗಳ ಗುರುಗಳಾದ ಪಂಚಾಕ್ಷರಿ ಗವಾಯಿಗಳ ಹತ್ತಿರ ಮುಲ್ತಾನಿ ಹಾಗೂ ಪೂರಿಯಾ ರಾಗಗಳನ್ನು ಕಲಿತ ಸದ್ಯ ಬದುಕಿದವರಲ್ಲಿ ರಾಜೀವ ತಾರಾನಾಥರು ಒಬ್ಬರೇ. ಇದಕ್ಕಾಗಿ ಅವರು ಮುಲ್ತಾನಿ ರಾಗವನ್ನು ಗುಣುಗುಣಿಸಿದರು.

ಅವರು ಹೋದ ಮೇಲೆ ಅಮೆರಿಕದಿಂದ ಬೆಲ್ಲಿ ಅವರ ಫೋನ್ ಕರೆ ಬಂದಾಗ, ತಾರಾನಾಥರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪಾಠ ಶುರು ಮಾಡಿದರು. ಇದಾದ ಸ್ವಲ್ಪ ಹೊತ್ತಿಗೆ ಅವರನ್ನು ಬೆಡ್ಡಿನಲ್ಲಿಯೇ ನರ್ಸ್‌ಗಳಿಬ್ಬರು ಎತ್ತಿ ಕೂರಿಸುವಾಗ ಆದ ನೋವನ್ನು ಕೂಡಾ ರಾಗವಾಗಿ ಹೊರಹಾಕಿದರು. ಹೀಗೆಯೇ ನೋವನ್ನು ತಡೆದುಕೊಳ್ಳಲು ಅವರು ರಾಗಗಳಿಗೆ ಮೊರೆಹೋಗುತ್ತಾರೆ.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಒಂದಿನ ಸಂಜೆ ಯುವಕನೊಬ್ಬ ತಾರಾನಾಥರಿದ್ದ ಕೋಣೆಯೊಳಗೆ ಬಂದು ಕೈ ಮುಗಿದ. ‘ಏನು ಹೆಸರು?’ ‘ಸುಬ್ರಹ್ಮಣ್ಯ’.‘ಏನು ಮಾಡ್ತೀರಿ?’‘ಎಂಜಿನಿಯರ್’. ‘ಯಾವ ಎಂಜಿನಿಯರ್?’ಸಾಫ್ಟ್‌ವೇರ್ ಎಂಜಿನಿಯರ್’.‘ಮತ್ತೇನು ಮಾಡ್ತೀರಿ’.‘ಕೊಳಲು ನುಡಸ್ತೀನಿ’.‘ತಂದೀರಿ?’‘ಇಲ್ಲ ಸರ್’.‘ಮತ್ಯಾಕ ಬಂದೀರಿ?’‘ನಿಮ್ಮನ್ನು ಭೇಟಿಯಾಗಲು’.‘ಅಷ್ಟ ಸಾಲ್ದು. ಕೊಳಲು ತಂದಿದ್ರ ನುಡಸ್ರಿ’ ಒತ್ತಾಯಿಸಿದರು. ಸುಬ್ರಹ್ಮಣ್ಯ ಸುಮ್ಮನೆ ಕುಳಿತಾಗ ಮತ್ತೆ ಹೇಳಿದರು. ಮೆಲ್ಲನೆ ಬ್ಯಾಗಿನಿಂದ ಕೊಳಲು ತೆಗೆದ ಸುಬ್ರಹ್ಮಣ್ಯ ಅವರು ನುಡಿಸಿದಾಗ ತಾರಾನಾಥರು ತಲೆದೂಗಿದರು. ಬಳಿಕ ಯಮನ್ ರಾಗವನ್ನು ಹಾಡಿ ಅದರ ಹಾಗೆ ಕೊಳಲು ನುಡಿಸಲು ಹೇಳಿದರು. 

