ಅಧಿಕಾರಿಗಳ ನಿರ್ಲಕ್ಷ್ಯ, ನೀರಿನ ಹರಿವು ಕಡಿಮೆಯಾದ ಮೇಲೆ ಗೇಟ್ ಅಳವಡಿಕೆ|ವರದಾ ನದಿಯ 16 ಬ್ಯಾರೇಜ್‌ಗಳಲ್ಲೂ ಇದೇ ಗತಿ| ಸಣ್ಣ ನೀರಾವರಿ ಇಲಾಖೆ ಕಾರ್ಯವೈಖರಿಗೆ ರೈತರ ಅಸಮಾಧಾನ|
ನಾರಾಯಣ ಹೆಗಡೆ
ಹಾವೇರಿ(ಜ.24): ಕೆಲ ತಿಂಗಳ ಹಿಂದಷ್ಟೇ ಜಿಲ್ಲೆಯಲ್ಲಿ ಹರಿದ ವರದಾ ನದಿ ಉಕ್ಕಿ ಪ್ರವಾಹ ಸೃಷ್ಟಿಸಿದ್ದ ನೆನಪು ಮಾಸಿಲ್ಲ. ಆದರೆ, ಈಗಲೇ ನದಿಗೆ ಅಡ್ಡಲಾಗಿ ಕಟ್ಟಿರುವ ಹತ್ತಾರು ಬ್ಯಾರೇಜ್‌ಗಲ್ಲಿ ನೀರು ಖಾಲಿಯಾಗಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಹೊಲಗಳಿಗೆ ಇನ್ನು ಹೆಚ್ಚು ದಿನ ನೀರು ಹರಿಸಲು ಸಾಧ್ಯವಿಲ್ಲ.
undefined
ಕಳೆದ ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ವರದಾ ನದಿಯಲ್ಲಿ ಪ್ರವಾಹ ಬಂದು ಅವಾಂತರವನ್ನೇ ಸೃಷ್ಟಿಸಿತ್ತು. ಮಳೆ ನೀರೆಲ್ಲ ಹರಿದುಹೋಗಿದೆ. ಮಳೆ ಕಡಿಮೆಯಾದ ಬಳಿಕ ಬೇಸಿಗೆ ಬೆಳೆಗಾಗಿ ನೀರು ಹಿಡಿದಿಟ್ಟುಕೊಳ್ಳುವ ಸಲುವಾಗಿ ವರದಾ ನದಿಗೆ ಹಾನಗಲ್ಲ ತಾಲೂಕಿನಲ್ಲಿ 7, ಹಾವೇರಿ ತಾಲೂಕಿನಲ್ಲಿ 6 ಸೇರಿದಂತೆ ಒಟ್ಟು 15 ಬ್ಯಾರೇಜ್ ನಿರ್ಮಿಸಲಾಗಿದೆ. ಸಕಾಲದಲ್ಲಿ ಬ್ಯಾರೇಜ್ ಗೇಟ್ ಅಳವಡಿಸಿ ನೀರು ಸಂಗ್ರಹ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವುದು ಸಣ್ಣ ನೀರಾವರಿ ಇಲಾಖೆ ಜವಾಬ್ದಾರಿ. ಆದರೆ, ಇಲಾಖೆಯ ನಿರ್ಲಕ್ಷ್ಯದಿಂದ ಈಗಲೇ ಬ್ಯಾರೇಜ್‌ಗಳಲ್ಲಿ ನೀರು ಅರ್ಧ ಖಾಲಿಯಾಗಿದೆ. ಫೆಬ್ರವರಿ ಅಂತ್ಯದೊಳಗೆ ನೀರು ಸಂಪೂರ್ಣ ಖಾಲಿಯಾಗುವುದು ನಿಶ್ಚಿತ. ಮುಂಗಾರು ಬೆಳೆಯಂತೂ ಪ್ರವಾಹಕ್ಕೆ ಕೊಚ್ಚಿ ಹೋಗಿ ರೈತರು ನಷ್ಟ ಅನುಭವಿಸಿದ್ದಾರೆ. ಈಗಾದರೂ ನೀರಾವರಿ ಮೂಲಕ ಬೆಳೆ ತೆಗೆಯಬಹುದು ಎಂದುಕೊಂಡಿದ್ದ ರೈತರು ಬ್ಯಾರೇಜ್ ಸ್ಥಿತಿ ನೋಡಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬ್ಯಾರೇಜ್‌ನಲ್ಲಿ ಅರ್ಧ ನೀರು ಖಾಲಿ:
