ಸೌಮ್ಯ ಜಾರ್ಕಳ ಮುಂಡ್ಲಿ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಂಡಾರು ಗ್ರಾಮದ ನಿವಾಸಿ ಸಂತೋಷ್‌ ಪೂಜಾರಿ ಹೈನುಗಾರಿಕೆಗೆ ಹೊಸ ಭಾಷ್ಯ ಬರೆದಿದ್ದಾರೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲಿಗೆ ಬಲವಾದ ಗಾಯವಾಗಿ ಕಾಲನ್ನೇ ಕಳೆದುಕೊಳ್ಳಬೇಕಾಯಿತು. ಆದರೂ ಎದೆಗುಂದದೇ ಬಾಲ್ಯದ ಕೃಷಿ ಪ್ರೀತಿಯನ್ನು ಮುಂದುವರಿಸಿ ಹೈನುಗಾರಿಕೆಗೆ ಮುಂದಾದರು.

ಗೋಮೂತ್ರದಿಂದ ಫಿನಾಯಿಲ್‌ ತಯಾರಿಸಿದ ದಕ್ಷಿಣ ಕನ್ನಡದ ರೈತ ಗೌತಮ್‌!

ಈಗ ಹಸುಗಳ ಆರೈಕೆಯಿಂದ ಹಿಡಿದು ಸ್ವಚ್ಛತೆ, ಆಹಾರ, ಲಾಲನೆ ಪಾಲನೆ ಇತ್ಯಾದಿ ಎಲ್ಲವನ್ನೂ ಮಾಡುತ್ತಿದ್ದಾರೆ. ಇವರ ಬಳಿ ದೇಸಿ ತಳಿಯ ಗಿರ್‌ ಜೊತೆಗೆ ಎಚ್‌ಎಫ್‌, ಜಸ್ಸಿ, ಕ್ರಾಸ್‌ ಹಸುಗಳಿವೆ. ನಿತ್ಯ 100 ಲೀಟರ್‌ ಹಾಲು ಮಾರಾಟ ಮಾಡುವುದು ಇವರ ಸಾಧನೆಗೆ ಸಾಕ್ಷಿಯಂತಿದೆ.

ಹಸುಗಳ ಆರೈಕೆ ಹೇಗೆ?

ಸಂತೋಷ ಅವರ ಅಭಿಪ್ರಾಯದಂತೆ ‘ಎಚ್‌ಎಫ್‌, ಜಸ್ಸಿ, ಕ್ರಾಸ್‌ ಹಾಗೂ ದೇಶೀಯ ಗಿರ್‌ ಜಾತಿಗಳ ಹಸುಗಳು ವರ್ಷಕ್ಕೊಮ್ಮೆ ಕರು ಹಾಕುವಂತೆ ನೋಡಿಕೊಳ್ಳಬೇಕು. ಒಮ್ಮೆ ಕರು ಹಾಕಿದ ಹಸು ಮೂರು ತಿಂಗಳಿಗೆ ಪುನಃ ಗರ್ಭಧಾರಣೆ ಮಾಡುವಂತೆ ಗಮನಹರಿಸಬೇಕು. ಇದರಿಂದ ಹಾಲು ಸಿಗುವ ಪ್ರಮಾಣ ಸರಿಯಾಗಿರುತ್ತದೆ. ಕೃಷಿ ಅಥವಾ ಹೈನುಗಾರಿಕೆಯಲ್ಲಿ ಹೆಚ್ಚು ಸಾಲ ಮಾಡಬಾರದು. ಸಾಲ ಮಾಡಿದರೆ ಲಾಭದ ಪ್ರಮಾಣ ಕಡಿಮೆಯಾಗಿ ನಷ್ಟವಾಗುತ್ತದೆ’ ಎನ್ನುತ್ತಾರೆ.

