ಸಿಹಿ ತಿಂದ ಮೇಲೆ ಹಲ್ಲುಜ್ಜಬಾರದು ಗೊತ್ತಾ?

By Suvarna Web DeskFirst Published Mar 19, 2018, 3:19 PM IST
Highlights

ಹಲ್ಲಿನ ಬಗ್ಗೆ ನಮಗಿರುವ ಅಜ್ಞಾನ ಹೆಚ್ಚು. ಇದನ್ನೇ ಎಷ್ಟೋ ಸಲ ಅಪಾರ ಜ್ಞಾನ ಅಂದುಕೊಳ್ಳೋದೂ ಇದೆ. ಅಂಥ ತಪ್ಪುಕಲ್ಪನೆಗಳ ಬಗ್ಗೆ ತಿಳುವಳಿಕೆ ಮೂಡಿಸುವ ಲೇಖನವಿದು.

ಸಿಹಿ ತಿಂದ ಮೇಲೆ ಹಲ್ಲುಜ್ಜಬಾರದು ಗೊತ್ತಾ?

ಹಲ್ಲಿನ ಬಗ್ಗೆ ನಮಗಿರುವ ಅಜ್ಞಾನ ಹೆಚ್ಚು. ಇದನ್ನೇ ಎಷ್ಟೋ ಸಲ ಅಪಾರ ಜ್ಞಾನ ಅಂದುಕೊಳ್ಳೋದೂ ಇದೆ. ಅಂಥ ತಪ್ಪುಕಲ್ಪನೆಗಳ ಬಗ್ಗೆ ತಿಳುವಳಿಕೆ ಮೂಡಿಸುವ ಲೇಖನವಿದು.

ಡಾ.ಕೆ.ಎಸ್. ಚೈತ್ರಾ, ದಂತವೈದ್ಯರು

ಸಂಜೆ ಆರು ಗಂಟೆಗೆ ಸ್ಕೂಲ್, ಟ್ಯೂಷನ್ ಎಲ್ಲಾ ಮುಗಿಸಿ ಸುಸ್ತಾಗಿ ಮನೆಗೆ ಬರುವ ಸಿರಿಗೆ ತಣ್ಣಗಿನ ಜ್ಯೂಸ್ ಕುಡಿಯುವುದೆಂದರೆ ತುಂಬಾ ಇಷ್ಟ. ಅವಳಮ್ಮ, 'ಕುಡೀಬೇಡ, ಹಲ್ಲು ಹಾಳಾಗುತ್ತೆ' ಅಂತ ಬೈದರೂ ಸಿರಿ ಕೇಳಬೇಕಲ್ಲ?

ಅದಕ್ಕೇ ಅಮ್ಮ ಉಪಾಯ ಮಾಡಿ ಜ್ಯೂಸ್ ಕುಡಿದ ತಕ್ಷಣ ಚೆನ್ನಾಗಿ ಬ್ರಶ್ ಮಾಡಬೇಕು ಅಂತ ಹೇಳಿದ್ದಾಳೆ. ಏನೇ ಕುಡಿದರೂ ತಕ್ಷಣ ಚೆನ್ನಾಗಿ ತಿಕ್ಕಿದ್ರೆ ಅದೆಲ್ಲಾ ಅಂಟಿಕೊಳ್ಳಲ್ಲ ಅನ್ನೋದೇ ಅಮ್ಮನಿಗೆ ಸಮಾಧಾನ. ಆದರೆ ವೈದ್ಯಕೀಯವಾಗಿ ನೋಡಿದರೆ ಇದು ತಪ್ಪು. ಏನಾದರೂ ತಿಂದ ಕೂಡಲೇ ಬ್ರಶ್ ಮಾಡುವುದರಿಂದ ಹಲ್ಲು ದುರ್ಬಲವಾಗುತ್ತವೆ. ಏಕೆಂದರೆ ಹಲ್ಲುಗಳ ಮೇಲೆ ಆ್ಯಸಿಡ್ ದಾಳಿ ನಡೆಯುವ ಹೊತ್ತದು!

ಹಲ್ಲಿನ ಮೇಲೂ ಆ್ಯಸಿಡ್ ದಾಳಿ ನಡೆಯುತ್ತಾ?

