
ಇವರ ವಯಸ್ಸು ಈಗ 91 ವರ್ಷ. ಬೆಂಗಳೂರಿನ ನಿವಾಸಿ. ತುಂಬು ವಯಸ್ಸು ಉತ್ಸಾಹವನ್ನು ಕುಂದಿಸಿಲ್ಲ. ಮುಖದ ನಗೆ ಮಾಸಿಲ್ಲ. ಅವರ ಈ ಎನರ್ಜಿಯ ಹಿಂದಿರುವವರು ವಿಶೇಷ ಶಾಲೆಯ ಮಕ್ಕಳು. ಇವರು ಊರುಗೋಲು ಆಧರಿಸಿ ಕ್ಲಾಸ್ ರೂಂನೊಳಗೆ ಎಂಟ್ರಿ ಆಗುತ್ತಿರುವಂತೇ, 'ಗುಡ್ ಮಾರ್ನಿಂಗ್ ಮೇಡಂ..'ಅಂತ ಎದ್ದು ನಿಲ್ಲುತ್ತಾರೆ ಮಕ್ಕಳು. ಇವರು ಮುಗುಳ್ನಗುತ್ತಾ ಮಕ್ಕಳನ್ನು ಕೂರಲು ಹೇಳಿ ಪಾಠ ಆರಂಭಿಸುತ್ತಾರೆ.
ಲಕ್ಷ್ಮೀ ಕಲ್ಯಾಣಸುಂದರಂ ಎಂಬ ಅತೀ ಹಿರಿಯ ವಯಸ್ಸಿನ ಟೀಚರ್ ಕತೆ ಇದು, ಇವರು ಜಗತ್ತಿನ ಯಾವುದೋ ಮೂಲೆಯಲ್ಲಿದ್ದಾರೆ ಅಂದುಕೊಂಡರೆ ನಮ್ಮ ಊಹೆ ತಪ್ಪು. ನಮ್ಮ ರಾಜ್ಯದಲ್ಲೇ, ರಾಜಧಾನಿ ಬೆಂಗಳೂರಿನಲ್ಲೇ ಇದ್ದಾರೆ ಲಕ್ಷ್ಮೀ. ಇಲ್ಲಿನ ವಿಶೇಷ ಮಕ್ಕಳ ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಬಿಬಿಸಿ ಇವರ ಬಗ್ಗೆ ವಿಶೇಷ ವೀಡಿಯೋ ಮಾಡಿ ಹರಿಯಬಿಟ್ಟಿದೆ. ಆ ವೀಡಿಯೋ ಈಗಾಗಲೇ ವೈರಲ್ ಆಗಿದೆ.
ವಿಶ್ವದ ಅತೀ ಹಿರಿಯ ಟೀಚರ್ ಕತೆ
'ನೀವೆಲ್ಲ ದುಡೀತಿರೋ ವಯಸ್ಸಲ್ಲಿ ನಾನು ದುಡಿದಿಲ್ಲ. ಹಾಗಾಗಿ ನೀವು ಈ ವಯಸ್ಸಲ್ಲಿ ಹೇಗಿರ್ತೀರೋ ಅದಕ್ಕಿಂತ ಹೆಚ್ಚು ಸ್ಟ್ರಾಂಗ್ ಇದೀನಿ' ಅಂತ ನಗ್ತಾರೆ ಲಕ್ಷ್ಮೀ ಅವರು. ಕಳೆದ 24 ವರ್ಷಗಳಿಂದ ಲಕ್ಷ್ಮೀ ಅವರು ವಿಶೇಷ ಮಕ್ಕಳಿಗೆ ಪಾಠ ಕಲಿಸುತ್ತಿದ್ದಾರೆ. ಅದು ಹೆಚ್ಚು ಕಡಿಮೆ ಎರಡು ದಶಕಗಳ ಹಿಂದಿನ ಮಾತು. ಆಗ ಲಕ್ಷ್ಮೀ ಅವರ ಪತಿ ತೀರಿಕೊಂಡರು. ಅಲ್ಲಿಯವರೆಗೂ ಗೃಹಿಣಿಯಾಗಿ ತಾನಾಯ್ತು, ಮನೆಯಾಯ್ತು ಅಂತಿದ್ದರು ಲಕ್ಚ್ಮೀ. ಯಾವಾಗ ಪತಿಯ ಸಾವಾಯಿತೋ ಆಗ ಇವರ ಬದುಕಿನಲ್ಲೂ ದೊಡ್ಡ ಬದಲಾವಣೆಯಾಯ್ತು. ಅಲ್ಲಿಯವರೆಗೂ ಹೊರ ಜಗತ್ತು ಕಂಡೇ ಗೊತ್ತಿಲ್ಲದ ಈಕೆ ಅಳುಕಿನಲ್ಲೇ ಹೊರ ಜಗತ್ತಿಗೆ ಎಂಟ್ರಿ ಕೊಟ್ಟರು. ಎಲ್ಲರೂ ರಿಟೈರ್ಡ್ ಲೈಫ್ಅನ್ನು ಎನ್ ಜಾಯ್ ಮಾಡುವ ಕಾಲಕ್ಕೆ ಲಕ್ಷ್ಮೀ ಕೆಲಸಕ್ಕೆ ಸೇರಿಕೊಂಡರು. ಆಗ ಲಕ್ಷ್ಮೀ ಅವರಿಗೆ 67 ವರ್ಷ ವಯಸ್ಸು. ಬೆಂಗಳೂರಿನ ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಆರಂಭಿಸಿದರು.
