
ಈ ಕತೆ ನೀವು ಕೇಳಿರಬಹುದು. 'ದಿ ಎಂಪರರ್ಸ್ ನ್ಯೂ ಕ್ಲೋತ್ಸ್' ಎಂಬ ಕತೆ. ರಾಜನಿಗೆ ಚೆಂದಚೆಂದದ ಬಟ್ಟೆಗಳೆಂದರೆ ಹುಚ್ಚೆಂಬಷ್ಟು ಪ್ರೀತಿ. ಆತ ತನ್ನ ರಾಜ್ಯದ ಅತ್ಯುತ್ತಮ ನೇಯ್ಗೆಕಾರರನ್ನು ಕರೆಸಿ ತನಗಾಗಿ ಒಂದು ಸುಂದರ ಬಟ್ಟೆ ತಯಾರಿಸಲು ಹೇಳುತ್ತಾನೆ. ರಾಜನ ಬಟ್ಟೆಯ ಹುಚ್ಚು ಗೊತ್ತಿದ್ದ ಅವರು ತಾವು ಹೇಗೇ ತಯಾರಿಸಿದರೂ ಅದು ಇಷ್ಟವಾಗದಿದ್ದಲ್ಲಿ ರಾಜ ತಮ್ಮನ್ನು ಕೊಲ್ಲಿಸುತ್ತಾನೆಂದು ಬಗೆದು ಒಂದು ಉಪಾಯ ಮಾಡುತ್ತಾರೆ.
ತಾವೊಂದು ಬಟ್ಟೆ ತಯಾರಿಸುತ್ತಿದ್ದು, ಅದು ಮೂರ್ಖರು ಹಾಗೂ ಅಸಮರ್ಥರಿಗೆ ಕಾಣಿಸುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಅದರಂತೆ ಬಟ್ಟೆ ತಯಾರಿಕೆಯಲ್ಲಿ ತೊಡಗಿದವರಂತೆ ನಾಟಕವಾಡುತ್ತಾರೆ. ರಾಜನ ಆಸ್ಥಾನಿಕರಿಬ್ಬರು ಇವರು ಬಟ್ಟೆ ತಯಾರಿಸುವುದನ್ನು ನೋಡಿದಾಗ ಅಲ್ಲಿ ಯಾವುದೇ ನೂಲು ಕಾಣಿಸುವುದಿಲ್ಲ. ಆದರೆ, ತಮಗೆ ನೂಲು ಕಾಣಿಸುತ್ತಿಲ್ಲವೆಂದರೆ ತಾವು ಮೂರ್ಖರು ಎಂದು ಒಪ್ಪಿಕೊಂಡಂತಾಗುತ್ತದೆಂದು ರಾಜನಲ್ಲಿ ಅವರು ಬಟ್ಟೆ ತಯಾರಿಸುತ್ತಿರುವ ಕುರಿತು ವರದಿ ನೀಡುತ್ತಾರೆ. ಕೆಲ ದಿನಗಳ ಬಳಿಕ ತಾವು ಅತ್ಯುತ್ತಮ ಬಟ್ಟೆ ತಯಾರಿಸಿರುವುದಾಗಿ ಹೇಳಿ ಆಸ್ಥಾನಕ್ಕೆ ಬರುತ್ತಾರೆ. ಅವರು ಅದನ್ನು ಎತ್ತಿ ಹಿಡಿದು ತೋರಿಸಿದಾಗ ರಾಜ ಸೇರಿದಂತೆ ಯಾರಿಗೂ ಬಟ್ಟೆ ಕಾಣಿಸುವುದಿಲ್ಲ. ಆದರೆ, ಮೂರ್ಖರೆಂದು ಒಪ್ಪಿಕೊಳ್ಳಲು ತಯಾರಿಲ್ಲದೆ ಎಲ್ಲರೂ ಬಹಳ ಚೆನ್ನಾಗಿದೆ ಬಟ್ಟೆ, ಇಂಥದನ್ನು ತಾವೆಂದೂ ನೋಡಿಯೇ ಇಲ್ಲ ಎನ್ನುತ್ತಾರೆ. ಇದನ್ನೆಲ್ಲ ಕೇಳಿದ ರಾಜ ತನಗೊಬ್ಬನಿಗೇ ಕಾಣಿಸುತ್ತಿಲ್ಲವಿರಬೇಕು, ತೋರಿಸಿಕೊಂಡರೆ ತಾನು ಅಸಮರ್ಥನೆಂದು ರಾಜ್ಯದ ಜನ ತಿಳಿಯುತ್ತಾರೆಂದು ನೇಯ್ದವರಿಗೆ ಬಹಳ ದೊಡ್ಡ ಮೊತ್ತದ ಬಹುಮಾನ ನೀಡಿ ಕಳುಹಿಸುತ್ತಾನೆ.