ಕಳೆದ ಅಕ್ಟೋಬರ್‌ನಲ್ಲಿ ಅತಿವೃಷ್ಟಿ ಬಳಿಕ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಸ್ಥಗಿತಗೊಂಡರೂ ವರದಾ ನದಿಯ ನೀರಿನ ಹರಿವು ಉತ್ತಮವಾಗಿಯೇ ಇತ್ತು. ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಬ್ಯಾರೇಜ್ ಗೇಟ್ ಅಳವಡಿಸಲಾಗುತ್ತಿತ್ತು. ಆದರೆ, ಅಧಿಕಾರಿಗಳು ಇನ್ನೂ ಮಳೆಯಾದರೆ ಎಂಬ ಕಾರಣಕ್ಕಾಗಿ ಆಗ ಗೇಟ್ ಅಳವಡಿಸದೆ ಬಿಟ್ಟರು. ಇದರಿಂದ ನೀರು ವೃಥಾ ಹರಿದು ಹೋಗಿ ವ್ಯರ್ಥವಾಯಿತು. ಡಿಸೆಂಬರ್ ಮಧ್ಯಭಾಗದಲ್ಲಿ ಸಂಬಂಧಪಟ್ಟಇಲಾಖೆ ಗೇಟ್ ಅಳವಡಿಸುವ ಕಾರ್ಯ ಆರಂಭಿಸಿತು. ಅದಾಗಲೇ ನೀರಿನ ಹರಿವು ಕಡಿಮೆಯಾದ್ದರಿಂದ ಬ್ಯಾರೇಜ್ ಭರ್ತಿಯಾಗಲೇ ಇಲ್ಲ. ಕೆಲವು ಬ್ಯಾರೇಜ್‌ಗಳಿಗೆ ಅಳವಡಿಸಿದ ಗೇಟ್‌ಗಳ ರಬ್ಬರ್ ಸವೆದು ನೀರು ಪೋಲಾಗುತ್ತಿದೆ. ಜಿಲ್ಲೆಯಲ್ಲಿ ವರದಾ ನದಿಗೆ 16, ಕುಮದ್ವತಿ ನದಿಗೆ 9, ಧರ್ಮಾ ನದಿಗೆ 12 ಬ್ಯಾರೇಜ್‌ಗಳಿವೆ. ಇವುಗಳಲ್ಲಿ ವರದಾ, ಧರ್ವ ನದಿಗಳ ಬ್ಯಾರೆಜ್‌ಗಳು ಜಿಲ್ಲೆಯ ರೈತರಿಗೆ ವರದಾನವಾಗಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವರದಾ ನದಿಗೆ ನಾಗನೂರ, ವರದಾಹಳ್ಳಿ, ಕಳಸೂರ, ಮನ್ನಂಗಿ, ಸಂಗೂರ, ಆಡೂರ, ಅರೇಲಕ್ಮಾಪುರ, ಕೂಸನೂರ, ಶೇಷಗಿರಿ, ಹೊಂಕಣ, ಮಕರಳ್ಳಿ, ಗೊಂದಿ, ಕರ್ಜಗಿ, ಹಿರೇಮರಳಿಹಳ್ಳಿ, ಹೊಸರಿತ್ತಿ, ಬೆಳವಿಗಿ, ಮರೊಳ, ಕೊರಡೂರಗಳಲ್ಲಿನ ಬ್ಯಾರೇಜ್‌ಗಳಲ್ಲಿ ಈಗಾಗಲೇ ಅರ್ಧಕ್ಕೂ ಹೆಚ್ಚು ನೀರು ಖಾಲಿಯಾಗಿದೆ. ನೀರಿನ ಹರಿವೂ ಇಲ್ಲದ್ದರಿಂದ ಈಗಿರುವ ನೀರು ಹೆಚ್ಚು ದಿನ ರೈತರ ಹೊಲಗಳಿಗೆ ನೀರಾವರಿ ಒದಗಿಸುವ ಪರಿಸ್ಥಿತಿಯಿಲ್ಲ.