ಹಾಗೆ ನೋಡಿದ್ರೆ ಲಕ್ಷ್ಮೀ ಅವರಿಗಿದ್ದದ್ದು ವೈದ್ಯಯಾಗುವ ಕನಸು. ಡಾಕ್ಟರ್ ಆಗಿ ಒಂದಿಷ್ಟು ಜನರ ನೋವನ್ನು ಗುಣಪಡಿಸಬೇಕು, ಕೈಲಾಗದವರಿಗೆ ಸಹಾಯ ಮಾಡಬೇಕು ಅಂತೆಲ್ಲ ಕನಸು. ಆದರೆ ಅದು ಹೆಣ್ಣುಮಕ್ಕಳಿಗೆ ಕಷ್ಟದ ಕಾಲ. ಕೆಲಸಕ್ಕೆ ಹೋಗುವ ಮಾತು ಇರಲಿ, ಮನೆಯ ಹೊರಗೆ ಹೆಣ್ಮಕ್ಕಳು ಬರುವುದು ಓಡಾಡುವುದೇ ಬಹಳ ಅಪರೂಪವಾಗಿತ್ತು. ಹೆಣ್ಣು ಸ್ವಂತ ಶಕ್ತಿಯಿಂದ ಸ್ವತಂತ್ರ್ಯವಾಗಿ ಬದುಕುವ ಕಾಲ ಅದಾಗಿರಲಿಲ್ಲ. ಹಾಗಾಗಿ ಲಕ್ಷ್ಮೀ ಅವರ ಕನಸು ಹಾಗೇ ಕಮರಿಹೋಯ್ತು.
'ಪರ್ವಾಗಿಲ್ಲ, ನಾನು ವೈದ್ಯೆಯಾಗದ ಕಾರಣಕ್ಕೆ ಜಗತ್ತೇನೂ ಮುಳುಗಿಹೋಗಿಲ್ಲ. ಲೈಫು ಇನ್ನೊಂದು ಅವಕಾಶ ನೀಡಿದೆ. ಏನೂ ಅರಿಯದ ಈ ವಿಶೇಷ ಮಕ್ಕಳಿಗೆ ಪಾಠ ಹೇಳೋದೂ ಸುಲಭದ ಕೆಲಸ ಅಲ್ಲ. ಅದು ನೀಡುವ ತೃಪ್ತಿಗೂ ಸಾಟಿಯಿಲ್ಲ. ಹಾಗಾಗಿ ವೈದ್ಯೆಯಾಗಿ ರೋಗಿಗಳನ್ನು ನೋಡುವ ಬದಲು ಮನೋಸಮಸ್ಯೆಯಿರುವ ಮಕ್ಕಳಲ್ಲಿ ಚೈತನ್ಯ ತುಂಬುತ್ತಿದ್ದೇನೆ, ಇದು ಉಳಿದೆಲ್ಲ ಕೆಲಸಗಳಿಗಿಂತ ಭಿನ್ನವಾದದ್ದು. ನನಗಿದರಲ್ಲಿ ಖುಷಿ ಇದೆ' ಅಂತ ನಗ್ತಾರೆ ಈ ಅಜ್ಜಿ.
