ಧಾರವಾಡ: ಹೊಸ ಸಾಧ್ಯತೆಯತ್ತ ಇಂಡೋ-ಇಸ್ರೇಲ್‌ ಕೃಷಿ

By Kannadaprabha NewsFirst Published Jun 19, 2021, 12:12 PM IST
Highlights

* ರೈತರ ಜತೆ ಒಪ್ಪಂದ ಮಾಡಿಕೊಂಡು ಬೆಳೆ ತೆಗೆವ ಯೋಜನೆ
* ತಂತ್ರಜ್ಞಾನದ ತಿಳಿವಳಿಕೆ, ಹೆಚ್ಚಿನ ಇಳುವರಿ, ವಿಸ್ತಾರ ಮಾರುಕಟ್ಟೆಯತ್ತ ಚಿತ್ತ
* ರೈತರು ಈ ಪದ್ಧತಿ ಅನುಸರಣೆ ಮಾಡಿದರೆ ಮಾರುಕಟ್ಟೆ ವ್ಯಾಪ್ತಿಯೂ ವಿಸ್ತಾರ
 

ಹುಬ್ಬಳ್ಳಿ(ಜೂ.19): ​ ಧಾರವಾಡ ಸಮೀಪದ ಕುಂಬಾಪುರದಲ್ಲಿರುವ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರದಲ್ಲಿ ತೆರೆಯಲಾದ ಇಂಡೋ-ಇಸ್ರೇಲ್‌ ಉತ್ಕೃಷ್ಟ ವಿಭಾಗವು ಈ ಭಾಗದ ಒಂದಿಷ್ಟು ಹಳ್ಳಿಗಳ ರೈತರ ಜತೆಗೆ ಒಪ್ಪಂದ ಮಾಡಿಕೊಂಡು ಪದ್ಧತಿ ಅನುಸರಿಸಿ ಬೆಳೆ ಬೆಳೆಯಲು ಚಿಂತನೆ ನಡೆಸಿದೆ.

ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸುವ ಉದ್ದೇಶದಿಂದ ಇಂಡೋ ಇಸ್ರೇಲ್‌ ಉತ್ಕೃಷ್ಟ ವಿಭಾಗವು ಕೆಲಸ ಮಾಡುತ್ತಿದೆ. ತರಬೇತಿ, ಪ್ರಾತ್ಯಕ್ಷಿಕೆ, ತಂತ್ರಜ್ಞಾನದ ತಿಳಿವಳಿಕೆ ನೀಡುತ್ತ ನಾವಿನ್ಯ ಬೆಳೆಗಳನ್ನು ರೈತರಿಗೆ ಪರಿಚಯಿಸುತ್ತ ಮಾರುಕಟ್ಟೆ ಅವಕಾಶಗಳನ್ನು ವಿಸ್ತರಿಸುತ್ತಿದೆ.

ಕುಂಬಾಪುರದಲ್ಲಿ 20 ಎಕರೆ ಪ್ರದೇಶದಲ್ಲಿರುವ ಉತ್ಕೃಷ್ಟ ಕೇಂದ್ರ 1500 ಚ.ಮೀನಲ್ಲಿ ಹೈ ಟೆಕ್‌ ಪಾಲಿಹೌಸ್‌, ಹಸಿರುಮನೆ ಹೊಂದಿದೆ. ಕೂಲಿಂಗ್‌ ಪ್ಯಾಡ್‌, ಫ್ಯಾನ್‌, ಬೆಂಚಿಸ್‌, ಫಾಗರ್ಸ್‌ ಹಾಗೂ ಬೂಮರ್‌ ಒಳಗೊಂಡಿದೆ. ಇಲ್ಲಿ ತರಕಾರಿಗಳನ್ನು ಕೊಕೋಪಿಟ, ವರ್ಮಿಕ್ಯುಲೈಟ್‌ ಮತ್ತು ಪರ್ಲೈಟ್‌ ಮಾದರಿಯಲ್ಲಿ ಬೆಳೆಯಲಾಗುತ್ತಿದೆ. ಪಾಲಿಹೌಸ್‌ನಲ್ಲಿ ಕೀಟ ನಿರೋಧಕ ನೆರಳು, ಪರದೆ ಮನೆ ಹಾಗೂ ವಾಕಿಂಗ್‌ ಟನಲ್‌ಗಳಲ್ಲಿ ತರಕಾರಿ ಬೆಳೆಯಲಾಗುತ್ತಿದೆ.