ಅಧಿಕಾರಗಳ ವಾದವೇನು?:
ಪ್ರತಿಯೊಂದು ಬ್ಯಾರೇಜ್‌ನಿಂದ 150 ರಿಂದ 200 ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಗುರಿಯೊಂದಿಗೆ ಬ್ಯಾರೇಜ್ ನಿರ್ಮಿಸಲಾಗಿದೆ. ಆದರೆ, ರೈತರು ದುಪ್ಪಟ್ಟು ಪ್ರಮಾಣದಲ್ಲಿ ನೀರಿನ ಬಳಕೆ ಮಾಡುತ್ತಿದ್ದಾರೆ. ಬ್ಯಾರೇಜ್ ಹಿನ್ನೀರು ಪ್ರದೇಶದಲ್ಲಿ ನೂರಾರು ಪಂಪ್‌ಸೆಟ್‌ಗಳನ್ನು ಹಚ್ಚಿ ಹಗಲು ರಾತ್ರಿಯೆನ್ನದೆ ನೀರೆತ್ತಲಾಗುತ್ತಿದೆ. ಅಲ್ಲದೇ ಫೆಬ್ರವರಿ ಅಂತ್ಯದವರೆಗೆ ಮಾತ್ರ ಈ ನೀರು ಲಭ್ಯವಾಗುವಂತೆ ಮಾಡುವುದು ಇಲಾಖೆಯ ಯೋಜನೆ ಎಂಬುದು ಅಧಿಕಾರಿಗಳ ವಾದ. ಅಂದರೆ, ಈಗ ಪ್ರತಿ ಬ್ಯಾರೇಜ್ ಅಚ್ಚುಕಟ್ಟು ಪ್ರದೇಶದಲ್ಲಿ 500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಬೆಳೆಗೆ ನೀರು ಬಳಸಲಾಗುತ್ತಿದೆ. ಇದರಿಂದ ಅವಧಿಗೆ ಮುನ್ನವೇ ಬ್ಯಾರೇಜ್ ನೀರು ಖಾಲಿಯಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ನದಿ ನೀರಿನ ಹರಿವು ಇರುವಾಗಲೆ ಮುಂಜಾಗ್ರತಾ ಕ್ರಮವಾಗಿ ಬ್ಯಾರೇಜ್ ಅಳವಡಿಸಿದ್ದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಿಡಬಹುದಿತ್ತು ಎಂಬುದು ರೈತರ ಅಭಿಪ್ರಾಯವಾಗಿದೆ.
ಅವೈಜ್ಞಾನಿಕ ರೀತಿಯಲ್ಲಿ ಗೇಟ್ ಅಳವಡಿಕೆಯಿಂದಲೂ ನೀರು ಪೋಲಾಗುತ್ತಿದೆ. ರೈತರಿಗೆ ನೀರಾವರಿ ಅನುಕೂಲ ಮಾಡಿಕೊಡುವುದನ್ನು ಬಿಟ್ಟು ಇಲ್ಲಸಲ್ಲದ ಸಬೂಬು ಹೇಳುತ್ತಿರುವ ಅಧಿಕಾರಿಗಳ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ರೀತಿಯಾದರೆ ಬೇಸಿಗೆಯಲ್ಲಿ ಜಾನುವಾರುಗಳಿಗೂ ಬ್ಯಾರೇಜ್‌ನಲ್ಲಿ ಕುಡಿಯಲು ನೀರಿರುವುದಿಲ್ಲ. ಸಣ್ಣ ನೀರಾವರಿ ಇಲಾಖೆ ರೈತರಿಗೆ ಅನುಕೂಲ ಕಲ್ಪಿಸುವತ್ತ ಗಮನ ಹರಿಸಬೇಕು ಎಂಬುದು ಆಗ್ರಹವಾಗಿದೆ.
ಈ ಬಗ್ಗೆ ಮಾತನಾಡಿದ ರಾಣಿಬೆನ್ನೂರು ಎಇ ಸಣ್ಣ ನೀರಾವರಿ ಇಲಾಖೆ ರಾಣಿಬೆನ್ನೂರು ವಿಭಾಗ ಪಿ. ವಿನಾಯಕ ಅವರು,ಅಕ್ಟೋಬರ್ ನಂತರ ಮಳೆಯಾಗಿಲ್ಲ. ಮತ್ತೆ ಮಳೆಯಾದರೆ ಬ್ಯಾರೇಜ್‌ಗೆ ಅಪಾಯವಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ಗೇಟ್ ಅಳವಡಿಸಲಾಗಿದೆ. ಆದರೆ, ಯೋಜನೆಯ ಗುರಿಗೂ ಮೀರಿ ಪಂಪ್‌ಸೆಟ್ ಮೂಲಕ ನೀರು ಬಳಕೆಯಾಗುತ್ತಿದೆ. ಇದರಿಂದ ಬ್ಯಾರೇಜ್‌ಗಳಲ್ಲಿ ನೀರು ಖಾಲಿಯಾಗುತ್ತಿದೆ ಎಂದು ಹೇಳಿದ್ದಾರೆ.