ಬಿಜೆಪಿಯ ಯಾವೊಬ್ಬ ಸಂಸದನೂ ಬರ ಪರಿಹಾರ ನೀಡಿ ಎಂದು ಕೇಳಲಿಲ್ಲ: ಸಚಿವ ರಾಮಲಿಂಗಾರೆಡ್ಡಿ

By Kannadaprabha News  |  First Published May 4, 2024, 11:49 AM IST

ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೊರತುಪಡಿಸಿದರೆ ಬಿಜೆಪಿಯ ಯಾವೊಬ್ಬ ಸಂಸದರೂ ಬರಗಾಲ ಪೀಡಿತ ಕರ್ನಾಟಕಕ್ಕೆ ಪರಿಹಾರದ ಹಣ ನೀಡಿ ಎಂದು ಪಾರ್ಲಿಮೆಂಟ್‌ನಲ್ಲಿ ಧ್ವನಿ ಎತ್ತಲಿಲ್ಲ. 


ಬಳ್ಳಾರಿ (ಮೇ.04): ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೊರತುಪಡಿಸಿದರೆ ಬಿಜೆಪಿಯ ಯಾವೊಬ್ಬ ಸಂಸದರೂ ಬರಗಾಲ ಪೀಡಿತ ಕರ್ನಾಟಕಕ್ಕೆ ಪರಿಹಾರದ ಹಣ ನೀಡಿ ಎಂದು ಪಾರ್ಲಿಮೆಂಟ್‌ನಲ್ಲಿ ಧ್ವನಿ ಎತ್ತಲಿಲ್ಲ. ಬರಪರಿಹಾರಕ್ಕಾಗಿ ಪತ್ರಿಕಾಗೋಷ್ಠಿಯ ಮೂಲಕವೂ ಸಹ ಬಿಜೆಪಿ ಸಂಸದರು ಒತ್ತಾಯಿಸಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಪಾದಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಬರ ಘೋಷಣೆಗೊಂಡು 7 ತಿಂಗಳು ಕಳೆದರೂ ಹಣ ನೀಡಲಿಲ್ಲ. ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ ಬಳಿಕ ಈಚೆಗಷ್ಟೇ ಒಂದಷ್ಟು ಹಣ ಬಿಡುಗಡೆ ಮಾಡಿದ್ದಾರೆ. 

ಕೇಂದ್ರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ರಾಜ್ಯದ ತೆರಿಗೆ ಹಣ ₹4.34 ಲಕ್ಷ ಕೋಟಿ ಕೇಂದ್ರಕ್ಕೆ ಹೋಗುತ್ತಿದೆ. ಕೇಂದ್ರದಿಂದ ಬರುತ್ತಿರುವುದು ರೂಪಾಯಿಗೆ ಕೇವಲ 13 ಪೈಸೆ ಮಾತ್ರ ಎಂದರು. ಮುಖ್ಯಮಂತ್ರಿ ಹೇಳುವ ಪ್ರಕಾರ ₹1.89 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರ ಕೊಡಬೇಕು. ಪ್ರಧಾನಮಂತ್ರಿ, ಹಣಕಾಸು ಸಚಿವರು ಸೇರಿದಂತೆ ಬಿಜೆಪಿಯ ಯಾವೊಬ್ಬ ನಾಯಕರು ಸಹ ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಲಿಲ್ಲ. ಕೇಂದ್ರ ಕೊಟ್ಟಿದ್ದೇ ಸರಿಯಿದೆ ಎಂದು ವಾದ ಮಾಡುತ್ತಿದ್ದಾರೆ. ರಾಜ್ಯಕ್ಕೆ ಅನ್ಯಾಯವಾದಾಗ ಪಕ್ಷಾತೀತವಾಗಿ ಎಲ್ಲ ಸಂಸದರು ಮಾತನಾಡಬೇಕು. ಆದರೆ, ಬಿಜೆಪಿ ಸಂಸದರು ಯಾರೂ ಸಹ ರಾಜ್ಯದ ರೈತರ ಸಮಸ್ಯೆಗಳ ಪರವಾಗಿ ಮಾತನಾಡಲಿಲ್ಲ. 

Tap to resize

Latest Videos

ಟಿಎಸ್‌ಎಸ್ ಅಕ್ರಮ: ಶಿರಸಿಯ 6 ಉದ್ಯಮಿಗಳ ನಿವಾಸದ ಮೇಲೆ ಐಟಿ ದಾಳಿ

ರಾಜ್ಯ ಹಾಗೂ ಜಿಲ್ಲೆಯ ಪರ ಧ್ವನಿ ಎತ್ತುವವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದರು. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಲಾಗಿದೆ. ಮುಂದಿನ ಹಂತದ ತನಿಖಾ ಕ್ರಮವನ್ನು ಎಸ್‌ಐಟಿ ನಿರ್ವಹಿಸುತ್ತದೆ. ತನಿಖೆ ಹಂತದಲ್ಲಿರುವಾಗ ಮಾತನಾಡಬಾರದು. ಪ್ರಕರಣದ ಮೇಲೆ ಯಾವ ಪ್ರಭಾವವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಬುಡಾ ಅಧ್ಯಕ್ಷ ಜೆ.ಎಸ್. ಆಂಜಿನೇಯಲು, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ್, ವೆಂಕಟೇಶ್ ಹೆಗಡೆ, ಗಾದೆಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

click me!