ಬಿಳಿ ಬಣ್ಣದ ಪುಟ್ಟ ಪುಟ್ಟ ಹಲ್ಲುಗಳು ವಿವಿಧ ಪದರಗಳಿಂದ ಕೂಡಿವೆ. ಹೊರಗೆ ಕಾಣುವ ಬಿಳಿ ಕವಚ ಎನಾಮೆಲ್. ನಮ್ಮ ದೇಹದ ಅತ್ಯಂತ ಗಟ್ಟಿ ವಸ್ತುವಾದ ಇದು ಮೂಳೆಗಿಂತಲೂ ಬಲಶಾಲಿ. ಹಾಗಾಗಿಯೇ ಒಳಗಿರುವ ಮೃದು ಪದರಗಳನ್ನುಹೊರಗಿನ ವಾತಾವರಣದಿಂದ ರಕ್ಷಿಸುತ್ತದೆ. ಆದರೆ ಈ ಎನಾಮೆಲ್ ಅನ್ನೂ ಕರಗಿಸುವ ಶಕ್ತಿ ಹೊಂದಿರುವ ವಸ್ತು ಆ್ಯಸಿಡ್ ಅಥವಾ ಆಮ್ಲ. ಸಾಮಾನ್ಯವಾಗಿ ಸ್ವಚ್ಛ, ಆರೋಗ್ಯಕರ ಬಾಯಲ್ಲಿ ಆಮ್ಲ-ಪ್ರತ್ಯಾಮ್ಲದ ಸಮತೋಲನ ಅಂಶವಾದ ಪಿ.ಹೆಚ್ ಏಳು ಇರಬೇಕು. ಆದರೆ ಬಾಯಿಯಲ್ಲಿ ಪಿ.ಹೆಚ್ ಮಟ್ಟ ಕುಸಿದಾಗ (ಸಿಹಿ, ಅಂಟು, ಸಕ್ಕರೆ ಅಂಶ, ಆಮ್ಲ ಪದಾರ್ಥಗಳ ಅಂಶದಿಂದ)  ಆಮ್ಲೀಯ ಗುಣ ಹೆಚ್ಚುತ್ತದೆ. ಆಹಾರ/ಪಾನೀಯದಲ್ಲಿನ ಸಕ್ಕರೆ,ಪಿಷ್ಟ ಎರಡೂ ಸೂಕ್ಷ್ಮಾಣುಜೀವಿಗಳಿಂದ ಉಪಯೋಗಿಸಲ್ಪಟ್ಟು ಆಮ್ಲ ಉತ್ಪತ್ತಿಯಾಗುತ್ತದೆ.

ಹಲ್ಲಿನಲ್ಲಿ ಹುಳುಕು ಆಗೋದು ಹೀಗೆ..

ಆಮ್ಲ ಅಥವಾ ಆ್ಯಸಿಡ್ ಹಲ್ಲಿನ ಮೇಲೆ ದಾಳಿ ನಡೆಸುತ್ತದೆ. ಆಗ ಹಲ್ಲಿನಲ್ಲಿ ವಿಖನಿಜೀಕರಣಕ್ರಿಯೆ(ಡಿಮಿನೆರಲೈಜೇಶನ್) ಆರಂಭವಾಗುತ್ತದೆ.  ಅಂದರೆ ಹಲ್ಲಿಗೆ ಬಲ ನೀಡುವ ಕ್ಯಾಲ್ಶಿಯಮ್‌ನಂಥ ಖನಿಜಗಳನ್ನು ಕರಗಿಸಿ ದುರ್ಬಲವಾಗಿಸುತ್ತದೆ. ಇದರಿಂದಾಗಿ ಹಲ್ಲುಗಳಲ್ಲಿ ಸೂಕ್ಷ್ಮವಾದ ಗೀರು,ರಂಧ್ರಗಳಾಗುತ್ತವೆ. ಬಾಯಿಯಲ್ಲಿರುವ ಸೂಕ್ಷ್ಮಾಣುಜೀವಿಗಳಿಗೆ ಇವುಗಳ ಮೂಲಕ ಹಲ್ಲಿನ ಒಳ ಪದರಗಳಿಗೆ ಪ್ರವೇಶ ಸಿಕ್ಕು ಹುಳುಕು ಆರಂಭ. ಉದಾಹರಣೆಗೆ ಒಂದು ಬಾರಿ ತಂಪು ಪಾನೀಯ ಕುಡಿದ ನಂತರ ಸುಮಾರು ಇಪ್ಪತ್ತು ನಿಮಿಷಗಳಷ್ಟು ಕಾಲ ಹಲ್ಲುಗಳ ಮೇಲೆ ಆ್ಯಸಿಡ್ ದಾಳಿ ನಡೆಯುತ್ತದೆ.  ಅಷ್ಟೇ ಅಲ್ಲ ಹುಳಿ ಹಣ್ಣುಗಳು, ಸೋಡಾ ಇರುವ ಪಾನೀಯಗಳು, ಸಕ್ಕರೆ ಅಧಿಕವಿರುವ ಆಹಾರವನ್ನು ತಿಂದಾಗ ಈ ಪ್ರಕ್ರಿಯೆ ನಡೆದು ಹಲ್ಲು ಹಾಳಾಗುತ್ತದೆ.

