ವಿಜಯಪುರ: ಕಬ್ಬು ಬೆಳೆಗಾರರಿಗೆ ಕಬ್ಬು ಕಟಾವು ಚಿಂತೆ..!

Published : Nov 30, 2023, 10:00 PM IST
ವಿಜಯಪುರ: ಕಬ್ಬು ಬೆಳೆಗಾರರಿಗೆ ಕಬ್ಬು ಕಟಾವು ಚಿಂತೆ..!

ಸಾರಾಂಶ

ಕಬ್ಬು ಕಟಾವಿಗೆ ಕಾರ್ಖಾನೆಗಳು ವಿವಿಧೆಡೆಗಳಿಂದ ಗ್ಯಾಂಗ್‌ಗಳನ್ನು ಕರೆಸಿವೆ. ಆದರೆ ಇವರು ಕಡಿಮೆ ಸಂಖ್ಯೆಯಲ್ಲಿರುವ ಕಾರಣ ಬೇಡಿಕೆ ಹೆಚ್ಚಾಗಿದೆ. ಕಟಾವಿಗೆ ತಮ್ಮ ಸರದಿ ಬರುವಷ್ಟರಲ್ಲಿ ಬೆಳೆ ಒಣಗುತ್ತದೆ ಎಂಬ ಚಿಂತೆ ಕಬ್ಬು ಬೆಳೆಗಾರರದ್ದಾಗಿದೆ. ಕಬ್ಬು ಕಟಾವಿಗೆ ಗ್ಯಾಂಗ್‌ಗಳು ಯಾವ ರೈತರು ಹೆಚ್ಚು ಹಣ ನೀಡುತ್ತಾರೋ ಅವರಲ್ಲಿಗೆ ಬೇಗ ಕಟಾವಿಗೆ ಹೋಗುತ್ತಾರೆ. 

ಬಸವರಾಜ ನಂದಿಹಾಳ

ಬಸವನಬಾಗೇವಾಡಿ(ನ.30): ಒಂದೆಡೆ ಬರಗಾಲ, ಮತ್ತೊಂದೆಡೆ ಬೆಳೆದ ಬೆಳೆಗಳು ಕೈಗೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲೇ ಕಟಾವಿಗೆ ಬಂದ ಕಬ್ಬು ಕಡೆಯಲು ಕಬ್ಬಿನ ಗ್ಯಾಂಗ್‌ಗಳೇ ಬರದ ಹಿನ್ನೆಲೆಯಲ್ಲಿ ಕಬ್ಬು ಬೆಳೆದ ರೈತರನ್ನು ಕಂಗಾಲಾಗಿಸಿದೆ.

ಜಿಲ್ಲೆಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳಾಗಿರುವುದರಿಂದ ಇತ್ತೀಚೆಗೆ ಹೆಚ್ಚು ರೈತರು ಕಬ್ಬು ಬೆಳೆಯುತ್ತಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ರೈತರು ಕಬ್ಬು ಬೆಳೆದಿದ್ದಾರೆ. ಮಳೆ ಕೊರತೆಯಿಂದಾಗಿ ಹೇಳಿಕೊಳ್ಳುವಂತಹ ಇಳುವರಿ ಬಾರದಿದ್ದರೂ ಬೋರ್‌ವೆಲ್ ಮೂಲಕ ನೀರು ಹಾಯಿಸಿ ಕಬ್ಬು ಉಳಿಸಿಕೊಂಡಿದ್ದಾರೆ. ಆದರೆ, ಇದೀಗ ಕಬ್ಬು ಕಟಾವು ಮಾಡುವುದೇ ಅವರಿಗೆ ಚಿಂತೆಯಾಗಿ ಪರಿಣಮಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ವಿಜಯಪುರ: ಸಚಿವ ಬೈರೇಗೌಡ ಸಭೆ ನಡೆಯುತ್ತಿದ್ದಾಗ ನುಗ್ಗಿ ಗಲಾಟೆ ಮಾಡಿದ ಮುಖಂಡ

ಬೆಳೆ ನಷ್ಟದ ಚಿಂತೆ:

ಕಬ್ಬು ಕಟಾವಿಗೆ ಕಾರ್ಖಾನೆಗಳು ವಿವಿಧೆಡೆಗಳಿಂದ ಗ್ಯಾಂಗ್‌ಗಳನ್ನು ಕರೆಸಿವೆ. ಆದರೆ ಇವರು ಕಡಿಮೆ ಸಂಖ್ಯೆಯಲ್ಲಿರುವ ಕಾರಣ ಬೇಡಿಕೆ ಹೆಚ್ಚಾಗಿದೆ. ಕಟಾವಿಗೆ ತಮ್ಮ ಸರದಿ ಬರುವಷ್ಟರಲ್ಲಿ ಬೆಳೆ ಒಣಗುತ್ತದೆ ಎಂಬ ಚಿಂತೆ ಕಬ್ಬು ಬೆಳೆಗಾರರದ್ದಾಗಿದೆ. ಕಬ್ಬು ಕಟಾವಿಗೆ ಗ್ಯಾಂಗ್‌ಗಳು ಯಾವ ರೈತರು ಹೆಚ್ಚು ಹಣ ನೀಡುತ್ತಾರೋ ಅವರಲ್ಲಿಗೆ ಬೇಗ ಕಟಾವಿಗೆ ಹೋಗುತ್ತಾರೆ ಎಂಬ ಮಾತು ಕೇಳಿ ಬಂದಿದೆ.
ಒಳ್ಳೆಯ ಕಬ್ಬು ಇದ್ದರೆ ಒಂದು ಎಕರೆಗೆ ₹2000, ಸಾದಾ ಕಬ್ಬು ಇದ್ದರೆ ₹3000 ಇನ್ನೂ ಕೆಲವರು ನಾಲ್ಕರಿಂದ ಆರು ಸಾವಿರ ರು.ವರೆಗೂ ಕೇಳುತ್ತಾರೆ. ಕಬ್ಬು ಸಾಗಿಸುವಾಗ ಟ್ರ್ಯಾಕ್ಟರ್ ಚಾಲಕನಿಗೆ ರೈತರು ಪ್ರತಿ ಟ್ರೀಪ್‌ಗೆ ₹500 ಊಟೋಪಚಾರಕ್ಕೆ ಕೊಡಬೇಕು.