ರಾಜ ಬಟ್ಟೆಯನ್ನು ಬಹಳ ಹೆಮ್ಮೆಯಿಂದ ತೊಟ್ಟು ಕೊಂಡಂತೆ ಮಾಡಿ ರಾಜ್ಯದಲ್ಲಿ ಮೆರವಣಿಗೆ ಹೋಗುತ್ತಾನೆ. ರಾಜನ ಈ ಅಪರೂಪದ ದಿರಿಸನ್ನು ನೋಡಿದ ಜನರಿಗೆ ಆತ ನಗ್ನನಾಗಿರುವಂತೆ ಕಂಡರೂ, ತಮ್ಮ ಜಾಣತನ ತೋರಿಸುವುದಕ್ಕಾಗಿ ಎಲ್ಲರೂ ಬಹಳ ಸುಂದರವಾಗಿದೆ ಎಂದು ಅದರ ಶ್ಲಾಘನೆಯಲ್ಲಿ ತೊಡಗುತ್ತಾರೆ. ಈ ಮಧ್ಯೆ ಪುಟ್ಟ ಬಾಲಕನೊಬ್ಬ, ಅಯ್ಯೋ ರಾಜ ಬಟ್ಟೆಯನ್ನೇ ಹಾಕಿಲ್ಲವೆಂದು ಹೇಳಿ ಕೂಗುತ್ತಾನೆ. ಸಣ್ಣ ಹುಡುಗ ಹೀಗೆ ಹೇಳುತ್ತಿರಬೇಕಾದರೆ ರಾಜ ನಗ್ನನಾಗಿರುವುದೇ ನಿಜವಿರಬೇಕು, ಯಾರಿಗೂ ಬಟ್ಟೆ ಕಂಡಿಲ್ಲ ಎಂಬುದು ಜನರು ಹಾಗೂ ಆಸ್ಥಾನಿಕರ ಅರಿವಿಗೆ ಬರುತ್ತದೆ. ಅವರೆಲ್ಲ ಒಳಗೊಳಗೇ ನಗುತ್ತಾರೆ, ಆದರೆ ರಾಜನ ಮುಂದೆ ತೋರಿಸಿಕೊಳ್ಳುವುದಿಲ್ಲ. ರಾಜನಿಗೆ ಸತ್ಯ ಗೊತ್ತಾದರೂ ತಾನೊಬ್ಬನೇ ಈ ರಾಜ್ಯದಲ್ಲಿ ಬುದ್ಧಿವಂತ ಎಂದು ಜನರನ್ನು ನಂಬಿಸುವಂತೆ ಹೆಮ್ಮೆಯಿಂದಲೇ ಸಾಗುತ್ತಾನೆ. ಈ ಕತೆ ಜೀವನಕ್ಕೆ ಕಲಿಸಿದ ಪಾಠಗಳು ಹಲವಿವೆ.
ಹೌದಪ್ಪಗಳಾಗಬೇಡಿ
ರಾಜನ ಆಸ್ಥಾನದ ಯಾವೊಬ್ಬನೂ ಕಣ್ಣಿಗೆ ಕಂಡ ಸತ್ಯ ಒಪ್ಪಿಕೊಳ್ಳದೆ ಇತರರು ಹೇಳಿದ್ದನ್ನು ಹೌದೌದೆನ್ನುವ ಹೌದಪ್ಪಗಳಾಗಿದ್ದರಿಂದಲೇ ರಾಜನ ಮಾನ ಮರ್ಯಾದೆ ದೇಶದುದ್ದಕ್ಕೂ ಹರಾಜಾಯಿತು. ದೇಶವಾಸಿಗಳು ಕೂಡಾ ರಾಜನನ್ನು ಮೆಚ್ಚಿಸುವ ಭರಕ್ಕೆ ಹೌದಪ್ಪಗಳಾಗಿದ್ದರು. ಇದು ರಾಜನ ಅಹಂಕಾರ, ಮೂರ್ಖತನವೆರಡನ್ನೂ ಹೆಚ್ಚಿಸಿತು. ಲೀಡರ್ ಸುತ್ತ ಇರುವ ಹೌದಪ್ಪಗಳಿಂದಾಗಿಯೇ ಆತ ತಾನು ಮಾಡಿದ್ದೆಲ್ಲ ಸರಿಯೆಂದು ಭಾವಿಸಿ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡು, ಸರ್ವಾಧಿಕಾರಿ ಧೋರಣೆ ತೋರುತ್ತಾನೆ. ಇನ್ನೊಬ್ಬರ ಕಣ್ಣಿನಲ್ಲಿ ಕೆಳಗೆ ಇಳಿಯುವುದಾದರೂ ಸರಿ, ಸದಾ ನಿಮ್ಮ ಕಣ್ಣಿಗೆ ಸತ್ಯವೆನಿಸಿದ್ದನ್ನೇ ಮಾತನಾಡಿ.
