Bhakshak Movie Review: ಹದಿಹರೆಯದ ಲೈಂಗಿಕ ಸಂತ್ರಸ್ತೆಯಾರಿಗಾಗಿ ಹೋರಾಟ

By Suvarna News  |  First Published May 3, 2024, 12:22 PM IST

ಪ್ರಭಾವಿ ವ್ಯಕ್ತಿಯೊಬ್ಬನ ಮಾಲೀಕತ್ವದಲ್ಲಿ ನಡೆಯುತ್ತಿರುವ ಅಬಲಾಶ್ರಮದಲ್ಲಿ ನಡೆಯುವ ಮಾನವ ಕಳ್ಳ ಸಾಗಣೆ ಮೇಲೆ ಬೆಳಕು ಚೆನ್ನುವ ಚಿತ್ರ ಭಕ್ಷಕ್. ಪ್ರತೀಯೊಬ್ಬ ಪತ್ರಕರ್ತನೂ ನೋಡಬೇಕಾದ ಮೂವಿ ಇದು.


- ವೀಣಾ ರಾವ್, ಕನ್ನಡಪ್ರಭ

ಚಿತ್ರ: ಭಕ್ಷಕ್ 
ನಟನೆ: ಭೂಮಿ ಪೆಡ್ನೇಕರ್ ಸಂಜಯ್ ಮಿಶ್ರಾ, ಆದಿತ್ಯಾ ಶ್ರೀವತ್ಸಾ, ಸಾಯಿ ತಮಹಾಂಕರ್
ನಿರ್ದೇಶಕ: ಪುಲಕಿತ್
ನಿರ್ಮಾಣ: ಗೌರಿ ಖಾನ್
ಸ್ಟ್ರೀಮಿಂಗ್ ಇನ್ NetFlix

Latest Videos

undefined

ಗೌರಿ ಖಾನ್ ನಿರ್ಮಿಸಿದ ಪುಲಕಿತ್ ನಿರ್ದೇಶನದ ಭಕ್ಷಕ್ 2024ರಲ್ಲಿ ಬಿಡುಗಡೆಯಾದ ಚಿತ್ರ. ನೆಟ್‌ಫ್ಲೆಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಭೂಮಿ ಪೆಡ್ನೇಕರ್ ಸಂಜಯ್ ಮಿಶ್ರಾ, ಆದಿತ್ಯಾ ಶ್ರೀವತ್ಸಾ, ಸಾಯಿ ತಮಹಾಂಕರ್ ಇದ್ದಾರೆ. ಚಿತ್ರದ ಪೂರ್ತಿ ಭೂಮಿ ಯೇ ಆವರಿಸಿಕೊಂಡಿದ್ದಾರೆ. ತನ್ನ ಚುರುಕು ನಟನೆ ಹಾಗೂ ಖಡಕ್ ಡೈಲಾಗ್ ಡೆಲಿವರಿಯಿಂದ ಗಮನ ಸೆಳೆಯುತ್ತಾರೆ.

ಮಕ್ಕಳನ್ನು ಮಾರುವ ಜಾಲವನ್ನು ಬೇಧಿಸುವ ಕತೆ ಇರುವ ಈ ಚಿತ್ರದಲ್ಲಿ ಭೂಮಿ ಒಬ್ಬ ಪತ್ರಕರ್ತೆ. ಸಂಜಯ್ ಮಿಶ್ರಾ ಹಾಗೂ ಭೂಮಿ ಸೇರಿ ಒಂದು ಯು ಟ್ಯೂಬ್ ಚಾನಲ್ ಅನ್ನು ನಡೆಸುತ್ತಿರುತ್ತಾರೆ. ನಗರದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ದನಿಯೆತ್ತುವುದೇ ಭೂಮಿಯ ಕೆಲಸ. ಧೈರ್ಯವಂತೆಯಾದ ಅವಳಿಗೆ ಸಂಜಯ್ ಮಿಶ್ರಾ ಬೆಂಬಲ ಕೂಡ ಇರುತ್ತದೆ. ಇಬ್ಬರೂ ಸೇರಿ ಅನೇಕ ಸಾಹಸಗಳನ್ನು ಮಾಡಿರುತ್ತಾರೆ. ಭೂಮಿಯ ಗಂಡನಿಗೆ ಹೆಂಡತಿ ಬಗ್ಗೆ ಆದರ ಇದ್ದರೂ ಅವಳು ಎಲ್ಲಿ ಅಪಾಯಕ್ಕೆ ಸಿಕ್ಕುತ್ತಾಳೋ ಎಂಬ ಕಾಳಜಿ. ಇದರಿಂದ ಅವನು ಬಹಳ ಸಾರಿ ಈ ಕೆಲಸ ನಿನಗೆ ಬೇಡ ಬಿಟ್ಟುಬಿಡು ಎಂದು ಹೇಳುತ್ತಿರುತ್ತಾನೆ.