ಸಂತೋಷ್‌ ಅವರು ಗದ್ದೆಯಲ್ಲಿ ಕೊಟ್ಟಿಗೆ ಗೊಬ್ಬರ ಉಪಯೋಗಿಸಿ ಹಸುಗಳಿಗೆ ಬೇಕಾದ ಮೇವನ್ನು ಬೆಳೆಯುತ್ತಾರೆ. ಜೋಳ, ನೆಲಕಡಲೆ, ಹೆಸರುಕಾಳು, ಗೋಧಿ ಭೂಸಾ, ಕಡಲೆ ಹೊಟ್ಟು, ಹತ್ತಿ ಕಾಳಿನ ಹಿಂಡಿ, ಶೇಂಗಾ ಹಿಂಡಿ, ಅಕ್ಕಿ ತವಡು ಇತ್ಯಾದಿ ಆಹಾರ ನೀಡುತ್ತಾರೆ. ‘ಹಸುಗಳಿಗೆ ಗುಣಮಟ್ಟದ ಆಹಾರ ಸಿಗದೇ ಹೋದರೆ ಹಾಲು ಉತ್ಪಾದನೆ ಮತ್ತು ಗರ್ಭಧಾರಣೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಮತೋಲಿನ ಮತ್ತು ಗುಣಮಟ್ಟದ ಆಹಾರ ನೀಡಬೇಕು’ ಎಂಬುದು ಸಂತೋಷ್‌ ಅವರ ಸಲಹೆ.

ಕೃಷಿ ಕೆಲಸದಲ್ಲಿ ಆಸಕ್ತಿಯೊಂದೇ ಮುಖ್ಯ. ದೃಢತೆ, ಸಹನೆ, ತಾಳ್ಮೆ ಜೊತೆಗಿದ್ದರೆ ಯಾರಾದರೂ ಯಶಸ್ವಿಯಾಗಬಹುದು. ನನ್ನಿಂದ ಈ ಕೆಲಸ ಆಗಲ್ಲ. ಕೂತು ಕೆಲಸ ನಿರ್ವಹಿಸುತ್ತೀನಿ ಅನ್ನೋದೆಲ್ಲ ಕೃಷಿಯಲ್ಲಿ ನಡೆಯಲ್ಲ. ಆಗ ಮಾತ್ರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.- ಸಂತೋಷ್‌ ಪೂಜಾರಿ, ಕೃಷಿಕ

ಹಟ್ಟಿಯ ಸಗಣಿಯನ್ನೇ ಮೇವು ಅಲ್ಲದೇ ಇತರ ತೋಟಗಾರಿಕಾ ಬೆಳೆಗಳಿಗೂ ಹಾಕುತ್ತಾರೆ. ಹಾಲು ಕರೆಯಲು ಯಂತ್ರವಿದೆ. ಹಸುಗಳ ಆರೋಗ್ಯ ಕೆಡಿಸುವ ಧಗೆ ನಿವಾರಣೆಗೆ ಕೊಟ್ಟಿಗೆಯಲ್ಲಿ ಫ್ಯಾನ್‌ ಇದೆ. ನೀರಿಗೆ ಸ್ಟೀಲ್‌ ತೊಟ್ಟಿಯಿದೆ. ಸರ್ಕಾರದ ಹಾಗೂ ಹಾಲು ಒಕ್ಕೂಟ ನೀಡುವ ಸವಲತ್ತುಗಳನ್ನು ಬಳಸಿಕೊಂಡಿದ್ದಾರೆ.

ಬೇಸಿಗೆಯಲ್ಲಿ ಟೊಮಾಟೊ ಬೆಳೆಯುವವರಿಗಾಗಿ ಒಂದಿಷ್ಟುಮಾಹಿತಿ!

‘ಒಂದು ಹಸುವಿನಿಂದ 10 ದಿನಕ್ಕೆ 100 ಲೀಟರ್‌ ಹಾಲಿನ ಆದಾಯದಿಂದ ಸರಾಸರಿ 30 ಸಾವಿರ ರೂ. ಗಳಿಸುತ್ತೇನೆ. ಸರಕಾರದಿಂದ ತಿಂಗಳಿಗೆ ಇಷ್ಟುಂತ ಸಬ್ಸಿಡಿಗಳು ಬರುತ್ತದೆ. ಹಸುಗಳ ಆರೈಕೆಗೆ ಸಂಪೂರ್ಣ ಕಾರ್ಮಿಕರನ್ನು ಅವಲಂಬಿಸಿಲ್ಲ. ನಾನೇ ಸ್ಥಳದಲ್ಲಿ ನಿಂತು ಉಸ್ತುವಾರಿ ನೋಡಿಕೊಳ್ಳುತ್ತೇನೆ. ಹಸುಗಳಿಗೆ ಆರೋಗ್ಯ ಸಮಸ್ಯೆ ಬಂದಾಗ ಕೂಡಲೇ ಚಿಕಿತ್ಸೆ ಕೊಡಿಸುತ್ತೇನೆ’ ಎನ್ನುತ್ತಾರೆ ಸಂತೋಷ್‌ ಪೂಜಾರಿ.