ಸಾಕ್ಷ್ಯವಿಲ್ಲದೆ ನಂಬಬೇಡಿ
ಯಾವುದೇ ವಿಷಯವನ್ನಾಗಲೀ, ಸಾಕ್ಷ್ಯಗಳಿಲ್ಲದೆ ನಂಬುವುದರಿಂದ ಸತ್ಯವನ್ನು ಅಲಕ್ಷ್ಯ ಮಾಡಿದಂತಾಗುತ್ತದೆ. ಇಲ್ಲಿ ಎಲ್ಲರೂ ಕಣ್ಣಿಗೆ ಕಾಣದಿದ್ದರೂ ಬಟ್ಟೆ ಇರುವುದು ಹೌದೆಂದೇ ನಂಬಿದರು. ಅದನ್ನು ಪರೀಕ್ಷಿಸುವ ಯೋಚನೆ ಒಬ್ಬರಿಗೂ ಬರಲಿಲ್ಲ. ಜನರ ಈ ಮೂರ್ಖತನವನ್ನೇ ಕತೆಯ ನೇಕಾರರಂಥ ಕೆಲ ಬುದ್ಧಿವಂತರು ಬಳಸಿಕೊಂಡು ಹೀಗೆ ವಂಚಿಸುತ್ತಾರೆ. ಬಟ್ಟೆ ಕಾಣದಿದ್ದವರು ಮೂರ್ಖರು ಎಂದಿದ್ದರಿಂದ, ಬಟ್ಟೆ ಕಂಡವರೂ ಬಾಯಿ ಬಿಡದೆ ಅವರೆಷ್ಟು ಮೂರ್ಖರಾಗಿದ್ದಾರೆ ಎಂಬುದನ್ನೇ ಸಾಬೀತುಪಡಿಸಿದರು.
ತಜ್ಞರು ಎನಿಸಿಕೊಂಡವರ ಬಗ್ಗೆ ಎಚ್ಚರಿಕೆಯಿಂದಿರಿ
ನೇಕಾರರು ಬಟ್ಟೆ ನೇಯ್ಗೆಯಲ್ಲಿ ತಜ್ಞರಲ್ಲದಿದ್ದರೂ, ಅವರು ತಜ್ಞರೆಂಬ ನಂಬಿಕೆ ರಾಜ ಸೇರಿದಂತೆ ಜನರನ್ನು ಮಂಗ ಮಾಡಿತು. ಅವರು ತಜ್ಞರೆಂಬ ನಂಬಿಕೆಯಿಂದಾಗಿಯೇ ಯಾರೂ ಅವರ ಕೆಲಸವನ್ನು ಪ್ರಶ್ನೆ ಮಾಡಲು, ಅನುಮಾನಿಸಲು ಹೋಗಲಿಲ್ಲ. ಆದರೆ, ಅವರನ್ನು ಎಲ್ಲರಂತೆ ಸಾಮಾನ್ಯಯವೆಂದು ಬಗೆದಿದ್ದರೆ ಆಗ ಈ ತಪ್ಪಾಗುತ್ತಿರಲಿಲ್ಲ. ಹಾಗಾಗಿ, ಯಾರನ್ನು ಯಾರೇ ಬುದ್ಧಿವಂತ, ತಜ್ಞ ಎಂದರೂ ಅವರ ಕಾರ್ಯವನ್ನು ಮತ್ತಷ್ಟು ಅನುಮಾನಿಸಿ ಪರೀಕ್ಷಿಸಿ. ಯಾರಾದರೂ ಯಾವುದಾದರೂ ವಿಷಯವನ್ನು ಹೇಳಿದಾಗ ಅವರು ಬುದ್ಧಿಜೀವಿಯೆಂಬ ಕಾರಣಕ್ಕೆ, ಜನಪ್ರಿಯ ಎಂಬ ಕಾರಣಕ್ಕೆ ಅದೇ ನಿಜವಿರಬೇಕೆಂದು ನಾವು ಭಾವಿಸುವುದು ಸಾಮಾನ್ಯವಾಗಿದೆ. ಇದರಿಂದ ಹಲವು ಬಾರಿ ಮೋಸ ಹೋಗಿರುತ್ತೇವೆ. ಸುಳ್ಳು ಸುದ್ದಿ ಹಬ್ಬಿಸಲು ಕಾರಣರಾಗಿರುತ್ತೇವೆ, ಹುಸಿ ಸಿದ್ಧಾಂತಗಳನ್ನೇ ಜೀವನವಾಗಿಸಿಕೊಳ್ಳುತ್ತೇವೆ. ಆದರೆ ಈ ತಜ್ಞರೆನಿಸಿಕೊಂಡವರಿಗೆ ತಮ್ಮ ಹೆಸರು, ಹೆಮ್ಮೆಯೇ ಹೆಚ್ಚಾಗಿರುತ್ತದೆಯೇ ಹೊರತು ಸತ್ಯವಲ್ಲ.
