ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ನೀರು ಪೂರೈಕೆ ಮಾಡುವ ಹೊಣೆ ಬಿಲ್ಡರ್‌ಗಳ ಹೆಗಲಿಗೆ

By Kannadaprabha News  |  First Published Jun 22, 2019, 8:35 AM IST

ಸಿಲಿಕಾನ್ ಸಿಟಿ ಕಂಡ್ ಕಂಡಲ್ಲಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ. ಬಹುತೇಕ ಕಟ್ಟಡಗಳಿಗೆ ಸುಸೂತ್ರ ನೀರಿನ ವ್ಯವಸ್ಥೆಯೇ ಇಲ್ಲ. ಮನೆ ಕೊಂಡ ಮಂದಿ ಪಡುವ ಪಾಡು ಅಷ್ಟಿಷ್ಟಲ್ಲ. ಈ ಸಂಕಷ್ಟ ದೂರ ಮಾಡಲು ಇನ್ನು ಬ್ಯುಲ್ಡರ್‌ಗಳೇ ಮನೆಗೆ ನೀರು ನೀಡುವ ವ್ಯವಸ್ಥೆ ಮಾಡಬೇಕು.


ಬೆಂಗಳೂರು (ಜು.21): ಅಪಾರ್ಟ್‌ಮೆಂಟ್‌ ವಾಸಿಗಳಿಗೆ ನೀರು ಪೂರೈಕೆಯ ಹೊಣೆಯನ್ನು ಬಿಲ್ಡರ್‌ಗಳೇ ವಹಿಸಿಕೊಳ್ಳಬೇಕು. ಇಲ್ಲದಿದ್ದರೆ, ಅಂತಹ ಬಿಲ್ಡರ್‌ಗಳಿಗೆ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂಬ ಚಿಂತನೆ ಸರ್ಕಾರದಲ್ಲಿದ್ದು, ಶೀಘ್ರವೇ ಈ ಕುರಿತು ಕಾನೂನೊಂದನ್ನು ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಶುಕ್ರವಾರ ತಿಳಿಸಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಗರದ ಮಲ್ಲೇಶ್ವರದಲ್ಲಿ ನಿರ್ಮಿಸಿರುವ ‘ಸುವರ್ಣ ಭವನ ಕಟ್ಟಡ’ವನ್ನು ಉದ್ಘಾಟಿಸಿದ ಅವರು, ಬಿಲ್ಡರ್‌ಗಳು ನಗರದ ಹಲವೆಡೆ 20-30 ಅಂತಸ್ತಿನ ಅಪಾರ್ಟ್‌ಮೆಂಟ್‌ ನಿರ್ಮಿಸಿ, ಮಾರಾಟ ಮಾಡುತ್ತಿದ್ದಾರೆ. ಸಾಕಷ್ಟುಅಪಾರ್ಟ್‌ಮೆಂಟ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ನಿವಾಸಿಗಳು ಟ್ಯಾಂಕರ್‌ ನೀರು ಖರೀದಿಸಿ ಬಳಕೆ ಮಾಡುತ್ತಿದ್ದಾರೆ. ಈ ಟ್ಯಾಂಕರ್‌ನವರು ಎಲ್ಲಿಂದ ಈ ನೀರು ಪೂರೈಕೆ ಮಾಡುತ್ತಾರೋ ಗೊತ್ತಿಲ್ಲ. ಈ ನೀರಿನ ಬಳಕೆಯಿಂದ ಅಪಾರ್ಟ್‌ಮೆಂಟ್‌ ನಿವಾಸಿಗಳು ಚರ್ಮರೋಗಗಳಿಗೆ ತುತ್ತಾಗುತ್ತಿದ್ದಾರೆ. ಕಷ್ಟಪಟ್ಟು ದುಡಿದು ಲಕ್ಷಾಂತ ರು. ನೀಡಿ ಪ್ಲಾಟ್‌ ಖರೀದಿಸಿ ನೀರು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಅಪಾರ್ಟ್‌ಮೆಂಟ್‌ ನಿರ್ಮಾಣಕಾರರೇ ಕಡ್ಡಾಯವಾಗಿ ನೀರು ಪೂರೈಕೆಯ ಜವಾಬ್ದಾರಿ ಹೊರುವ ಕಾನೂನು ಜಾರಿಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.