MAIN ATAL HOON MOVIE REVIEW:ಅಚಲ ಮನದ ಅಜಾತ ಶತ್ರು ಅಟಲರ ಜೀವನಗಾಥೆ, ವಾಜಪೇಯಿಗೂ ಗೆಳತಿ ಇದ್ಲಾ?

ಆದರೆ ಭೂಮಿ ಎಷ್ಟು ಧೈರ್ಯಶಾಲಿಯೋ ಅಷ್ಟೇ ಮೊಂಡು. ತಾನು ಮಾಡಬೇಕೆಂದ ಕಾರ್ಯ ಶತಾಯಗತಾಯ ಮಾಡುವವಳು. ಅವಳಿಗೆ ಒಂದು ದಿನ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡು ಮಾರುವ ಒಂದು ಜಾಲದ ಬಗ್ಗೆ ಸುಳಿವು ಸಿಗುತ್ತದೆ. ಅದನ್ನು ಅರಸಿ ಹೋದಾಗ ಬಹಳಷ್ಟು ಕಿರುಕುಳಗಳನ್ನು ಅನುಭವಿಸ ಬೇಕಾಗುತ್ತದೆ. ಆ ನಗರದ ರಾಜಕೀಯ ಧುರೀಣ ಈ ಜಾಲದ ಪ್ರಮುಖ ಸಂಶಯಾಸ್ಪದ ವ್ಯಕ್ತಿ. ಇವಳು ಆ ಮಾನವ ಕಳ್ಳಸಾಗಾಣಿಕೆಯ (Human Trafficking) ಸುಳಿವು ಹಿಡಿದು ಮುಂದುವರೆದಾಗ ಇವಳ ನಾದಿನಿಯ ಗಂಡನ ಮೇಲೆ ಹಲ್ಲೆಯಾಗುತ್ತದೆ. ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಆದರೆ ಆ ಸಮಯದಲ್ಲಿ ಭೂಮಿಯ ಗಂಡ ನೀನು ಕೆಟ್ಟ ಕೆಲಸ ಅಂತೂ ಮಾಡುವುದಿಲ್ಲ, ಏನೋ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದೀಯ ಮುಂದುವರಿಸು, ನಾನು ಬೆಂಬಲಿಸುತ್ತೇನೆ, ಎನ್ನುತ್ತಾನೆ.

ಅಬಲಾಶ್ರಮದಲ್ಲಿ ನಡೆಯುತ್ತಿತ್ತು ವ್ಯವಹಾರ: 
ಗಂಡನ ಮಾತು ಕೇಳಿದ ಭೂಮಿಗೆ ನೂರಾನೆ ಬಲ. ಒಂದು ಅಬಲಾಶ್ರಮದಲ್ಲಿ ಈ ಅವ್ಯವಹಾರ ನಡೆಯುತ್ತಿರುತ್ತದೆ. ಅಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸುಧಾ ಎಂಬ ಯುವತಿ ಅಲ್ಲಿನ ಅವ್ಯವಹಾರಗಳನ್ನು ನೋಡಿ ಭಯಪಟ್ಟು ಅಲ್ಲಿಂದ ತಪ್ಪಿಸಿಕೊಂಡು ಬಂದಿರುತ್ತಾಳೆ. ಭೂಮಿ ಸುಧಾಳನ್ನು ಭೇಟಿ ಮಾಡಿ ಅವಳ ಮನವೊಲಿಸಿ ಆ ಅಬಲಾಶ್ರಮದ ವಿಳಾಸ, ಅಲ್ಲಿ ನಡೆಯುತ್ತಿರುವ ಅವ್ಯಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾಳೆ. ಆ ನಗರದ ಪ್ರಬಲ ರಾಜಕೀಯ ವ್ಯಕ್ತಿ ಈ ಅವ್ಯವಹಾರದ ರೂವಾರಿ. ಅವನು ಆ ಅಬಲಾಶ್ರಮದ ಮಾಲೀಕ ಕೂಡ. ಅವನ ಹಂಗಿನಲ್ಲಿ ಇದ್ದ ಅಲ್ಲಿನ ಹೆಣ್ಣುಮಕ್ಕಳು ಅವನು ಹೇಳಿದಂತೆ ಕೇಳಬೇಕು. ಅವನು ಯಾವಾಗ ಕರೆದರೂ ಅವನ ಬಳಿ ಹೋಗಿ ಅವನ ಪೈಶಾಚಿಕ ಆಸೆಗಳನ್ನು ತೀರಿಸಬೇಕು. ಇಲ್ಲವಾದರೆ ಹೊಡೆತ ಬಡಿತ ಸಾಮಾನ್ಯ. ಭೂಮಿಗೆ ಆ ನಗರದ SP ಜಸ್ಮೀತ್ ಕೌರ್ ಬೆಂಬಲವೂ ಸಿಗುತ್ತದೆ. ಗಟ್ಟಿ ಸಾಕ್ಷಿ ಹಿಡಿದು ತಾ ಮುಂದಿನದನ್ನು ನಾನು ನೋಡಿಕೊಳ್ಲುತ್ತೇನೆ ಎಂದು ಅಭಯ ನೀಡುತ್ತಾಳೆ. ಪೊಲೀಸ್ ಆಫಿಸರ್ ಹಾಗೂ ತನ್ನ ಗಂಡ ಮತ್ತು ತನ್ನ ಸಹೋದ್ಯೋಗಿ ಸಂಜಯ್ ಮಿಶ್ರಾನ ಬೆಂಬಲದಿಂದ ಭೂಮಿ ಈ ರಹಸ್ಯ ಜಾಲವನ್ನು ಬೇಧಿಸಿ ಆ ರಾಜಕೀಯ ಧುರೀಣನ ದಸ್ತಗಿರಿ ಮಾಡಿಸುತ್ತಾಳೆ.