ತಿಂದ ಕೂಡಲೇ ಬ್ರಶ್ ಮಾಡ್ಬೇಡಿ

ಹಲ್ಲುಗಳ ಮೇಲೆ ಆಸಿಡ್ ದಾಳಿ ನಡೆಯುತ್ತಿರುವಾಗ ಬ್ರಶ್ ಮಾಡಿದರೆ ದುರ್ಬಲವಾದ ಹಲ್ಲಿಗೆ ರಭಸವಾದ ಉಜ್ಜುವಿಕೆಯಿಂದ ಮತ್ತಷ್ಟು ಹಾನಿ. ಬ್ರಶ್‌ ಅನ್ನು ಬಿರುಸಾದ ಎಳೆಗಳಿಂದ ಎನಾಮಲ್ ಇನ್ನಷ್ಟು ಸವೆಯುತ್ತದೆ. ಈ ಕಾರಣಕ್ಕಾಗಿ ಆಮ್ಲೀಯ ಆಹಾರ ಸೇವಿಸಿದ ಕೂಡಲೇ ಹಲ್ಲು ಬ್ರಶ್ ಮಾಡಬಾರದು.

ಇದರರ್ಥ ಹಲ್ಲು ಬ್ರಶ್ ಮಾಡುವುದೇ ಬೇಡ ಎಂದಲ್ಲ. ಬ್ರಶ್ ಮಾಡುವುದು ಹಲ್ಲಿನ ಸ್ವಚ್ಛತೆ ಕಾಪಾಡುವ ಅತ್ಯಂತ ಸರಳ ಮತ್ತು ಪರಿಣಾಮಕಾರಿ ವಿಧಾನ. ಆಹಾರ ತಿಂದ ಸ್ವಲ್ಪ ಸಮಯ ಹಲ್ಲಿನ ಮೇಲೆ ಆ್ಯಸಿಡ್ ದಾಳಿ ನಡೆದರೂ ಮತ್ತೆ ಲಾಲಾರಸದಿಂದ ತೊಳೆಯಲ್ಪಟ್ಟು ಬಾಯಿ ತನ್ನ ಸಹಜ ಸ್ಥಿತಿಗೆ ಮರಳುತ್ತದೆ. ಹಾಗಾಗಿ ಲಾಲಾರಸ ಹೆಚ್ಚಿಸುವ, ಬಾಯಿ ತೊಳೆಯುವ ಕೆಲಸ ಮಾಡಬೇಕು. ಆಹಾರ ತಿಂದ ತಕ್ಷಣ ಸ್ವಚ್ಛವಾದ ನೀರಿನಿಂದ ಬಾಯಿಯನ್ನು ಚೆನ್ನಾಗಿ ತೊಳೆದು ಮುಕ್ಕಳಿಸಬೇಕು. ಇದರಿಂದ ಹಲ್ಲುಗಳು ತೊಳೆಯಲ್ಪಡುತ್ತವೆ ಮತ್ತು ಹಲ್ಲಿನ ಸಂದಿಯಲ್ಲಿ ಸಿಕ್ಕಿಕೊಂಡ ಆಹಾರದ ಸಣ್ಣ ಕಣಗಳು ಸಡಿಲವಾಗಿ ಹೊರಹೋಗುತ್ತವೆ.

ಸಕ್ಕರೆ ರಹಿತ ಚ್ಯೂಯಿಂಗ್‌ಗಮ್ ಗಳನ್ನು ಅಗಿಯುವುದರಿಂದ ಬಾಯಲ್ಲಿ ಉತ್ಪತ್ತಿಯಾಗುವ ಲಾವಾರಸದ ಪ್ರಮಾಣ ಹೆಚ್ಚಿಸಬಹುದು.

ತಿಂದು ಎಷ್ಟು ಹೊತ್ತಾದ ಮೇಲೆ ಹಲ್ಲುಜ್ಜಬೇಕು?

ಆಹಾರ ಸೇವನೆಯ ಸುಮಾರು ಮೂವತ್ತು ನಿಮಿಷದ ನಂತರ ಹಲ್ಲನ್ನು, ಬ್ರಶ್ ಉಪಯೋಗಿಸಿ ತಿಕ್ಕುವುದು ಒಳ್ಳೆಯದು ಮತ್ತು ಸುರಕ್ಷಿತ. ಇದರೊಂದಿಗೇ ನೆನಪಿನಲ್ಲಿಡಬೇಕಾದ ಬಹು ಮುಖ್ಯ ಅಂಶವೆಂದರೆ ತಂಪು ಪಾನೀಯಗಳು,ಸಂಸ್ಕರಿಸಿದ ಆಹಾರ, ಅಂಟುವ ಸಿಹಿ ಪದಾರ್ಥ ಇವುಗಳ ಸೇವನೆ ಮಿತಿಯಲ್ಲಿರಲಿ.ಜಂಕ್‌ಫುಡ್ ಬಾಯಿಗೆ ರುಚಿಕರವಾದರೂ ಹಲ್ಲಿಗೆ ಹಾನಿಕರ.

click me!