ಸುಬ್ರಹ್ಮಣ್ಯ ಅವರು ಕೊಳಲು ನುಡಿಸಿದಾಗ ಸಮಾಧಾನವಾಗಲಿಲ್ಲ ಅವರಿಗೆ. ಮತ್ತೆ ಯಮನ್ ರಾಗ ಹಾಡಿ, ನುಡಿಸಲು ಹೇಳಿದರು. ಆಗಲೂ ಅವರಿಗೆ ತೃಪ್ತಿಯಾಗಲಿಲ್ಲ. ಮತ್ತೆ ಹಾಡಿದರು. ಮತ್ತೆ ಕೊಳಲು ವಾದನ. ಹೀಗೆ ಸ್ವಲ್ಪ ಹೊತ್ತು ನಡೆಯಿತು. ಆಗ ಸಿಟ್ಟಿಗೆದ್ದ ತಾರಾನಾಥರು ‘ಅಮೀನಗಡ, ಬಡಿಗಿ (ಕೋಲು) ತಗೊಂಡು ಬರ್ರಿ’ ಎಂದರು. 

ಆ ಯುವಕನಿಗೆ ಹೊಡೆಯಲು. ‘ನೀವು ಆರಾಮ ಆಗ್ರಿ. ಸುಬ್ರಹ್ಮಣ್ಯ ಮತ್ತೆ ಬರ್‍ತಾರ’ ಎಂದೆ. ಸುಮ್ಮನಾದ ಅವರು ‘ಈಗ ಹೋಗ್ರಿ, ಮತ್ತ ಬರ್ರಿ’ ಎಂದು ಕಳಿಸಿಕೊಟ್ಟರು. ಇದಕ್ಕಿಂತ ಭಿನ್ನ; ಅವರ ಬಳಿ ಮೂವತ್ತು ವರ್ಷಗಳಿಂದ ಸರೋದ್ ಕಲಿಯುತ್ತಿರುವ ಅಹ್ಮದಾಬಾದಿನ ಸೋಹನ್ ನೀಲಕಂಠ ಅವರು ಈಚೆಗೆ ಬಂದು ವಾರಗಟ್ಟಲೆ ಇದ್ದರು. ವೃತ್ತಿಯಲ್ಲಿ ವಾಸ್ತುಶಿಲ್ಪಿಯಾದ, 72 ವರ್ಷ ವಯಸ್ಸಿನ ಸೋಹನ್ ಅವರು ಗುಜರಾತಿನ ಪ್ರಸಿದ್ಧವಾದ ಶ್ರೀಕಂಡವನ್ನು ತಮ್ಮ ಗುರುಗಳ ಮನೆಯಲ್ಲಿ ತಯಾರಿಸಿ ತಂದು ತಿನ್ನಿಸುತ್ತಿದ್ದರು. ಹಾಗೆ ತಿಂದಾಗ ‘ಆಹಾ’ ಎಂದ ತಾರಾನಾಥರ ಸೇವೆಯನ್ನು ಮುಂದುವರಿಸುತ್ತಿದ್ದ ಅವರಿಗೆ ಸಂಗೀತ ಪಾಠವೂ ಮುಂದುವರೆಯುತ್ತಿತ್ತು. ಹೀಗೆಯೇ ಪುಣೆಯಿಂದ ಅನುಪಮ್ ಜೋಶಿ ಎರಡು ಬಾರಿ ಬಂದು ಹೋಗಿದ್ದಾರೆ. 

