
ಕಾರವಾರ (ಮಾ.12) : ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಬಗ್ಗೆ ಹಲವರು ತಮಗೆ ದೂರು ನೀಡುತ್ತಾರೆ. ಆದರೆ, ಈಗ ತಾವು ಸಭಾಪತಿಯಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ ಎಂದು ಪರೋಕ್ಷವಾಗಿ ತಮ್ಮ ಕೈಕಟ್ಟಿಹಾಕಿದ ಬಗ್ಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ನಡೆದ ಮಕ್ಕಳಲ್ಲಿ ಪರೀಕ್ಷಾ ಭೀತಿ ನಿವಾರಣೆಯಲ್ಲಿ ಶಿಕ್ಷಕರ ಪಾತ್ರ ಕುರಿತು ಉಪನ್ಯಾಸ, ಸಭಾಪತಿಗೆ ಸನ್ಮಾನ, ಸಾಧಕರಿಗೆ ಪುರಸ್ಕಾರ, ನಿವೃತ್ತರಿಗೆ ಸನ್ಮಾನ, ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧಾರವಾಡಕ್ಕೆ ವಿಜ್ಞಾನ ಕೇಂದ್ರ ಬಂದಿದ್ದು ಸಾರ್ಥಕ : ಬಸವರಾಜ ಹೊರಟ್ಟಿ
ಜನರು, ಶಿಕ್ಷಕರು ಹೇಳಿದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡಬಹುದು. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟುಬದಲಾವಣೆ ಆಗಿದೆ. ಆದರೂ ಸಮಸ್ಯೆಗಳು ಬಗೆಹರಿದಿಲ್ಲ. ಅಧಿಕಾರಿಗಳು ಶಿಕ್ಷಣದ ಬಗ್ಗೆ ಚರ್ಚೆ ಮಾಡುವುದು ಕಡಿಮೆಯಾಗಿದೆ. ಚಿಂತನ ಮಂಥನ ಮಾಡಬೇಕು. ಶಿಕ್ಷಣ ವ್ಯವಸ್ಥೆ ಸರಿ ಇಲ್ಲ. ಸರ್ಕಾರ ಕೇಳಿದ ಮಾಹಿತಿ ಕೊಡುವುದೆ ಶಿಕ್ಷಕರ ಕೆಲಸ ಆಗಿದೆ. ವಿದ್ಯಾರ್ಥಿಗಳಿಗೆ ಕಲಿಸಲು ಎಲ್ಲಿ ಸಮಯ ಇರುತ್ತದೆ? ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಅಸಹಾಯಕತೆ:
1961ರಲ್ಲಿ ಸರ್ಕಾರದರಿಂದ ಶಾಲೆಗಳನ್ನು ಸ್ಥಾಪಿಸಲು ಆಗುವುದಿಲ್ಲ. ಮಠ, ಸಂಘ-ಸಂಸ್ಥೆಗಳು ಶಾಲೆ, ಕಾಲೇಜು ಪ್ರಾರಂಭಿಸಿದರೆ ಸರ್ಕಾರದಿಂದ ಸಹಾಯ ಮಾಡುತ್ತೇವೆ ಎಂದು ಪ್ರಕಟಣೆ ನೀಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಇಲ್ಲದಿದ್ದರೆ ತಮ್ಮನ್ನು ಒಳಗೊಂಡು ಬಹುತೇಕರು ಶಿಕ್ಷಣ ಕಲಿಯುತ್ತಿರಲಿಲ್ಲ. ಹೆಚ್ಚಿನ ಜನರು ಶಾಲೆಗೆ ಹೋಗುತ್ತಿರಲಿಲ್ಲ. ಹೋದ ಕೆಲವರೂ ಅರ್ಧದಲ್ಲಿಯೇ ಬಿಡುತ್ತಿದ್ದರು. ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಅಷ್ಟಕಷ್ಟೇ ಆಗಿತ್ತು. ತಾವು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಶಿಕ್ಷಣ ಮಂತ್ರಿಯಾದ ಬಳಿಕ ಹಂತ ಹಂತವಾಗಿ ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜು ಸ್ಥಾಪಿಸಲು ಸಾಕಷ್ಟುಒತ್ತು ನೀಡಿದ್ದಾಗಿ ಹೇಳಿದರು.