Latest Videos

undefined

ಬೆಂಗಳೂರು ನಗರದ ವ್ಯಾಪ್ತಿ ಹೆಚ್ಚಾದಷ್ಟೂಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಜಲಮಂಡಳಿಯು ಕಾವೇರಿ ಮೂಲದಿಂದ ದಿನಕ್ಕೆ 1450 ದಶ ಲಕ್ಷ ಲೀಟರ್‌ ನೀರು ಪೂರೈಕೆ ಮಾಡುತ್ತಿದೆ. ನಗರದ ಸಾಕಷ್ಟುಕಡೆಗೆ ಕಾವೇರಿ ನೀರು ಸಿಗುತ್ತಿಲ್ಲ. ಇನ್ನು ಬೋರ್‌ವೆಲ್‌ಗಳಿಂದ 400 ದಶ ಲಕ್ಷ ಲೀಟರ್‌ ಸಿಗುತ್ತಿದೆ. ಇತ್ತೀಚೆಗೆ ಅಂತರ್ಜಲವೂ ಕುಸಿದು ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಜಲಮಂಡಳಿಯಿಂದ 5500 ಕೋಟಿ ರು. ವೆಚ್ಚದಲ್ಲಿ ಕಾವೇರಿ 5ನೇ ಹಂತ ಕಾಮಗಾರಿ ಆರಂಭವಾಗಿದೆ. ಇನ್ನು 380 ಕೋಟಿ ರು. ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜಲಾಶಯಕ್ಕೆ ತ್ಯಾಜ್ಯದ ನೀರು ಸೇರುವುದನ್ನು ತಡೆಗಟ್ಟಿಮಳೆನೀರನ್ನು ಶುದ್ಧೀಕರಿಸಿ ನಗರಕ್ಕೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಎತ್ತಿನಹೊಳೆ ಯೋಜನೆಯಿಂದ ಜಲಾಶಯಕ್ಕೆ 2.50 ಟಿಎಂಸಿ ನೀರು ಬರಲಿದೆ ಎಂದರು.

ಬೇಡ ಬ್ರಿಗೇಡ್‌:

ಭವಿಷ್ಯದ ನಗರದ ಕುಡಿಯುವ ನೀರಿನ ಅಗತ್ಯತೆ ಅರಿತು ಲಿಂಗನಮಕ್ಕಿಯಿಂದ ನಗರಕ್ಕೆ ನೀರು ಪೂರೈಸಲು ಡಿಪಿಆರ್‌ ಸಿದ್ಧಪಡಿಸಲು ಸೂಚಿಸಲಾಗಿದೆ. ವಿದ್ಯುತ್‌ ಉತ್ಪಾದನೆ ಬಳಿಕ ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿರುವ ನೀರನ್ನು ಬೆಂಗಳೂರಿಗೆ ಪೂರೈಕೆ ಮಾಡುವುದು ಈ ಯೋಜನೆ ಉದ್ದೇಶ. ಇದರಿಂದ ಸುಮಾರು 10 ಟಿಎಂಸಿ ನೀರು ಸಿಗಲಿದೆ. ಕೆಲ ಸಂಘ-ಸಂಸ್ಥೆಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇವು ‘ಬೇಡ ಬ್ರಿಗೇಡ್‌’ ಸಂಘಟನೆಗಳು. ಏಕೆಂದರೆ, ಸರ್ಕಾರ ಯಾವುದೇ ಯೋಜನೆ ಮಾಡಿದರೂ ವಿರೋಧಿಸುವುದು ಇವುಗಳ ಕೆಲಸ. ಈ ಸಂಘಟನೆಗಳ ಮನವೊಲಿಸಿ ಯೋಜನೆ ಸಾಕಾರಗೊಳಿಸುವುದಾಗಿ ಪರಮೇಶ್ವರ್‌ ತಿಳಿಸಿದರು.

ಸಂಸತ್ತಿನಲ್ಲಿ ಕಾವೇರಿ ಕಂಪನ: ಕೇಂದ್ರ ಮಧ್ಯ ಪ್ರವೇಶ ಮಾಡುತ್ತಾ?

ಐದು ಲಕ್ಷ ಎಲ್‌ಇಡಿ ಲೈಟ್‌:

ನಗರದಲ್ಲಿ ಪ್ರತಿ ತಿಂಗಳು 18ರಿಂದ 20 ಕೋಟಿ ರು. ವಿದ್ಯುತ್‌ ಬಿಲ್‌ ಬರುತ್ತಿದೆ. ಅದೇ ಎಲ್‌ಇಡಿ ಲೈಟ್‌ ಅಳವಡಿಕೆಯಿಂದ ಶೇ.85ರಷ್ಟುಬಿಲ್‌ ಕಡಿಮೆ ಮಾಡಬಹುದು. ಈ ಹಿನ್ನೆಲೆಯಲ್ಲಿ ವಿವಿಧ ಹಂತಗಳಲ್ಲಿ ನಗರದಲ್ಲಿ ಐದು ಲಕ್ಷ ಎಲ್‌ಇಡಿ ಲೈಟ್‌ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದರು. ಶಾಸಕ ಡಾ.ಅಶ್ವತ್ಥನಾರಾಯಣ ಅವರು ಚೌಡಯ್ಯ ಮೆಮೋರಿಯಲ್‌ ಹಾಲ್‌ ಮಾದರಿಯಲ್ಲಿ ಮಲ್ಲೇಶ್ವರದಲ್ಲಿ ಒಂದು ಕನ್ವೆನ್‌ಷನ್‌ ಹಾಲ್‌ ನಿರ್ಮಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್‌, 10 ಕೋಟಿ ರು. ವೆಚ್ಚದಲ್ಲಿ ವಾಟರ್‌ ಮ್ಯೂಜಿಯಂ ಸೇರಿದಂತೆ ಕನ್ವೆನ್‌ಷನ್‌ ಹಾಲ್‌ ನಿರ್ಮಿಸಲು ಯೋಜನೆ ರೂಪಿಸಿರುವುದಾಗಿ ಹೇಳಿದರು.