ಹೆಣ್ಮಕ್ಕಳು ಮೇಲೆ ಬಂದರೆ, ಏನಾದರೂ ಸಾಧನೆ ಮಾಡಿದರೆ ಲಕ್ಷ್ಮೀ ಅವರ ಮುಖ ಅರಳಿ ಹೂವಾಗುತ್ತದೆ. ಈ ಕಾಲದ ಮಹಿಳೆಯರು ಸ್ವತಂತ್ರ್ಯವಾಗಿ ಬದುಕೋದು, ಸ್ವಾವಲಂಬಿಗಳಾಗ್ತಿರೋದು ಕಂಡು ಇವರು ಖುಷಿ ಪಡ್ತಾರೆ.
' ನಮ್ಮ ಮನೆಯಲ್ಲಿ ವೈ ಕ್ರೊಮೊಸೋಮ್ ನವರೇ ಹುಟ್ಟಿಲ್ಲ..'ಅಂತ ಜೋರಾಗಿ ನಗುವ ಈ ಹಿರಿಯೆಗೆ ಮೂರು ಜನ ಹೆಣ್ಣುಮಕ್ಕಳು. ಐದು ಮೊಮ್ಮಕ್ಕಳು, ಇಬ್ಬರು ಮರಿಮಕ್ಕಳು. ಇವರ ಮನೆಯಲ್ಲಿ ಹುಟ್ಟಿರೋರೆಲ್ಲ ಹೆಣ್ಮಕ್ಕಳೇ. ಈ ಮಕ್ಕಳನ್ನು ಅಜ್ಜಿ ಬಹಳ ಸ್ಟ್ರಾಂಗ್ ಆಗಿ ಬೆಳೆಸಿದ್ದಾರೆ.
ಇನ್ನೆಷ್ಟು ದಿನ ಈ ಕೆಲಸ?
ಅಜ್ಜಿಗೆ ಪ್ರಶ್ನೆ ಕೇಳಿದ್ರೆ ಅವರು ನಗುತ್ತಾ ಉತ್ತರಿಸುತ್ತಾರೆ. ' ದೇವರು ಎಷ್ಟು ಸಮಯ ನಾನು ಈ ಕೆಲಸ ಮಾಡಬೇಕು ಅಂತ ಬಯಸ್ತಾನೋ ಅಷ್ಟು ಸಮಯ' ಅಂತಾರೆ. 'ಪ್ರತೀ ದಿನ ರಾತ್ರಿ ನಾನು ಮಲಗೋ ಮುಂಚೆ ದೇವರಲ್ಲಿ ಪ್ರಾರ್ಥಿಸೋದು, ದೇವರೇ ನಾಳೆ ಬೆಳಗ್ಗೆ ನಾನು ಏಳದ ಹಾಗೆ ಮಾಡು. ಮಲಗಿದ್ದ ಹಾಗೇ ಜೀವ ಹೋಗಲಿ ಅಂತ'' ಅನ್ನೋ ಈ ಅಜ್ಜಿಯನ್ನು ಅಷ್ಟು ಬೇಗ ಕರೆಸಿಕೊಳ್ಳಲು ಈ ತುಂಟ ದೇವರಿಗೆ ಇಷ್ಟ ಇಲ್ಲ. ರಾತ್ರಿ ಕಳೆದು ಬೆಳಗಾಗುತ್ತೆ. ಅಜ್ಜಿ ಏಳ್ತಾರೆ, ಕಾಫಿ ಮಾಡ್ಕೊಂಡು ಕುಡೀತಾರೆ. ಮಿಂದು ರೆಡಿಯಾಗಿ ದೇವರಿಗೆ ಹೂವಿಟ್ಟು ಸ್ವಲ್ಪ ಹೊತ್ತಿಗೆಲ್ಲ ಶಾಲೆಗೆ ಹೊರಡ್ತಾರೆ. ಕಳೆದ ೨೪ ವರ್ಷಗಳಿಂದ ಲಕ್ಷ್ಮೀ ಅವರು ದಿನಚರಿ ಹೀಗೇ ಇದೆ. ಇವರಿಗೆ ಫ್ಯಾಮಿಲಿ ಸಪೋರ್ಟ್ ಚೆನ್ನಾಗಿದೆ.
ಈ ಹಿರಿ ಜೀವದ ಸೇವೆ ಇನ್ನೂ ಕೆಲವು ವರ್ಷ ಮುಂದುವರೀಲಿ ಅಂತ ಹಾರೈಸೋಣ.
ಕೃಪೆ: ಬಿಬಿಸಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.