ಇನ್ನೊಬ್ಬರ ಅಭಿಪ್ರಾಯದಿಂದ ಪ್ರಭಾವಕ್ಕೊಳಗಾಗಬೇಡಿ
ಮನುಷ್ಯರಲ್ಲಿ ಕುರಿಮಂದೆ ಬುದ್ಧಿ ಹೆಚ್ಚು. ಕೆಲವೊಮ್ಮೆ ಸತ್ಯ ಕಣ್ಣಿಗೆ ಕಾಣಿಸಿದರೂ ಹೆಚ್ಚಿನ ಜನರು ಏನು ಹೇಳುತ್ತಾರೋ ಅದನ್ನೇ ಒಪ್ಪುವುದು, ಅವರಂತೆ ನಡೆಯುವುದು ಸುರಕ್ಷಿತ ಎಂದು ಭಾವಿಸುತ್ತೇವೆ. ಆದರೆ, ಹೆಚ್ಚಿನವರು ನಂಬಿದ್ದಾರೆಂದ ಮಾತ್ರಕ್ಕೆ ಅದೇ ಸತ್ಯವಾಗಿರಬೇಕಿಲ್ಲ. ಮತ್ತೊಬ್ಬರ ಅಭಿಪ್ರಾಯದಿಂದ ಪ್ರಭಾವಿತರಾಗುವುದು ಬಿಟ್ಟು, ನಮ್ಮದೇ ಬುದ್ಧಿಯನ್ನು ಬಳಸುವುದು, ಬೆಳೆಸಿಕೊಳ್ಳುವುದು ಉತ್ತಮ.
ತಪ್ಪುಗಳನ್ನು ಒಪ್ಪಿಕೊಳ್ಳಿ
ಎಲ್ಲರಿಗೂ ರಾಜ ನಗ್ನವಾಗಿರುವುದು ತಿಳಿದ ನಂತರವೂ, ರಾಜ್ಯದಲ್ಲಿ ತಾನೊಬ್ಬನೇ ಬುದ್ಧಿವಂತ, ಮತ್ತೆಲ್ಲರೂ ಮೂರ್ಖರು ಎಂಬಂತೆ ರಾಜ ತನ್ನ ಪೆರೇಡ್ ಮುಂದುವರಿಸಿದ. ಇದಕ್ಕೆ ತನ್ನ ಅಹಂಕಾರ ಹಾಗೂ ಅಧಿಕಾರದ ಮತ್ತೇ ಕಾರಣ. ಆದರೆ ಆತ ತನ್ನ ತಪ್ಪನ್ನು ಗುರುತಿಸಿ ಒಪ್ಪಿಕೊಳ್ಳಬೇಕಾಗಿತ್ತು. ತಪ್ಪನ್ನು ಗುರುತಿಸದಿರುವುದು, ಗುರುತಿಸಿದರೂ ಒಪ್ಪಿಕೊಳ್ಳದಿರುವುದು, ಒಪ್ಪಿದರೂ ಸರಿಪಡಿಸಿಕೊಳ್ಳದಿರುವುದು ಮತ್ತಷ್ಟು ಹಾನಿಗೆ ಕಾರಣವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.