ಕಕ್ಕುಲಾತಿಯಿಂದ ತಮ್ಮ ಗುರುಗಳ ಸೇವೆ ಮಾಡುವ ಅನುಪಮ್ ಅವರಿಗೆ ಸಂಗೀತ ಪಾಠ ನಿತ್ಯವೂ ಸಿಗುತ್ತಿತ್ತು. ಅವರು ಮಲಗಿದಾಗ ಇತರರ ಸರೋದ್ ಕಛೇರಿಯನ್ನು, ಹಳೆಯ ಹಿಂದಿ ಸಿನಿಮಾ ಹಾಡುಗಳನ್ನು ಮೊಬೈಲ್ ಫೋನ್ ಮೂಲಕ ಕೇಳಿಸುತ್ತಿದ್ದರು. ಇವರ ಹಾಗೆ ಪಟ್ಟ ಶಿಷ್ಯರೆಂದರೆ ಮೈಸೂರಿನ ಸಚಿನ್ ಹಂಪಿಹೊಳಿ ಹಾಗೂ ಅವರ ಮಗಳೇ ಆಗಿರುವ ಪ್ರೊ.ಕೃಷ್ಣಾ ಮನವಲ್ಲಿ. ೧೩ ವರ್ಷಗಳಿಂದ ಸರೋದ್ ತಾಲೀಮಿನಲ್ಲಿ ತಬಲಾ ಸಾಥಿ ನೀಡುವ ಭೀಮಾಶಂಕರ ಬಿದನೂರ ಅವರು ’ಸರೋದ್‌ನಲ್ಲಿ ನುಡಿಸಿದ್ದ ಸ್ವರಗಳನ್ನು ತಬಲಾದಲ್ಲಿ ಹೇಗೆ ನುಡಿಸಬೇಕೆಂದು ಹೇಳಿಕೊಡುತ್ತಾರೆ ಅಂದರೆ ತಿಹಾಹಿಗಳನ್ನು ಹೇಳಿಕೊಡುತ್ತಾರೆ. 

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ತಬಲಾದ ಸಾಥ್ ಸಂಗಾತ್ ಹೇಗಿರಬೇಕು ಎಂಬುದನ್ನು ಹೇಳಿಕೊಡುತ್ತಲೇ ಇರುತ್ತಾರೆ. ಅದು ಮನೆಯಾಗಿರಬಹುದು, ಆಸ್ಪತ್ರೆಯಾಗಿರಬಹುದು. ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುವುದೆಂದರೆ ಸಂಗೀತದ ಪಾಠವೂ ಆಗುತ್ತದೆ’ ಎನ್ನುವ ಖುಷಿ ಅವರಿಗೆಕಳೆದ ವಾರ ಪಂ.ವೀರಭದ್ರಯ್ಯ ಹಿರೇಮಠ ಅವರು ತಮ್ಮ ಮಗಳು ಸುನೀತಾ ಅವರೊಂದಿಗೆ ಆಸ್ಪತ್ರೆಯಲ್ಲಿ ರಾಜೀವ ತಾರಾನಾಥ ಅವರನ್ನು ಭೇಟಿಯಾದಾಗ ಬಿಹಾರ್ ರಾಗವನ್ನು ಹಾಡಿಸಿದರು ಮತ್ತು ತಾವೇ ಹಾಡಿ ತೋರಿಸಿದರು. ’ಕಾಲಿನ ನೋವು, ದಣಿವಾಗಿದ್ರೂ ಸಂಗೀತ ಹೇಳಿಕೊಟ್ರು. 92 ನೇ ವಯಸ್ಸಲ್ಲೂ ಅವರು ಸ್ವರ ಹಿಡಿಯುವ ರೀತಿ ಅದ್ಭುತ. ಎಲ್ಲ ರಾಗಗಳಿಗೂ ಅವುಗಳದ್ದೇ ಜಾಗವಿರುತ್ತದೆ. ಆ ಜಾಗ ಮುಟ್ಟಲು ಸಾಧಕರಿಗೆ ಮಾತ್ರ ಸಾಧ್ಯ. ಅವ್ರಿಗೆ ಸಾಧ್ಯವಾಗ್ತದ. ಬಿಹಾಗ್ ರಾಗವನ್ನು ಅರ್ಧ ಗಂಟೆಯವರೆಗೂ ಹಾಡಿದ್ರು. ಅವರೊಂದಿಗೆ ನಾವೂ ಹಾಡಿದೆವು. 