ನಾನು ಶಿಕ್ಷಣ ಸಚಿವರಿದ್ದಾಗ ಬೀದರ ಜಿಲ್ಲೆಯ ಒಂದು ಹಳ್ಳಿಗೆ ಕಾರ್ಯಕ್ರಮಕ್ಕೆ ಹೋದಾಗ ಆ ಊರಿಗೆ ಒಂದೇ ಶಾಲೆ ಇರುವುದು ಗಮನಕ್ಕೆ ಬಂದಿತು. 9ಕಿಮೀ ಸುತ್ತಮುತ್ತ ಶಾಲೆಯೇ ಇರಲಿಲ್ಲ. ಆಗ ಮೂರು ಕಿಮೀ ವ್ಯಾಪ್ತಿಯಲ್ಲಿ ಪ್ರೌಢಶಾಲೆ, 5-7 ಕಿಮೀ ವ್ಯಾಪ್ತಿಯಲ್ಲಿ ಜೂನಿಯರ್ ಕಾಲೇಜ್ ಇಲ್ಲ ಎನ್ನುವ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿದಾಗ 1613 ಪ್ರೌಢ ಶಾಲೆ, 700 ಜೂನಿಯರ್ ಕಾಲೇಜ್ ಅಗತ್ಯವಿದೆ ಎಂದು ವರದಿ ನೀಡಿದ್ದರು. ಇದಕ್ಕಾಗಿ .1200 ಕೋಟಿ ರು. ಅನುದಾನ ಬೇಕಿತ್ತು. ಆ ವೇಳೆ 1039 ಪ್ರೌಢಶಾಲೆ, 500 ಕಾಲೇಜ್ ನಿರ್ಮಾಣ ಮಾಡಲಾಗಿತ್ತು ಎಂದು ತಮ್ಮ ಅನುಭವವನ್ನು ಹೇಳಿದರು.
ಭೀತಿ ಸೃಷ್ಟಿಸುತ್ತಿದ್ದೇವೆ:
ಮಕ್ಕಳಲ್ಲಿ ಪರೀಕ್ಷಾ ಭೀತಿ ನಿವಾರಣೆಯಲ್ಲಿ ಶಿಕ್ಷಕರ ಪಾತ್ರ ಕುರಿತು ಉಪನ್ಯಾಸ ನೀಡಿದ ಜಿ.ಕೆ. ಕೃಷ್ಣಮೂರ್ತಿ, ವಿದ್ಯಾರ್ಥಿಗಳಲ್ಲಿ ಭೀತಿಯನ್ನು ನಾವೇ ಸೃಷ್ಟಿಸುತ್ತಿದ್ದೇವೆ. ಪರೀಕ್ಷಾ ವಿಧಾನ ಅವೈಜ್ಞಾನಿವಾಗಿದೆ. ವರ್ಷದಿಂದ ಓದಿರುವ ಪಠ್ಯಕ್ಕೆ ಮೂರು ತಾಸಿನಲ್ಲಿ ಪರೀಕ್ಷೆ ಬರೆಯಬೇಕು. ಪರೀಕ್ಷಾ ಫಲಿತಾಂಶವು ಬುದ್ಧಿ ಕೌಶಲ್ಯವನ್ನು ಪ್ರತಿಫಲಿಸುವುದೂ ಇಲ್ಲ. ಪರೀಕ್ಷಾ ಅಂಕ ನೋಡಿ ಹೇಗೆ ಬುದ್ಧಿವಂತ ಹೇಳಲು ಸಾಧ್ಯ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ರಾಜ್ಯಕ್ಕೆ ಪ್ರಥಮ ಬಂದವರು ಇಂದು ಏನು ಆಗಿದ್ದಾರೆ? ಅಂದುಕೊಂಡಿದ್ದ ಸಾಧನೆ ಆಗಿದೆಯೆ? ನೆಟ್, ಸಿಇಟಿ ಪಾಸ್ ಆಗಿದ್ದಾರೆಯೇ? ಎನ್ನುವ ಪ್ರಶ್ನೆಗೆ ಬಹುತೇಕ ಇಲ್ಲ ಎನ್ನುವ ಉತ್ತರ ಸಿಗುತ್ತಿದೆ. ಉನ್ನತ ಶಿಕ್ಷಣದಲ್ಲಿ ಸೋಲುವುದರಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ನಾವು ಎಲ್ಲಿ ತಪ್ಪಿದ್ದೇವೆ ಎನ್ನುವ ಬಗ್ಗೆ ಚಿಂತನೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತದಲ್ಲಿ ನೇತಾಜಿ ಹುಟ್ಟಿದ್ದು ನಮ್ಮ ಪುಣ್ಯ: ಬಸವರಾಜ ಹೊರಟ್ಟಿ
ಎಂಎಲ್‌ಸಿ ಗಣಪತಿ ಉಳ್ವೇಕರ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ನಿವೃತ್ತಿ ಹೊಂದಿದ ಶಿಕ್ಷಕರನ್ನು, ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಗರಸಭೆ ಅಧ್ಯಕ್ಷ ಡಾ. ನಿತಿನ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಡಿಡಿಪಿಐ ಈಶ್ವರ ನಾಯ್ಕ, ಬಿಇಒ ಶಾಂತೇಶ ನಾಯಕ, ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ಎಲ್.ಎಂ. ಹೆಗಡೆ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಜಿ.ಆರ್. ಭಟ್, ಅಂಕೋಲಾ ಬಿಇಒ ಮಂಗಳಾಲಕ್ಷ್ಮಿ, ಎಂ.ಟಿ. ಗೌಡ, ರಂಗನಾಥ ಬಿ.ಎಚ್. ಪ್ರಭಾಕರ ಬಂಟ, ಸುಧೀರ ನಾಯಕ, ಶಬ್ಬೀರ ದಫೆದಾರ, ಅನಿಲ ರೊಡ್ರಿಗಸ್, ಗಣಪತಿ ನಾಯ್ಕ ಮೊದಲಾದವರು ಇದ್ದರು.