ಕೊರೋನಾ ಸಂಕಷ್ಟ : ಸಾಲ ಮರು ಪಾವತಿಗೆ ರೈತರಿಗೆ ಸಮಯ

ವಿಶೇಷ ಬಗೆಯ ಡೊಣ್ಣೆ ಮೆಣಸು, ಟೊಮ್ಯಾಟೊ, ಯುರೋಪಿಯನ್‌ ಸವತೆ, ಹಸಿ ಮೆಣಸು, ಬದನೆ, ಲೆಟ್ಯೂಸ್‌, ಬ್ರಾಕಲಿ, ರೆಡ್‌ ಕ್ಯಾಬೀಜ್‌ ಸೇರಿ ಸಾಕಷ್ಟು ಬಗೆಯ ತರಕಾರಿಗಳನ್ನು ಬೆಳೆಲಾಗಿದೆ. ಗೊಬ್ಬರ, ಕೀಟನಾಶಕ, ನೀರು ಎಷ್ಟುಪ್ರಮಾಣದಲ್ಲಿರಬೇಕು ಎಂಬುದನ್ನು ನಿರ್ಧರಿಸಲು ವಿಶೇಷವಾಗಿ ಸ್ವಯಂ ಚಾಲಿತ ರಸಾವರಿ ಪದ್ಧತಿ, ಎರೆಹುಳು ಗೊಬ್ಬರ ಬಳಸಲಾಗಿದೆ. ಹನಿ ನೀರಾವರಿ, ತುಂತುರು ನೀರಾವರಿ, ಪೋಷಕಾಂಶ ಪದ್ಧತಿ ಅನುಸರಿಸಲಾಗುತ್ತಿದೆ.

ಕನ್ನಡಪ್ರಭ ಜತೆ ಮಾತನಾಡಿದ ಯೋಜನಾ ಅಧಿಕಾರಿ ಅಬ್ದುಲ್‌ ಉಸ್ತಾದ, ಇಸ್ರೇಲ್‌ ಪದ್ಧತಿಯಲ್ಲಿ ಬೆಳೆ ಬೆಳೆದಾಗ ಇಳುವರಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಿಕ್ಕಿದೆ. ಆದರೆ, ಇಸ್ರೇಲ್‌ ಬೆಳೆ, ಕೃಷಿ ಪದ್ಧತಿ ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆಯೊ ಇಲ್ಲವೊ ಎಂಬುದನ್ನು ಪರೀಕ್ಷೆ ಮಾಡುತ್ತೇವೆ. ನಮ್ಮಲ್ಲಿ ಸಾಮಾನ್ಯ ಬೆಳೆಗಿಂತ ಟೊಮೆಟೋ ಶೇ. 20ರಷ್ಟು ಹೆಚ್ಚು ಇಳುವರಿ ಸಿಕ್ಕಿದ್ದರೆ, ಬೇರೆಡೆ ಶೇ. 40ರವರೆಗೂ ಇಳುವರಿ ಸಿಕ್ಕಿದೆ. ಅಷ್ಟಕ್ಕೂ ಪಾಲಿಹೌಸ್‌ ಹೊರತುಪಡಿಸಿ ರೈತರ ಜಮೀನಿನಲ್ಲಿ ಬೆಳೆದಾಗ ಅಂದರೆ, ಚಳಿ ಮತ್ತು ಮಳೆಗಾಲದಲ್ಲಿ ಬೆಳೆದರೂ ಇಳುವರಿ ವ್ಯತ್ಯಾಸ ಆಗುವ ಸಾಧ್ಯತೆಯೂ ಇರುತ್ತದೆ ಎಂದು ತಿಳಿಸಿದರು.

ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಇಲ್ಲ: ರೈತರಿಗೆ ಸಚಿವರ ಅಭಯ

ಇನ್ನು, ಬ್ರಾಕಲಿ ಬೆಳೆದಾಗ ಉತ್ತಮ ಮಾರುಕಟ್ಟೆ ಮೌಲ್ಯ ಕೂಡ ಸಿಕ್ಕಿತ್ತು. ಒಂದು ಕೆಜಿಗೆ 90ರಿಂದ 130ರ ವರೆಗೆ ನಮ್ಮಿಂದ ವ್ಯಾಪಾರಸ್ಥರು ಖರೀದಿ ಮಾಡಿದ್ದರು. ಆದರೆ, ರೆಡ್‌ ಕ್ಯಾಬೀಜಗೆ ಕೇವಲ 30 ಸಿಕ್ಕಿತ್ತು. ಆದರೆ, ಈ ನಡುವೆ ರೈತರಿಗೆ ಹೊಸ ತಳಿಯ ಪರಿಚಯವಂತೂ ಆಗುತ್ತದೆ ಎಂದರು.

ರೈತರು ತಮ್ಮ ಜಮೀನಲ್ಲಿ ಈ ಮಾಡಿದರೂ ಜಿಲ್ಲಾ ಪಂಚಾಯಿತಿಯಿಂದ ಸಬ್ಸಿಡಿ ಸಿಗುತ್ತದೆ. ಸಾಕಷ್ಟುರೈತರು ತಾವಾಗಿಯೆ ಬಂದು ಇಲ್ಲಿ ತರಬೇತಿ ಪ್ರಾತ್ಯಕ್ಷಿಕೆ ನೋಡಿ ತೆರಳುತ್ತಾರೆ. ಬಹಳಷ್ಟು ರೈತರು ಈ ಪದ್ಧತಿ ಅನುಸರಣೆ ಮಾಡಿದರೆ ಅವರಿಗೆ ಮಾರುಕಟ್ಟೆ ವ್ಯಾಪ್ತಿಯೂ ವಿಸ್ತಾರವಾಗುತ್ತದೆ. ಹೀಗಾಗಿ ಲೋಕೂರು ಸೇರಿ ಇತರೆ ಗ್ರಾಮಗಳ ರೈತರನ್ನು ಸಂಪರ್ಕಿಸಿ ಅವರ ಜತೆಗೆ ಒಪ್ಪಂದ ಮಾಡಿಕೊಂಡು ಅವರ ಹೊಲದಲ್ಲಿ ಇಸ್ರೇಲ್‌ ಪದ್ಧತಿ ಕೃಷಿ ಮಾಡುವ ಯೋಜನೆ ಇದೆ. ನಮ್ಮ ಭಾಗದ ಅಂದರೆ ಸ್ಥಳೀಯ ಬೆಳೆಗಳು ಹಾಗೂ ಇಸ್ರೇಲಿ ಕೃಷಿ ಪದ್ಧತಿ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಸೇರ್ಪಡೆಗೊಳಿಸಿ ವಿಶೇಷ ಪ್ರಯೋಗ ನಡೆಸಲಿದ್ದೇವೆ ಎಂದರು.

ನದ್ದು ತುಂತುರು, ಹನಿ ನೀರಾವರಿ ತಂತ್ರಜ್ಞಾನ ಬಳಸಿ ಕೃಷಿ ಮಾಡುವ ಪದ್ಧತಿ. ನಾವು ಇದೆ ಪದ್ಧತಿ ಬಳಸಿ ಬಂಜರು ಭೂಮಿಯಲ್ಲೂ ಕೃಷಿ ಮಾಡಬಹುದು. ಹೊಸ ಪದ್ಧತಿ, ತಂತ್ರಜ್ಞಾನ ಬಳಸಿ ರೈತರ ಆದಾಯ ಹೆಚ್ಚಿಸುವುದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ರೈತರ ಜತೆ ಒಪ್ಪಂದ ಮಾಡಿಕೊಂಡು ಈ ಪದ್ಧತಿ ಜನಪ್ರಿಯಗೊಳಿಸುವ ಯೋಜನೆ ಇದೆ ಎಂದು ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರ ಯೋಜನಾ ಅಧಿಕಾರಿ ಅಬ್ದುಲ್‌ ಉಸ್ತಾದ ತಿಳಿಸಿದ್ದಾರೆ. 
 

click me!