ಇದು ಮುಜಾಫರ್ ಪುರ್ ಅಬಲಾಶ್ರಮ ಒಂದರಲ್ಲಿ ನಡೆದ ನೈಜಘಟನೆ ಆಧಾರಿತ ಚಿತ್ರ. ಎಷ್ಟೋ ಅನಾಥಾಶ್ರಮ ಅಬಲಾಶ್ರಮಗಳಲ್ಲಿ ನಡೆಯುವ ಅವ್ಯವಹಾರಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ. ಅನಾಥಾಶ್ರಮಗಳಲ್ಲಿ ಹದಿಹರೆಯದ ಹುಡುಗಿಯರ ಕೇರ್ ಟೇಕರ್ ಆಗಿರುವ ಪ್ರಭಾವಿ ವ್ಯಕ್ತಿಗಳ ಗೋಮುಖವ್ಯಾಘ್ರತೆಯನ್ನು ಬಯಗೆಳೆಯುವ ಸಿನಿಮಾ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುತ್ತದೆ.

ಈ ಚಿತ್ರವನ್ನು ಎಲ್ಲ ಪತ್ರಕರ್ತರೂ, ಅದರಲ್ಲೂ ಮಹಿಳಾ ಪತ್ರಕರ್ತರು ತಪ್ಪದೆ ನೋಡಬೇಕಾದ ಸಿನಿಮಾ. ಆಮಿಷಗಳಿಗೆ ಬಲಿಯಾಗಿ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರುತ್ತಿರುವ ಈ ದಿನಗಳಲ್ಲಿ ‘ಭೂಮಿ’ಯಂತ ಪತ್ರಕರ್ತೆ ಯಾವುದೇ ಆಮಿಷಗಳಿಗೆ ಬಲಿಯಾಗದೆ ಈ ಮಾನವ ಸಾಗಾಣಿಕೆಯ ಸರಪಣಿಯನ್ನು ಭೇದಿಸಿ ಆ ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಿಕೊಡುವುದು ಒಂದು ವಿಧದಲ್ಲಿ ಸ್ಫೂರ್ತಿದಾಯಕ ಕಥೆ.

Patna Shukla Movie REVIEW:ವಿಶ್ವವಿದ್ಯಾಲಯದಲ್ಲಿ ನಡೆಯುವ ಹೊಲಸ ಹೊರಗಿಟ್ಟ ತನ್ವಿ ಶುಕ್ಲಾ

ಕೆಲವು ಚಿತ್ರಗಳು ನೋಡುವಾಗ ಬಹಳ ಥ್ರಿಲ್ ಆಗಿ ಮನಸ್ಸು ಪ್ರತಿಕ್ಷಣ ರೋಚಕತೆಯನ್ನು ಅನುಭವಿಸುವಂತೆ ಮಾಡುತ್ತದೆ. ಭಕ್ಷಕ್ ಕೂಡ ಅದೇ ಸಾಲಿಗೆ ಸೇರುವಂಥ ರೋಚಕ ಕಥಾವಸ್ತು ಇರುವ ಚಿತ್ರ.

click me!