ಲಿಂಗನಮಕ್ಕಿ ನೀರು ಬೆಂಗಳೂರಿಗೆ

ಮೇಯರ್‌ ಗಂಗಾಂಬಿಕೆ, ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌, ಪ್ರಧಾನ ಮುಖ್ಯ ಇಂಜಿನಿಯರ್‌ ಕೆಂಪರಾಮಯ್ಯ, ಪಾಲಿಕೆ ಸದಸ್ಯ ಜೈಪಾಲ್‌ ಮತ್ತಿತರರು ಉಪಸ್ಥಿತರಿದ್ದರು.

ಕಂಠೀರವ ರೀತಿ 4 ಸ್ಟೇಡಿಯಂ

2050ಕ್ಕೆ ನಗರದ ಜನಸಂಖ್ಯೆ 3.50 ಕೋಟಿ ಎಂದು ಅಂದಾಜಿಸಲಾಗಿದೆ. ಈ ಪ್ರಕಾರ ನಗರಕ್ಕೆ ಕುಡಿಯುವ ನೀರು, ರಸ್ತೆ, ಪಾರ್ಕ್, ವಿದ್ಯುತ್‌ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಪ್ರತಿ ವರ್ಷ ನಗರಕ್ಕೆ 15 ಸಾವಿರ ಕೋಟಿ ರು. ವೆಚ್ಚ ಮಾಡುತ್ತಿದೆ. ನಗರದ ಅಭಿವೃದ್ಧಿ ಸರ್ಕಾರ ಸಾಕಷ್ಟುಯೋಜನೆಗಳನ್ನು ಹಮ್ಮಿಕೊಂಡಿದೆ. ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಹಂತ ಹಂತ ನಗರದ ರಸ್ತೆಗಳನ್ನು ಸಿಮೆಂಟ್‌ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾಗುವುದು. ನಗರದ ನಾಲ್ಕದು ದಿಕ್ಕುಗಳಲ್ಲಿ ನಾಲ್ಕು ಸ್ಪೆಷಾಲಿಟಿ ಆಸ್ಪತ್ರೆ, ಕಂಠೀರವ ಸ್ಟೇಡಿಯಂ ಮಾದರಿಯಲ್ಲಿ ನಾಲ್ಕು ಕಡೆ ಸ್ಟೇಡಿಯಂ, ಕಬ್ಬನ್‌ ಪಾರ್ಕ್, ಲಾಲ್‌ ಬಾಗ್‌ ಮಾದರಿಯಲ್ಲಿ ನಗರದ ಹೊರವಲಯದಲ್ಲಿ ಗಾರ್ಡನ್‌ಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಸರ್ಕಾರ ಬೀಳಿಸಬೇಡಿ!

ಶಾಸಕ ಡಾ.ಅಶ್ವತ್ಥನಾರಾಯಣ ಕ್ರಿಯಾಶೀಲ ವ್ಯಕ್ತಿ. ಪ್ರಚಾರ ಮಾಡದೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ. ಅವರಿಗೆ ಉಜ್ವಲ ಭವಿಷ್ಯವಿದೆ. ಕ್ಷೇತ್ರಕ್ಕೆ ಏನು ಬೇಕೋ ಎಲ್ಲವನ್ನೂ ಮಾಡಿಕೊಡುತ್ತೇವೆ. ನಮ್ಮ ಸರ್ಕಾರ ಬೀಳಿಸಲು ಹೋಗಬೇಡಿ ಎಂದು ಶಾಸಕರನ್ನು ಉದ್ದೇಶಿಸಿ ಹಾಸ್ಯದಾಟಿಯಲ್ಲಿ ಪರಮೇಶ್ವರ್‌ ಹೇಳಿದರು.

ಸುವರ್ಣ ಭವನಕ್ಕೆ .25.75 ಕೋಟಿ

ಜಲಮಂಡಳಿಯು 15250 ಚದರ ಮೀಟರ್‌ ವಿಸ್ತೀರ್ಣದಲ್ಲಿ 25.75 ಕೋಟಿ ರು. ವೆಚ್ಚದಲ್ಲಿ ಈ ಸುವರ್ಣ ಭವನ ನಿರ್ಮಿಸಿದೆ. ಎರಡು ನೆಲ ಅಂತಸ್ತು ಸೇರಿ ಐದು ಅಂತಸ್ತಿನ ಈ ಕಟ್ಟಡದಲ್ಲಿ ನಾಲ್ಕು ಲಿಫ್ಟ್‌ಗಳು, ಸುಸಜ್ಜಿತ ಶೌಚಾಲಯ, ಸಭಾಂಗಣ ಸೇರಿದಂತೆ ಹಲವು ಸೌಲಭ್ಯಗಳಿವೆ. ವಾಹನ ನಿಲುಗಡೆ, ಕ್ಯಾಂಟಿನ್‌ ಸೇವೆಗೂ ಅವಕಾಶವಿದೆ.

click me!