ತಪ್ಪಾದರೆ ತಿದ್ದುತ್ತಿದ್ದರು’ ಎಂದು ಸುನೀತಾ ಹಿರೇಮಠ ಸಂಭ್ರಮದಿಂದ ಹೇಳಿದರು. ಆಮೇಲೆ ತಾರಾನಾಥರು ‘ಛಲೋ ರಿಯಾಜ್ ಮಾಡವ್ವ. ಛಲೋ ಭವಿಷ್ಯ ಐತಿ’ ಎಂದು ಹಾರೈಸಿದರು. ಕಳೆದ ವರ್ಷ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಲೂ ಅಮೆರಿಕದಿಂದ ಫೋರ್ಡ್ ಫೌಂಡೇಷನ್ ಫೆಲೋಶಿಪ್ ಪಡೆದು ಸಂಗೀತ ಕುರಿತು ಪಿಎಚ್.ಡಿ ಅಧ್ಯಯನ ಕೈಗೊಂಡಿದ್ದ ಸೋಫಿಯಾ ಅವರಿಗೆ ತಪ್ಪದೇ ಸಂಗೀತ ಕುರಿತು ಮಾತನಾಡಿದರು. ‘ಸಂಗೀತದೊಳಗೆ ಮಾದಕಶಕ್ತಿಯಿದೆ.

ಆ ಮಾದಕಶಕ್ತಿಯನ್ನು ಉಳ್ಳವರು ಸಂಗೀತಗಾರರು. ಅವಸರದ ಬೆನ್ನೇರಿದರೆ ಅವಸಾನ ಅಂದರೆ ಪ್ರಚಾರದ ಹುಚ್ಚು ಹತ್ತಬಾರದು. ಸಂಗೀತ, ಸಾಹಿತ್ಯಕ್ಕೆ ನಿಧಾನವೇ ಪ್ರಧಾನ. ಆದರೆ ಬಹಳಷ್ಟು ಮಂದಿ ಅವಸರದಲ್ಲಿದ್ದಾರೆ. ನಮ್ಮ ನಡುವೆ ಒಂದು ಬೆಚ್ಚಗಿನ ಅನ್ಯೋನ್ಯತೆ ಇರಬೇಕು. ಅದು ಸಂಗೀತ, ಸಾಹಿತ್ಯವಾಗಿರಬಹುದು. ಅವು ನೆಮ್ಮದಿ ನೀಡುತ್ತವೆ, ನೀಡಬೇಕು. ಕೃತಕವಾಗಿರಬಾರದು. ನನ್ನ ಒಡನಾಟ ಇರುವುದು, ಅನ್ಯೋನ್ಯತೆ ಇರುವುದು ಸಂಗೀತದೊಂದಿಗೆ. ಈ ಆಸ್ಪತ್ರೆಯ ನನ್ನ ರೂಮಿನೊಳಗೆ ಸಂಗೀತಕ್ಕೆ ಸಂಬಂಧಿಸಿದವರು ಬಂದಾಗ ಸಂಗೀತ ಕುರಿತು ಚರ್ಚಿಸುವೆ ಇಲ್ಲದಿದ್ದಾಗ ನನ್ನಷ್ಟಕ್ಕೆ ನಾನೇ ಹಾಡಿಕೊಳ್ಳುವೆ. ಇದು ನಿರಂತರ...’ ಎನ್ನುವ ರಾಜೀವ ತಾರಾನಾಥ ಅವರೊಂದಿಗೆ ಮಾತೆಂದರೆ ಸಂಗೀತ ಮತ್ತು ಸಾಹಿತ್ಯದ ಜುಗಲ್‌ಬಂದಿಯ ಸಹವಾಸದಂತೆ.

click me!