ಹೆಚ್ಚು ಹಣ ಕೊಟ್ಟವರ ಕಬ್ಬು ಕಟಾವು:

ಹೆಚ್ಚು ಹಣ ನೀಡಿದ ರೈತರ ಕಬ್ಬು ಕಟಾವಿಗೆ ಗ್ಯಾಂಗ್ ಮುಂದಾಗುತ್ತಿದೆ. ಹಣ ನೀಡಲು ಸಾಧ್ಯವಾಗದ ಬಡರೈತರು ಕಬ್ಬನ್ನು ಕಟಾವು ಮಾಡಿಸಿ ಕಾರ್ಖಾನೆಗೆ ಕಳುಹಿಸಲು ಪರದಾಡುವಂತಾಗಿದೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯವರು ಹೆಚ್ಚು ಕಟಾವು ಯಂತ್ರ ಕಳಿಸಿದರೆ ಅನುಕೂಲ. ಕಾರ್ಮಿಕರ ಕೊರತೆಯ ನೆಪ ಹೇಳುವುದನ್ನು ಬಿಟ್ಟು ಕಬ್ಬನ್ನು ತಕ್ಷಣ ಕಟಾವು ಮಾಡಬೇಕೆಂದು ರೈತ ಬಾಂಧವರ ಆಗ್ರಹವಾಗಿದೆ.

ಕಬ್ಬು ಬಾಕಿ ಹಣ, ಹೆಚ್ಚುವರಿ ದರ ನಿಗದಿಗೆ ಆಗ್ರಹ

ಮನಸ್ಸಿಗೆ ಬಂದ ಕಬ್ಬು ಕಟಾವು:

ಈ ಸಲ ಬರಗಾಲದಿಂದಾಗಿ ಕಬ್ಬು ಶೇ. ೬೦ ರಷ್ಟು ಮಧ್ಯಮ ಗಾತ್ರದಿಂದ ಇದ್ದು, ಉಳಿದ ಕಬ್ಬು ಉತ್ತಮವಾಗಿದೆ. ಕಾರಣ ಕಳೆದ ವರ್ಷ ಕಡಿಮೆ ಮಳೆ, ಈ ವರ್ಷ ಅಪೂರ್ಣ ಮಳೆ. ರೈತರು ಸಾಕಷ್ಟು ನೀರಿಗಾಗಿ ಬೋರ್‌ವೆಲ್, ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಇದರಿಂದಾಗಿ ಕಬ್ಬು ನೆಲ ಕಚ್ಚಿದೆ. ಎರಡು ತಿಂಗಳಿಂದ ಆರಂಭವಾದ ಕಬ್ಬು ಕಟಾವು ಯರಗಲ್ಲ ಬಾಲಾಜಿ ಸಕ್ಕರೆ ಕಾರ್ಖಾನೆಯವರು ತಮ್ಮ ಮನಸ್ಸಿಗೆ ಬಂದ ಕಬ್ಬನ್ನು ಮಾತ್ರ ಕಟಾವು ಮಾಡುತ್ತಿದ್ದಾರೆ.
ಪ್ರತಿಟನ್ ಕಬ್ಬಿಗೆ ವಿವಿಧ ಕಾರ್ಖಾನೆಗಳು ಬೇರೆ ಬೇರೆ ದರ ನೀಡುತ್ಗಿವೆ. ಯರಗಲ್ಲ ಸಕ್ಕರೆ ಕಾರ್ಖಾನೆಯು ₹2650, ಎಸ್.ಆರ್.ಪಾಟೀಲ ಸಕ್ಕರೆ ಕಾರ್ಖಾನೆ ₹2900, ಬಸವೇಶ್ವರ ಸಕ್ಕರೆ ಕಾರ್ಖಾನೆ 2₹850 ಹೀಗೆ ಬೇರೆ ದರ ನೀಡುತ್ತಿವೆ. ಇದು ರೈತರಿಗೆ ಅನ್ಯಾಯ. ಸರ್ಕಾರ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ₹3500 ನೀಡುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ರೈತ ಮುಖಂಡ ಬಸವರಾಜ ಪೂಜಾರಿ ಆಗ್ರಹಿಸಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ಯರಗಲ್ ಸಕ್ಕರೆ ಕಾರ್ಖಾನೆಯು ನಮ್ಮ ಭಾಗದ ಕಬ್ಬು ಬೇಗ ಕಟಾವು ಮಾಡಿಸಿ ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು‌ ಜಿಲ್ಲಾಧಿಕಾರಿಗಳಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ರೈತ ಮುಖಂಡರಾದ ಸತೀಶ ಸಜ್ಜನ, ಬಲವಂತ ಶೆಟ್ಟರ, ಶ್ರವಣ ಮಾದರ, ಅರವಿಂದ ಕುಲಕರ್ಣಿ ತಿಳಿಸಿದ್ದಾರೆ. 

PREV
Read more Articles on
click me!

Recommended Stories

ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