ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಇ-ಮೇಲ್ ಬಂದ ಬೆನ್ನಲ್ಲೇ ನಗರದ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಹುಸಿ ಬಾಂಬ್ ಮೇಲ್ ಬಂದಿದೆ. ಬಾಂಬ್ ಇರಿಸಿರುವುದಾಗಿ ದುಷ್ಕರ್ಮಿಗಳು ಭಾನುವಾರ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾರೆ.
ಬೆಂಗಳೂರು (ಮೇ.13): ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಇ-ಮೇಲ್ ಬಂದ ಬೆನ್ನಲ್ಲೇ ನಗರದ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಹುಸಿ ಬಾಂಬ್ ಮೇಲ್ ಬಂದಿದೆ. ಬಾಂಬ್ ಇರಿಸಿರುವುದಾಗಿ ದುಷ್ಕರ್ಮಿಗಳು ಭಾನುವಾರ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.ಪರಿಶೀಲನೆ ಬಳಿಕ ಇದೊಂದು ಹುಸಿಬಾಂಬ್ ಬೆದರಿಕೆ ಸಂದೇಶ ಎಂಬುದು ಖಚಿತವಾಗಿದೆ. ನಗರ ಪೊಲೀಸ್ ಇಲಾಖೆಯ ವಿಶೇಷ ಘಟಕದ (ಸ್ಪೆಷಲ್ ಬ್ರ್ಯಾಚ್) ಇ-ಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ಬಂದಿದೆ.
ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ವಿಶೇಷ ಘಟಕದ ಇ-ಮೇಲ್ ಪರಿಶೀಲನೆ ವೇಳೆ ನಗರದ ಸೇಂಟ್ ಫಿಲೋಮಿನಾ, ಸೇಂಟ್ ಮಾರ್ಥಸ್, ಜೆಎಂಜೆ ಸೇರಿ ನಗರದ ಆರೇಳು ಆಸ್ಪತ್ರೆಗಳ ಹೆಸರಳನ್ನು ಉಲ್ಲೇಖಿಸಿ, ಇನ್ನು ಕೆಲವೇ ಕ್ಷಣಗಳಲ್ಲಿ ಈ ಆಸ್ಪತ್ರೆಗಳಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಸಂದೇಶ ಬಂದಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರು, ಬಾಂಬ್ ನಿಷ್ಕ್ರಿಯದಳ, ಶ್ವಾನದಳದೊಂದಿಗೆ ಆಸ್ಪತ್ರೆಗಳಿಗೆ ತೆರಳಿ ತಪಾಸಣೆ ಮಾಡಿದ್ದಾರೆ. ಈ ವೇಳೆ ಯಾವುದೇ ಬಾಂಬ್, ಸ್ಫೋಟಕವಸ್ತುಗಳು, ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಹುಸಿ ಬಾಂಬ್ ಬೆದರಿಕೆ ಸಂದೇಶದ ಹಿಂದಿನ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳ ಆಸ್ಪತ್ರೆಗೆ ಬಾಂಬ್ ಬೆದರಿಕೆ: ಖಾಸಗಿ ಆಸ್ಪತ್ರೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕಳಿಸಿದ ಘಟನೆ ನೆರೆಯ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ಕೂಡಲೇ ಒಳ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಿ ಸಮೀಪದ ಸಿಪ್‌ಕಾಟ್ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಧಾವಿಸಿ ಬಂದ ಪೊಲೀಸರು ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಕ್ರಮ ವಹಿಸಿದ್ದರು. ಸತತ 3 ಗಂಟೆಗಳ ತಪಾಸಣೆ ನಂತರ ಯಾವುದೇ ಅಪಾಯಕಾರಿ ವಸ್ತು ಇಲ್ಲವೆಂದು ತಿಳಿಸಿದ್ದಾರೆ.
ಮೋದಿ 3.0 ಮೊದಲ ಸಭೆಗೆ ಅಜೆಂಡಾ ತಯಾರಿ: ಕಾರ್ಯಸೂಚಿ ರಚನೆ
ಹೊಸೂರಿನ ಮಾರುತಿ ನಗರದಲ್ಲಿ ಮಿತ್ರ ಲೀಲಾ ಎಂಬ ಖಾಸಗಿ ಮಕ್ಕಳ ಆಸ್ಪತ್ರೆಯಿದ್ದು ಡಿಎಂಕೆ ಪಕ್ಷದ ನವೀನ್ ಕುಮಾರ್ ಒಡೆತನದ್ದಾಗಿದೆ. ಮಂಗಳವಾರ ಬೆಳಗ್ಗೆ 11.30ಕ್ಕೆ ಆಸ್ಪತ್ರೆಯ ಇ-ಮೇಲ್ ಐಡಿಗೆ ಬೆದರಿಕೆ ಬಂದಿದ್ದು, ಆಸ್ಪತ್ರೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳಿವೆ. ಅದು ಯಾವುದೇ ನಿಮಿಷದಲ್ಲಿ ಸ್ಫೋಟಗೊಳ್ಳುತ್ತದೆ ಎಂದು ಇ-ಮೇಲ್‌ನಲ್ಲಿ ಬರೆದಿದ್ದರು. ಇನ್‌ಸ್ಪೆಕ್ಟರ್ ಪ್ರಕಾಶ್ ಮತ್ತು ಪೊಲೀಸರ ತಂಡ ಆಸ್ಪತ್ರೆ ಆವರಣದಲ್ಲಿ ಶೋಧ ಮುಂದುವರಿಸಿದ್ದಾರೆ. ಇದೇ ಮಾದರಿಯ ಇ-ಮೇಲ್ ದೇಶದ 64 ಆಸ್ಪತ್ರೆಗಳಿಗೆ ಹೋಗಿದ್ದು, ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಹಾಗೂ ಉನ್ನತ ಅಧಿಕಾರಿಗಳು ಭೇಟಿ ನೀಡಿದ್ದರು.